ಬೆಂಗಳೂರು: ಭಾರತದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇದೆ. ಇದು ಇನ್ನು ನಾಲ್ಕು ವಾರಗಳವರೆಗೆ ಇನ್ನಷ್ಟು ಗರಿಷ್ಠ ಮಟ್ಟ ತಲುಪಬಹುದು ಅಂತ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮೊದಲ ಅಲೆಗಿಂತ, ಎರಡನೇ ಅಲೆಯ ಸೋಂಕು ವೇಗವಾಗಿ ಹರಡುತ್ತಿರೋದು ಇನ್ನಷ್ಟು ಆತಂಕ ತಂದಿದೆ. ಇನ್ನು ವ್ಯಾಕ್ಸಿನ್ ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮಾಡಲು ಆಗ್ತಾ ಇಲ್ಲ ಅನ್ನೋದು ಮತ್ತೊಂದು ಶಾಕಿಂಗ್ ನ್ಯೂಸ್ ಆಗಿದೆ.
ದೇಶದಲ್ಲಿ ಹೊಸದಾಗಿ ಬರ್ತಾ ಇರೋ ಕೊರೊನಾ ಕೇಸ್ಗಳಲ್ಲಿ ಮಹಾರಾಷ್ಟ್ರದ ಪಾಲು ಶೇಕಡಾ 50ರಷ್ಟಿದೆ. ಕರ್ನಾಟಕದಲ್ಲೂ ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಾಗ್ತಾ ಇದ್ದು, ಬೆಂಗಳೂರಿನಲ್ಲೇ ಅತಿ ಹೆಚ್ಚು ಕೇಸ್ಗಳು ಬರ್ತಿವೆ. ಈ ನಡುವೆ, ಲಸಿಕೆ ಅಭಿಯಾನ ಚುರುಕುಗೊಳಿಸಲಾಗುತ್ತಿದ್ದರೂ ನಿಗಧಿತ ಅವಧಿಯಲ್ಲಿ ಬೇಡಿಕೆಗೆ ತಕ್ಕಂತೆ ವ್ಯಾಕ್ಸಿನ್ ಪೂರೈಕೆ ಮಾಡುವುದು ಕೂಡ ಕಷ್ಟವಾಗಲಿದೆ.
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1,15,736 ಹೊಸ ಕೇಸ್
ಒಂದೇ ದಿನ ಭಾರತದಲ್ಲಿ ಕೊರೊನಾಗೆ 630 ಜನರ ಸಾವು
ಭಾರತದಲ್ಲಿ ಮಹಾಮಾರಿ ಕೊರೊನಾ ಆರ್ಭಟ ಎಂದಿನಂತೆ ಮುಂದುವರೆದಿದ್ದು, ನಿನ್ನೆ ಬೆಳಗ್ಗೆ 8 ಗಂಟೆಗೆ ಬಂದಿರುವ ರಿಪೋರ್ಟ್ ಪ್ರಕಾರ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಬರೋಬ್ಬರಿ 1,15,736 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇನ್ನು ಕಳೆದ 24 ಗಂಟೆಗಳಲ್ಲಿ 630 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 8,43,473ಕ್ಕೆ ತಲುಪಿದೆ.
