ದೇಶದಲ್ಲಿ ಸದ್ಯಕ್ಕೆ ಸೋಂಕಿನ ಪ್ರಮಾಣದಲ್ಲಿ ಕೊಂಚ ಇಳಿಕೆ ಕಂಡುಬರುತ್ತಿದೆಯಾದ್ರೂ.. ಇನ್ನೂ ಹತ್ತಿರ ಹತ್ತಿರ 2 ಲಕ್ಷ ಸೋಂಕಿತರು ದಿನಂಪ್ರತಿ ಪತ್ತೆಯಾಗ್ತಿರೋದು ಸಾಕಷ್ಟು ಆತಂಕಕ್ಕೆ ಕಾರಣವಾಗ್ತಿದೆ. ಅದ್ರಲ್ಲೂ ಭಾರತದಲ್ಲಿ ಚೀನಾದಿಂದ ಬಂದಿರೋ ಕೊರೊನಾ ವೈರಸ್ ಜೊತೆ, ಇನ್ನೆರಡು ರೂಪಾಂತರಿಗಳೂ ಹೆಚ್ಚು ಹರಡುತ್ತಿವೆ. ಹೀಗಾಗಿ, ಸದ್ಯ ನೀಡಲಾಗ್ತಿರೋ ವ್ಯಾಕ್ಸಿನ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಮೂಡುತ್ತಿದ್ದವು.. ಅದಕ್ಕೆ ಸಮಾಧಾನ ದೊರಕಿದೆ.
ದೇಶದಲ್ಲಿ ಇಂದು ಸೋಂಕಿನ ಪ್ರಮಾಣ ಕೊಂಚ ಕಡಿಮೆ ಅನಿಸ್ತಿದ್ದರೂ ರೂಪಾಂತರಿ ವೈರಸ್ಗಳ ಆತಂಕ ಇದ್ದೇ ಇದೆ. ಅದ್ರಲ್ಲೂ ಭಾರತದಲ್ಲಿ B.1.617.2 ಅಥವಾ B.1.617 ಹೆಸರಿನ ಹಾಗೂ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ರೂಪಾಂತರಿ ಕೊರೊನಾ ವೈರಸ್ ಹಾಗೂ B.1.1.7 ಹೆಸರಿನ ಇಂಗ್ಲೆಂಡ್ನಲ್ಲಿ ಪತ್ತೆಯಾದ ರೂಪಾಂತರಿ ಕೊರೊನಾ ವೈರಸ್ ಹೆಚ್ಚು ಪ್ರಮಾಣದಲ್ಲಿ ಕಂಡು ಬರ್ತಿವೆ. ಅದ್ರಲ್ಲೂ B.1.617 ರೂಪಾಂತರಿ ವೈರಸ್ಗಳು ಸಾಕಷ್ಟು ಹಾನಿಯನ್ನುಂಟು ಮಾಡುತ್ತಿವೆ.
ಶೇ.40 ಫಾಲ್ಸ್ ನೆಗೆಟಿವ್ ತೋರಿಸುವಂಥದ್ದು.. ಅಂದ್ರೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿದಾಗ 100 ಜನ ಸೋಂಕಿತರಲ್ಲಿ 40 ಜನರಿಗೆ ಕೊರೊನಾ ನೆಗೆಟಿವ್ ಅಂತಾನೇ ತೋರಿಸುತ್ತಿದೆಯಂತೆ. ಜೊತೆಗೆ ಎರಡೇ ದಿನದಲ್ಲಿ ಸೀರಿಯಸ್ ಆಗುವಂಥದ್ದು ಮತ್ತು ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂಥದ್ದು.. ಮುಂತಾದ ಲಕ್ಷಣಗಳನ್ನು ಇದು ಉಂಟು ಮಾಡುತ್ತಿದೆ. ಹೀಗಾಗಿ ಸಹಜವಾಗಿ ಈಗ ಭಾರತದಲ್ಲಿ ನೀಡಲಾಗ್ತಿರೋ ವ್ಯಾಕ್ಸಿನ್ಗಳು ಇದರ ವಿರುದ್ಧ ಎಷ್ಟು ಪರಿಣಾಮಕಾರಿ? ಅನ್ನೋ ಪ್ರಶ್ನೆಗಳು ಮೂಡುತ್ತಲೇ ಇದ್ದವು.
