ಬೆಂಗಳೂರು: ಇಂದಿನಿಂದ ಕೇಂದ್ರದ ನೂತನ ಸಚಿವರಿಂದ ರಾಜ್ಯದಲ್ಲಿ ಜನಾಶೀರ್ವಾದ ಯಾತ್ರೆ ಆರಂಭಗೊಂಡಿದೆ. ರಾಜ್ಯವನ್ನು ಪ್ರತಿನಿಧಿಸುವ ನಾಲ್ವರು ಹೊಸ ಕೇಂದ್ರ ಸಚಿವರು ಹಲವು ಉದ್ದೇಶಗಳೊಂದಿಗೆ ಜನರ ಬಳಿಗೆ ಆಗಮಿಸುತ್ತಿದ್ದು, ಮೋದಿ ಸರ್ಕಾರ ಜನರ ಬಳಿ ಬರುತ್ತಿದೆ ಎಂಬ ಸಂದೇಶ ಹೊತ್ತ ಯಾತ್ರೆ ಇಂದಿನಿಂದ ಆರಂಭಗೊಂಡಿದೆ.
ನೂತನವಾಗಿ ಕೇಂದ್ರದಲ್ಲಿ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಎ.ನಾರಾಯಣಸ್ವಾಮಿ ಹಾಗೂ ರಾಜೀವ್ ಚಂದ್ರಶೇಖರ್ ಅವರಿಂದ ಜನಾಶೀರ್ವಾದ ಯಾತ್ರೆ ಶುರುವಾಗಿದೆ. ನಾಲ್ವರು ಸಚಿವರು ರಾಜ್ಯದ ನಾಲ್ಕು ದಿಕ್ಕುಗಳಲ್ಲಿ ಪ್ರವಾಸ ಕೈಗೊಂಡಿದ್ದು, ನಮ್ಮ ನಡೆ ಜನರ ಕಡೆ ಎನ್ನುತ್ತಿದ್ದಾರೆ.
ಇದ್ದಕ್ಕಿದ್ದಂತೆ ನಿಗದಿಯಾದ ಈ ಜನಾಶಿರ್ವಾದ ಯಾತ್ರೆಯ ಅಸಲಿ ಉದ್ದೇಶವೇನು?
- ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಇಲ್ಲ, ಎಂಬ ಅಪವಾದ ತೊಡೆದು ಹಾಕುವ ನಿಟ್ಟಿನಲ್ಲಿ ಕೇಂದ್ರದ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವುದು ಯಾತ್ರೆಯ ಉದ್ದೇಶವಾಗಿದೆ.
- ಜೊತೆಗೆ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ ಬಲಪಡಿಸುವುದು. ಮತ್ತು ಪಕ್ಷದ ಗೆಲುವಿಗಾಗಿ ಶ್ರಮಿಸಲು ಕಾರ್ಯಕರ್ತರನ್ನು ಹುರಿಗೊಳಿಸುವುದು ಯಾತ್ರೆಯ ಮತ್ತೊಂದು ಉದ್ದೇಶವಾಗಿದೆ.
- ಎಲ್ಲಕ್ಕಿಂತ ಮುಖ್ಯವಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದ ನಂತರ, ರಾಜ್ಯದಲ್ಲಿ ನಾಯಕತ್ವದ ಅಭಾವ ಎದುರಾಗಬಾರದೆಂಬ ಎಚ್ಚರಿಕೆಯೊಂದಿಗೆ, ಸಾಮೂಹಿಕ ನಾಯಕತ್ವಕ್ಕೆ ಪಕ್ಷವನ್ನು ಸಜ್ಜುಗೊಳಿಸುವುದಕ್ಕಾಗಿ ನೂತನ ಸಚಿವರು ಮತದಾರ ಪ್ರಭುವಿನ ಮನೆ ಬಾಗಿಲಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.
ತಂಡ 2 – ಜನಾಶೀರ್ವಾದ ಯಾತ್ರೆ 16-08-2021
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಕು. @ShobhaBJP ಅವರ ಜನಾಶೀರ್ವಾದ ಯಾತ್ರೆಯ ವಿವರ.#JanAshirwadYatra #ಜನಾಶೀರ್ವಾದಯಾತ್ರೆ pic.twitter.com/BnLl0RqG0i
— BJP Karnataka (@BJP4Karnataka) August 16, 2021
ಯಾತ್ರೆಯ ಅಂಗವಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ, ಇಂದು ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಮಂಡ್ಯದ ರೈತ ಮಹಿಳೆಯರೊಂದಿಗೆ ಮಾತುಕತೆ ನಡೆಸಲಿರುವ ಅವರು, ಆಲೆಮನೆ ವೀಕ್ಷಣೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ನಂತರ ಮಂಡ್ಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಮಂತ್ರಿಗಳಾದ, ರಾಜೀವ್ ಚಂದ್ರಶೇಖರ್ ಅವರು ಕೂಡ ಜನಾಶೀರ್ವಾದ ಯಾತ್ರೆಯ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ತೆರಳಿಲಿದ್ದು, ಇವರಿಗೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಸಾಥ್ ನೀಡಲಿದ್ದಾರೆ.
ಇಂಧನ ಮತ್ತು ರಾಸಾಯನಿಕ ರಸಗೊಬ್ಬರ ಖಾತೆಯ ರಾಜ್ಯ ಸಚಿವರಾದ ಭಗಂತ್ ಖೂಬಾ ಅವರು ಯತ್ರೆಯ ಅಂಗವಾಗಿ ಬೀದರ್ಗೆ ತೆರಳಲಿದ್ದು, ಕಾರ್ಯಕ್ರಮದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post