1,15,736 ಕೇಸ್ ನಲ್ಲಿ ಮಹಾರಾಷ್ಟ್ರದ್ದೇ 55,469 ಪ್ರಕರಣ
ಮುಂಬೈನಲ್ಲಿ ನಿತ್ಯ 10 ಸಾವಿರ ಗಡಿ ದಾಟುತ್ತಿರುವ ಕೇಸ್
ದೇಶದಲ್ಲಿ ಹೊಸದಾಗಿ ವರದಿ ಆಗ್ತಾ ಇರುವ ಪ್ರಕರಣಗಳಲ್ಲಿ ಮಹಾರಾಷ್ಟ್ರದ್ದೇ ಪ್ರಮುಖ ಪಾಲು. ಶೇಕಡಾ 50ರಷ್ಟು ಪ್ರಕರಣಗಳು ಮಹಾರಾಷ್ಟ್ರದಿಂದಲೇ ವರದಿಯಾಗುತ್ತಿವೆ. ನಿನ್ನೆ ಒಂದೇ ದಿನ ಮಹಾರಾಷ್ಟ್ರದಲ್ಲಿ 55,469 ಪ್ರಕರಣಗಳು ವರದಿಯಾಗಿದ್ದು, 297 ಮಂದಿ ಸಾವಿಗೀಡಾಗಿದ್ದಾರೆ. ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿತ್ಯ 10 ಸಾವಿರ ಗಡಿ ದಾಟುತ್ತಿದೆ. ಮುಂಬೈನ ಸ್ಲಮ್‌ಗಳು ಹಾಗೂ ಚಾವಲ್‌ಗಳಲ್ಲಿ 73 ಕಂಟೈನ್‌ಮೆಂಟ್ ವಲಯಗಳಿವೆ. ಅಧಿಕ ಪ್ರಕರಣಗಳು ಪತ್ತೆಯಾಗಿರುವ 740 ಕಟ್ಟಡಗಳನ್ನು ಸೀಲ್ ಮಾಡಲಾಗಿದೆ.
ಮುಂದಿನ ನಾಲ್ಕು ವಾರಗಳು ಭಾರತಕ್ಕೆ ನಿರ್ಣಾಯಕ
ದೇಶದಲ್ಲಿ ಕೊರೊನಾ ಹರಡುವಿಕೆ ಪ್ರಮಾಣ ಗಂಭೀರ
ಭಾರತದಲ್ಲಿ ಕೊರೊನಾ ಹರಡುವಿಕೆಯ ವೇಗ ಆತಂಕಕಾರಿಯಾಗಿದೆ. ಮುಂದಿನ ನಾಲ್ಕು ವಾರಗಳು ನಿರ್ಣಾಯಕ ಎಂದು ಎಚ್ಚರಿಕೆ ನೀಡಲಾಗಿದೆ. ದೇಶದಲ್ಲಿ ಸಾಂಕ್ರಾಮಿಕ ರೋಗದ ಸ್ಥಿತಿ ಗಂಭೀರವಾಗಿದೆ. ಸೋಂಕಿತರ ಸಂಖ್ಯೆ ಮತ್ತು ಸಾವು ಎರಡೂ ಏರುಗತಿಯಲ್ಲಿದೆ. ದೇಶದ ಜನಸಂಖ್ಯೆಯ ದೊಡ್ಡ ಭಾಗ ಸೋಂಕಿಗೆ ಒಳಗಾಗುವ ಭೀತಿ ಇದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಕೊರೊನಾ ಮಾರ್ಗಸೂಚಿ ಪಾಲನೆ, ಪರೀಕ್ಷೆ ಹೆಚ್ಚಳ, ಆರೋಗ್ಯ ಮೂಲ ಸೌಕರ್ಯಗಳನ್ನು ಹೆಚ್ಚಿಸಬೇಕಾದ ತುರ್ತು ಇದೆ’ ಎಂದು ಪೌಲ್ ಸಲಹೆ ನೀಡಿದ್ದಾರೆ.
ಮೊದಲ ಅಲೆಗಿಂತ ವೇಗವಾಗಿ ಹಬ್ಬುತ್ತಿದೆ ಕೊರೊನಾ
ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುವ ಆತಂಕ
ಮೊದಲ ಬಾರಿಗೆ ದೇಶದಲ್ಲಿ ಕೊರೊನಾ ಬಂದಾಗ ಜನ ಹೆಚ್ಚಿನ ಮುನ್ನೆಚ್ಚರಿಕೆ ವಹಿಸ್ತಾ ಇದ್ರು. ಕೆಲವು ದಿನ ಲಾಕ್ಡೌನ್ ಕೂಡ ಮಾಡಲಾಗಿತ್ತು. ಹೀಗಾಗಿ ಒಂದು ಹಂತದಲ್ಲಿ ಚೈನ್ ಬ್ರೇಕ್ ಆಗಿತ್ತು. ಈಗ ಎಲ್ಲಾ ಕಡೆ ಓಪನ್ ಇದೆ. ಮಹಾನಗರಗಳಲ್ಲಂತೂ ಜನಸಂದಣಿ ಎಲ್ಲಾ ಕಡೆ ಕಾಣಿಸ್ತಾ ಇದೆ. ಹೀಗಾಗಿ ಕೊರೊನಾ ಮೊದಲ ಅಲೆಗಿಂತ ವೇಗವಾಗಿ ಹರಡ್ತಾ ಇದೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಾಗಬಹುದು ಅಂತ ಆತಂಕ ವ್ಯಕ್ತಪಡಿಸಿದ್ದಾರೆ ತಜ್ಞರು. ಕೊರೊನಾ ತಡೆ ಮಾರ್ಗಸೂಚಿ ಪಾಲನೆ ಮಾಡದೇ ನಿರ್ಲಕ್ಷ್ಯ ವಹಿಸಬಾರದು ಎಂದು ಸಲಹೆ ನೀಡಿದ್ದಾರೆ.
