ಟಾಪ್ 10 ಸುದ್ದಿಗಳ ಸಂಕ್ಷಿಪ್ತ ಹೂರಣ ಇಲ್ಲಿದೆ
1. ಕೆಎಸ್‌ಆರ್‌ಟಿಸಿ ಇಲ್ಲಾಂದ್ರೇನು.? ಖಾಸಗಿ ಬಸ್ ಇದ್ಯಲ್ಲಾ..!
ಇವತ್ತು ಕೂಡ ಸಾರಿಗೆ ನೌಕರರ ಕಿಚ್ಚು ನಿನ್ನೆಯಷ್ಟೇ ಹೆಚ್ಚಿನದಾಗಿ ಇರಲಿದೆ. 6ನೇ ವೇತನ ಆಯೋಗ ಜಾರಿಗೆಯಾಗುವವರೆಗೂ ಸಾರಿಗೆ ಮುಷ್ಕರ ಹಿಂತೆಗೆದುಕೊಳ್ಳುವದಿಲ್ಲ ಅಂತೇಳಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇವತ್ತು ಕೂಡ ರಾಜ್ಯ ಸಾರಿಗೆ ನೌಕಕರು ಬಸ್ ಓಡಿಸಲು ಬಾರದೇ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ. ಇನ್ನು ಕೆಎಸ್‌ಆರ್‌ಟಿಸಿ ಬಸ್ ಮತ್ತು ಬಿಎಂಟಿಸಿ ಬಸ್‌ಗಳು ಇಳಿಯದಿದ್ರೂ ಚಿಂತೆಯಿಲ್ಲ ಖಾಸಗಿ ಬಸ್‌ಗಳನ್ನ ಇಳಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಅಂತ ಸರ್ಕಾರ ಖಡಕ್ ಸೂಚನೆ ನೀಡಿದೆ. ಹೀಗಾಗಿ ಮೆಜೆಸ್ಟಿಕ್‌ನಲ್ಲಿ ಖಾಸಗಿ ಬಸ್‌ಗಳದ್ದೇ ಕಾರುಬಾರಾಗಿದೆ. ಸಾಲು-ಸಾಲಾಗಿ ಖಾಸಗಿ ಬಸ್‌ಗಳು ನಿಂತಿದ್ದು, ಇವತ್ತಿನಿಂದ ಸಾರ್ವಜನಿಕರ ಓಡಾಟಕ್ಕೆ ಸಹಕಾರಿಯಾಗಲಿದೆ ಅಂತ ಮಾಹಿತಿ ಲಭ್ಯವಾಗಿದೆ.
2. ಸಾರಿಗೆ ನೌಕರರಿಗೆ ಬಿಎಂಟಿಸಿ ಶಾಕ್?!
ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಸರ್ಕಾರದ ವಿರುದ್ಧ ಸಮರ ಸಾರಿರೋ ಸಾರಿಗೆ ನೌಕರರಿಗೆ ಬಿಎಂಟಿಸಿ ಮತ್ತೊಂದು ಶಾಕ್ ಕೊಟ್ಟಿದೆ. ನೌಕರರ ಮುಷ್ಕರಕ್ಕೆ ಸೊಪ್ಪು ಹಾಕದ ಬಿಎಎಂಟಿಸಿ, ತರಬೇತಿ ಸಿಬ್ಬಂದಿಗಳನ್ನ ಬಳಸಿಕೊಂಡು ಬಸ್‌ಗಳನ್ನ ರಸ್ತೆಗೆ ಇಳಿಸೋದಕ್ಕೆ ನಿರ್ಧರಿಸಿದೆ ಅಂತ ಹೇಳಲಾಗುತ್ತಿದೆ. ಇನ್ನು ತರಬೇತಿ ಸಿಬ್ಬಂದಿ ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗುವಂತೆ ಸೂಚನೆ ಕೊಟ್ಟಿದ್ದು, ಗೈರಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗತ್ತೆ ಅಂತಲೂ ಎಚ್ಚರಿಕೆ ನೀಡಿದೆ ಅಂತ ತಿಳಿದುಬಂದಿದೆ. ಚಾಲಕ, ಕಂಡಕ್ಟರ್, ಮೆಕ್ಯಾನಿಕ್ಗಳು ಸೇರಿದಂತೆ ಬಿಎಂಟಿಸಿಯಲ್ಲಿರೋ 3000 ಟ್ರೈನಿಗಳಿಗೆ ನೋಟಿಸ್ ನೀಡಿದೆ.
