ಮಂಡ್ಯ: ಜಿಲ್ಲೆಯ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಧರಿಸದಿರುವವರಿಗೆ ದಂಡ ವಿಧಿಸುವ ಬದಲು ಸವಾರರಿಗೆ ಹೆಲ್ಮೆಟ್ ನೀಡುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ರಸ್ತೆ, ಎಸ್.ಡಿ. ಜಯರಾಂ ವೃತ್ತ, ಮಹಾವೀರ ವೃತ್ತ, ಜೆಸಿ ವೃತ್ತ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಅಂಬೇಡ್ಕರ್ ವೃತ್ತ, ಡಾ. ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಪೊಲೀಸರು ನಿಂತಿದ್ದಾರೆ. ಅಲ್ಲಿಗೆ ಬರುವ ದ್ವಿಚಕ್ರ ವಾಹನ ಸವಾರರು ಯಾರು ಹೆಲ್ಮೆಟ್ ಹಾಕಿಲ್ಲವೋ ಅಂತಹವರನ್ನು ತಡೆದು ದಂಡ ಕಟ್ಟುವ ಬದಲು ಹೆಲ್ಮೆಟ್ ತೆಗೆದುಕೊಳ್ಳುವಂತೆ ಜಾಗೃತಿ ಮೂಡಿಸಿ ಸ್ಥಳದಲ್ಲೇ ಹೆಲ್ಮೆಟ್ ನೀಡುತ್ತಿದ್ದಾರೆ. ಈ ಹಿಂದೆ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿದಲ್ಲಿ ವಾಹನ ಸವಾರರಿಗೆ ದಂಡ ಬೀಳುತ್ತಿತ್ತು. ಆದರೆ ಇದೀಗ ದಂಡದ ಬದಲು ಸ್ಥಳದಲ್ಲೇ ಹೆಲ್ಮೆಟ್ ಖರೀದಿಸಿ ಅದನ್ನ ಧರಿಸಿಕೊಂಡು ವಾಹನ ಚಾಲನೆ ಮಾಡುವಂತೆ ಮಾಡುತ್ತಿದ್ದಾರೆ.
ಹೆಲ್ಮೆಟ್ ಮನೆಯಲ್ಲಿದೆ ಎಂದು ಹೇಳಿ ತೆಗೆದುಕೊಳ್ಳದವರಿಗೆ 500 ರೂಪಾಯಿ ದಂಡ ವಿಧಿಸುತ್ತಿದ್ದಾರೆ. ಹೆಲ್ಮೆಟ್ ಇಲ್ಲದವರಿಗೆ ಹೆಲ್ಮೆಟ್ ನೀಡುತ್ತಿದ್ದಾರೆ, ಅಲ್ಲದೆ ಮಾಸ್ಕ್ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಘಟನೆಯಲ್ಲಿ ಯುವಕ ಮೃತಪಟ್ಟು ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಪೊಲೀಸರ ಮೇಲೆ ಮುಗಿಬಿದ್ದು ಹಿಗ್ಗಾಮುಗ್ಗಾ ಥಳಿಸಿದ್ದರು. ಇದರಿಂದ ಎಚ್ಚೆತ್ತ ಮಂಡ್ಯ ಪೊಲೀಸರು ದಂಡದ ಬದಲು ಸ್ಥಳದಲ್ಲೇ ಹೆಲ್ಮೆಟ್ ಕೊಡಿಸಿ ಎಚ್ಚರಿಕೆ ನೀಡುತ್ತಿರುವುದು ಒಳ್ಳೆಯ ವಿಚಾರ ಎಂದು ಸಾರ್ವಜನಿಕರು ಹೊಗಳುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post