ಯುಗಾದಿ ಹಬ್ಬ ಅಂತ ಊರಿಗೆ ಗುಂಪು ಗುಂಪಾಗಿ ಹೋಗ್ಬೇಡಿ
ಕಳೆದ ವರ್ಷದಂತೆ ನಗರಗಳಿಂದ ಹಳ್ಳಿ ಹಳ್ಳಿಗೂ ಹರಡಿಸಬೇಡಿ
ಯುಗಾದಿ ಹಬ್ಬ ಹತ್ತಿರ ಬರ್ತಾ ಇದೆ. ನಗರಗಳಲ್ಲಿರುವ ಜನರಿಗೆ ತಮ್ಮ ತಮ್ಮ ಊರುಗಳಿಗೆ ಹೋಗುವ ಸಂಭ್ರಮ ಇದ್ದೇ ಇರುತ್ತದೆ. ಆದ್ರೆ ಇದು ಒಳ್ಳೆಯದಲ್ಲ ಅಂತಿದಾರೆ ತಜ್ಞರು. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರೋದ್ರಿಂದ ಇಲ್ಲಿಂದ ಮತ್ತೆ ಹಳ್ಳಿಗೆ ಹಬ್ಬಕ್ಕೆಂದು ಹೆಚ್ಚು ಜನ ಓಡಾಡಿದರೆ ಕಳೆದ ವರ್ಷದಂತೆಯೇ ಮತ್ತೆ ಗ್ರಾಮೀಣ ಪ್ರದೇಶದಲ್ಲೂ ವೈರಸ್ ಹೆಚ್ಚಾಗಿ ಹರಡುವ ಸಾಧ್ಯತೆ ಇದೆ. ಹೀಗಾಗಿ ಇದ್ದಲ್ಲೇ ಹಬ್ಬ ಆಚರಿಸುವುದು ಉತ್ತಮ ಅಂತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
ವ್ಯಾಕ್ಸಿನ್ ಹಾಕಿಸಿಕೊಳ್ಳಿ, ಕೊರೊನಾ ಬಂದ್ರೂ ಸೇಫ್
ಲಸಿಕೆ 100% ಸುರಕ್ಷಿತ ಅಂತ ಹೇಳ್ತಿದಾರೆ ತಜ್ಞ ವೈದ್ಯರು
ಕೊರೊನಾ ದೇಶದಲ್ಲಿ ಮತ್ತೆ ಹೆಚ್ಚಾಗ್ತಾ ಇರುವ ನಡುವೆ ವ್ಯಾಕ್ಸಿನೇಷನ್ ಡ್ರೈವ್ ಕೂಡ ಚುರುಕುಗೊಂಡಿದೆ. ಇಲ್ಲಿಯವರೆಗೂ ಒಟ್ಟಾರೆ 8,70,77,474 ಮಂದಿಗೆ ಲಸಿಕೆಯನ್ನು ನೀಡಲಾಗಿದೆ. ನಿನ್ನೆ ಒಂದೇ ದಿನ ದೇಶದಲ್ಲಿ 40 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ. ಇನ್ನೂ ಕೆಲವರಿಗೆ ವ್ಯಾಕ್ಸಿನ್ ಬಗ್ಗೆ ಅನುಮಾನಗಳಿವೆ. ಆದ್ರೆ ಆ ರೀತಿ ಅನುಮಾನ ಬೇಕಾಗಿಲ್ಲ ಎಂದು ತಜ್ಞರು ಹೇಳ್ತಾ ಇದಾರೆ. ವ್ಯಾಕ್ಸಿನ್ ಹಂಡ್ರೆಡ್ ಪರ್ಸೆಂಟ್ ಸುರಕ್ಷಿತವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಂಡ ಮೇಲೂ ಕೊರೊನಾ ಬರಬಾರದು ಅಂತೇನಿಲ್ಲ. ಆದ್ರೆ ವ್ಯಾಕ್ಸಿನ್ ಹಾಕಿದ ಮೇಲೆ ಕೊರೊನಾ ಸೋಂಕು ತಗುಲಿದ್ರೂ ಅಪಾಯ ಕಡಿಮೆ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ.