3. ಬೆಂಗಳೂರು ಕೇಂದ್ರ ವಿವಿ ಪರೀಕ್ಷೆಗಳು ಮುಂದೂಡಿಕೆ
ಇಂದು ಸಹ ಸಾರಿಗೆ ನೌಕರರ ಮುಷ್ಕರ ಮುಂದುವರೆದಿರುವ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನ ಮುಂದೂಡಿಕೆ ಮಾಡಲಾಗಿದೆ. ಇಂದು ಮತ್ತು ನಾಳೆ ನಿಗದಿಯಾಗಿದ್ದ ಪರೀಕ್ಷೆಯನ್ನು ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಮುಂದೂಡಿಕೆ ಮಾಡಿರುವುದಾಗಿ ಬೆಂಗಳೂರು ಕೇಂದ್ರ ವಿವಿ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದೆ. ಜೊತೆಗೆ ಮುಂದೂಡಿಕೆಯಾದ ಪರೀಕ್ಷೆಗಳನ್ನು ಶೀಘ್ರವಾಗಿ ನಡೆಸಲು ಹೊಸ ದಿನಾಂಕವನ್ನು ನಿಗದಿಪಡಿಸುವುದಾಗಿ ಹೇಳಿದೆ.
4. ಶೇ.50ರಷ್ಟು ಮಂದಿಗೆ ಮಾತ್ರ ಅವಕಾಶ
ಇವತ್ತಿನಿಂದ ಮತ್ತೆ ಸಿನಿಮಾ ಹಾಲ್‌ಗಳಲ್ಲಿ ಶೇಕಡಾ 50ರಷ್ಟು ಸೀಟ್ ಭರ್ತಿಗೆ ಮಾತ್ರ ಅವಕಾಶ ಇರಲಿದೆ. ರಾಜ್ಯದ ಎಂಟು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಮೈಸೂರು, ಕಲಬುರಗಿ, ದ.ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡದಲ್ಲಿ ಈ ನಿಯಮ ಜಾರಿಯಲ್ಲಿರಲಿದೆ. ಕೊರೊನಾ ನಿಯಂತ್ರಣಕ್ಕೆ ತರಲು ರಾಜ್ಯ ಸರ್ಕಾರದ ಏಪ್ರಿಲ್ 2ರಂದು ಮಹತ್ವದ ಆದೇಶವನ್ನ ಹೊರಡಿಸಿತ್ತು. ಇದ್ರಲ್ಲಿ ಥಿಯೇಟರ್ಗಳ ಆಕ್ಯುಪೆನ್ಸಿಯನ್ನ ಶೇ.50ಕ್ಕೆ ಇಳಿಸಿತ್ತು. ಈ ವಿಚಾರವಾಗಿ ಬೇಸರಗೊಂಡಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಏಪ್ರಿಲ್ 7ರವರೆಗೂ ಶೇಕಡಾ 100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಬೇಕೆಂದು ಸಿಎಂ ಬಳಿ ಮನವಿ ಮಾಡಿದ್ರು. ಮನವಿ ಪುರಸ್ಕರಿಸಿದ ಸಿಎಂ ನಿನ್ನೆಯವರೆಗೂ ಶೇ.50ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿದ್ರು. ಇದೀಗ ಇವತ್ತಿನಿಂದ ಈ 8 ಜಿಲ್ಲೆಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಇನ್ನು ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ ಕೊರೊನಾ ನಿಯಮವನ್ನ ಪಾಲಿಸಬೇಕು, ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.
5. ಬೆಳಗಾವಿಯಲ್ಲಿ ಡಿ.ಕೆ ಶಿವಕುಮಾರ್ ಕಾರು ತಪಾಸಣೆ
ಬೆಳಗಾವಿಯಲ್ಲಿ ಲೋಕಸಭಾ ಅಖಾಡ ಸಖತ್ ಕಾವೇರುತ್ತಿದೆ. ಕಮಲ ಅರಳಿಸಬೇಕು ಅಂತ ಕಮಲ ಕಲಿಗಳು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ಟೀಮ್ ಕೂಡ ಕುಂದಾನಗರಿಯ ಜನತೆ ಕೈ ಹಿಡಿಯಬೇಕು ಅಂತ ಪಣತೊಟ್ಟಿ ನಿಂತಿದೆ. ಹೀಗಾಗಿ ಬೆಳಗಾವಿಯಲ್ಲಿ ಖುದ್ದು ಕೆಪಿಸಿಸಿ ಅಧ್ಯಕ್ಷರೇ ಬಿರುಸಿನ ಪ್ರಚಾರ ಮಾಡೋದಕ್ಕೆ ಸರ್ವ ತಯಾರಿ ನಡೆಸಿದ್ದಾರೆ. ಇನ್ನು ಡಿ.ಕೆ ಶಿವಕುಮಾರ್ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಹುಬ್ಬಳಿಯಿಂದ ಬೆಳಗಾವಿ ಆಗಮಿಸುತ್ತಿದ್ದರು. ಈ ಮಾರ್ಗದ ಮಧ್ಯೆ ಅಂದ್ರೆ ಹಿರೇಬಾಗೇವಾಡಿ ಟೋಲ್ ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿವಕುಮಾರ್ ಕಾರು ತಪಾಸಣೆ ಮಾಡಿದ್ದಾರೆ. ಚುನಾವಣಾ ಅಧಿಕಾರಿಗಳು ಶಿವಕುಮಾರ್ ಅವರ ಕಾರು ಮತ್ತು ಅವರ ಬೆಂಬಲಿಗರ ಕಾರನ್ನ ತಪಾಸಣೆ ಮಾಡಿದ್ದಾರೆ. ಕಾರಿನಲ್ಲಿ ಯಾವುದೇ ದಾಖಲೆಗಳು ಸಿಕ್ಕಿಲ್ಲ ಎಂಬ ಮಾಹಿತಿ ದೊರಕಿದೆ.
