ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯಲ್ಲಿ ಮತ್ತಷ್ಟು ಪ್ರಗತಿಗೆ ಅನುವು ಮಾಡಿಕೊಡುವಂಥ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಭಾರತದ ಮೇಲಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ಖಾನ್ ಹೇಳಿದ್ದಾರೆ.
ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎರಡು ದಿನಗಳ ಹಿಂದೆ ಪಾಕಿಸ್ತಾನಕ್ಕೆ ಭಾರತ ಹೇಳಿತ್ತು. ಇದರ ಬೆನ್ನಲ್ಲೇ ಇಮ್ರಾನ್ ಖಾನ್ ಈ ಹೇಳಿಕೆ ನೀಡಿದ್ದಾರೆ. ಇತ್ತೀಚೆಗಷ್ಟೇ ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಕದನ ವಿರಾಮ ಮರುಸ್ಥಾಪನೆಗೆ ಒಪ್ಪಂದವಾಗಿದೆ.
ಎಲ್ಒಸಿಯುದಕ್ಕೂ ಕದನ ವಿರಾಮದ ಒಪ್ಪಂದಗಳನ್ನು ಪಾಲಿಸಲು ಗುರುವಾರ ಉಭಯ ದೇಶಗಳು ಜಂಟಿಯಾಗಿ ಒಪ್ಪಿಗೆ ಸೂಚಿಸಿದ್ದವು. ಆದರೆ ಈ ವೇಳೆ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ನೀಡಿದ್ದ ಭಾರತ, ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂದು ಪುನರುಚ್ಛರಿಸಿತು.
ಸದ್ಯ ಭಾರತದ ಹೇಳಿಕೆ ಬೆನ್ನಲ್ಲೇ ದ್ವಿಪಕ್ಷೀಯ ಮಾತುಕತೆಯ ಕುರಿತು ಮಾತನಾಡಿರುವ ಇಮ್ರಾನ್ ಖಾನ್, ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಲು ಸಾಧ್ಯವಿದೆ. ಕಾಶ್ಮೀರಿ ಜನರ ದೀರ್ಘ ಕಾಲದ ಬೇಡಿಕೆಗಳು ಹಾಗೂ ಅವರ ಸ್ವಯಂನಿರ್ಣಯದ ಹಕ್ಕಿನ ಈಡೇರಿಕೆಕೆ ಭಾರತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಇನ್ನು ಬಾಲಾಕೋಟ್ ದಾಳಿಯ ಬಗ್ಗೆಯೂ ಟ್ವೀಟ್ ಮಾಡಿರುವ ಇಮ್ರಾನ್ ಖಾನ್, ನಾವು ವಶಕ್ಕೆ ಪಡೆದಿದ್ದ ಭಾರತೀಯ ಪೈಲಟ್(ಅಭಿನಂದನ್)ರನ್ನು ಮರಳಿ ಕಳಿಸುವ ಮೂಲಕ ಪಾಕಿಸ್ತಾನದ ಜವಾಬ್ದಾರಿಯುತ ನಡವಳಿಕೆಯನ್ನು ಜಗತ್ತಿಗೆ ತೋರಿಸಿದ್ದೇವೆ. ನಾವು ಯಾವಾಗಲೂ ಶಾಂತಿಗಾಗಿ ನಿಲ್ಲುತ್ತೇವೆ. ಮತ್ತು ಮಾತುಕತೆ ಮೂಲಕ ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧರಾಗಿರುತ್ತೇವೆ ಎಂದಿದ್ದಾರೆ.
ಇತ್ತೀಚೆಗಷ್ಟೇ ಶ್ರೀಲಂಕಾ ಪ್ರವಾಸದ ಸಂದರ್ಭದಲ್ಲೂ ಇಮ್ರಾನ್ ಖಾನ್, ಕಾಶ್ಮೀರ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ಇಮ್ರಾನ್ ಖಾನ್ ಅವರ ಹೇಳಿಕೆಗೆ ಭಾರತ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post