ಮೊದಲನೇ ಅಲೆಗೆ ಹೋಲಿಸಿದಾಗ ಎರಡನೇ ಅಲೆಯಲ್ಲಿ ಸೋಂಕಿತರಿಗೆ ಕೃತಕ ಆಕ್ಸಿಜನ್ ಪೂರೈಕೆ ಮಾಡಬೇಕಾದ ಸಂಖ್ಯೆ ಕೂಡ ಶೇ. 54ಕ್ಕಿಂತ ಹೆಚ್ಚು ಕಂಡುಬಂದಿದೆ ಅನ್ನೋ ಮಾಹಿತಿಯನ್ನ ಈಗಾಗಲೇ ತಜ್ಞರು ನೀಡಿದ್ದಾರೆ. ಇನ್ನೊಂದೆಡೆ, ಸೋಂಕಿನ ಪ್ರಮಾಣದಲ್ಲಿ ಕೂಡ ಗಣನೀಯ ಏರಿಕೆ ಈ ಬಾರಿ ಕಂಡು ಬಂದಿದೆ. ಹೀಗಾಗಿ.. ಹಲವರಲ್ಲಿ ಈಗ ಭಾರತದಲ್ಲಿ ನೀಡಲಾಗ್ತಿರೋ ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಹಾಗೂ ಇಂಗ್ಲೆಂಡಿನ ಆಕ್ಸ್ಫರ್ಡ್ ಯೂನಿವರ್ಸಿಟಿ ಮತ್ತು ಆಸ್ಟ್ರಾಝೆನೆಕಾ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿದ ಹಾಗೂ ಭಾರತದಲ್ಲಿರುವ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುವ ಕೋವಿಶೀಲ್ಡ್ ಎಂದು ಕರೆಯಲಾಗುವ AZD-1222 ವ್ಯಾಕ್ಸಿನ್ ಈ ರೂಪಾಂತರಿಗಳ ವಿರುದ್ಧ ಎಷ್ಟು ಪರಿಣಾಮಕಾರಿ? ಅನ್ನೋ ಡೌಟ್ ಹಲವರ ಮನಸ್ಸಿನಲ್ಲಿ ಕೊರೆಯುತ್ತಲೇ ಇತ್ತು..
ಕೊವ್ಯಾಕ್ಸಿನ್ ಬಗ್ಗೆ ಸಂದೇಹ ನಿವಾರಿಸಿದ್ದ ಅಮೆರಿಕಾ
ರೂಪಾಂತರಿ ವಿರುದ್ಧ ಇದೇ ರಾಮಬಾಣ ಎಂದಿದ್ದ ಡಾ.ಫೌಸಿ
ಹಾಗೆ ನೋಡಿದ್ರೆ ಕೊವ್ಯಾಕ್ಸಿನ್ ಎಫಿಕಸಿ ಬಗ್ಗೆಯೇ ಹಲವರಲ್ಲಿ ಸಂದೇಹಗಳಿದ್ದವು. ಇದು ರೂಪಾಂತರಿ ವೈರಸ್ ವಿರುದ್ಧ ಹೇಗೆ ಹೋರಾಡಬಲ್ಲದು? ಅನ್ನೋ ಪ್ರಶ್ನೆಗಳು ಹಲವರ ಮನದಲ್ಲಿದ್ವು. ಇಂಥ ವೇಳೆಯಲ್ಲೇ ಅಮೆರಿಕಾದ ಖ್ಯಾತ ಸಾಂಕ್ರಾಮಿಕ ರೋಗ ತಜ್ಞ ಹಾಗೂ ವೈಟ್ಹೌಸ್ ವೈದ್ಯಾಧಿಕಾರಿ ಡಾ. ಆ್ಯಂಥೋನಿ ಫೌಸಿ, ಈ ಎಲ್ಲ ಸಂದೇಹಗಳಿಗೂ ತೆರೆ ಎಳೆದಿದ್ರು. ಜೊತೆಗೆ, ಭಾರತದಲ್ಲಿ ನೀಡಲಾಗ್ತಿರೋ ಕೊವ್ಯಾಕ್ಸಿನ್ ಡೆಡ್ಲಿ ಮ್ಯೂಟಂಟ್ ಕೊರೊನಾ B.617 ಅನ್ನು ಮಟ್ಟ ಹಾಕುವ ಗುಣ ಹೊಂದಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಈ ವ್ಯಾಕ್ಸಿನ್ ಪ್ರಮುಖ ಪಾತ್ರ ವಹಿಸಲಿದ್ದು, ರೂಪಾಂತರಿ ಕೊರೊನಾ ವೈರಸ್ಗೂ ಇದು ಪ್ರಮುಖ ಆ್ಯಂಟಿಟೋಡ್ ಆಗಿದೆ ಎಂದು ಅವರು ಹೇಳಿದ್ರು. ಹೀಗಾಗಿ ಹಲವರ ಚಿತ್ತ ಕೊವ್ಯಾಕ್ಸಿನ್ ಮೇಲೆ ಬಿದ್ದಿತ್ತು. ಹೊಸದಾಗಿ ವ್ಯಾಕ್ಸಿನ್ ತೆಗೆದುಕೊಳ್ಳೋರು ಕೊವ್ಯಾಕ್ಸಿನ್ ಕೊವ್ಯಾಕ್ಸಿನ್ ಅಂತಾ ಪರಿತಪಿಸ್ತಾ ಇದ್ರೆ, ಕೋವಿಶೀಲ್ಡ್ ಪಡೆದವರು ನಮ್ಮ ಗತಿ ಏನು? ಅನ್ನೋ ಆತಂಕಕ್ಕೆ ಒಳಗಾಗಿದ್ರು. ಅಷ್ಟೇ ಅಲ್ಲ ಹೊಸದಾಗಿ ಕೋವಿಶೀಲ್ಡ್ ಪಡೆಯಲು ಹಲವರು ಹಿಂಜರಿತಾ ಇದ್ರು. ಆದ್ರೆ ವಾಸ್ತವಾಂಶವೇ ಬೇರೆ ಇದ್ದು ಇಂದು ಮತ್ತೆ ಆಸ್ಟ್ರಾಝೆನಿಕಾ ಸುದ್ದಿಯಾಗಿದೆ. ಈ ಬಾರಿ ಇದರ ಹೆಗ್ಗಳಿಕೆಗೆ ಇಂಗ್ಲೆಂಡ್ ತಲೆದೂಗಿದೆ..!
ರೂಪಾಂತರಿ ಹುಟ್ಟಡಗಿಸುತ್ತೆ ಕೋವಿಶೀಲ್ಡ್
ಸಂಶೋಧನೆಯಿಂದ ಬಯಲಾಯ್ತು ಮಹಾನ್ ಸತ್ಯ
ಅದು B.1.617.2 ಅಥವಾ B.1.617 ಕೊರೊನಾ ವೈರಸ್ ಆಗಿರಬಹುದು ಅಥವಾ B.1.1.7 ರೂಪಾಂತರಿ ವೈರಸ್ ಆಗಿರಬಹುದು.. ಎರಡೂ ವೈರಸ್ಗಳೂ ವ್ಯಾಕ್ಸಿನ್ನ ಶಾಕ್ನಿಂದ ಉಳಿಯೋಕೆ ಸಾಧ್ಯವಿಲ್ಲ. ಅದ್ರಲ್ಲೂ ಕೋವಿಶೀಲ್ಡ್ ವ್ಯಾಕ್ಸಿನ್ ಈ ಎರಡೂ ರೂಪಾಂತರಿಗಳ ವಿರುದ್ಧ ರಾಮಬಾಣದಂತೆ ಕೆಲಸ ಮಾಡುತ್ತೆ ಅನ್ನೋದು ಈಗ ತಿಳಿದುಬಂದಿದೆ. ಅದೂ ಸಹ ಲ್ಯಾಬ್ನಲ್ಲಿ ನಡೆದ ಸಂಶೋಧೋನೆಯಿಂದಲೋ ಅಥವಾ ತಜ್ಞರ ಸಮ್ಮುಖದಲ್ಲಿ ವ್ಯಾಕ್ಸಿನ್ ನೀಡಿ ನಿಗಾವಹಿಸಿ ಮಾಡಿದ ಸಂಶೋಧನೆಯಿಂದಲೋ ಅಲ್ಲ. ಬದಲಿಗೆ ರಿಯಲ್ ಟೈಮ್ ಡೆಟಾ ಆಧರಿಸಿ ಮಾಡಿದ ಸಂಶೋಧನೆಯಿಂದ ಇಂಥ ಮಹತ್ವದ ವಿಚಾರ ಬಯಲಾಗಿದೆ. ರಿಯಲ್ ಟೈಮ್ ಸಂಶೋಧನೆ ಅಂದರೆ ಕೋವಿಶೀಲ್ಡ್ ಪಡೆದು ತಮ್ಮ ದೈನಂದಿನ ಕಾರ್ಯದಲ್ಲಿ ನಿರತರಾದ ಜನರ ಮೇಲಾದ ಪರಿಣಾಮದ ಸಂಶೋಧನೆಯಿಂದ ಈ ಸತ್ಯ ಹೊರಬಂದಿದೆ.
