ಬೆಂಗಳೂರು: ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಿಗಾಗಿ ಬ್ಲಡ್ ಟೆಸ್ಟ್ ಕಿಟ್ಗಳನ್ನ ಖರೀದಿ ಮಾಡುವಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಆಮ್ ಆದ್ಮಿ ಪಾರ್ಟಿ ಗಂಭೀರ ಆರೋಪ ಮಾಡಿದೆ. ಆರೋಗ್ಯ ಸಚಿವ ಸುಧಾಕರ್ ಕಿಕ್ಬ್ಯಾಕ್ ಪಡೆದಿದ್ದಾರೆ ಎಂದು AAP ಆರೋಪಿಸಿದ್ದು, ಸಚಿವರ ವಿರುದ್ಧ ಇಂದು ದಾಖಲೆಗಳನ್ನ ಬಿಡುಗಡೆ ಮಾಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಟೆಂಡರ್ನಲ್ಲಿ ಗೋಲ್ಮಾಲ್ ನಡೆದಿದೆ. ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಿಗೆ ಬ್ಲಡ್ ಟೆಸ್ಟ್ ಕಿಟ್ಗಳ ಖರೀದಿಯಲ್ಲಿ 20 ಕೋಟಿಗೂ ಹೆಚ್ಚಿನ ಅಕ್ರಮ ನಡೆದಿದೆ ಎಂದು AAPನ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದ್ದಾರೆ. ಟೆಂಡರ್ನಲ್ಲಿ ಭಾಗಿಯಾಗಲು ಯಾರಿಗೂ ಅವಕಾಶ ನೀಡದೆ, ಏಕಮುಖವಾಗಿ ಟೆಂಡರ್ ಕರೆದು ನಿಗದಿತ ಬೆಲೆಗಿಂತ ದುಬಾರಿ ಮೊತ್ತ ಕೊಟ್ಟು ಬ್ಲಡ್ ಟೆಸ್ಟ್ ಕಿಟ್ಗಳ ಖರೀದಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಪಕ್ಕದ ಕೇರಳ ರಾಜ್ಯದಲ್ಲಿ ಇದೇ ಕಿಟ್ಗಳ ಮೊತ್ತ ಎಷ್ಟಿದೆ ಮತ್ತು ಕರ್ನಾಟಕ ಪಾವತಿಸಿರೊ ಮೊತ್ತ ಎಷ್ಟು ಎಂಬುದರ ದಾಖಲೆಗಳನ್ನ ಬಿಡುಗಡೆ ಮಾಡಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮೋಹನ್ ದಾಸರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಕರ್ನಾಟಕ ಡ್ರಗ್ ಅಂಡ್ ಲಾಜಿಸ್ಟಿಕ್, ವೇರ್ ಹೌಸಿಂಗ್ ಸೊಸೈಟಿಯಲ್ಲಿ ₹39 ಕೋಟಿ ಹಗರಣವಾಗಿದೆ. ಸಚಿವ ಸುಧಾಕರ್ ಒತ್ತಡ ಬೀರಿ ಆಪ್ತ ಕಂಪನಿಗಳಿಗೆ ಗುತ್ತಿಗೆ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡರೋಗಿಗಳಿಗೆ ಸೌಲಭ್ಯ ನೀಡಲು ಖರೀದಿಸಿರುವ ಉಪಕರಣ, ಜೈವಿಕ ರಸಾಯನ ಶಾಸ್ತ್ರ ಮತ್ತು ಹೆಮಟೋಲಜಿ ಉಪಕರಣಗಳ ಟೆಂಡರ್ ನೀಡುವಾಗ ನಿಯಮಗಳನ್ನ ಉಲ್ಲಂಘನೆ ಮಾಡಿ ಆಪ್ತ ಕಂಪನಿಗಳಿಗೆ ದುಬಾರಿ ಮೊತ್ತಕ್ಕೆ ಟೆಂಡರ್ ಕೊಟ್ಟಿದ್ದಾರೆ. ಈ ಎರಡೂ ಟೆಂಡರ್ನಲ್ಲಿ ಭಾರೀ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ರು.
- ಟೆಂಡರ್ ನಂ. KDL/EQPT/ TND/LE-3 ಭಾಗ HAE/103/2020/-21 (IND-720) ದಿನಾಂಕ 23/09/2020
- ಟೆಂಡರ್ ನಂ. KDL/EQPT/ Re-TND/LE-5 ಭಾಗ HA/104/2020-21
ಬಯೋ ಕೆಮಿಸ್ಟ್ರಿ ಮತ್ತು ಹೆಮಟಾಲಜಿ ಉಪಕರಣಗಳ ಖರೀದಿಯಲ್ಲಿ ಸುಧಾಕರ್ 20 ಕೋಟಿಗೂ ಹೆಚ್ಚಿನ ಕಿಕ್ ಬ್ಯಾಕ್ ಪಡೆದಿದ್ದಾರೆ. ಸಿಂಗಲ್ ಬಿಡ್ಗೆ ಅವಕಾಶ ಇಲ್ಲದೆ ಇದ್ರೂ ಸಿಂಗಲ್ ಬಿಡ್ ನೀಡಿದ್ದಾರೆ ಎಂದು ದೂರಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]












Discussion about this post