ದಕ್ಷಿಣ ಕೊರಿಯಾದ ಪ್ರಸಿದ್ಧ ಎಲ್ಜಿ ಎಲೆಕ್ಟ್ರಾನಿಕ್ಸ್ ಸಂಸ್ಥೆ ವಿಶ್ವದಾದ್ಯಂತ ತನ್ನ ಮೊಬೈಲ್ ಫೋನ್ ಉದ್ಯಮವನ್ನ ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ಘೋಷಿಸಿದೆ.
ಸ್ಮಾರ್ಟ್ಫೋನ್ ತಯಾರಿಕೆ ವಿಭಾಗದಲ್ಲಿ ಭಾರೀ ನಷ್ಟ ಅನುಭವಿಸಿರುವ ಹಿನ್ನೆಲೆ ಸಂಸ್ಥೆ ಈ ತೀರ್ಮಾನಕ್ಕೆ ಬಂದಿದೆ. ಈ ಮೂಲಕ ಎಲ್ಜಿ ಮಾರುಕಟ್ಟೆಯಿಂದ ಸಂಪೂರ್ಣವಾಗಿ ಹಿಂದೆ ಸರಿಯುತ್ತಿರುವ ಮೊದಲ ಪ್ರಮುಖ ಸ್ಮಾರ್ಟ್ಫೋನ್ ಬ್ರ್ಯಾಂಡ್ ಆಗಲಿದೆ.
ಕಳೆದ 6 ವರ್ಷಗಳಿಂದ ಎಲ್ಜಿ ಮೊಬೈಲ್ ವಿಭಾಗ 4.5 ಬಿಲಿಯನ್ ಡಾಲರ್ (ಸುಮಾರು ₹33,010 ಕೋಟಿ) ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ. ಹೀಗಾಗಿ ತೀವ್ರ ಸ್ಪರ್ಧೆ ಇರುವ ಮೊಬೈಲ್ ಉತ್ಪಾದನಾ ಕ್ಷೇತ್ರದಿಂದ ಹೊರಗುಳಿಯುವುದರಿಂದ ವಿದ್ಯುತ್ ವಾಹನಗಳ ಘಟಕಗಳು, ಸ್ಮಾರ್ಟ್ ಮನೆಗಳಂತಹ ಬೆಳವಣಿಗೆಯ ಕ್ಷೇತ್ರಗಳತ್ತ ಗಮನಹರಿಸಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ಎಲ್ಜಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಹಲವಾರು ಸೆಲ್ಫೋನ್ ಆವಿಷ್ಕಾರಗಳ ಮೂಲಕ ಎಲ್ಜಿ ಆರಂಭದ ಹಂತದಿಂದಲೂ ಮಾರುಕಟ್ಟೆಯಲ್ಲಿತ್ತು. 2013ರಲ್ಲಿ ಆ್ಯಪಲ್ ಹಾಗೂ ಸ್ಯಾಮ್ಸಂಗ್ ನಂತರ ವಿಶ್ವದ ಮೂರನೇ ಅತೀ ದೊಡ್ಡ ಸ್ಮಾರ್ಟ್ಫೋನ್ ಉತ್ಪಾದಕ ಸಂಸ್ಥೆ ಎನಿಸಿಕೊಂಡಿತ್ತು. ಆದರೆ ನಂತರದ ದಿನಗಳಲ್ಲಿ ಎಲ್ಜಿಯ ಪ್ರಮುಖ ಮಾಡೆಲ್ ಫೋನ್ಗಳಲ್ಲಿ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ದೋಷಗಳು ಹೆಚ್ಚಾಗಿ ಕಾಣಿಸತೊಡಗಿದ್ದವು. ನಿಧಾನಗತಿಯ ಸಾಫ್ಟ್‌ವೇರ್ ನವೀಕರಣ ಸೇರಿದಂತೆ ಹಲವು ಕಾರಣಗಳಿಂದ ಎಲ್ಜಿ ಫೋನ್ಸ್ ಬೇಡಿಕೆ ಕ್ರಮೇಣವಾಗಿ ಕುಸಿಯತೊಡಗಿತು. ಚೀನಾದ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಎಲ್ಜಿ ಕಂಪನಿಯ ಮಾರ್ಕೆಟಿಂಗ್‌ನಲ್ಲಿ ಪರಿಣತಿಯ ಕೊರತೆಯಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಎಲ್ಜಿ ಮೊಬೈಲ್ ಉತ್ಪಾದನೆಯನ್ನ ಸಂಪೂರ್ಣವಾಗಿ ನಿಲ್ಲಿಸಲು ಮುಂದಾಗಿರೋದ್ರಿಂದ ದಕ್ಷಿಣ ಅಮೆರಿಕಾದಲ್ಲಿ ಸ್ಯಾಮ್ಸಂಗ್ ಹಾಗೂ ಚೀನಿ ಕಂಪನಿಗಳಾದ ಓಪ್ಪೋ, ವೀವೋ ಮತ್ತು ಶಿಯೋಮಿ ಕಂಪನಿಗಳಿಗೆ ಲಾಭವಾಗಲಿದೆ ಎದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒಂದು ಕಾಲದಲ್ಲಿ ಉತ್ತುಂಗದಲ್ಲಿದ್ದ ಪ್ರಸಿದ್ಧ ಮೊಬೈಲ್ ಬ್ರ್ಯಾಂಡ್ಗಳಾದ ನೋಕಿಯಾ, ಹೆಚ್ಟಿಸಿ, ಮತ್ತು ಬ್ಲ್ಯಾಕ್‌ಬೆ ಸದ್ಯ ಕುಸಿತ ಕಂಡಿದ್ದರೂ ಅವು ಇನ್ನೂ ಸಂಪೂರ್ಣವಾಗಿ ಕಣ್ಮರೆಯಾಗಿಲ್ಲ. ಜುಲೈ 31ರ ವೇಳೆಗೆ ಎಲ್ಜಿ ಮೊಬೈಲ್ ವಿಭಾಗ ಸಂಪೂರ್ಣ ಬಂದ್ ಆಗಲಿದೆ ಎಂದು ಹೇಳಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ವಿಂಗ್, ವೆಲ್ವೆಟ್, ಕ್ಯೂ-ಸೀರೀಸ್, ಡಬ್ಲ್ಯು-ಸೀರೀಸ್, ಮತ್ತು ಕೆ-ಸೀರೀಸ್ ಎಲ್ಜಿ ಫೋನ್‌ಗಳ ಮಾರಾಟ ಮುಂದುವರೆಯುತ್ತದೆ. ಆದರೆ ದಾಸ್ತಾನು ಇರುವವರೆಗೂ ಮಾತ್ರ ಇನ್ನು ಮೊಬೈಲ್ ಉತ್ಪನ್ನಗಳ ಗ್ರಾಹಕರಿಗೆ ಎಲ್ಜಿ ಸರ್ವೀಸ್ ಸಪೋರ್ಟ್ ಮತ್ತು ಸಾಫ್ಟ್‌ವೇರ್ ನವೀಕರಣಗಳನ್ನು ಒದಗಿಸಲಾಗುತ್ತದೆ. ಇದು ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post