ಅಮೆರಿಕದ ಸೇನೆ ಬಹುತೇಕ ಅಫ್ಘಾನಿಸ್ತಾನದಿಂದ ಹಿಂದಕ್ಕೆ ಸರಿದಿದೆ. ಪ್ರಮುಖ ನೆಲೆಗಳನ್ನು ಅಪ್ಘಾನಿಸ್ತಾನ ಸರ್ಕಾರದ ವಶಕ್ಕೆ ಒಪ್ಪಿಸಿದೆ. ಇದರ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಕಳೆದ ಎರಡು ದಶಕಗಳಿಂದ ತೆರೆ ಮರೆಯಲ್ಲೇ ಇದ್ದ ಉಗ್ರರು ಮತ್ತೆ ಮುನ್ನೆಲೆಗೆ ಬರ್ತಾ ಇದಾರೆ. ಅಫ್ಗಾನಿಸ್ತಾನದಲ್ಲಿ ಏನೇನಾಗ್ತಿದೆ, ಅದರಿಂದ ಭಾರತಕ್ಕೇನು ಸವಾಲು ಕಾದಿದೆ..?
ವಿಶ್ವದ ದೊಡ್ಡಣ್ಣನ ಸೇನಾಪಡೆ ವಾಪಸಾತಿಯಿಂದ ಕಳವಳ
ಅಫ್ಘಾನಿಸ್ತಾನದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಳಮಳ
ದಕ್ಷಿಣ ಏಷ್ಯಾದಲ್ಲೂ ಹೆಚ್ಚಾಗುತ್ತಾ ಮುಂದೆ ಉಗ್ರರ ಉಪಟಳ?
ವಿಶ್ವದ ದೊಡ್ಡಣ್ಣ ನಿರ್ಧಾರ ತೆಗೆದುಕೊಂಡು ಅದನ್ನು ಅನುಷ್ಠಾನಗೊಳಿಸಿ ಬಿಟ್ಟಿದ್ದಾನೆ. ಆದ್ರೆ ಆ ಒಂದು ನಿರ್ಧಾರ ದಕ್ಷಿಣ ಏಷ್ಯಾದಲ್ಲಿ ಕಳವಳಕ್ಕೂ ಕಾರಣವಾಗಿದೆ. ಅಫ್ಭಾನಿಸ್ತಾನದಿಂದ ಸೇನೆ ಹಿಂಪಡೆಯುವ ನಿರ್ಧಾರ ಮಾಡಿದ ಮೇಲೆ ಈ ತಿಂಗಳ ವೇಳೆಗೆ ಬಹುತೇಕ ಸೇನಾಪಡೆಗಳು ವಾಪಸ್ ಹೋಗುತ್ತಿವೆ. ಪ್ರಮುಖ ಸೇನಾ ನೆಲೆಗಳನ್ನು ಅಮೆರಿಕಾ ಖಾಲಿ ಮಾಡಿ ಅಫ್ಘನ್ ಸರ್ಕಾರದ ವಶಕ್ಕೆ ಕೊಟ್ಟಿದೆ. ಇದರಿಂದ ಆಗ್ತಾ ಇರುವ ಬೆಳವಣಿಗೆ ನಿಜಕ್ಕೂ ಆತಂಕಕಾರಿ. ಇದಕ್ಕೂ ಮುನ್ನ ಕಳೆದ 20 ವರ್ಷಗಳಿಂದ ಆದ ಬೆಳವಣಿಗೆಯ ಸಂಕ್ಷಿಪ್ತ ಚಿತ್ರಣವನ್ನೂ ಕೂಡ ನಿಮ್ಮ ಮುಂದೆ ಇಡ್ತೀವಿ.
