ಏಪ್ರಿಲ್ 3ರಂದು ಛತ್ತೀಸ್ಗಢ್ನಲ್ಲಿ ನಕ್ಸಲರು ನಡೆಸಿದ್ದ ಕ್ರೌರ್ಯದಿಂದ ದೇಶವೇ ಬೆಚ್ಚಿ ಬಿದ್ದಿತ್ತು. ಗೆರಿಲ್ಲಾ ಮಾದರಿ ದಾಳಿ ಇಟ್ಟು ಬೆನ್ನ ಹಿಂದೆ ನಿಂತು ಗುಂಡು ಹಾರಿಸಿದ್ದ ಕೆಂಪು ಉಗ್ರರ ರಕ್ತದಾಹಕ್ಕೆ 22 ಯೋಧರು ಹುತಾತ್ಮರಾಗಿದ್ದರು. ಹೀಗೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಆರ್ಪಿಎಫ್ ಕಮಾಂಡೋ ಒಬ್ಬರು ಕಾಣೆಯಾಗಿದ್ದು, ಅವರು ತಮ್ಮ ವಶದಲ್ಲಿರೋದಾಗಿ ನಕ್ಸಲ್ ಸಂಘಟನೆ ಹೇಳಿಕೊಂಡಿತ್ತು. ಅದಕ್ಕೆ ಸಾಕ್ಷಿಯೆಂಬಂತೆ ಇಂದು ಕಮಾಂಡೋ ಭಾವಚಿತ್ರವನ್ನ ಬಿಡುಗಡೆ ಮಾಡಿದೆ.
ಕಮಾಂಡೋ ಫೋಟೋ ಬಿಡುಗಡೆ
ಕಾಣೆಯಾಗಿದ್ದ ಕಮಾಂಡೋ ಭಾವಚಿತ್ರವನ್ನು ನಕ್ಸಲರು ಬಿಡುಗಡೆ ಮಾಡಿದ್ದಾರೆ. ನಕ್ಸಲರ ವಶದಲ್ಲಿರುವ ಕಮಾಂಡೋನನ್ನು ರಾಕೇಶ್ವರ್ ಸಿಂಗ್ ಮನ್ಹಾಸ್ ಎಂದು ಗುರುತಿಸಲಾಗಿದೆ. ಕೋಬ್ರಾ ಪಡೆಯ 210ನೇ ಬ್ಯಾಚ್ನ ಸದಸ್ಯರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ನಿಷೇಧಿತ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ, ಈ ಫೋಟೋವನ್ನ ಬಿಡುಗಡೆ ಮಾಡಿದೆ. ಈ ಫೋಟೋ ರಾಕೇಶ್ವರ್ರದ್ದೇ ಎಂದು ಸಿಆರ್ಪಿಎಫ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ಪೊಲೀಸರು ನಮ್ಮ ಶತ್ರುಗಳಲ್ಲ ಎಂದು ನಕ್ಸಲರಿಂದ ಸಂದೇಶ ರವಾನೆ
ಕಮಾಂಡೋ ಬಿಡುಗಡೆ ವಿಚಾರವಾಗಿ ನಕ್ಸಲರು ಪತ್ರವೊಂದನ್ನು ಕಳಿಸಿದ್ದು, ತಮ್ಮ ಕೆಲವು ಬೇಡಿಕೆಗಳನ್ನು ಉಲ್ಲೇಖಿಸಿದ್ದಾರೆ.ಸರ್ಕಾರ ಹಾಗೂ ತಮ್ಮ ನಡುವೆ ಮಧ್ಯವರ್ತಿಯೊಬ್ಬರನ್ನು ನೇಮಕ ಮಾಡಬೇಕು ಎಂದು ನಕ್ಸಲ್ ಸಂಘಟನೆ ಪತ್ರದಲ್ಲಿ ಆಗ್ರಹಿಸಿದೆ. 22 ಜನ ಸೈನಿಕರನ್ನು ಬರ್ಬರವಾಗಿ ಕೊಂದು, ಈಗ ಪೊಲೀಸರು ತಮಗೆ ಶತ್ರುಗಳಲ್ಲ ಎಂದು ನಕ್ಸಲರು ಹೇಳಿಕೊಂಡಿದ್ದಾರೆ.
ತಮ್ಮ ಪತಿಯನ್ನು ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುವಂತೆ ಕಮಾಂಡೋ ರಾಕೇಶ್ವರ್ ಪತ್ನಿ ಮೀನು ಮನ್ಹಾಸ್ ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದ್ರೆ, ತನ್ನ ಅಪ್ಪನನ್ನು ಬಿಡುಗಡೆ ಮಾಡುವಂತೆ ಮಗಳು ನಕ್ಸಲರನ್ನು ಕೇಳಿಕೊಂಡಿರುವ ವಿಡಿಯೋ ನೋಡುಗರ ಹೃದಯ ಹಿಂಡುವಂತಿದೆ.
ಕಮಾಂಡೋ ರಾಕೇಶ್ವರ್ ಫೋಟೋ ಬಿಡುಗಡೆಯಾಗಿರುವುದರಿಂದ, ಅವರು ಇನ್ನೂ ಜೀವಂತವಾಗಿದ್ದಾರೆ ಅನ್ನೋದು ಸ್ಪಷ್ಟವಾಗಿದೆ. ಸರ್ಕಾರ ಹಾಗೂ ಸೇನೆ ಆದಷ್ಟು ಬೇಗ ಸೂಕ್ತ ಕ್ರಮಗಳನ್ನು ಕೈಗೊಂಡು, ಕೆಂಪು ಉಗ್ರರ ವಶದಲ್ಲಿರುವ ವೀರಯೋಧನನ್ನು ಬಿಡಿಸಿಕೊಂಡು ಬರಬೇಕಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post