ವ್ಯಾಕ್ಸಿನ್ ಬೇಡಿಕೆಗೆ ತಕ್ಕಂತೆ ಪೂರೈಸಲು ಸಾಧ್ಯಾನಾ?
ಭಾರತದಲ್ಲಿನ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗಬೇಕಾ?
ಭಾರತದಲ್ಲಿ ಕೊರೊನಾ ಲಸಿಕೆ ಬೇಡಿಕೆಗೆ ತಕ್ಕಂತೆ ಪೂರೈಸಲು ಸಾಧ್ಯಾನಾ ಎಂಬ ಪ್ರಶ್ನೆ ಉದ್ಭವವಾಗಿದೆ. ಕಾರಣ, ಇಷ್ಟು ದೊಡ್ಡ ಜನಸಂಖ್ಯೆಗೆ ಲಸಿಕೆ ಪೂರೈಕೆ ಮಾಡುವುದು ಸುಲಭವಲ್ಲ. ಭಾರತ ವಿಶ್ವದಲ್ಲೇ ಹೆಚ್ಚು ಲಸಿಕೆ ತಯಾರಿಸುವ ರಾಷ್ಟ್ರವಾದರೂ ಇಲ್ಲಿನ ಉತ್ಪಾದನೆ ಸದ್ಯಕ್ಕಂತೂ ಸಾಕಾಗ್ತಿಲ್ಲ ಎಂಬುದು ಸತ್ಯ. ಇದನ್ನು ಪ್ರಮುಖ ಉತ್ಪಾದಕ ಕಂಪನಿಯೇ ಹೇಳಿದೆ. ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಪೂನಾವಾಲಾ ಈ ಬಗ್ಗೆ ಹಲವು ವಿಚಾರಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ
ಪ್ರತಿಯೊಬ್ಬ ಭಾರತೀಯನಿಗೂ ಲಸಿಕೆ ಹಾಕಬಹುದಾ?
ಸದ್ಯಕ್ಕಂತೂ ಕೊರತೆ ಇದೆ ಅಂತಿದಾರೆ ಕಂಪನಿ ಸಿಇಓ
ಪ್ರಸ್ತುತ ತಿಂಗಳಿಗೆ 60 ರಿಂದ 65 ಮಿಲಿಯನ್ ಡೋಸ್‌ಗಳನ್ನು ಉತ್ಪಾದಿಸುವ ಎಸ್‌ಐಐ, ಇದುವರೆಗೆ ಸುಮಾರು 100 ಮಿಲಿಯನ್ ಡೋಸ್‌ಗಳನ್ನು ಕೇಂದ್ರಕ್ಕೆ ನೀಡಿದೆ ಮತ್ತು 60 ಮಿಲಿಯನ್ ರಫ್ತು ಮಾಡಿದೆ. ಆದರೆ ಅಗತ್ಯವಿರುವ “ಪ್ರತಿಯೊಬ್ಬ ಭಾರತೀಯನಿಗೂ ಸರಬರಾಜು ಮಾಡಲು ಇನ್ನೂ ಕೊರತೆಯಿದೆ” ಎಂದು ಪೂನವಾಲಾ ಹೇಳಿದ್ದಾರೆ. ನಾವು ಇನ್ನೂ ಪ್ರತಿಯೊಬ್ಬ ಭಾರತೀಯನಿಗೂ ಲಸಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ” ಎಂದು ಅವರು ತಿಳಿಸಿದ್ದಾರೆ.