ಅವತ್ತು ಧರಾಶಾಹಿಯಾಗಿದ್ದ ಗಗನ ಚುಂಬಿ ಕಟ್ಟಡಗಳು
ಬಿನ್ ಲಾಡೆನ್ ಮೇಲೆ ಮುಗಿ ಬಿದ್ದಿದ್ದ ಅಮೆರಿಕಾ ಸೇನೆ
ಇಲ್ಲಿಯೇ ನೆಲೆ ಸ್ಥಾಪಿಸಿ ಉಗ್ರರನ್ನು ಹಿಮ್ಮೆಟ್ಟಿಸಿದ್ದ ದೊಡ್ಡಣ್ಣ
ಇಡೀ ವಿಶ್ವಕ್ಕೆ ದೊಡ್ಡಣ್ಣ ಅಮೆರಿಕಾವೇ ಅವತ್ತು ಬೆಚ್ಚಿ ಬಿದ್ದಿತ್ತು. ವಿಮಾನಗಳು ಅವಳಿ ಗೋಪುರಕ್ಕೆ ನುಗ್ಗಿ ಗಗನ ಚುಂಬಿ ಕಟ್ಟಡಗಳು ಧರಾಶಾಹಿಯಾಗಿಬಿಟ್ಟಿದ್ದವು. ಅವತ್ತು ಅಮೆರಿಕಕ್ಕೆ ಭಯೋತ್ಪಾದನೆಯ ಕರಾಳ ಸ್ವರೂಪ ಖುದ್ದಾಗಿ ಪರಿಚಯ ಆಗಿತ್ತು. ಆದರೆ,ಅಮೆರಿಕ ಸುಮ್ಮನೇ ಬಿಡಲಿಲ್ಲ. ತನ್ನ ಮೇಲೆ ಯಾರು ಮುಗಿ ಬೀಳಲು ಬಂದಿದ್ದರೋ, ಯಾರು ದೇಶದಲ್ಲಿ ಭೀತಿ ಸೃಷ್ಟಿಸಿದ್ದರೋ, ಯಾರು ಜನರೆಲ್ಲ ಬೆಚ್ಚಿ ಬೀಳುವಂತೆ ಮಾಡಿದ್ದರೋ ಅವರನ್ನು ಬೆನ್ನು ಬಿದ್ದು ಬಂದೇ ಬಿಟ್ಟಿತ್ತು. ನೇರಾ ನೇರವಾಗಿ ಒಸಾಮಾ ಬಿನ್ ಲಾಡೆನ್ ನ ಕ್ಯಾಂಪ್ ಗೆ ಲಗ್ಗೆ ಹಾಕಿತ್ತು. ಅಮೆರಿಕದ ಸೇನೆ ಒಸಾಮಾನ ಹುಡುಕುತ್ತ ಇಡೀ ಅಫ್ಘಾನಿಸ್ತಾನದಲ್ಲೆಲ್ಲ ಸುತ್ತಾಡಿ ಬಿಟ್ಟಿತ್ತು. ಒಸಾಮಾನನ್ನು ಕೊನೆಗೆ ಪಾಕಿಸ್ತಾನದಲ್ಲಿ ಹಿಡಿದು ಹಾಕಿಬಿಟ್ಟಿತ್ತು ಅಮೆರಿಕ ಸೇನೆ. ಆದ್ರೆ, ಅವತ್ತು ಉಗ್ರರ ವಿರುದ್ಧ ನಡೆದಿದ್ದ ಕಾರ್ಯಾಚರಣೆಯಿಂದ ಅಫ್ಘಾನಿಸ್ತಾನದಲ್ಲಿ ಇವತ್ತೊಂದು ಸರ್ಕಾರ ನೆಲೆ ನಿಲ್ಲುವಂತೆ ಮಾಡಿದೆ.
