ತುಮಕೂರು: ಅಂಗೈನಲ್ಲೇ ಪ್ರಪಂಚ ತೋರಿಸುವ ಮೊಬೈಲ್ನಲ್ಲಿ ಇಂದು ‘ಸೋಶಿಯಲ್ ಮೀಡಿಯಾ’ಗಳದ್ದೇ ಕಾರುಬಾರು. ಓರ್ವ ಸಾಮಾನ್ಯ ವ್ಯಕ್ತಿಗೆ ರಾತ್ರೋರಾತ್ರಿ ‘ಸ್ಟಾರ್ಗಿರಿ’ ತಂದುಕೊಡುವ ಸೋಶಿಲ್ ಮೀಡಿಯಾಗಳು, ಕೆಲವೊಮ್ಮೆ ಹಿಂದೆ-ಮುಂದೆ ನೋಡದೇ ಕೆಲವರ ಬದುಕಿಗೇ ಕಂಟಕವಾಗಿ ಬಿಡುತ್ತವೆ..!
ಈ ವಿಚಾರದಲ್ಲಿ ಟ್ರೋಲ್ ಪೇಜ್ಗಳ ಪಾತ್ರ ಪ್ರಧಾನ.. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಮೂರು ನಾಲ್ಕು ದಿನಗಳಿಂದ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಒಂದು ವೈರಲ್ ಆಗುತ್ತಿದೆ. 25 ವರ್ಷದ ಮಹಿಳೆಗೆ 45ರ ಹರೆಯದ ವ್ಯಕ್ತಿ ಜೊತೆ ‘ಪೆಪ್ಪೆ.. ಪೆ.. ಡುಂ.. ಡುಂ..’ ಎಂದು ಗೇಲಿ ಮಾಡಲಾಗುತ್ತಿವೆ. ಭಾರೀ ವಯಸ್ಸಿನ ಅಂತರದಲ್ಲಿ ಇವರಿಬ್ಬರೂ ಮದುವೆ ಆಗಿದ್ದೇನೋ ನಿಜ. ಆದರೆ ಇವರಿಬ್ಬರ ಮದುವೆ ಹಿಂದೆ ‘ಮನ ಮಿಡಿಯುವ ಕಥೆ’ಯೊಂದು ಅಡಗಿದೆ.
ಹೌದು.. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದಲ್ಲಿ ಇತ್ತೀಚೆಗೆ ಮದುವೆ ಒಂದು ನಡೆದಿತ್ತು. 45 ವರ್ಷದ ಶಂಕರ್ ಎಂಬಾತ, 25 ವರ್ಷದ ಮೇಘನಾ ಎಂಬಾಕೆಯನ್ನ ವರಿಸಿದ್ದಾರೆ. ಇವರಿಬ್ಬರ ಮದುವೆಗೆ ಮನೆಯವರ ವಿರೋಧ ಇರಲಿಲ್ಲ. ಬದಲಾಗಿ ಎರಡೂ ಕುಟುಂಬದಿಂದ ಒಪ್ಪಿಗೆ ಸಿಕ್ಕಿ, ಪ್ರೀತಿಯಿಂದ, ಸಡಗರ, ಸಂಭ್ರಮದಿಂದ ಮದುವೆ ಆಗಿದ್ದಾರೆ.
ಆದರೆ ಸೋಶಿಯಲ್ ಮೀಡಿಯಾಗಳ ಟ್ರೋಲಿಗರು ಮದುಮಕ್ಕಳ ವಯಸ್ಸಿನ ಅಂತರ ಇಟ್ಟುಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಈ ಮದುವೆ ಹಿಂದಿನ ಅಸಲಿ ಕಥೆಯೇ ಬೇರೆ. 45 ವರ್ಷದ ಶಂಕರ್ ಮದುವೆ ಆಗಬೇಕು ಅನ್ನೋದು ತುಂಬಾ ವರ್ಷಗಳ ಕನಸು. ಆದರೆ ಕಂಕಣ ಭಾಗ್ಯ ಇನ್ನೂ ಕೂಡಿ ಬಂದಿರಲಿಲ್ಲ.
ಇನ್ನು, 25 ವರ್ಷದ ಮೇಘನಾರ ಬದುಕಿನಲ್ಲಿ ವಿಧಿ ಚೆಲ್ಲಾಟ ಆಡಿಬಿಟ್ಟಿತ್ತು. ನೂರು ವರ್ಷಗಳ ಕಾಲ ಸತಿ-ಪತಿಯಾಗಿ ಬದುಕಬೇಕು ಅನ್ನೋ ಆಸೆಯಿಂದ ಸಪ್ತಪದಿ ತುