ನಂಬಿ ನಾರಾಯಣನ್.. ಅಪಾರ ಪಾಂಡಿತ್ಯ ಇರುವ ಹಿರಿಯ ವಿಜ್ಞಾನಿ. ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಸಂಶೋಧನೆಯಲ್ಲಿ ಇವರದ್ದು ದೊಡ್ಡ ಹೆಸರು. ಆದರೆ, ಅದೇನಾಯ್ತೋ ಏನೋ ಇವರ ಮೇಲೆ ದಿಢೀರ್ ಅಂತ ಅವತ್ತು ಒಂದು ಗಂಭೀರ ಆರೋಪ ಬಂದುಬಿಟ್ಟಿತ್ತು. ಅಷ್ಟೇ ಅಲ್ಲ ಈ ವಿಜ್ಞಾನಿ 50 ದಿನಗಳ ಕಾಲ ಜೈಲು ವಾಸ ಅನುಭವಿಸುವಂತಾಯ್ತು.
ವಿಜ್ಞಾನವನ್ನೇ ಉಸಿರಾಡುತ್ತಿದ್ದ ವ್ಯಕ್ತಿ ಪದೇ ಪದೇ ಪೊಲೀಸ್ ಠಾಣೆಯ ಮೆಟ್ಟಿಲೇರಬೇಕಾಯ್ತು. ಪದೇ ಪದೇ ವಿಚಾರಣೆ ಎದುರಿಸಬೇಕಾಯ್ತು. ಅವರು ಸಂಪಾದಿಸಿದ ಜ್ಞಾನ ಅವರನ್ನು ಕಾಪಾಡಿತ್ತು. ಅವರ ಪ್ರಾಮಾಣಿಕತೆಯೇ ಅವರನ್ನು ರಕ್ಷಣೆ ಮಾಡಿತ್ತು. ನಂಬಿ ನಾರಾಯಣನ್ ಅಪರಾಧಿಯೂ ಅಲ್ಲ, ಆರೋಪಿಯೂ ಅಲ್ಲ ಅನ್ನೋದು ಸಾಬೀತಾದ ಮೇಲೆ ಈ ಕೇಸ್ ಬಿಗ್ ಟ್ವಿಸ್ಟ್ ಪಡೆದುಕೊಳ್ಳಲಾರಂಭಿಸಿತ್ತು. ಈಗ ನಂಬಿ ನಾರಾಯಣನ್ ವಿರುದ್ಧ ಷಡ್ಯಂತ್ರ ನಡೆಸಿದವರ್ಯಾರು ಅನ್ನೋದನ್ನು ಪತ್ತೆ ಹಚ್ಚೋ ಕೆಲಸಕ್ಕೆ ಮತ್ತೆ ಚಾಲನೆ ಸಿಕ್ಕಿದೆ.
ಸುಳ್ಳು ಆರೋಪ ವ್ಯಕ್ತಿಗಲ್ಲ-ದೇಶಕ್ಕೇ ಆದ ಮೋಸ
ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಮೇಲೆ ಸುಳ್ಳು ಗೂಢಚರ್ಯೆ ಆರೋಪ ಹೊರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮುಂದುವರಿಸಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿದೆ. 1994ರಲ್ಲಿ ನಂಬಿ ನಾರಾಯಣನ್ ಅವರ ಮೇಲೆ ತಪ್ಪಾಗಿ ಆರೋಪ ಹೊರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ರೂಪಿಸಿದ್ದ ಉನ್ನತ ಮಟ್ಟದ ಸಮಿತಿ ಸಲ್ಲಿಸಿರುವ ವರದಿಯನ್ನು ಪರಿಶೀಲಿಸುವಂತೆ ಸಿಬಿಐಗೆ ಸುಪ್ರೀಂಕೋರ್ಟ್ ಹೇಳಿದೆ. ಇದು ನಂಬಿ ನಾರಾಯಣನ್ ಹೋರಾಟಕ್ಕೆ ಸಂದ ದೊಡ್ಡ ಜಯ. ದಶಕಗಟ್ಟಲೇ ತಮ್ಮ ವಿರುದ್ಧ ಬಂದಿದ್ದ ಆರೋಪದಿಂದ ಮುಕ್ತರಾಗಲು ಇವರು ನಡೆಸಿದ ಹೋರಾಟ ಅಷ್ಟಿಷ್ಟಲ್ಲ. ಅಷ್ಟರ ಮಟ್ಟಿಗೆ ನಂಬಿ ನಾರಾಯಣನ್ ಬದುಕಿನಲ್ಲಿ ನೊಂದಿದ್ದಾರೆ.
