ಬೆಂಗಳೂರು: ಸಾವಿನ ಅಂಚಿನಲ್ಲಿದ್ದ 30 ವರ್ಷ ಪ್ರಾಯದ ಯುವಕನೊಬ್ಬ ಮಾಡಿರುವ ವೀಡಿಯೋ ಒಂದು ಕೊರೊನಾದ ನರಕ ದರ್ಶನ ಮಾಡಿಸಿದೆ. ಕೊರೊನಾ ಅದೆಂಥಾ ಕ್ರೂರ ಅನ್ನೋದರ ಬಗ್ಗೆ ಮಾಹಿತಿ ನೀಡಿದೆ.
ಹಾಗಾದ್ರೆ ಆ ಹುಡುಗ ವೀಡಿಯೋ ಮಾಡಿದ್ದಾದ್ರು ಯಾಕೆ ಅದರಲ್ಲಿ ಇರೋದಾದ್ರು ಏನು? ಅನ್ನೋ ಪ್ರಶ್ನೆ ಮೂಡೋದು ಸಾಮಾನ್ಯ. ಅಷ್ಟಕ್ಕೂ ಆ ಹುಡುಗ ವಿಡಿಯೋದಲ್ಲಿ ಯಾವೊಂದು ಅಕ್ಷರವನ್ನೂ ಮಾತನಾಡಿಲ್ಲ, ಮೂಕನಾಗೇ ತನ್ನ ಜೀವನದ ಕೊನೆಯ ಕ್ಷಣಗಳನ್ನು ವೀಡಿಯೋ ರೂಪದಲ್ಲಿ ಕಳಿಸಿದ್ದಾನೆ. ತನ್ನ ಮನೆಯವರಿಗಾಗಿ ಹಂಬಲಿಸಿದ ಆ ಯುವಕನ ವೀಡಿಯೋ ಎಂಥ ಗಟ್ಟಿ ಹೃದಯವನ್ನಾದರೂ ಕರಗಿಸದೇ ಇರಲಾರದು.
ಕಳೆದ ಎರಡು ದಿನಗಳ ಹಿಂದೆ 30 ವರ್ಷ ಪ್ರಾಯದ ಯುವಕನಿಗೆ ಕೊರೊನಾ ಪಾಸಿಟಿವ್ ಬಂದಿರುತ್ತದೆ. ಆತನ ಕುಟುಂಬಸ್ಥರು ಅವನನ್ನ ಮೈಸೂರು ರಸ್ತೆಯ ಮೆಡಿಕಲ್ ಕಾಲೇಜ್‌ನಲ್ಲಿ ಆಡ್ಮಿಟ್ ಮಾಡಿರುತ್ತಾರೆ. ಆದರೆ 1 ದಿನದ ನಂತರ ಮನೆಯವರಿಗೆ ಕರೆ ಮಾಡಿದ ಯುವಕ ನನಗೆ ಇಲ್ಲಿ ಇರೋಕಾಗ್ತಿಲ್ಲಾ, ಇಲ್ಲಿ ಊಟ ಕೊಡ್ತಾಇಲ್ಲ, ಪ್ಲೀಸ್ ನನ್ನ ಇಲ್ಲಿಂದ ಕರ್ಕೊಂಡ್ ಹೋಗಿ ಇಲ್ಲಿದ್ರೆ ನಾನು ಬದ್ಕಲ್ಲ ಎಂದು ಬೇಡಿಕೊಂಡಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ಆತನ ಕುಟುಂಬದವರು ಆಯ್ತು ನಾಳೆ ಬಂದು ಕರ್ದುಕೊಂಡು ಹೋಗುತ್ತೇವೆ ಅನ್ನೋ ಭರವಸೆಯನ್ನೂ ಆತನಿಗೆ ಕೊಟ್ಟಿರ್ತಾರೆ. ಆದರೆ ಅದಾದ ಮರುದಿನವೇ ಬಂದ ಯುವಕನ ಸಾವಿನ ಸುದ್ದಿ ಕುಟುಂಬಕ್ಕೆ ಬರ ಸಿಡಿಲಿನಂತೆ ಅಪ್ಪಳಿಸಿದೆ.
ತಾನು ಸಾವನ್ನಪ್ಪುವ ಕೊನೆ ಕ್ಷಣದಲ್ಲಿ ಆ ಯುವಕ ತನ್ನ ಕುಟುಂಬದವರಿಗಾಗಿ ವೀಡಿಯೋ ಒಂದನ್ನ ಹರಿ ಬಿಟ್ಟಿದ್ದ. ತನ್ನ ಕುಟುಂಬದವರ ಜೊತೆ ಮಾತನಾಡಿದ ಸ್ವಲ್ಪ ಸಮಯದ ಬಳಿಕ ಯುವಕನ ಮಾತು ಬಂದ್ ಆಗಿತ್ತು ಎನ್ನಲಾಗಿದೆ. ಇದೇ ವೇಳೆ ಆ ಯುವಕ ವೀಡಿಯೋ ಮಾಡಿದ್ದಾನೆ, ಏನೂ ಹೇಳದಿದ್ದರೂ ತನ್ನ ಕೊನೆ ಕ್ಷಣದ ಒದ್ದಾಟವನ್ನ, ತನ್ನ ಮೂಕರೋದನೆಯನ್ನ ವೀಡಿಯೋ ಮೂಲಕ ಮನೆಯವರಿಗೆ ಕಳಿಸಿಕೊಟ್ಟಿದ್ದಾನೆ. ಕೊನೆಗೆ ಆಕ್ಸಿಜನ್ ವ್ಯವಸ್ಥೆ ಕೊರತೆಯಿಂದ ಮೂಗು ಬಾಯಿಯಲ್ಲಿ ರಕ್ತ ಸೋರುತ್ತಾ ನರಳಾಡಿಕೊಂಡು ಯುವಕ ಪ್ರಾಣ ಬಿಟ್ಟಿದ್ದಾನೆ ಎನ್ನಲಾಗಿದೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ನಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಪುತ್ರ ಹರಿಬಿಟ್ಟ ತನ್ನ ಅಂತಿಮ ಕ್ಷಣದ ವೀಡಿಯೋ ನೋಡಿದ ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post