6. ಸಿಎಂಗಳ ಜೊತೆ ಇಂದು ಪ್ರಧಾನಿ ಮೋದಿ ಸಭೆ
ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲಾ ರಾಜ್ಯದ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ದೇಶಾದ್ಯಂತ ಕಳೆದ ಒಂದು ವಾರದಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರಗಳು ಸೋಂಕು ನಿಯಂತ್ರಿಸಲು ಏನೆಲ್ಲಾ ಕ್ರಮಗಳನ್ನು ಕೈಗೊಂಡಿವೆ, ಇನ್ನೂ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಚರ್ಚಿಸಲಾಗುತ್ತೆ. ಜೊತೆಗೆ ವ್ಯಾಕ್ಸಿನೇಷನ್ ಪ್ರಕ್ರಿಯೆ ಬಗ್ಗೆಯೂ ಈ ವೇಳೆ ಮಾತನಾಡಲಿದ್ದಾರೆ ಅಂತ ಹೇಳಲಾಗಿದೆ.
7. ವ್ಯಾಕ್ಸಿನ್ ಇಲ್ಲ ವಾಪಸ್ಸು ಹೋಗಿ
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕೋವಿಡ್ ಪ್ರಕರಣಗಳು ಪ್ರತಿದಿನ ಏರಿಕೆ ಕಾಣುತ್ತಿವೆ. ವಾರಣಾಸಿಯ 66 ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಗಳ ಪೈಕಿ 41 ಕೇಂದ್ರಗಳನ್ನ ವ್ಯಾಕ್ಸಿನ್ ಕೊರೊತೆಯಿಂದಾಗಿ ಮುಚ್ಚಲಾಗಿದೆ. ಸದ್ಯಕ್ಕೆ 25 ಕೇಂದ್ರಗಳಲ್ಲಿ ಮಾತ್ರವೇ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ನಡೆಯುತ್ತಿದ್ದು, ಇನ್ನುಳಿದ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ಕೊರತೆ ಸ್ಪಷ್ಟವಾಗಿದ್ದರಿಂದ ಕೇಂದ್ರಗಳು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ. ವಾರಣಾಸಿ ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿಯೂ ಕೋವಿಡ್ ಲಸಿಕೆ ಕೊರತೆಯ ಪ್ರಮಾಣ ಹೆಚ್ಚಿದೆ. ಲಸಿಕೆ ಸಮರ್ಪಕತೆ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಉತ್ತರಿಸುತ್ತಿಲ್ಲ. ಹಾಗೇ ಸಿಬ್ಬಂದಿ ಕೂಡ ಲಸಿಕಾ ಕೇಂದ್ರಗಳಿಗೆ ಬರೋವಂಥರವರನ್ನ ವಾಪಸ್ಸು ಕಳಿಸೋದು ಸಾಮಾನ್ಯವಾಗಿಬಿಟ್ಟಿದೆ.
