ಉತ್ತರಕನ್ನಡ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ರಾಷ್ಟ್ರಾದ್ಯಂತ ನಿಧಿ ಸಮರ್ಪಣಾ ಕಾರ್ಯವೂ ಸಾಗಿದೆ. ಇದೀಗ ರಾಮಮಂದಿರ ನಿರ್ಮಾಣ ಕಾರ್ಯದ ಉಸ್ತುವಾರಿ ಹೊಣೆಯನ್ನು ವಿಶ್ವಹಿಂದೂ ಪರಿಷತ್ ಸಂಘಟನಾ ಮಂತ್ರಿ ಗೋಪಾಲ್ ಅವರಿಗೆ ವಹಿಸಲಾಗಿದೆ. ಅವರು ಅಯೋಧ್ಯೆಯಲ್ಲೇ ಉಳಿದು ಮಂದಿರ ನಿರ್ಮಾಣ ಕಾರ್ಯದ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಇಷ್ಟಕ್ಕೂ ಗೋಪಾಲ ಅವರು ಯಾರು? ಅನ್ನೋದಾದರೆ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ಹೊಸ್ತೋಟದವರು. ನಾಗರಕಟ್ಟೆ ಮನೆತನದ ಮಹಾಬಲೇಶ್ವರ ಭಟ್ ಮತ್ತು ಅನ್ನಪೂರ್ಣ ದಂಪತಿಯ 6ನೇ ಪುತ್ರ. ಪಿಯುಸಿ ಓದುತ್ತಿರುವಾಗಲೇ ಆರ್ ಎಸ್ಎಸ್ ಶಾಖೆ ನಡೆಸುತ್ತಿದ್ದ ಗೋಪಾಲ್, ಬೆಳಗಾವಿಯ ಆರ್ಎಲ್ಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದಾರೆ. ಎಂಎಸ್ಸಿಯಲ್ಲಿ ಬಂಗಾರದ ಪದಕ ಪಡೆದು ಉತ್ತೀರ್ಣರಾದ ಅವರಿಗೆ ಅಮೆರಿಕಾದ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಆಫರ್ ಬಂದಿತ್ತು. ಆದರೆ ಅಲ್ಲಿಗೆ ತೆರಳದ ಗೋಪಾಲ್ ಸಂಘದ ವಿವಿಧ ಸ್ತರದ ಜವಾಬ್ದಾರಿಯನ್ನು ಹೊತ್ತರು. ಇದೀಗ ವಿಶ್ವಹಿಂದೂ ಪರಿಷದ್ನ ಪೂರ್ಣಾವಧಿ ಪ್ರಚಾರಕರಾಗಿ ಸೇವೆ ಆರಂಭಿಸಿದ್ದಾರೆ. ಕಳೆದ 37 ವರ್ಷದಿಂದಲೂ ಸಂಘ ಮತ್ತು ವಿಶ್ವಹಿಂದೂ ಪರಿಷದ್ನಲ್ಲಿ ಪೂರ್ಣಾವಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
984ರಲ್ಲಿ ಮೈಸೂರು ತಾಲೂಕು ಪ್ರಚಾರಕರಾಗಿ ಸೇವೆ ಆರಂಭಿಸಿದ ಗೋಪಾಲ್ಜಿ, ನಂತರ ಬೆಳಗಾವಿ ಜಿಲ್ಲಾ ಪ್ರಚಾರಕರಾಗಿ ಕೆಲಸ ಮಾಡಿದರು. ಗುಲಬರ್ಗಾ ವಿಭಾಗ ಪ್ರಚಾರಕರಾಗಿ, ಉತ್ತರ ಕರ್ನಾಟಕ ಪ್ರಾಂತ (17 ಜಿಲ್ಲೆ) ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದಾರೆ. 2012ರಲ್ಲಿ ಹುಬ್ಬಳ್ಳಿಯಲ್ಲಿ 20 ಸಾವಿರ ಸ್ವಯಂ ಸೇವಕರನ್ನು ಸೇರಿಸಿ ಹಿಂದೂ ಶಕ್ತಿ ಸಂಗಮ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದರು. 2017ರಲ್ಲಿ ಉಡುಪಿಯಲ್ಲಿ 2500 ಸಂತರ ಸಮಾವೇಶ, ತುಮಕೂರಿನ ಸಿದ್ದಗಂಗಾ ಮಠದಲ್ಲಿ 500 ಮಠಾಧೀಶರ ಚಿಂತನ ಸಭೆಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದರು. ಅಷ್ಟೇ ಅಲ್ಲ 5 ವರ್ಷದಿಂದ ವಿಶ್ವಹಿಂದೂ ಪರಿಷತ್ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯದ ಸಂಘಟನಾ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಈಚೆಗೆ ಅವರನ್ನು ಗುಜರಾತ್, ರಾಜಸ್ಥಾನ ರಾಜ್ಯಗಳ ಒಟ್ಟೂ 6 ಪ್ರಾಂತ್ಯಗಳ ಸಂಘಟನಾ ಮಂತ್ರಿಯಾಗಿ ನೇಮಕಮಾಡಲಾಗಿತ್ತು. ಗುಜರಾತ್ ಒಂದೇ ರಾಜ್ಯದಲ್ಲಿ ರಾಮಮಂದಿರ ನಿರ್ಮಾಣಕ್ಕೆ 394 ಕೋಟಿ ರೂಪಾಯಿ ನಿಧಿ ಸಂಘ್ರಹಿಸುವ ಮೂಲಕ ಗಮನ ಸೆಳೆದಿದ್ದರು. ಇದೀಗ ಗೋಪಾಲ ಜೀ ಅವರಿಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪೂರ್ಣಗೊಳ್ಳುವವರೆಗೂ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post