ಈ ಹಿಂದೆಯೇ ತಮ್ಮ ವಿರುದ್ಧದ ಆರೋಪಗಳು ಸಾಬೀತಾಗದೇ ಇದ್ದಾಗ ತೀವ್ರ ಅವಮಾನ ಅನುಭವಿಸಿದ್ದ ನಂಬಿ ನಾರಾಯಣನ್ ಅವರಿಗೆ ₹50 ಲಕ್ಷ ಪರಿಹಾರ ನೀಡುವಂತೆ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಅಷ್ಟೇ ಅಲ್ಲ, ಸೆಪ್ಟೆಂಬರ್ 14 2018ರಂದು ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಲು ತನಿಖಾ ಸಮಿತಿಯನ್ನು ನೇಮಿಸಿತ್ತು. ನಂಬಿ ನಾರಾಯಣನ್ ವಿರುದ್ಧ ಸುಳ್ಳು ಆಪಾದನೆ ಹೊರಿಸಿ ಜೈಲು ಸೇರುವಂತೆ ಮಾಡಿದ್ದವರ ವಿರುದ್ಧವೇ ಈಗ ತನಿಖೆ ನಡೆಯುತ್ತಿದೆ. ಹಿಂದೆ ಈ ವಿಜ್ಞಾನಿಯನ್ನು ಕೆಟ್ಟದ್ದಾಗಿ ನಡೆಸಿಕೊಂಡು ಅವಮಾನಿಸಿರೋರಿಗೆ ಮುಂದೆ ಬಹುಶಃ ಶಿಕ್ಷೆಯೂ ಆಗಬಹುದು.
ಅಷ್ಟಕ್ಕೂ ಏನಿದು ಪ್ರಕರಣ?
ಅದು 1994ರಲ್ಲಿ ನಡೆದಿದ್ದ ಪ್ರಕರಣ. ಮಾಲ್ಡೀವ್ಸ್ನ ಇಬ್ಬರು ಮಹಿಳೆಯರ ಬಂಧನದ ನಂತರ ದೇಶದ್ರೋಹ ಪ್ರಕರಣ ರಾರಾಜಿಸಿತ್ತು. ಇಬ್ಬರು ವಿಜ್ಞಾನಿಗಳು ಮತ್ತು ಇತರ ನಾಲ್ವರ ಮೇಲೆ ಇಸ್ರೋದ ಅತಿಗೌಪ್ಯ ದಾಖಲೆಗಳನ್ನು ಹಸ್ತಾಂತರಿಸಿದ ಆರೋಪ ಕೇಳಿಬಂದಿತ್ತು. ಕೇರಳದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನಂಬಿ ನಾರಾಯಣನ್ ಅವರ ಬಂಧನವೂ ಆಗಿತ್ತು. ಆದರೆ ಇದೆಲ್ಲ ನೋವನ್ನು ನುಂಗಿಕೊಂಡೇ ಇದ್ದ ನಂಬಿ ನಾರಾಯಣನ್ ತಮ್ಮ ಕಾನೂನಾತ್ಮಕ ಹೋರಾಟ ಮುಂದುವರೆಸಿದ್ದರು. ಈಗ ಅದಕ್ಕೊಂದು ತಾರ್ಕಿಕ ಅಂತ್ಯ ಸಿಗುವ ಕಾಲ ಬಂದಿದೆ.
