ಬೆಂಗಳೂರು: ಸಿಎಂ ಒಪ್ಪಿದರೆ ಬಿಎಂಟಿಸಿ ಬಸ್ ಪ್ರಯಾಣದ ದರದಲ್ಲಿ ಏರಿಕೆ ಮಾಡಲಾಗುವುದು ಅಂತಾ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾರಿಗೆ ಸಚಿವರು.. ಸಿಎಂ ಒಪ್ಪಿಗೆ ಕೊಟ್ಟರೆ BMTC ಪ್ರಯಾಣ ದರ ಹೆಚ್ಚಳ ಮಾಡಲಾಗುವುದು. ಶೇಕಡಾ 18 ರಿಂದ 20 ಹೆಚ್ಚಳಕ್ಕೆ ಬೇಡಿಕೆ ಇದೆ. 3 ನಿಗಮದವರು ಈ ಬಗ್ಗೆ ಬೇಡಿಕೆ ಇಟ್ಟಿಲ್ಲ ಅಂತಾ ತಿಳಿಸಿದರು.
ಖಾಸಗಿ ಸಂಸ್ಥೆಗಳಿಗಿಂತಲೂ ಉತ್ತಮ ಸೇವೆ ನೀಡಲಾಗುವುದು. ಜನರ ಬೇಡಿಕೆಗೆ ಅನುಗುಣವಾಗಿ ಬಸ್ ಸಂಚಾರ ಆರಂಭ ಆಗಿದೆ. ಕೊರೊನಾ ನಂತರ 4 ನಿಗಮಗಳಲ್ಲಿ ಈವರೆಗೆ 4 ಸಾವಿರ ಕೋಟಿ ನಷ್ಟ ಆಗಿದೆ. ಲಾಕ್ ಡೌನ್ ನಂತರ, ಡಿಸೆಂಬರ್ ವರೆಗೆ ಇಂಧನ ಹಾಗೂ ಸಂಬಳಕ್ಕೆ ಕೊರತೆ ಆಗಿದೆ. ಹೀಗಾಗಿ ಸರ್ಕಾರದಿಂದ 1,780 ಕೋಟಿ ಹಣವನ್ನು ಪಡೆಯಲಾಗಿದೆ ಅಂತಾ ಮಾಹಿತಿ ನೀಡಿದರು.
ಆದರೆ ಯಾವ ಸಿಬ್ಬಂದಿಗೂ ಸಂಬಳ ಕಡಿತ ಮಾಡಿಲ್ಲ, ಸಂಬಳ ನೀಡಲಾಗಿದೆ. BMTCಗೆ ಆದಾಯದ ಕೊರತೆ ಇದೆ. 80 ಕೋಟಿಯನ್ನು ಕಳೆದ ವಾರ ಸರ್ಕಾರದಿಂದ ಪಡೆದು ಸಿಬ್ಬಂದಿಗೆ ವೇತನ ನೀಡಲಾಗಿದೆ. ಇನ್ನೂ 780 ಕೋಟಿ ರೂಪಾಯಿ ಅಗತ್ಯ ಇದ್ದು, 556 ಕೋಟಿಯನ್ನು ಸಾಲವಾಗಿ ಪಡೆಯಲಾಗಿದೆ ಎಂದರು.
1508 ಕೋಟಿ ರೂಪಾಯಿಗಳ ನಷ್ಟ ಅನುಭವಿಸಲಾಗಿದೆ. 2980 ಕೋಟಿ ಅಷ್ಟು ಹಣ ಶಾಲಾ ಮಕ್ಕಳಿಗೆ ಸಬ್ಬಿಡಿಯಲ್ಲಿ ಬಸ್ ಪಾಸ್ ನೀಡಲಾಗ್ತಿದ್ದು , ಯಾವುದೇ ಬಸ್ ಪಾಸ್ ದರ ಹೆಚ್ಚಳ ಮಾಡಿಲ್ಲ. ಟಿಕೆಟ್ ದರ ಹೆಚ್ಚಳ ಮಾಡಿದಾಗಲೂ ಬಸ್ ಪಾಸ್ ದರ ಹೆಚ್ಚಳ ಮಾಡಿಲ್ಲ. ಲಾಭವನ್ನು ಗಮನಿಸದೆ, ಸರ್ಕಾರ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದೆ. ಮುಂದಿನ ದಿನಗಳಲ್ಲಿ ಅನೇಕ ಕಡೆ ಶೇಕಡಾ 80 ರಷ್ಟು ಜನ ಪ್ರಯಾಣಿಕರು ಬರಲಿದ್ದಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ, ಈಶಾನ್ಯ ಕರ್ನಾಟಕ ಸಾರಿಗೆ ನಿಗಮದಿಂದ ಹೊಸ ವ್ಯವಸ್ಥೆ ಜಾರಿಯಾಗಲಿದೆ. ಖಾಸಗಿಯವರು ಕಾರ್ಗೋ ಮಾಡ್ತಿದ್ದಾರೆ. 180 ನಿಲ್ದಾಣದಲ್ಲಿ ಕಾರ್ಗೋ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಮೂರೂ ನಿಗಮಗಳಿಂದ ಕಾರ್ಗೋ ಮತ್ತು ಪಾರ್ಸಲ್ ವ್ಯವಸ್ಥೆ ಜಾರಿಗೆ ನಿರ್ಧಾರ ಮಾಡಲಾಗಿದೆ. ತಮಿಳುನಾಡು, ಆಂಧ್ರ, ಗೋವಾ ರಾಜ್ಯಗಳಿಗೂ ಕಾರ್ಗೋ ಪಾರ್ಸಲ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ವರ್ಷಕ್ಕೆ 80 ರಿಂದ 100 ಕೋಟಿ ಆದಾಯದ ನಿರೀಕ್ಷೆ ಮಾಡಲಾಗಿದ್ದು, ನಾಳೆ ವಿಧಾನಸೌಧದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಅಂತಾ ತಿಳಿಸಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post