ದೇಶಿ ಕ್ರಿಕೆಟ್ನಿಂದ ಐಪಿಎಲ್, ಐಪಿಎಲ್ನಿಂದ ಟೀಂ ಇಂಡಿಯಾ. ಹೀಗೆ ಕೇರಂ ಸ್ಪಿನ್ನರ್ ಅಶ್ವಿನ್ ಕ್ರಿಕೆಟ್ ಜರ್ನಿಯೇ ವಿಶೇಷ. ಐಪಿಎಲ್ನಲ್ಲಿ ಮಿಂಚಿದ್ದ ಆ್ಯಷ್ಗೆ ಟೀಂ ಇಂಡಿಯಾ ಬಾಗಿಲು ತೆರೆದಿದ್ದು ಕ್ಯಾಪ್ಟನ್ ಕೂಲ್! ಕ್ರಿಕೆಟ್ ಜರ್ನಿಯಲ್ಲಿ ಒಬ್ಬರಿಗೊಬ್ಬರು ಸಾಥ್ ನೀಡಿ ಬೆಳೆದಿದ್ದಾರೆ ಅನ್ನೋದು ನಿಮ್ಮ ಉಹೆಯೂ ಆಗಿರಬಹುದು.
2006ರಲ್ಲಿ ತಮಿಳುನಾಡು ರಾಜ್ಯ ಕ್ರಿಕೆಟ್ ಟೀಂನಲ್ಲಿ ಬ್ಯಾಟಿಂಗ್ ಓಪನರ್ ಆಗಿ ತಮ್ಮ ಕ್ರಿಕೆಟ್ ಜರ್ನಿ ಶುರು ಮಾಡಿದ್ದ ಕೇರಮ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ಗೆ, 2009ರಲ್ಲೇ ಐಪಿಎಲ್ ಬಾಗಿಲು ತೆರೆದಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ನ ಎರಡನೇ ಆವೃತ್ತಿಯಲ್ಲೇ ತಮ್ಮ ಊರು, ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸೇರ್ಪಡೆಯಾಗಿದ್ದ ಅಶ್ವಿನ್, ಆಡುವ ಹನ್ನೊಂದರಲ್ಲೂ ಅದೇ ವರ್ಷ ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ ಆ ವರ್ಷ ಅಶ್ವಿನ್, ಆಡಿದ ಎರಡು ಪಂದ್ಯಗಳಲ್ಲಿ 2 ವಿಕೆಟ್ಗಳನ್ನ ಪಡೆಯಲಷ್ಟೇ ಶಕ್ತರಾದರು.
2009ರಲ್ಲಿ ಅಷ್ಟಾಗಿ ಆಡುವ ಅವಕಾಶ ಗಿಟ್ಟಿಸಿಕೊಳ್ಳದ ಅಶ್ವಿನ್ಗೆ ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ, 2010 ಹಾಗೂ 2011ರ ಎರಡು ಐಪಿಎಲ್ ಸೀಸನ್ಗಳಲ್ಲಿ ಹೆಚ್ಚಿನ ಪಂದ್ಯಗಳನ್ನ ನೀಡಿದ್ದರು. ತಮಗೆ ಸಿಕ್ಕ ಅವಕಾಶವನ್ನ ಬಳಸಿಕೊಂಡ ಅಶ್ವಿನ್, 2010 ಹಾಗೂ 2011ರ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನವನ್ನೂ ತೋರಿದ್ದರು. ಅಂದ್ಹಾಗೇ ಈ ಎರಡೂ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ತಂಡ ವಿನ್ನರ್ ಆಗಿ ಹೊರಹೊಮ್ಮಿತು. ಇನ್ನು 2010ರ ಐಪಿಎಲ್ ನಂತರ ಅದೇ ವರ್ಷ ಜೂನ್ನಲ್ಲಿ ಧೋನಿ ನಾಯಕತ್ವದಲ್ಲಿ ಅಶ್ವಿನ್ ಟೀಂ ಇಂಡಿಯಾಗೂ ಎಂಟ್ರಿ ಕೊಟ್ರು.
ಧೋನಿಯನ್ನ ಕಂಡ್ರೆ ಅಶ್ವಿನ್ಗೆ ಅದ್ಯಾಕೆ ಅಷ್ಟೊಂದು ಕೋಪ?
