ಬೆಂಗಳೂರು: ಬಿ.ಎಸ್.ಯಡಿಯೂರಪ್ಪರ ಮಾನಸಪುತ್ರ ಅಂತಲೇ ಬಿಂಬಿತರಾದವರು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಬಿಎಸ್‌ವೈ ಸಿಎಂ ಆಗಿದ್ದಾಗ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದವರು. ಜೊತೆಗೆ ಯಾರೇ ಬಿಜೆಪಿ ಭೀಷ್ಮನ ವಿರುದ್ಧ ಮಾತನಾಡಿದ್ರು ನಿಗಿನಿಗಿ ಕೆಂಡವಾಗ್ತಿದ್ರು ರೇಣುಕಾಚಾರ್ಯ. ಅದ್ರೀಗ ಅದ್ಯಾಕೋ ಸಿಎಂ ಬದಲಾದ್ಮೇಲೆ ಹೊನ್ನಾಳಿ ಶಾಸಕರ ವರಸೇನೆ ಚೇಂಜ್ ಆಗ್ಬಿಟ್ಟಿದೆ ಎಂಬ ಮಾತುಗಳು ರಾಜಕೀಯವಲಯದಲ್ಲಿ ರಿಂಗಣಿಸುತ್ತಿವೆ.
ಸಚಿವ ಸಂಪುಟ ರಚನೆಗೂ ಮುನ್ನ ತಮಗೆ ಮಂತ್ರಿಗಿರಿ ಕೊಟ್ಟೇ ಕೊಡ್ತಾರೆ ಎಂಬ ಆಶಾಭಾವನೆಯಲ್ಲಿದ್ರು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ. ಆದ್ರೆ, ಅವರಿಗೆ ಮಂತ್ರಿಭಾಗ್ಯ ಸಿಗಲೇ ಇಲ್ಲ. ಇತ್ತ ಸಚಿವ ಸ್ಥಾನ ಸಿಗದಿದ್ದಕ್ಕೋ ಏನೋ ಹೊನ್ನಾಳಿ ಶಾಸಕರು ಸೈಲೆಂಟ್ ಆಗಿದ್ದಾರೆ. ಬಿಎಸ್‌ವೈ ಅಧಿಕಾರದಲ್ಲಿದ್ದಾಗ ವಿರೋಧಿಗಳ ವಿರುದ್ಧ ಕೆಂಡ ಉಗುಳುತ್ತಿದ್ದ ನಾಯಕ ಅದ್ಯಾಕೋ ಈಗ ಸಾಫ್ಟ್ ಆಗಿದ್ದಾರೆ. ತಮ್ಮ ವಿರೋಧಿಗಳ ಪರವಾಗಿಯೇ ಬ್ಯಾಟ್ ಬೀಸಿ ಅಚ್ಚರಿ ಮೂಡಿಸಿದ್ದಾರೆ.
ಸಚಿವ ಸಂಪುಟ ರಚನೆಯಾದ ಬಳಿಕ ಹಲವು ಶಾಸಕರು ತಮಗೆ ಸಚಿವ ಸ್ಥಾನ ನೀಡಿ ಅಂತಾ ಸಿಎಂ ಸುತ್ತಾ ಗಿರಿಕಿ ಹೊಡೆಯುತ್ತಿದ್ದಾರೆ. ಜೊತೆಗೆ ರೇಣುಕಾಚಾರ್ಯ ವಿರೋಧಿ ಬಣ ಕೂಡಾ ತಮಗೆ ಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡ್ತಿದೆ. ಅಚ್ಚರಿ ಏನಂದ್ರೆ ಇದೇ ವಿಚಾರಕ್ಕೆ ರೇಣುಕಾಚಾರ್ಯ ಮೊದಲ ಬಾರಿಗೆ ತಮ್ಮ ವಿರೋಧಿ ಬಣದ ನೋವಿಗೆ ಧ್ವನಿಯಾಗಿದ್ದಾರೆ. ಮಂತ್ರಿ ಸ್ಥಾನ ಕೇಳೋಕೆ ಹೋಗುವುದರಲ್ಲಿ ತಪ್ಪೇನಿದೆ ಅಂತಾ ಹೇಳಿ ವಿರೋಧಿಗಳ ಪರವಾಗಿ ಮಾತನಾಡಿದ್ದಾರೆ.
ಅಷ್ಟಕ್ಕೂ ರೇಣುಕಾಚಾರ್ಯ ಹೀಗೆ ಹೇಳ್ತಿರೋದಾದ್ರೂ ಯಾಕೆ? ವಿರೋಧಿಗಳ ಪರವಾಗಿ ಒಳ್ಳೆಯ ಮಾತುಗಳನ್ನಾಡ್ತಿರೋದ್ಯಾಕೆ? ಅದರಲ್ಲೂ ಹಲವು ತಂತ್ರಗಳು ಅಡಗಿವೆ. ಹೇಳ್ತೀವಿ ಕೇಳಿ..
ರೇಣುಕಾಚಾರ್ಯ ‘ಸಪ್ತ’ವ್ಯೂಹ?
ತಮ್ಮ ನಾಯಕರಾದ ಬಿ.ಎಸ್. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದಾರೆ. ಈಗ ವಿರೋಧಿ ಬಣ ಎದುರು ಹಾಕಿಕೊಂಡ್ರೆ ಯಾವುದೇ ಪ್ರಯೋಜನ ಇಲ್ಲ. ಅಲ್ಲದೇ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ವಿರೋಧಿ ಬಣ ಜೊತೆ ಉತ್ತಮ ಸ್ನೇಹದಿಂದ ಇದ್ದಾರೆ. ಈ ವೇಳೆ ನಾನೊಬ್ಬನೇ ಯಾಕೆ ವಿರೋಧಿ ಬಣವನ್ನ ಎದುರುಹಾಕಿಕೊಳ್ಳಬೇಕು. ನಾನೂ ಕೂಡ ಸಚಿವ ಸ್ಥಾನ ಕೇಳೋಕೆ ದೆಹಲಿಗೆ ಹೋಗಬೇಕಿದೆ. ಅಲ್ಲದೇ ವಿರೋಧಿ ಬಣವನ್ನ ಎದುರು ಹಾಕಿಕೊಂಡು ಸಚಿವ ಸ್ಥಾನವೂ ಸಿಗಲಿಲ್ಲ. ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯೂ ಸಿಗದಿರಬಹುದು ಎಂಬ ಲೆಕ್ಕಾಚಾರದಿಂದ ರೇಣುಕಾಚಾರ್ಯ ಸೈಲೆಂಟ್ ಆಗಿದ್ದಾರೆ ಎನ್ನಲಾಗಿದೆ.
ಒಟ್ಟಾರೆ, ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇ ತಡ ಎಂ.ಪಿ ರೇಣುಕಾಚಾರ್ಯ ಸೈಲೆಂಟ್ ಆಗಿದ್ದಾರೆ. ಅಧಿಕಾರವಿಲ್ಲದೇ ವಿರೋಧಿಗಳನ್ನ ಯಾಕೆ ಎದುರುಹಾಕಿಕೊಳ್ಳೋದು ಅನ್ನೋ ಲೆಕ್ಕಾಚಾರಕ್ಕೆ ಬಂದಿದ್ದಾರೆ.
ವಿಶೇಷ ಬರಹ: ಗಣಪತಿ, ಪೊಲಿಟಿಕಲ್ ಬ್ಯುರೋ, ನ್ಯೂಸ್‌ಫಸ್ಟ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post