ಆದರೆ, ಈಗ ವಿಶ್ವದ ದೊಡ್ಡಣ್ಣ ಅಮೆರಿಕ, ಅಪ್ಘಾನಿಸ್ತಾನದಲ್ಲಿ ನೆಲೆ ನಿಂತಿದ್ದ ಸೇನಾಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುತ್ತಿದೆ. ಅಮೆರಿಕಾ, ಅಫ್ಘಾನಿಸ್ತಾನದಲ್ಲಿ ಶಾಂತಿ ಮರು ಸ್ಥಾಪಿಸಲು ,ಉಗ್ರರ ಹಿಡಿತದಿಂದ ಬಿಡಿಸಲು ಅತೀ ದೀರ್ಘಾವಧಿಯವರೆಗೆ ಸೇನೆಯನ್ನು ನಿಯೋಜಿಸಿತ್ತು. ಬರೋಬ್ಬರಿ 20 ವರ್ಷ ಕೋಟಿ ಕೋಟಿ ರೂಪಾಯಿಗಳನ್ನು ಸುರಿದು ತನ್ನ ಸೇನೆಯನ್ನು ಸನ್ನದ್ಧವಾಗಿರಿಸಿತ್ತು. ಉಗ್ರರ ಹುಟ್ಟಡಗಿಸಲು ಎಲ್ಲಾ ರೀತಿಯ ಆಪರೇಷನ್ ನಡೆಸಿತ್ತು. ಅವತ್ತು ಗಗನ ಚುಂಬಿ ಕಟ್ಟಡಗಳು ನೆಲಸಮವಾಗಿ 20 ವರ್ಷವಾಗುತ್ತಿರುವ ಸಂದರ್ಭದಲ್ಲೇ ಅಮೆರಿಕ ಸೇನಾಪಡೆಯನ್ನು ವಾಪಸ್ ಕರೆಯಿಸಿಕೊಳ್ತಾ ಇದೆ.
ಅಫ್ಘಾನಿಸ್ತಾನದಲ್ಲಿ ನೆಲೆ ಕಂಡು ಕೊಂಡಿರುವ ಉಗ್ರರು ಬೇರೆ ಬೇರೆ ಸಂಘಟನೆಗಳ ಹೆಸರಿನಲ್ಲಿ ಕಾರ್ಯಾಚರಣೆ ಮಾಡ್ತಾ ಬಂದಿದ್ದಾರೆ. ಅಫ್ಘಾನಿಸ್ತಾನದಲ್ಲಿರುವ ಉಗ್ರರಿಗೆ ಒಂದಿಷ್ಟು ನಾಯಕರು, ಒಂದಿಷ್ಟು ಸಂಘಟನೆಗಳು, ಅದನ್ನು ಪೋಷಿಸಲು ಒಂದಿಷ್ಟು ಕುತಂತ್ರಿಗಳು ಇದ್ದೇ ಇದ್ದಾರೆ. ಇವರಿಗೆ ಅಮೆರಿಕದ ನಿರ್ಧಾರ ಮತ್ತೆ ಹುಮ್ಮಸ್ಸು ತುಂಬಿ ಬಿಟ್ಟಿದೆ. ಹಿಂದೆ ಇಡೀ ಅಫ್ಗಾನಿಸ್ತಾನವನ್ನೆಲ್ಲ ತಮ್ಮ ಹಿಡಿತದಲ್ಲಿಟ್ಟುಕೊಂಡು, ನೆರೆಯ ದೇಶಗಳಿಗೆಲ್ಲ ಉಪಟಳ ಕೊಡುತ್ತಿದ್ದ ಉಗ್ರರು ಕೆಲವು ವರ್ಷಗಳಿಂದ ಹೆಚ್ಚು ಕಡಿಮೆ ಸುಮ್ಮನಾಗಿದ್ದರು. ಇಲ್ಲವೇ ಬೇರೆಡೆಗೆ ಸ್ಥಳಾಂತರಗೊಂಡಿದ್ದರು. ಪಕ್ಕದಲ್ಲೇ ಇರುವ ಪಾಕಿಸ್ತಾನದ ಗಡಿ ಬಳಿ ಬಂದು ಕ್ಯಾಂಪ್ ಮಾಡಿದವರೂ ಇದ್ದಾರೆ. ಇತ್ತ ಕಾಶ್ಮೀರದ ಗಡಿಯತ್ತಲೂ ಇವರ ಕಣ್ಣು ಇದ್ದೇ ಇದೆ. ಈವರೆಗೆ ಅಮೆರಿಕದ ಸೈನ್ಯ ಅಫ್ಘಾನಿಸ್ತಾನದಲ್ಲಿದ್ದಿದ್ದರಿಂದ ಬಾಲ ಬಿಚ್ಚುವುದು ಕಷ್ಟವಾಗಿತ್ತು. ಆದ್ರೆ ಈಗ ಅವರೇ ಹೊರಟು ಬಿಟ್ಟರೆ ಇವರಿಗೆ ಮೂಗುದಾರ ಹಾಕೋರು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ.
