ಉಡುಪಿ: ಆಹ್ವಾನದ ಮೇರೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಪಾದರು, ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರ ಮನೆಗೆ ಭೇಟಿ ನೀಡಿದ್ದಾರೆ.
ಶ್ರೀಗಳನ್ನು ಭಕ್ತಿಯಿಂದ ಬರಮಾಡಿಕೊಂಡ ಶ್ರೀನಿವಾಸ ಪೂಜಾರಿ ದಂಪತಿ ಶ್ರೀಗಳ ಕಾಲಿಗೆ ನೀರೆರೆದು ತುಳಸಿ ಮಾಲಾರ್ಪಣೆ ಮಾಡಿದ್ದಾರೆ. ಗುರುವಂದನಾ ಸಭೆಯ ಪ್ರಸ್ತಾವನೆಯೊಂದಿಗೆ ಸಚಿವರು ಶ್ರೀಗಳನ್ನು ಸ್ವಾಗತಿಸಿದ್ದಾರೆ. ಈ ವೇಳೆ 7 ವರ್ಷಗಳ ಹಿಂದೆ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಗಳು ಮನೆಗೆ ಭೇಟಿ ನೀಡಿ ಅನುಗ್ರಹಿಸಿದ್ದನ್ನು ಸಚಿವರು ಸ್ಮರಿಸಿಕೊಂಡಿದ್ದಾರೆ.
ಅಂದು ವಿಶ್ವೇಶ ತೀರ್ಥರ ಅನುಗ್ರಹ ದೊರಕಿತ್ತು, ಇಂದು ಅವರ ಶಿಷ್ಯರಾದ ಶ್ರೀಗಳೂ ತಮ್ಮ ಗುರುಗಳ ಮಹದಾಶಯಗಳ ದಾರಿಯಲ್ಲಿ ಸಾಗುತ್ತಿದ್ದಾರೆ. ಶ್ರೀಗಳು ಸಮಸ್ತ ಹಿಂದೂ ಸಮಾಜವನ್ನು ಸಂಘಟಿಸುವ ಕಾರ್ಯದಲ್ಲಿ ಅತ್ಯಂತ ಸಕ್ರಿಯರಾಗಿರುವುದು ಅತೀವ ಸಂತಸದ ಸಂಗತಿ. ಅವರ ಆಗಮನದಿಂದ ಕುಚೇಲನ ಮನೆಗೆ ಕೃಷ್ಣ ಬಂದಂತಾಗಿದೆ, ಇದರಿಂದ ತಮ್ಮ ಇಡೀ ಕುಟುಂಬಕ್ಕೆ ಹೃದಯ ತುಂಬಿ ಬಂದಿದೆ. ರಾಮನ ಕಾರ್ಯದಲ್ಲಿ ತೊಡಗಿಕೊಂಡಿರುವ ಶ್ರೀಗಳು, ಅಯೋಧ್ಯೆ ಮಂದಿರ ನಿರ್ಮಾಣ ಟ್ರಸ್ಟ್ನಲ್ಲಿ ದಕ್ಷಿಣ ಭಾರತದ ಏಕೈಕ ಪ್ರತಿನಿಧಿ ಎನ್ನುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದಿದ್ದಾರೆ. ಹಾರ ಫಲಪುಷ್ಪ ಗುರುಕಾಣಿಕೆ ಸಹಿತ ಸಚಿವರು ಹಾಗೂ ಅವರ ಪರಿವಾರ ಸದಸ್ಯರು ಗುರುವಂದನೆ ಸಲ್ಲಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post