ಭಾರತದಲ್ಲಿ ಜನವರಿ 16, 2021ರಿಂದ ವ್ಯಾಕ್ಸಿನ್ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಅದ್ರಲ್ಲಿ ಸರಿಸುಮಾರು 20 ಕೋಟಿ ಡೋಸ್ನಷ್ಟು ವ್ಯಾಕ್ಸಿನ್ ಸದ್ಯ ನೀಡಲಾಗಿದೆ. ಇದ್ರಲ್ಲಿ ಹೆಚ್ಚಿನ ಡೋಸ್ ವ್ಯಾಕ್ಸಿನ್ ಕೋವಿಶೀಲ್ಡ್ ಅನ್ನೇ ನೀಡಲಾಗಿದೆ.
ಫೆಬ್ರವರಿಯಲ್ಲಿ 4 ರಿಂದ 6 ವಾರಗಳ ಗ್ಯಾಪ್ನಲ್ಲಿ ಎರಡನೇ ಡೋಸ್ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆಯಬೇಕು ಅಂತಾ ಹೇಳಲಾಗಿತ್ತು. ನಂತರ ಬಂದ ಮಾಹಿತಿ ಮೇರೆಗೆ 6-8 ವಾರಗಳ ಅವಧಿಯಲ್ಲಿ ಎರಡನೇ ಡೋಸ್ ವ್ಯಾಕ್ಸಿನ್ ಪಡೆಯಬೇಕು ಅಂತಾ ಏಪ್ರಿಲ್ನಲ್ಲಿ ತಿಳಿಸಲಾಗಿತ್ತು. ಆದ್ರೆ ಇಂಗ್ಲೆಂಡ್ನಲ್ಲಿ ನಡೆದ ಅಧ್ಯಯನದ ಆಧಾರದಲ್ಲಿ ಈ ಗ್ಯಾಪ್ ಅನ್ನ 12-16 ವಾರಗಳಿಗೆ ಏರಿಸಲಾಗಿದೆ. ಯಾಕಂದ್ರೆ 14 ದಿನಗಳ ಅಂತರದಲ್ಲಿ ಕೋವಿಶೀಲ್ಡ್ ಪಡೆದಾಗ ಅದು ಕೇವಲ ಶೇ. 66.7 ಪರಿಣಾಮಕಾರಿಯಿತ್ತು. ಅದೇ 12-16 ವಾರಗಳ ಅಂತರದಲ್ಲಿ ಪಡೆದಾಗ ಈ ವ್ಯಾಕ್ಸಿನ್ ಎಫಿಕಸಿ ಸಾಮಾನ್ಯ ಕೊರೊನಾ ವೈರಸ್ನಲ್ಲಿ ಶೇ.80-91 ರಷ್ಟು ಕಂಡುಬಂದಿದೆ. ವಿಶೇಷ ಅಂದ್ರೆ ಒಂದನೇ ಡೋಸ್ ವ್ಯಾಕ್ಸಿನ್ 22 ರಿಂದ 90 ದಿನಗಳ ಅವಧಿಯಲ್ಲಿ ಶೇ.76ರಷ್ಟು ಪರಿಣಾಮಕಾರಿಯಾಗಿರೋದು ತಿಳಿದುಬಂದಿತ್ತು.
