ಬೆಂಗಳೂರು: ಸಾರಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರುವಂತೆ ನಗರದ ಮೌರ್ಯ ಸರ್ಕಲ್ನಲ್ಲಿ ಇಂದು ಸಂಕೇತಿಕ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ನೌಕರರ ಪ್ರತಿಭಟನೆಗೆ ಬೆಂಬಲ ಸೂಚಿಸಿ ವೇದಿಕೆ ಆಗಮಿಸಿದ ರೈತ ಮುಖಂಡ, ಸಾರಿಗೆ ನೌಕರರ ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರ ಶೇಖರ್ ಅವರು ಸರ್ಕಾರಕ್ಕೆ ಎಚ್ಚರಿಕೆಯನ್ನು ರವಾನಿಸಿದ್ದಾರೆ.
ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, ಇದು ಸಾಂಕೇತಿಕವಾಗಿ ಸರ್ಕಾರವನ್ನು ಎಚ್ಚರಿಸುವ ಸತ್ಯಾಗ್ರಹವಾಗಿದೆ. ಕೂಡಲೇ 6ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಮಾಡಬೇಕು. ಸರ್ಕಾರ ಲಿಖಿತ ಭರವಸೆ ಕೊಟ್ಟು ಸುಮ್ಮನಾಗಿದೆ. ಮೂರು ತಿಂಗಳ ಗಡವು ಮುಗಿತಾ ಇದೆ. ಹೀಗಾಗಿ ಸರ್ಕಾರ ಎಚ್ಚರ ಮಾಡಲಿಕ್ಕೆ ಈ ಸತ್ಯಾಗ್ರಹ ನಡೆಸಿದ್ದೇವೆ. ಮಾರ್ಚ್ 15 ಕ್ಕೆ ಗಡುವು ಮುಕ್ತಾಯವಾಗಲಿದೆ.
ಸರ್ಕಾರ ವಚನ ಭ್ರಷ್ಟರಾಗಬಾರದು. ಸಚಿವ ಲಕ್ಷ್ಮಣ್ ಸವದಿ ತಪ್ಪು ಮಾತುಗಳನ್ನ ಆಡಬಾರದು. ಒಬ್ಬ ಜವಾಬ್ದಾರಿ ಮಂತ್ರಿಯಾಗಿ ಮಾತಾಡಬೇಕು. 9 ಬೇಡಿಕೆಯಲ್ಲಿ ಯಾವುದು ಕಾರ್ಯಗತವಾಗಿದೆ ತಿಳಿಸಲಿ, ಇಲ್ಲಂದರೇ ಬರೀ ಮಾತಿನಲ್ಲಿ ಹೊಟ್ಟೆ ತುಂಬಲ್ಲ. ಸ್ಪಷ್ಟ ಆದೇಶ ಹೊರಡಿಸಬೇಕು. ಸಾರಿಗೆ ಇಲಾಖೆಯು ಸೇವಾ ಕ್ಷೇತ್ರವಾಗಿದ್ದು, ಮುಖ್ಯಮಂತ್ರಿಗಳು ಸಾರಿಗೆ ನೌಕರರ ಮನವಿಗೆ ಸ್ಪಂದಿಸಬೇಕು. ಹೊಸ ಬಸ್ಸುಗಳನ್ನ ಸಾಲ ಮಾಡಿ ತೆಗೆದುಕೊಳ್ಳೋ ಮನಸ್ಸು ಮಾಡೋ ಸರ್ಕಾರ, ನೌಕರರ ಬೇಡಿಕೆ ಈಡೇರಿಸೋ ಮನಸ್ಸಿಲ್ಲ ಎಂದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post