ಅಫ್ಘಾನಿಸ್ತಾನದಲ್ಲಿ ಶಾಂತಿ ಮರುಸ್ಥಾಪಿಸಲು ಇಷ್ಟು ವರ್ಷ ನಮ್ಮ ಸೈನಿಕರು ಹೋರಾಡಿದ್ದಾರೆ. ಇನ್ಮುಂದೆ ಇಲ್ಲಿನ ಶಾಂತಿಗಾಗಿ ಭಾರತ, ರಷ್ಯಾ, ಚೀನಾ, ಟರ್ಕಿ, ಪಾಕಿಸ್ತಾನ ನೆರವಾಗಲಿದೆ ಅಂತ ಅಮೆರಿಕ ಹೇಳ್ತಾ ಇದೆ. ಆದ್ರೆ ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪಿಸಲು ಹೊರಡುವುದು ಅಷ್ಟು ಸುಲಭವಾಗಿಲ್ಲ. ಅಫ್ಘಾನಿಸ್ತಾನದ ಜೊತೆ ಭಾರತ ಸ್ನೇಹದಿಂದಲೇ ಇದೆ. ಸ್ನೇಹದ ಸಂಕೇತವಾಗಿ ಇಲ್ಲಿ ಸಂಸತ್ ಭವನವನ್ನು ನಿರ್ಮಿಸಿ ಕೊಟ್ಟಿದೆ. ಆದ್ರೆ ಅಮೆರಿಕ ಹೇಳಿದಂತೆ ನಾಲ್ಕು ದೇಶಗಳೂ ಒಗ್ಗೂಡಿದರೆ ಅಫ್ಘಾನಿಸ್ತಾನದಲ್ಲಿ ಶಾಂತಿ ಮುಂದುವರೆಯುವಂತೆ ಮಾಡುವುದು ಕಷ್ಟವಲ್ಲ. ಆದರೆ ಪಾಕಿಸ್ತಾನ, ಚೀನಾದ ಜೊತೆಗೆ ಮಿಲಿಟರಿ ಸಹಕಾರ ಬಹಳ ಕಷ್ಟ. ಇನ್ನು ರಾಜತಾಂತ್ರಿಕವಾಗಿಯೂ ಈ ನಾಲ್ಕು ರಾಷ್ಟ್ರಗಳು ಒಂದಾಗಿ ಹೋಗುವುದು ಇನ್ನೂ ಕಷ್ಟ. ಹೀಗಾಗಿ ಅಮೆರಿಕ ಹೇಳಿದಂತೆ ಅಲ್ಲಿ ಯಾರ ಸೈನ್ಯವೂ ಹೋಗಲ್ಲ. ಸೈನ್ಯ ಇಲ್ಲ ಅಂತಾದರೆ ಅಲ್ಲಿ ಉಗ್ರರು ಇನ್ನೇನು ಚಾಳಿ ಶುರು ಕೊಳ್ಳೋದು ಖಚಿತವಾಗ್ತಾ ಇದೆ.