ಇದೇ ಆಧಾರದಲ್ಲಿ ಸುಮಾರು 1,054 B.1.617.2 ರೂಪಾಂತರಿ ಕೊರೊನಾ ವೈರಸ್ ಸೋಂಕಿತರನ್ನ ಬಳಸಿ ನಡೆಸಿದ ಸಂಶೋಧನೆಯಲ್ಲಿ ಕೋವಿಶೀಲ್ಡ್ ಮಹತ್ವ ಮತ್ತಷ್ಟು ಬಯಲಾಗಿದೆ. ಹೌದು.. B.1.617.2 ರೂಪಾಂತರಿ ಕೊರೊನಾ ಸೋಂಕು ತಡೆಗಟ್ಟುವಲ್ಲಿ, ಎರಡೂ ಡೋಸ್ ವ್ಯಾಕ್ಸಿನ್ ಪಡೆದಾಗ ಕೋವಿಶೀಲ್ಡ್ ಶೇ.59.8 ರಷ್ಟು ಪರಿಣಾಮಕಾರಿಯಾಗಿರೋದು ತಿಳಿದು ಬಂದಿದೆ. ಇದೇ ವ್ಯಾಕ್ಸಿನ್ B.1.1.7 ಹೆಸರಿನ ಇಂಗ್ಲೆಂಡ್ನಲ್ಲಿ ಪತ್ತೆಯಾದ ರೂಪಾಂತರಿ ಕೊರೊನಾ ವೈರಸ್ ವಿರುದ್ಧ ಶೇ.66.1 ರಷ್ಟು ಪರಿಣಾಮಕಾರಿಯಾಗಿದೆ ಎನ್ನಲಾಗಿದೆ. ಅದೇ ಸಿಂಗಲ್ ಡೋಸ್ ವ್ಯಾಕ್ಸಿನ್ ಸಹ ಈ ವೈರಸ್ ತಡೆಗಟ್ಟುವಲ್ಲಿ ಕೊಂಚ ಪರಿಣಾಮಕಾರಿಯಾಗಿದ್ದು ಶೇ.32.9 ರಷ್ಟು ಎಫಿಕಸಿ ಹೊಂದಿರೋದು ತಿಳಿದು ಬಂದಿದೆ.
ಆದ್ರೆ ಅಮೆರಿಕಾದ ಫೈಜರ್ ವ್ಯಾಕ್ಸಿನ್ B.1.617.2 ರೂಪಾಂತರಿ ವಿರುದ್ಧ ಶೇ.88ರಷ್ಟು ಪರಿಣಾಮಕಾರಿಯಾಗಿದ್ರೆ, B.1.1.7 ರೂಪಾಂತರಿ ವಿರುದ್ಧ ಶೇ.93 ರಷ್ಟು ಪರಿಣಾಮಕಾರಿಯಾಗಿರೋದೂ ತಿಳಿದು ಬಂದಿದೆ. ಆದ್ರೆ ಭಾರತದ ವಸ್ತುಸ್ಥಿತಿಗೆ ಅನುಗುಣವಾಗಿ ಗಮನಿಸುವುದಾದ್ರೆ ಅದು ಕೊವ್ಯಾಕ್ಸಿನ್ ಇರಲಿ ಅಥವಾ ಕೋವಿಶೀಲ್ಡ್ ಇರಲಿ.. ಎರಡೂ ವ್ಯಾಕ್ಸಿನ್ಗಳು ರೂಪಾಂತರಿ ಮತ್ತು ಸಾಮಾನ್ಯ ವೈರಸ್ ಕಟ್ಟಿಹಾಕುವಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿರೋದಂತೂ ಸುಳ್ಳಲ್ಲ.
ಒಟ್ಟಿನಲ್ಲಿ ಪ್ರಾರಂಭದಲ್ಲಿ ಹಲವರಿಗೆ ಇದ್ದ ವ್ಯಾಕ್ಸಿನ್ ಹೆಸಿಟೆನ್ಸಿ ಅಥವಾ ವ್ಯಾಕ್ಸಿನ್ ಪಡೆದುಕೊಳ್ಳುವುದರ ಬಗ್ಗೆ ಹಿಂಜರಿತ ಇಂದಿಲ್ಲ. ಆದ್ರೆ ಯಾವ ವ್ಯಾಕ್ಸಿನ್ ಪಡೆಯಬೇಕು ಅನ್ನೋ ಗೊಂದಲವಂತೂ ಇದ್ದೇ ಇದೆ. ಹೀಗಾಗಿ ಮತ್ಯಾವುದೋ ವ್ಯಾಕ್ಸಿನ್ಗೆ ಕಾಯದೇ ಜನರು ಯಾವ ವ್ಯಾಕ್ಸಿನ್ ಲಭ್ಯವಿರುತ್ತೋ ಅದನ್ನು ತೆಗೆದುಕೊಳ್ಳುವುದರಲ್ಲಿ ಜಾಣತನವಂತೂ ಇದೆ.
ವಿಶೇಷ ಬರಹ; ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post