ಅರೇ.. ಇದೇನಿದು ಐಪಿಎಲ್ ತಂಡದಲ್ಲಿದ್ದ ಅಶ್ವಿನ್ರನ್ನ ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿಸಿದ ಧೋನಿಯನ್ನೇ ಅಶ್ವಿನ್ ದ್ವೇಷಿಸೋಕೆ ಶುರು ಮಾಡಿದ್ರಾ ಅನ್ನೋ ಪ್ರಶ್ನೆ ನಿಮಗೂ ಮೂಡಿರಬಹುದು. ಮೂಡೋದು ಸಹಜ. ಅದ್ಯಾಕೋ ಧೋನಿ ಅಂದ್ರೆ ಕಿಡಿಕಾರುವ ಅಶ್ವಿನ್, ಧೋನಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಒಳ್ಳೊಳ್ಳೆ ಪೋಸ್ಟ್ಗಳನ್ನೇ ಹಾಕ್ತಾರೆ. ಅದೆಲ್ಲಿಯೂ ಯಾರೊಬ್ಬರಿಗೂ ತಮಗೆ ಧೋನಿ ಇಷ್ಟ ಇಲ್ಲ ಅನ್ನೋದನ್ನ ತೋರ್ಪಡಿಸಿಲ್ಲ.
ನಿಷೇಧದ ಕಾರಣ ಎರಡು ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಆಡದೇ ಮಂಕಾಗಿತ್ತು. ಆದ್ರೆ ಪ್ಲೇಯರ್ಸ್ ಮಂಕಾಗಿರೋಕೆ ಸಾಧ್ಯನಾ? 2015ರಲ್ಲಿ ಎರಡು ವರ್ಷಗಳ ಕಾಲ ಸಿಎಸ್ಕೆ ತಂಡಕ್ಕೆ ಕಡಿವಾಣ ಹಾಕಿದ್ದ ಬಿಸಿಸಿಐ, ಎರಡು ಹೊಸ ತಂಡಗಳನ್ನ ಐಪಿಎಲ್ಗೆ ಸೇರ್ಪಡೆ ಮಾಡಿಕೊಂಡಿತ್ತು. ಅದುವೇ ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ಹಾಗೂ ಗುಜರಾತ್ ಲಯನ್ಸ್. ರೈಸಿಂಗ್ಸ್ ಪುಣೆ ಸೂಪರ್ಜೈಂಟ್ಸ್ಗೆ ನಾಯಕನಾಗಿದ್ದ ಧೋನಿ, ಮತ್ತೆ ಅಶ್ವಿನ್ ಕೈಬಿಡದೇ ಅಲ್ಲೂ ಪ್ರಮುಖ ಬೌಲರ್ ಆಗಿ ಕಣಕ್ಕಿಳಿಸಿದ್ರು. ಆದ್ರೂ ಅದ್ಯಾಕೋ ಧೋನಿಯಿಂದ ತಮ್ಮ ಕರಿಯರ್ ಅಂತ್ಯವಾಯ್ತು ಅನ್ನೋದು ಅಶ್ವಿನ್ ಮಾತು.
ಅಶ್ವಿನ್ ಚೆನ್ನೈ ತಂಡದಿಂದ ಹೊರಗಿರೋದಕ್ಕೆ ಧೋನಿ ಕಾರಣನಾ?
2016ರಲ್ಲಿ ಪುಣೆ ತಂಡ ಸೇರಿದ್ದ ಅಶ್ವಿನ್, 14 ಪಂದ್ಯಗಳಲ್ಲಿ 10 ವಿಕೆಟ್ಗಳನ್ನ ಪಡೆದಿದ್ರು. ಆದ್ರೆ 2017ರಲ್ಲಿ ಉತ್ತಮ ಪ್ರದರ್ಶನ ನೀಡ್ತಾರೆ ಅಂತ ನಿರೀಕ್ಷೆ ಇಟ್ಟುಕೊಂಡವರಿಗೆ ಅಶ್ವಿನ್ ಇಂಜುರಿ ನಿರಾಸೆ ಮೂಡಿಸಿತ್ತು. ಸ್ಪೋರ್ಟ್ಸ್ ಹರ್ನಿಯಾ ಕಾರಣ ಅಶ್ವಿನ್ 2017ರ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರು. ಅದೇ ರೀತಿ, 2018ರಲ್ಲಿ ಸಿಎಸ್ಕೆ ತಂಡ ವಾಪಾಸಾದಾಗ, ತಾನು ತಂಡದಲ್ಲಿರೋದು ಸಹಜ ಅಂದುಕೊಂಡಿದ್ದ ಅಶ್ವಿನ್ಗೆ ಶಾಕ್ ಕಾದಿತ್ತು.