ಉತ್ಪಾದನೆ ಹೆಚ್ಚಿಸಲು ಬೇಕಾಗಿದೆ ಹೆಚ್ಚಿನ ಸೌಕರ್ಯ
3 ಸಾವಿರ ಕೋಟಿ ವೆಚ್ಚ ಮಾಡಿದರೆ 3 ತಿಂಗಳು ಅಗತ್ಯ
ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಕಂಪನಿಗಳು ವ್ಯಾಕ್ಸಿನ್ ಉತ್ಪಾದನೆಯನ್ನೂ ಹೆಚ್ಚಿಸಿಕೊಳ್ಳಲೇಬೇಕಾಗಿದೆ. ಆದ್ರೆ ಅದಕ್ಕೆ ಮೂರು ಸಾವಿರ ಕೋಟಿ ರೂಪಾಯಿಗಳ ಅಗತ್ಯ ಇದೆ ಎಂದು ಪೂನವಾಲ್ಲಾ ಹೇಳ್ತಾರೆ. 3 ಸಾವಿರ ಕೋಟಿ ವೆಚ್ಚ ಮಾಡಿದರೆ ಬಹುತೇಕ ಬರುವ ಜೂನ್ ವೇಳೆಗೆ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಈಗ ಸರಬರಾಜು ಮಾಡುತ್ತಿರುವ ಲಸಿಕೆಗಳಿಂದ ಕಂಪನಿಗೆ ನಷ್ಟವಾಗದಿದ್ದರೂ ಹೆಚ್ಚಿನ ಲಾಭವಂತೂ ಇಲ್ಲ ಎಂದಿದ್ದಾರೆ. ಹೀಗಾಗಿ ಸರ್ಕಾರ ,ವ್ಯಾಕ್ಸಿನ್ ತಯಾರಿಕಾ ಕಂಪನಿಗೆ ನೆರವು ನೀಡಲು ಮುಂದಾಗತ್ತಾ ಅಂತ ನೋಡಬೇಕಿದೆ.
ಎಲ್ಲರಿಗೂ ಲಸಿಕೆ ಹಂಚಿಕೆ ತಕ್ಷಣಕ್ಕಂತೂ ಅಸಾಧ್ಯ?
ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿದರೆ ಮಾತ್ರ ಶೀಘ್ರ ಲಸಿಕೆ
ಈಗ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗ್ತಿದೆ. ಅದಕ್ಕಿಂತ ಕೆಳಗಿನ ವಯೋಮಾನದವರು ಲಸಿಕೆ ಹಾಕಿಸಿಕೊಳ್ಳಬೇಕೆಂದರೆ ಇನ್ನಷ್ಟು ದಿನ ಕಾಯಲೇಬೇಕಾದ ಅನಿವಾರ್ಯತೆ ಇದೆ. ಒಂದು ಕಡೆ ಲಸಿಕೆ ಬೇಡಿಕೆಗೆ ತಕ್ಕಂತೆ ಪೂರೈಕೆಯಾದಾಗ ಮಾತ್ರವೇ ವಯೋಮಿತಿಯನ್ನು ತೆಗೆದು ಹಾಕಬಹುದು. ಆದ್ರೆ ಲಸಿಕೆ ತಯಾರಿಕಾ ಕಂಪನಿಯೇ ಇದು ಸದ್ಯಕ್ಕೆ ಅಸಾಧ್ಯ ಎಂದು ಹೇಳಿರೋದ್ರಿಂದ ಎಲ್ಲಾ ವಯೋಮಾನದವರಿಗೆ ಲಸಿಕೆ ಸಿಗುವುದು ಇನ್ನಷ್ಟು ವಿಳಂಬವಾಗಬಹುದು. ಹೀಗಾಗಿ ಈಗ ಅಬ್ಬರಿಸುತ್ತಿರುವ ಕೊರೊನಾದಿಂದ ಪಾರಾಗಲು ಮುನ್ನೆಚ್ಚೆರಿಕೆ ವಹಿಸೋದೊಂದೇ ಮಾರ್ಗೋಪಾಯ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post