8. ಕೊರೊನಾ ಜಾಸ್ತಿ, ಲಸಿಕೆ ಮಾತ್ರ ಕಮ್ಮಿ
ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಾಗುತ್ತಿದೆ. ಒಂದೆಡೆ ಸೋಂಕಿನ ಭೀತಿ ಮತ್ತೊಂದೆಡೆ ಕೊರೊನಾ ಲಸಿಕೆ ಕೊರತೆಯನ್ನು ಜನರು ಅನುಭವಿಸುತ್ತಿದ್ದಾರೆ. ಈಗಾಗಲೇ ಮಾಹಾರಾಷ್ಟ್ರದಲ್ಲಿ ಮೂರು ದಿನಗಳಿಗಾಗುವಷ್ಟು ಮಾತ್ರ ಲಸಿಕೆಗಳಿದ್ದು, ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳವರನ್ನು ವಾಪಾಸ್ ಕಳುಹಿಸಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೊಪೆ ತಿಳಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ಗೆ ಹೆಚ್ಚಿನ ಲಸಿಕೆಯನ್ನು ನೀಡುವಂತೆ ಪತ್ರ ಬರೆಯಲಾಗಿದ್ದು ಆದಷ್ಟು ಬೇಗ ಲಸಿಕೆಯನ್ನು ಪೂರೈಸುವಂತೆ ಮನವಿ ಮಾಡಲಾಗಿದೆ ಎಂದು ರಾಜೇಶ್ ಟೊಪೆ ತಿಳಿಸಿದ್ದಾರೆ. ಇನ್ನೂ ಮಹಾರಾಷ್ಟ್ರದಲ್ಲಿ ಕಳೆದ 72 ಗಂಟೆಗಳಲ್ಲಿ ಸುಮಾರು 3 ಲಕ್ಷ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂಬುದು ಆತಂಕಕಾರಿ ವಿಷಯ, ಅಲ್ಲದೇ ಇದೇ ವೇಳೆ ಲಸಿಕೆಯ ಲಭ್ಯತೆಯೂ ಕಮ್ಮಿ ಇದೆ ಎಂಬ ಮಾಹಿತಿ ಇನ್ನಷ್ಟು ಆತಂಕ ಹುಟ್ಟಿಸಿದೆ.
9. ಬೆಡ್‌ಗಳೂ ಇಲ್ಲ.. ಚಿಕಿತ್ಸೆಯೂ ಇಲ್ಲ
ದೇಶದದಲ್ಲಿ ದಿನದಿಂದ ದಿನಕ್ಕೆ ಕೊರೊನಾ 2ನೇ ಅಲೆ ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ಜೊತೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುವಂತೆ ರಾಜ್ಯ ಸರ್ಕಾರಗಳಿಗೂ ಕೂಡ ಆದೇಶಿಸಿವೆ ಆದ್ರೆ ಪ್ರಧಾನಿ ಮೋದಿ ತವರು ಕ್ಷೇತ್ರ ಗುಜರಾತ್ನ ಭಾವನಗರದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ರೋಗಿಗಳಿಗೆ ಬೆಡ್ ಜೊತೆಗೆ ಸೂಕ್ತ ಚಿಕಿತ್ಸೆ ದೊರೆಯದೆ ಜನರು ಪರದಾಡುತ್ತಿದ್ದಾರೆ. ಸರಿಯಾದ ಬೆಡ್ ಸಿಗದೇ ಜನರು ಆಸ್ಪತ್ರೆಯ ಕಾರಿಡಾರ್ನಲ್ಲಿ ಮಲಗಿಕೊಂಡು ಚಿಕಿತ್ಸೆ ನೀಡುವಂತೆ ಅಂಗಲಾಚುತ್ತಿದ್ದಾರೆ. ಗುಜರಾತ್ ಸರ್ಕಾರ ಜನರಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುವುದಾಗಿ ಹೇಳುತ್ತಿದೆ. ಆದ್ರೆ ಜನರು ಮಾತ್ರ ಸೂಕ್ತ ಚಿಕಿತ್ಸೆ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ರೋಗಿಗಳು ಕಾರಿಡಾರ್ನಲ್ಲಿ ಮಲಗಿರುವ ದೃಶ್ಯ ಸಾಮಾಜಿಕ ಜಾಲತಾಣಲ್ಲಿ ಸಖತ್ ಸದ್ದು ಮಾಡ್ತಿದೆ.
10. ಹೊಸ ಜಾಮೀನು ಅರ್ಜಿ ಸಲ್ಲಿಸಿದ ಯಾದವ್
ಮೇವು ಹಣಗರಕ್ಕೆ ಸಂಬಂಧಿಸಿದಂತೆ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ನಾಲ್ಕು ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿ ದೊಡ್ಡ ಸುದ್ದಿಯಾಗಿರೋದು ಗೊತ್ತಿರೋ ವಿಚಾರ. ಹಾಗೇ ದುಮ್ಕಾ ಖಜಾನೆಯಿಂದ 3.13 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಹಿಂಪಡೆದ ಪ್ರಕರಣ ಸಂಬಂಧ ಜೈಲುವಾಸ ಅನುಭಿಸುತ್ತಿರೋ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೊಸ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ದುಮ್ಕಾ ಖಜಾನೆ ಪ್ರಕರಣದಲ್ಲಿ ಎರಡು ಸೆಕ್ಷನ್‌ಗಳ ಅಡಿಯಲ್ಲಿ ಲಾಲುಗೆ 7 ವರ್ಷ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯು ಅರ್ಧದಷ್ಟು ಪೂರ್ಣಗೊಳ್ಳಲು ಇನ್ನೂ ಎರಡು ತಿಂಗಳು ಬಾಕಿಯಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post