ವಿಕ್ರಮ್ ಸಾರಾಬಾಯ್, ಅಬ್ದುಲ್ ಕಲಾಂ, ಸತೀಶ್ ಧವನ್ ಅಂತಹ ಘಟಾನುಘಟಿಗಳ ಸಾರಥ್ಯದಲ್ಲಿ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲೆ ನಂಬಿ ಅವರಿಗೆ ಪ್ರಾಪ್ತಿಯಾದ ಒಂದು ಪ್ಲಾನ್ ಅವರನ್ನು ಇನ್ನೊಂದು ಮಟ್ಟಕ್ಕೆ ತಲುಪಿಸಿತ್ತು. ಅದೆ ಕ್ರಯೊಜೆನಿಕ್ ಇಂಜಿನ್ ತಂತ್ರಜ್ಞಾನ
ನಂಬಿ ನಾರಾಯಣ್ ಕೇರಳದ ತಿರವನ್ಕೋರ್ನಲ್ಲಿ ಸಾಮಾನ್ಯ ವರ್ಗದ ಕುಟುಂಬದಲ್ಲಿ ಜನಿಸಿದವರು. ಬಾಲ್ಯದಿಂದಲೂ ಬಾಹ್ಯಾಕಾಶದ ಬಗ್ಗೆ ಅತೀವ ಆಸಕ್ತಿ ಇದ್ದ ಇವರಿಗೆ ತನ್ನ ಸ್ನೇಹಿತ ಇಸ್ರೋದ ವೈ.ಎಸ್. ರಾಜನ್ ಸಾಥ್ ನೀಡಿದ್ದರು. ಒಂದಾದ ಮೇಲೊಂದು ಪ್ರಯೋಗದಲ್ಲಿ ಯಶಸ್ವಿಯಾಗಿದ್ದ ಇಬ್ಬರಿಗೆ 1966ರಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಅದರಂತೆ ಇಬ್ಬರು ವಿಕ್ರಮ್ ಸಾರಾಬಾಯ್, ಅಬ್ದುಲ್ ಕಲಾಂ, ಸತೀಶ್ ಧವನ್ ಅಂತಹ ಘಟಾನುಘಟಿಗಳ ಸಾರಥ್ಯದಲ್ಲಿ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲೆ ನಂಬಿ ಅವರಿಗೆ ಪ್ರಾಪ್ತಿಯಾದ ಒಂದು ಪ್ಲಾನ್ ಅವರನ್ನು ಇನ್ನೊಂದು ಮಟ್ಟಕ್ಕೆ ತಲುಪಿಸಿತ್ತು. ಅದೆ ಕ್ರಯೊಜೆನಿಕ್ ಇಂಜಿನ್ ತಂತ್ರಜ್ಞಾನ.
ಒಂದು ರಾಕೆಟ್ ಹಾರಬೇಕಾದರೆ ಅದನ್ನು ಸಜ್ಜುಗೊಳಿಸುವುದೇ ಸವಾಲು. ಬಹಳಷ್ಟು ಇಂಧನ ಬಳಸಿ ಇಂಜಿನ್ಗೆ ಶಾಖ ನೀಡಿದರೆ ಅದು ಹಾರಲು ಸಾಧ್ಯ. ಆದರೆ ಹೆಚ್ಚು ಇಂಧನ ಬಳಸಿದರೆ ಅದು ಬೇಗ ಮುಗಿದು ಹೋಗಿ ಉಡಾವಣೆ ಪ್ರಕ್ರಿಯೆಗೆ ತೊಡಕಾಗುತ್ತಿತ್ತು. ಇದೇ ಸಂದರ್ಭದಲ್ಲಿ ನಂಬಿ ನಾರಾಯಣನ್ ಒಂದು ಫಾರ್ಮುಲಾ ಕಂಡುಹಿಡಿದಿದ್ರು.