ಈ ಭಯೋತ್ಪಾದಕರು ತಾವೂ ಸುಮ್ಮನಿರಲ್ಲ, ಬೇರೆಯವರನ್ನೂ ಬಿಡಲ್ಲ. ಅದ್ಯಾರದ್ದೋ ಸಂಚಿಗೆ ಸುಲಭವಾಗಿ ದಾಳವಾಗಿ ಸಿಗಬಲ್ಲ ಈ ಉಗ್ರರು ನೆರೆಯ ದೇಶದಲ್ಲಿ ಶಾಂತಿ ಕದಡಲು ಏನು ಬೇಕಾದರೂ ಮಾಡಿಬಿಡುತ್ತಾರೆ. ಹೀಗಾಗಿ ಭಾರತದ ಶಾಂತಿ ಸಂಬಂಧಿ ವಿಚಾರದಲ್ಲಿ ಅಫ್ಘಾನಿಸ್ತಾನದಲ್ಲಿ ಆಗುತ್ತಿರುವ ಬೆಳವಣಿಗೆ ಒಳ್ಳೆಯದಲ್ಲ. ಕಾರಣ ಈ ಉಗ್ರರು ತಾವಾಯ್ತು ತಮ್ಮ ಊರಾಯ್ತು ಅಂತ ಇರೋರಲ್ಲ. ಇವರಿಗೆ ಸದಾ ನೆರಳಿನಂತೆ ಪಕ್ಕದಲ್ಲಿರೋ ದೇಶದ ಮೇಲಿನ ನಂಬಿಕೆಯೂ ಅಷ್ಟಕಷ್ಟೇ. ಪಾಕಿಸ್ತಾನದ ಗಡಿಯಲ್ಲಿ ಇತ್ತೀಚಿಗೆ ಭಾರತ ಏರ್ ಸ್ಟೈಕ್ ನಡೆಸಿ ಉಗ್ರರ ಕ್ಯಾಂಪ್ ನಾಶ ಮಾಡಿದ್ದು ಇದಕ್ಕೊಂದು ಉದಾಹರಣೆ. ಹೀಗಾಗಿ ಒಂದು ಕಡೆ ಕುತಂತ್ರಿಗಳು ಮತ್ತೊಂದು ಕಡೆ ರಕ್ತ ಪಿಪಾಸುಗಳು ಒಗ್ಗೂಡಿ ಬಿಟ್ಟರೆ ನೆರೆಯ ರಾಷ್ಟ್ರದಲ್ಲಿ ಶಾಂತಿ ಕದಡೋದು ಕಷ್ಟವಲ್ಲ. ಇದೇ ಈಗ ದಕ್ಷಿಣ ಏಷ್ಯಾದಲ್ಲಿ ಚರ್ಚೆಯಾಗ್ತಾ ಇರುವ ವಿಚಾರ.
