ಬೆಂಗಳೂರು: ತಣ್ಣಗಾಗಿದ್ದ ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಖ್ಯಾತ ತೆಲುಗು ನಟ ತನೀಶ್ ರೆಡ್ಡಿ ಸೇರಿ ಐವರಿಗೆ ಗೋವಿಂದಪುರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಸ್ಯಾಂಡಲ್ವುಡನ್ನೇ ನಡುಗಿಸಿದ್ದ ಡ್ರಗ್ಸ್ ಲಿಂಕ್ ಪ್ರಕರಣ ನಟಿ ರಾಗಿಣಿ ದ್ವಿವೇದಿಯವರ ಬಿಡುಗಡೆಯ ನಂತರ ತಣ್ಣಗಾಗುತ್ತಿತ್ತು. ಸ್ಯಾಂಡಲ್ವುಡ್ ಮಂದಿ ಇನ್ನೇನು ಪ್ರಕರಣ ಮುಗಿದೇ ಹೋಯಿತೆಂದೇ ಭಾವಿಸಿದ್ದರು. ಆದರೆ ಬಿಗ್ಬಾಸ್ ಸ್ಪರ್ಧಿ ಮಸ್ತಾನ್ ಹಾಗೂ ನಿರ್ಮಾಪಕ ಶಂಕರೇಗೌಡರ ಹೆಸರು ಕೇಸ್ನಲ್ಲಿ ಹೊರಬರುತ್ತಿದ್ದಂತೆ ಹಲವಾರು ನಟ ನಟಿಯರಿಗೆ ಆತಂಕ ಆರಂಭವಾಗಿದೆ. ಇದೀಗ ಖ್ಯಾತ ತೆಲುಗು ನಟ ತನೀಶ್, ಉದ್ಯಮಿ ಸಂದೀಪ್ ರೆಡ್ಡಿ, ನಿರ್ಮಾಪಕ ಕಲಹಾರೆಡ್ಡಿ, ಉದ್ಯಮಿ ರತನ್ ಹಾಗೂ ವಿಕ್ಕಿಮಲ್ಹೋತ್ರ ಎಂಬವರಿಗೆ ಗೋವಿಂದಪುರ ಠಾಣೆ ಇನ್ಸ್ಸ್ಪೆಕ್ಟರ್ ಆರ್. ಪ್ರಕಾಶ್ ನೋಟಿಸ್ ನೀಡಿದ್ದಾರೆ.
ಈ ಐವರು, ನಿರ್ಮಾಪಕ ಶಂಕರೇಗೌಡ ತಮ್ಮ ನಿವಾಸದಲ್ಲಿ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದರು. ಡ್ರಗ್ ಪೆಡ್ಲರ್ಗಳಾದ ಫಯೂಮ್ ಹಾಗೂ ಜಾನ್ರಿಂದ ಮಸ್ತಾನ್ ಮೂಲಕ ಡ್ರಗ್ಸ್ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿದೆ. ಪೊಲೀಸರು ಹೈದರಾಬಾದ್ನ ಈ ಐವರ ನಿವಾಸಕ್ಕೆ ತೆರಳಿ ಮಾರ್ಚ್ 11ರಂದು ನೇರವಾಗಿ ನೋಟಿಸ್ ನೀಡಿದ್ದು, ಇಂದು(ಮಾರ್ಚ್ 13) ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.
ನಟ ತನೀಶ್ ತೆಲುಗಿನ ಬಿಗ್ ಬಾಸ್ ಸೀಸನ್ 2 ರಲ್ಲಿ ಸ್ಪರ್ಧಿಸಿದ್ದವರು. ಬಾಲನಟನಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ನಟ ಇಪ್ಪತ್ತಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಡ್ರಗ್ಸ್ ಜಾಲದಲ್ಲಿ ಇವರ ಹೆಸರು ತಳಕು ಹಾಕಿಕೊಳ್ತಿರೋದು ಇದೇ ಮೊದಲಲ್ಲ. ಕಳೆದ 2017ರ ಜುಲೈನಲ್ಲಿ ಕ್ಯಾಲ್ವಿನ್ ಎಂಬ ಡ್ರಗ್ ಪೆಡ್ಲರ್ನನ್ನ ಬಂಧಿಸಲಾಗಿತ್ತು. ಆ ಡ್ರಗ್ ಪೆಡ್ಲರ್ ನಟ ತನೀಶ್ ಸೇರಿದಂತೆ ಹಲವರಿಗೆ ಡ್ರಗ್ಸ್ ನೀಡಿರೋದಾಗಿ ಬಾಯ್ಬಿಟ್ಟಿದ್ದ. 2017ರ ಜುಲೈನಲ್ಲಿ ಹೈದರಾಬಾದ್ನ ಎಸ್.ಐ.ಟಿ ಮುಂದೆ ತನೀಶ್ ವಿಚಾರಣೆಗೆ ಹಾಜರಾಗಿದ್ದರು. 2017ರ ನಂತರ ಮೂರೂವರೆ ವರ್ಷಗಳ ಬಳಿಕ ಮತ್ತೆ ಡ್ರಗ್ಸ್ ಜಾಲದಲ್ಲಿ ನಟ ತನೀಶ್ ಹೆಸರು ತಳಕು ಹಾಕಿಕೊಂಡಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post