ದೆಹಲಿ: ಕೇಂದ್ರದ ಎನ್ಸಿಟಿ(ಗವರ್ನಮೆಂಟ್ ಆಫ್ ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ ಆಫ್ ದೆಹಲಿ) ತಿದ್ದುಪಡಿ ಕಾಯ್ದೆಯನ್ನ ವಿರೋಧಿಸಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿಂದು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಯಲಿದೆ.
ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಂಪುಟದ ಸಚಿವರು, ಆಪ್ ಶಾಸಕರು ಹಾಗು ಕೌನ್ಸಿಲರ್ಗಳು ಭಾಗಿಯಾಗಲಿದ್ದಾರೆ. ಕೇಂದ್ರ ಸರ್ಕಾರ, ರಾಜ್ಯಸರ್ಕಾರದ ಅಧಿಕಾರವನ್ನ ಕಿತ್ತುಕೊಳ್ಳಲು ಎನ್ಸಿಟಿ ಕಾಯ್ದೆಯನ್ನ ತಂದಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಏನಿದು ಎನ್ಸಿಟಿ ಕಾಯ್ದೆ?
ಕೇಂದ್ರ ಸರ್ಕಾರ, 1991ರ ದೆಹಲಿ ರಾಷ್ಟ್ರ ರಾಜಧಾನಿಯ ಸರ್ಕಾರ ಕಾಯ್ದೆಗೆ ತಿದ್ದುಪಡಿ ಮಾಡಿ, Government of National Capital Territory of Delhi (Amendment) Bill, 2021 ತಂದಿದೆ. ಈ ತಿದ್ದುಪಡಿ ಮೂಲಕ ಮಂತ್ರಿ ಮಂಡಲ ಮತ್ತು ದೆಹಲಿಯ ಲೆಫ್ಟಿನೆಂಟ್-ಗವರ್ನರ್ರ ಪಾತ್ರವನ್ನ ಮತ್ತಷ್ಟು ಉತ್ತಮವಾಗಿ ವ್ಯಾಖ್ಯಾನಿಸಲಾಗಿದೆ. ವರದಿಗಳ ಪ್ರಕಾರ, ಲೆಫ್ಟಿನೆಂಟ್-ಗವರ್ನರ್ಗೆ ಹೆಚ್ಚಿನ ಅಧಿಕಾರ ನೀಡುವ ಪ್ರಸ್ತಾವನೆ ಈ ಕಾಯ್ದೆಯಲ್ಲಿದೆ.
ಈ ಹಿಂದೆ ದೆಹಲಿ ಸರ್ಕಾರದ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರದ ವಿಚಾರವಾಗಿ ಕೇಜ್ರಿವಾಲ್ ಸರ್ಕಾರ ಮತ್ತು ಕೇಂದ್ರದ ನಡುವೆ ತೀವ್ರ ಜಟಾಪಟಿ ಉಂಟಾಗಿತ್ತು. ಈ ಸಂಬಂಧ ಸುಪ್ರೀಂಕೋರ್ಟ್ 2017ರಲ್ಲಿ ತೀರ್ಪು ಪ್ರಕಟಿಸಿತ್ತು. ದೆಹಲಿ ಸರ್ಕಾರದ ಎಸಿಬಿಗೆ ಕೇಂದ್ರ ಸರ್ಕಾರದ ನೌಕರರ ತನಿಖೆ ನಡೆಸುವ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ದೆಹಲಿ ಸರ್ಕಾರದ ವ್ಯವಹಾರಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತನಿಖೆ ನಡೆಸಲು ಕೇಂದ್ರವು ತನಿಖಾ ಆಯೋಗವನ್ನು ನೇಮಿಸಬಹುದು ಎಂದಿತ್ತು. ಈ ತೀರ್ಪಿನ ಹಿನ್ನೆಲೆ ಕೇಂದ್ರ ಈಗ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಮತ್ತೆ ಅಧಿಕಾರ ಹಗ್ಗಜಗ್ಗಾಟಕ್ಕೆ ಎಡೆಮಾಡಿಕೊಟ್ಟಿದೆ.
ಹೊಸ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಬೇಕು ಎಂದರೂ ಅದಕ್ಕೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆಯಬೇಕಾಗುತ್ತದೆ ಎನ್ನಲಾಗಿದೆ. ಇದರಿಂದ ಸರ್ಕಾರ ಯಾವುದೇ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಸಾಧ್ಯವಾಗೋದಿಲ್ಲ. ಈಗಾಗಲೇ ಈ ಕಾಯ್ದೆಯನ್ನ ದೆಹಲಿಯ ವಿಧಾನಸಭೆಯಲ್ಲಿ ಸರ್ವಾನುಮತದಿಂದ ವಿರೋಧಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಈ ಕಾಯ್ದೆಯನ್ನ ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದಿದೆ. ರಾಜ್ಯಸಭೆಯಲ್ಲಿ ಬಿಲ್ ಮಂಡನೆಗೆ ಅಮಿತ್ ಶಾ ಮುಂದಾಗಿದ್ದಾರೆ. ಆದ್ದರಿಂದ ಇದನ್ನು ವಿರೋಧಿಸಿ ಕೇಜ್ರಿವಾಲ್ ಸರ್ಕಾರ ಪ್ರತಿಭಟನೆಗೆ ಮುಂದಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post