2018ರಲ್ಲಿ ಸಿಎಸ್ಕೆ ತಂಡಕ್ಕೆ ಮೂರು ಆಟಗಾರರನ್ನಷ್ಟೇ ರೀಟೈನ್ ಮಾಡುವ ಅವಕಾಶವಿತ್ತು. ನಾಯಕ ಧೋನಿ, ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜಾರನ್ನ ರೀಟೈನ್ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್, ಅಶ್ವಿನ್ ಸೇರಿದಂತೆ ಅನೇಕ ಆಟಗಾರರನ್ನ ಕೈಬಿಟ್ಟಿತ್ತು. ಆಕ್ಷನ್ನಲ್ಲಾದ್ರೂ ಚೆನ್ನೈ ತಂಡ ತಮ್ಮನ್ನ ಬಿಡ್ ಮಾಡುತ್ತೆ ಅಂತ ಅಂದುಕೊಂಡಿದ್ದ ಅಶ್ವಿನ್ಗೆ ಮತ್ತೆ ನಿರಾಸೆ ಮೂಡಿಸಿತ್ತು ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್. ಅಶ್ವಿನ್ ಬದಲಿಗೆ ಲೆಜೆಂಡ್ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ಗೆ ಗಾಳ ಹಾಕಿತ್ತು ಸಿಎಸ್ಕೆ ತಂಡ. ಇಲ್ಲೇ ನೋಡಿ ರೈವಲ್ರಿ ಶುರುವಾಗಿದ್ದು. ಚೆನ್ನೈ ತಂಡದಿಂದ ಹೊರಗಿಡಲಾಗಿದ್ದು ಧೋನಿಯಿಂದಾನೇ ಅಂತ ಅಶ್ವಿನ್ ಆ ದಿನವೇ ಫಿಕ್ಸ್ ಆದಂತಿದೆ.
ಧೋನಿ ಏಳಿಗೆಗೆ ಉರಿದುಕೊಳ್ತಾರಾ ರವಿಚಂದ್ರನ್ ಅಶ್ವಿನ್..?
2017ರ ನಂತರ ಭಾರತ ತಂಡಕ್ಕೆ ಯಾವುದೇ ಏಕದಿನ ಹಾಗೂ ಟಿ-ಟ್ವೆಂಟಿ ಪಂದ್ಯಗಳನ್ನ ಆಡದ ಅಶ್ವಿನ್ಗೆ ತಂಡದ ಆಗಿನ ನಾಯಕನೇ ಶತ್ರು ಥರ ಕಾಣಿಸಿದ್ದು ಸುಳ್ಳಲ್ಲ. 2017ರ ಆಗಸ್ಟ್ನಲ್ಲಿ ಎಂ.ಎಸ್.ಧೋನಿ ಯುಎಇನಲ್ಲಿ ತಮ್ಮ ಕ್ರಿಕೆಟ್ ಅಕಾಡೆಮಿ ಸ್ಟಾರ್ಟ್ ಮಾಡಿದ್ರು. ಈ ಬಗ್ಗೆ ತಿಳಿಯುತ್ತಿದ್ದಂತೆ ರವಿಚಂದ್ರನ್ ಅಶ್ವಿನ್, ತಮ್ಮ ಬಳಗದಲ್ಲಿ ಧೋನಿ ಆಟ ಹಾಗೂ ಸಾಮರ್ಥ್ಯದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದರು ಅನ್ನೋದು ಸದ್ಯ ಬೆಳಕಿಗೆ ಬಂದಿದೆ. ‘ಅವನಿಗೇ ನೆಟ್ಟಗೆ ಆಡೋಕೆ ಬರಲ್ಲ.. ಅವನು ಕ್ರಿಕೆಟ್ ಅಕಾಡೆಮಿ ಬೇರೆ ಶುರು ಮಾಡಿಕೊಂಡಿದ್ದಾನೆ’ ಅನ್ನೋ ಮಾತುಗಳವು.