ಇಸ್ರೋದ ಕ್ರಯೊಜೆನಿಕ್ ವಿಭಾಗದಲ್ಲಿ ಇವರು ಮುಖ್ಯಸ್ಥರಾದರು. 1992ರಲ್ಲಿ ನಂಬಿಯವರ ತಂತ್ರಜ್ಞಾನವನ್ನು ರಾಕೆಟ್ಗಳಲ್ಲಿ ಬಳಸಲು ಇಸ್ರೊ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿತು. ಕ್ರಯೊಜೆನಿಕ್ ಇಂಜಿನ್ ತಯಾರಿಸಿ ಕೊಡಲು ಇಸ್ರೊ ರಷ್ಯಾ ಮೊರೆಹೋಗಿತ್ತು. ಅದಕ್ಕೆ ಒಪ್ಪಿದ ರಷ್ಯಾ ಭಾರತದ ಜೊತೆ ಸಂಬಂಧ ವೃದ್ಧಿಸುವ ಸಲುವಾಗಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ ಅಮೆರಿಕಾ ಹಾಗೂ ಫ್ರಾನ್ಸ್ ಈ ಒಪ್ಪಂದ ವಿರುದ್ಧ ಹರಿಹಾಯ್ದಿದ್ದರು. ರಷ್ಯಾ ಈ ಒಪ್ಪಂದಕ್ಕೆ ಸಹಿ ಹಾಕಬಾರದೆಂದು ಒತ್ತಡ ಹೇರಿದ್ದರು. ಆದರೂ ರಷ್ಯಾ ಕ್ರಯೊಜೆನಿಕ್ ಇಂಜಿನ್ ತಂತ್ರಜ್ಞಾನವುಳ್ಳ ನಾಲ್ಕು ಇಂಜಿನ್ ಕಟ್ಟಿಕೊಡಲು ಒಪ್ಪಿತು.
ಮಹಿಳೆ ತಂದಿಟ್ಟ ಆತಂಕ
ಇಸ್ರೊದಿಂದ ದೇಶದ ಪ್ರಗತಿಯನ್ನು ಇನ್ನೊಂದು ಮಟ್ಟಕ್ಕೆ ತಲುಪಿಸಲು ತುದಿಗಾಲಿನಲ್ಲಿ ನಿಂತಿದ್ದ ನಂಬಿ ನಾರಾಯಣ್ ಅವರಿಗೆ ಆ ಒಂದು ಮಹಿಳೆ ಕಂಟಕವಾದಳು. ಇಸ್ರೊದಲ್ಲಿ ಕೆಲಸ ಭರದಿಂದ ನಡೆಯುತ್ತಿದ್ದಾಗ ಮಾಲ್ಡೀವ್ಸ್ನ ಪ್ರಜೆ ಮರಿಯಮ್ ರಷೀದಾ ಎನ್ನುವವಳು ಹೇಗೋ ನಂಬಿಯವರ ಪರಿಚಯ ಪಡೆಯುತ್ತಾಳೆ. ಕೆಲ ದಿನಗಳ ನಂತರ ಕೇರಳ ಪೊಲೀಸರು ಭಾರತದಲ್ಲಿ ನಿಗದಿತ ಅವಧಿಗಿಂತ ಹೆಚ್ಚು ಕಾಲ ವಾಸವಾಗಿದ್ದ ಹಿನ್ನೆಲೆಯಲ್ಲಿ ಅವಳನ್ನು ಸೆಕ್ಷನ್ 