ಬೆಂಗಳೂರು: ಕೃಷಿ ಸಚಿವ ಬಿ.ಸಿ ಪಾಟೀಲ್ ತಮ್ಮ ಮನೆಗೇ ಆರೋಗ್ಯ ಸಿಬ್ಬಂದಿಯನ್ನ ಕರೆಸಿಕೊಂಡು ಕೊರೊನಾ ಲಸಿಕೆ ಪಡೆದಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿಯೇ ಏಮ್ಸ್ ಆಸ್ಪತ್ರೆಗೆ ಹೋಗಿ ಲಸಿಕೆ ಪಡೆದಿರುವಾಗ, ಸಚಿವರು ಆಸ್ಪತ್ರೆಗೆ ತೆರಳದೇ ಆರೋಗ್ಯ ಸಿಬ್ಬಂದಿಯಿಂದ ಹೋಮ್ ಸರ್ವೀಸ್ ಪಡೆದಿದ್ದಾರೆಂದು ಟೀಕೆ ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಬಿ.ಸಿ ಪಾಟೀಲ್, ಆಸ್ಪತ್ರೆಗೆ ಹೋಗಿದ್ರೆ ಅರ್ಧ ಗಂಟೆ ಆಗ್ತಿತ್ತು. ಜನರಿಗೆ ತೊಂದರೆ ಆಗಬಾರದು ಅಂತ ಮನೆಯಲ್ಲೇ ಲಸಿಕೆ ಪಡೆದಿದ್ದೀನಿ. ನಾನೇ ಆರೋಗ್ಯಾಧಿಕಾರಿಯನ್ನ ಕರೆಸಿಕೊಂಡೆ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಕೆಲವು ಹಕ್ಕು ಇರುತ್ತೆ ಬಳಸಿಕೊಂಡ್ರೆ ತಪ್ಪಾ ಎಂದು ಪ್ರಶ್ನಿಸಿದ್ದಾರೆ. ಇನ್ನು ಈ ಕುರಿತು ಡಿಹೆಚ್ಓ ರಾಜೇಂದ್ರ ದೊಡ್ಡಮನಿ ಅವರನ್ನ ಪ್ರಶ್ನಿಸಿದಾಗ, ತಾಲೂಕು ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ನಿಯಮಗಳ ಅನ್ವಯ ಎಲ್ಲರೂ ಸರ್ಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗಳ ಕೊರೊನಾ ಲಸಿಕೆ ಕೇಂದ್ರಗಳಿಗೆ ತೆರಳಿ ವ್ಯಾಕ್ಸಿನ್ ಪಡೆಯಬೇಕು. ಆದರೆ ಇಂದು ಬಿ.ಸಿ.ಪಾಟೀಲ್ ಅವರು ತಮ್ಮ ಪತ್ನಿ ವನಜಾ ಪಾಟೀಲ್ ಅವರೊಂದಿಗೆ ಮನೆಯಲ್ಲಿಯೇ ಕುಳಿತುಕೊಂಡು ಲಸಿಕೆ ಪಡೆದಿದ್ದಾರೆ. ಹಿರೇಕೆರೂರು ಆಸ್ಪತ್ರೆಯ ಸಿಬ್ಬಂದಿ ಸಚಿವರ ನಿವಾಸಕ್ಕೆ ಆಗಮಿಸಿ ಲಸಿಕೆ ನೀಡಿದ್ದಾರೆ. ಸಚಿವರ ನಡೆಗೆ ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post