ಇಷ್ಟೇ ಅಲ್ಲ.. 2016ರ ಅಂತ್ಯದಲ್ಲಿ ಅಶ್ವಿನ್ ತಮ್ಮದೇ ಆದ ಕ್ರಿಕೆಟ್ ಅಕಾಡೆಮಿಯೊಂದನ್ನ ಚೆನ್ನೈನಲ್ಲಿ ಆರಂಭಿಸಿದ್ದಾರೆ. ಇಲ್ಲಿ ಪ್ರ್ಯಾಕ್ಟೀಸ್ ಮಾಡುವ ಯಾವುದೇ ಆಟಗಾರನೂ ಕೂಡ, ಧೋನಿಯ ಐಕಾನಿಕ್ ಶಾಟ್ ಹೆಲಿಕಾಪ್ಟರ್ ಶಾಟ್ ಆಡುವಂತಿಲ್ಲ ಅನ್ನೋ ಮಾತಿದೆ. ಅಶ್ವಿನ್ ಮುಂದೆ ಆ ಶಾಟ್ ಆಡಿದ್ದಲ್ಲಿ, ಇಡೀ ಗ್ರೌಂಡ್ಗೆ 5 ರಿಂದ 10 ಸುತ್ತು ಓಡುವ ಪನಿಷ್ಮೆಂಟ್ ಬೇರೆ.
ಧೋನಿ ನಿವೃತ್ತಿ ದಿನ ಅಶ್ವಿನ್ ಧನ್ಯವಾದ ಟ್ವೀಟ್
2020ರ ಆಗಸ್ಟ್ 15ರಂದು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದರು. ಇದೇ ಸಂದರ್ಭ ಟ್ವೀಟ್ ಮಾಡುವ ಮೂಲಕ ಧೋನಿಗೆ ಅಶ್ವಿನ್ ಧನ್ಯವಾದ ಹೇಳಿದ್ದಾರೆ. ಟ್ವೀಟ್ನಲ್ಲಿ ಮಾಹಿಯನ್ನ ‘ಲೆಜೆಂಡ್ ಧೋನಿ’ ಅಂತ ಸಂಬೋಧಿಸಿರುವ ಅಶ್ವಿನ್, 2011ರ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಹಾಗೇ ಸಾಲಾಗಿ 2 ಐಪಿಎಲ್ ಟ್ರೋಫಿ ಗೆದ್ದಿರುವ ನೆನಪುಗಳನ್ನ ನೀಡಿರೋದಕ್ಕೆ ಧನ್ಯವಾದ ತಿಳಿಸಿದ್ರು. ಇಷ್ಟೇ ಅಲ್ಲದೇ, ಪ್ರತೀ ವರ್ಷವೂ ಧೋನಿ ಬರ್ತ್ಡೇಗೆ ಅಶ್ವಿನ್ ಪೋಸ್ಟ್ ಹಾಕಿ ವಿಶ್ ಮಾಡೋದನ್ನ ಯಾವತ್ತೂ ಮರೆತಿಲ್ಲ.
ಹಾಗಾದ್ರೆ ಇವರಿಬ್ಬರ ಮಧ್ಯೆ ನಿಜಕ್ಕೂ ಎಲ್ಲವೂ ಸರಿಯಿದ್ಯಾ.. ಸರಿ ಇಲ್ವಾ? ಅನ್ನೋ ಪ್ರಶ್ನೆಗಳು ಸಹಜವಾಗಿ ಅಭಿಮಾನಿಗಳಿಗೆ ಮೂಡುತ್ತೆ. ಆದ್ರೆ ಕಥೆಯ ಆಳಕ್ಕೆ ಇಳಿದಷ್ಟು ಕಥೆಯ ಎಳೆ ಒಂದೊಂದಾಗಿಯೇ ಬಿಚ್ಚಿಡುತ್ತಾ ಹೋಗುತ್ತೆ. ಅದೇನೇ ಇರಲಿ.. ಮುಂದಾದರೂ ಅಶ್ವಿನ್, ಧೋನಿ ಬಗ್ಗೆ ಕೃತಜ್ಞತಾ ಭಾವ ಇಟ್ಟುಕೊಂಡರೇ, ಮುಂದಿನ ದಿನಗಳಲ್ಲಿ ಸಿಎಸ್ಕೆ ತಂಡವನ್ನ ಮತ್ತೆ ಪ್ರತಿನಿಧಿಸುವ ಚಾನ್ಸ್ ಬಹಳಷ್ಟಿದೆ.
ವಿಶೇಷ ಬರಹ: ರಕ್ಷಿತಾ ರೈ- ಸ್ಪೋರ್ಟ್ಸ್ ಬ್ಯೂರೋ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post