14 ಹಾಗೂ ಸೆಕ್ಷನ್ 7ರ ಅಡಿಯಲ್ಲಿ ಬಂಧಿಸಿದ್ದರು. ನಂತರ ಅವಳ ಹಿನ್ನಲೆಯನ್ನು ಗಮನಿಸಿದ ಪೊಲೀಸರು ಭಾರತದ ವಿಜ್ಞಾನಿಗಳ ಜೊತೆ ಸಂಪರ್ಕವನ್ನು ಗುರುತಿಸಿ, ದೇಶದ ಗೌಪ್ಯತೆಯ ಬಗ್ಗೆ ಪಾಕಿಸ್ತಾನದ ಗೂಢಾಚಾರಿ ಎಂದು ಅವಳ ಮೇಲೆ ಪ್ರಕರಣ ದಾಖಲಿಸುತ್ತಾರೆ. ಇವಳ ಸಂಪರ್ಕದಲ್ಲಿದ್ದರು ಅಂತ ಅವತ್ತು ಹೇಳಲಾಗ್ತಾ ಇದ್ದ ನಂಬಿ ನಾರಾಯಣ್ ಹಾಗೂ ಇನ್ನೊಬ್ಬ ವಿಜ್ಞಾನಿ ಶಶಿಕುಮಾರ್ ಅವರನ್ನು ವಿಚಾರಣೆಗೆಂದು ಕರೆದು ಕೇರಳ ಪೊಲೀಸರು ಅವರನ್ನು ಅರೆಸ್ಟ್ ಮಾಡಿಬಿಡುತ್ತಾರೆ. ಇದು ನಂಬಿ ಅವರ ಕೆರಿಯರ್ನಲ್ಲೆ ಬಹು ದೊಡ್ಡ ಆಘಾತ.
ಬೇಹುಗಾರಿಕೆ, ದೇಶದ್ರೋಹ ಎನ್ನುವ ಬಹುದೊಡ್ಡ ಆರೋಪಗಳು ಸಾಲು ಸಾಲಾಗಿ ನಂಬಿಯವರ ಮೇಲೆ ಹೊರೆಸಲಾಗುತ್ತಿತ್ತು. ಆದರೆ ನಂಬಿ ಅವರಿಗೆ ತಮ್ಮ ಕೆಲಸದ ಮೇಲೆ ಸಂಪೂರ್ಣ ನಂಬಿಕೆ ಇತ್ತು. ಈ ಎಲ್ಲ ಪ್ರಕರಣಗಳಿಗೆ ಅವರು ಎದೆಗುಂದಲ್ಲಿಲ್ಲ. ಈ ಕೇಸ್ಗೆ ಸಂಬಂಧಿಸಿದಂತೆ ಒಬ್ಬೋಬರೆ ಸೇರುತ್ತಾ ಹೋದರು. ನಂಬಿ ನಾರಾಯಣ್ ಅವರಿಗೆ ಜೈಲುವಾಸ ತಪ್ಪಿರಲಿಲ್ಲ. ಇದೆ ಕೇಸ್ನಲ್ಲಿ ಅನಾವಶ್ಯಕವಾಗಿ ಕೇರಳದ ಐಜಿಪಿ ರಮಣ್ ಅವರ ಹೆಸರು ಬರತೊಡಗಿತು. ಐಜಿಪಿ ರಮಣ್ ಅವರ ಹೆಸರು ಬಂದ ಕ್ಷಣವೇ ಕೇಸ್ ದಾರಿ ರಾಜಕೀಯ ಮಾರ್ಗ ಹಿಡಿಯಿತು. ಆಗಿನ ಮುಖ್ಯಮಂತ್ರಿ ಕರುಣಾಕರನ್ ತನ್ನ ಪದವಿ ಕಳೆದುಕೊಳ್ಳುವವರೆಗೂ ಈ ಕೇಸ್ ಸಾಗಿತ್ತು.