ಅಫ್ಘಾನಿಸ್ತಾನದಲ್ಲಿ ಶುರುವಾಗಿ ಬಿಟ್ಟಿದೆ ತಾಲಿಬಾನ್ ಕಾಟ
ಈಗಾಗಲೇ ಹಲವು ಜಿಲ್ಲೆಗಳ ಮೇಲೆ ಉಗ್ರರ ನಿಯಂತ್ರಣ
ಕೈ ಚೆಲ್ಲಿ ಕುಳಿತಂತೆ ಕಾಣುತ್ತಿರುವ ಅಫ್ಘಾನಿಸ್ತಾನ ಸರ್ಕಾರ
ಅಫ್ಘಾನಿಸ್ತಾನ ಆರ್ಥಿಕವಾಗಿ ಹಿಂದುಳಿದ ದೇಶ. ಅಲ್ಲಿನ ಸರ್ಕಾರಕ್ಕೂ ಉಗ್ರರನ್ನು ನಿಯಂತ್ರಿಸೋದು ಕಷ್ಟವಾಗಬಹುದು. ಆದರೂ ನೆರೆಯ ರಾಷ್ಟ್ರಗಳ ನಂಬಿಕೆ-ವಿಶ್ವಾಸ ಗಳಿಸಿಕೊಳ್ಳುವಲ್ಲಿ ಅಫ್ಗಾನಿಸ್ತಾನದ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಭಾರತ ಕೂಡ ಅಫ್ಗಾನಿಸ್ತಾನಕ್ಕೆ ಸಾಕಷ್ಟು ನೆರವು ನೀಡಿದೆ. ಉದಾರತೆ ಮೆರೆದಿದೆ. ಸರ್ಕಾರವೇನೋ ಭಾರತದ ಪರವಾಗಿದೆ. ಆದ್ರೆ ಅಲ್ಲಿರುವ ಉಗ್ರರು ಯಾರ ಪರವಾಗಿಯೂ ಇಲ್ಲ. ಅವರೇನಿದ್ದರೂ ಕುತಂತ್ರಿಗಳ ದಾಳಗಳಾಗಲು ಯಾವಾಗ ಬೇಕಾದರೂ ಸಿದ್ಧರಾಗಿರುವವರು. ಹೀಗಾಗಿಯೇ ಈಗ ಶಾಂತಿ ಭಂಗವಾಗುವ ಆತಂಕ. ಈಗಾಗಲೇ ಬಂದಿರೋ ವರದಿಗಳ ಪ್ರಕಾರ ಅಫ್ಗಾನಿಸ್ತಾನದಲ್ಲಿ ಹಲವು ಜಿಲ್ಲೆಗಳನ್ನು ತಾಲಿಬಾನ್ ಸಂಘಟನೆ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ತಾ ಇದೆ. ಅಫ್ಘಾನಿಸ್ತಾನದ 421 ಜಿಲ್ಲೆಗಳ ಪೈಕಿ ಈಗಾಗಲೇ ನೂರಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಉಗ್ರ ಸಂಘಟನೆ ಬಿಗಿ ಹಿಡಿತ ಸಾಧಿಸಿದೆಯಂತೆ. ಆದರೆ, ಈ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಅಫ್ಗಾನಿಸ್ತಾನ ಸರ್ಕಾರ ವಿಫಲವಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ಮತ್ತೆ ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಬಂದು ಬಿಡುತ್ತಾ ಅನ್ನೋ ಆತಂಕ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಶುರುವಾಗಿದೆ. ಒಂದೊಮ್ಮೆ ಹೀಗಾಗಿ ಬಿಟ್ಟರೆ ಅಫ್ಘಾನಿಸ್ತಾನ ಮತ್ತೆ ಉಗ್ರರನ್ನು ಉತ್ಪಾದನೆ ಮಾಡುವ ಬೃಹತ್ ಪ್ಯಾಕ್ಟರಿಯಾಗುವಲ್ಲಿ ಸಂಶಯವೇ ಉಳಿದಿಲ್ಲ.
ದೇಶದ ಭದ್ರತೆ ನೆರೆಯ ದೇಶದಲ್ಲಾಗುತ್ತಿವ ವಿದ್ಯಮಾನಗಳನ್ನೂ ಆಧರಿಸಿದೆ. ನೆರೆಯ ದೇಶದಲ್ಲಿ ಏನೇ ಬದಲಾವಣೆ ಆದರೂ ಅದು ದೇಶದ ಬಾಹ್ಯ-ಆಂತರಿಕ ಭದ್ರತೆಯ ಮೇಲೂ ಪರಿಣಾಮವಾಗಬಹುದು. ಹೀಗಾಗಿ ರಾಷ್ಟ್ರೀಯ ಭದ್ರತೆಯ ವಿಚಾರ ಬಂದಾಗ ಅಫ್ಘಾನಿಸ್ತಾನದಲ್ಲಾದ ಬೆಳವಣಿಗೆ ಬಹಳ ಮಹತ್ವದ್ದು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
cont[email protected]
Discussion about this post