ಐಜಿಪಿ ರಮಣ್ ಅವರಿಗೆ ಮುಖ್ಯಮಂತ್ರಿ ಕರುಣಾಕರನ್ ತುಂಬ ಆಪ್ತರು. ಈ ಪ್ರಕರಣದಿಂದಲೇ ಕರಣಾ ಅವರು ರಾಜೀನಾಮೆ ನೀಡುವಂತೆ ವಿರೋಧ ಪಕ್ಷದವರು ಎದುರು ನಿಂತಿದ್ದರು. ಅದರಂತೆ ಕರುಣಾಕರನ್ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಈ ಪ್ರಕರಣವನ್ನ ಸಿಬಿಐಗೆ ಒಪ್ಪಿಸಲಾಯಿತು. ಬೇಹುಗಾರಿಕೆ ಆರೋಪಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ ಎಂದು ಕೋರ್ಟ್ ಒಪ್ಪಿ ಎಲ್ಲ ಆಪಾದಿತರನ್ನು ಬಿಡುಗಡೆಗೊಳಿಸಿದ್ದರು. ಆದರೆ ಅಷ್ಟು ಹೊತ್ತಿಗಾಗಲೆ ಮಾಡದ ಅಪರಾಧಕ್ಕೆ ನಂಬಿಯವರು 50 ದಿನಗಳ ಕಾಲ ಸೆರೆವಾಸ ಅನುಭವಿಸಿದ್ದರು.
ಸಿಡಿದೆದ್ದ ನಂಬಿ
ಇಲ್ಲ ಸಲ್ಲದ ಕೇಸ್ನಲ್ಲಿ ಅಮಾಯಕರನ್ನು ಸಿಲುಕಿಸಿ, ಇಷ್ಟರ ಮಟ್ಟಗಿನ ಅವಮಾನ ಹಾಗೂ ತನ್ನ ಕೆರಿಯರ್ ನಾಶ ಮಾಡಿದ ಕೇರಳ ಪೊಲೀಸರ ವಿರುದ್ಧ ನಂಬಿ ಸುಮ್ಮನೆ ಕೂರಲಿಲ್ಲ. ತಮ್ಮ ಮೇಲಿನ ಬೇಜವಾಬ್ದಾರಿತನದ ಆರೋಪ ಸಹಿಸದೆ ನಂಬಿ ನ್ಯಾಯ ಹುಡುಕಿಕೊಂಡು ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದರು. ತಮ್ಮನ್ನು ಅವಮಾನಿಸಿದ, ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಿದ, ಜೈಲಿಗೂ ಕಳಿಸಿದ್ದವರಿಗೆ ತಕ್ಕ ಶಾಸ್ತಿ ಮಾಡಲು ಅವರು ಮುಂದಾಗಿದ್ದರು. ಅದಕ್ಕೆ ಈಗ ಫಲ ಸಿಗ್ತಾ ಇದೆ. ಸಿಬಿಐ ತನಿಖೆ ಮುಂದುವರೆಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ನಂಬಿ ನಾರಾಯಣನ್ ವಿರುದ್ಧ ಅದ್ಯಾರು ಸಂಚು ರೂಪಿಸಿದ್ದರೊ ಗೊತ್ತಿಲ್ಲ. ಅದ್ಯಾವ ದೇಶದಿಂದ ಸಂಚು ರೂಪಿಸುವವರಿಗೆ ಕುಮ್ಮಕ್ಕು ದೊರೆತಿತ್ತೊ ಗೊತ್ತಿಲ್ಲ. ಆದ್ರೆ ನಂಬಿ ನಾರಾಯಣನ್ ಅವರನ್ನ ಸಿಲುಕಿಸುವಲ್ಲಿ ಅವತ್ತು ಕುತಂತ್ರಿಗಳು ಯಶಸ್ವಿಯಾಗಿದ್ರು. ಈಗ ಅದು ಉಲ್ಟಾ ಆಗಿದೆ. ತಾವು ಅನುಭವಿಸಿದ ನೋವನ್ನೆಲ್ಲ ನಂಬಿ ಪುಸ್ತಕದ ಮೂಲಕ ತಿಳಿಯಪಡಿಸುವ ಪ್ರಯತ್ನ ಮಾಡಿದ್ದಾರೆ. ಅಷ್ಟೇ ಅಲ್ಲ, ತಮಗಾದ ಆಘಾತದಿಂದ ತಮ್ಮ ವಿರುದ್ಧ ನಡೆದಿದ್ದ ಕುತಂತ್ರದಿಂದ ಭಾರತದಲ್ಲಿ ಕ್ರಯೊಜೆನಿಕ್ ರಾಕೆಟ್ 15 ವರ್ಷಗಳಷ್ಟು ಹಿಂದೆ ಬಿತ್ತು ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ. ಇವರ ಜೀವನದ ಕುರಿತಾಗಿನ ಸಿನಿಮಾ ಕೂಡ ಈಗ ನಿರ್ಮಾಣವಾಗ್ತಿದೆ. ಒಬ್ಬ ಪ್ರಾಮಾಣಿಕ ವಿಜ್ಞಾನಿ ಅನುಭವಿಸಿದ ಕಷ್ಟ ಕೋಟಲೆಗಳನ್ನು ಈ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆಯಂತೆ. ಬಹುಭಾಷಾ ನಟ ಆರ್. ಮಾಧವನ್ ರಾಕೆಟ್ರಿ- ದಿ ನಂಬಿ ಎಫೆಕ್ಟ್ ಎಂಬ ಚಿತ್ರವನ್ನ ನಿರ್ದೇಶಿಸಿ, ನಿರ್ಮಾಣ ಮಾಡ್ತಿದಾರೆ.ಈಗ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಮಾಧವನ್ ಅವರ ಕೆಲಸ ಕಂಡು ಎಲ್ಲರೂ ಶಹಭಾಷ್ ಎನ್ನುತ್ತಿದ್ದಾರೆ. ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ನಂಬಿ ಹಾಗೂ ಮಾಧವನ್ ಜೊತೆ ಚರ್ಚೆ ನಡೆಸಿ, ಬೆನ್ನು ತಟ್ಟಿದ್ದಾರೆ.
Happy to have met you and the brilliant Nambi Narayanan Ji. This film covers an important topic, which more people must know about.
Our scientists and technicians have made great sacrifices for our country, glimpses of which I could see in the clips of Rocketry. https://t.co/GDopym5rTm
— Narendra Modi (@narendramodi) April 5, 2021
ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಒಂದು ನೈಜ ಘಟನೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಮಾಧವನ್. ಕಮರ್ಷಿಯಲ್ ಸ್ಯಾಟಲೈಟ್ ಮಾರುಕಟ್ಟೆಯಲ್ಲಿ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಗೆ ಬರಲು ಪ್ರಯತ್ನ ಮಾಡಿದ್ದ ವಿಜ್ಞಾನಿ ನಂಬಿ ನಾರಾಯಣನ್. ನಂಬಿ ನಾರಾಯಣನ್ ಅನುಭವಿಸಿದ ನೋವು, ಒಬ್ಬ ವಿಜ್ಞಾನಿಗೆ ಎದುರಾದ ಆಘಾತ ಎಲ್ಲವೂ ಮನೋಜ್ಞವಾಗಿ ಈ ಚಿತ್ರದಲ್ಲಿ ಮೂಡಿ ಬಂದಿದೆ ಅಂತಿದ್ದಾರೆ ಮಾಧವನ್ ಆಪ್ತರು.
ಇದು ಒಬ್ಬ ಪ್ರತಿಭಾನ್ವಿತ ವಿಜ್ಞಾನಿಯ ನೋವಿನ ಕಥೆ. ಒಬ್ಬ ವಿಜ್ಞಾನಿಯ ಮೇಲೆ ಬಂದ ಆರೋಪದಿಂದ ಭಾರತದ ಬಾಹ್ಯಾಕಾಶ ತಂತ್ರಜ್ಞಾನಕ್ಕೂ ನಷ್ಟವಾಗಿದೆ. ಆದ್ರೆ ಕಾಲ ಈ ವಿಜ್ಞಾನಿಯ ವಿರುದ್ಧ ಸಂಚು ಮಾಡಿದವರಿಗೆ ಉತ್ತರ ಕೊಡ್ತಾ ಇದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post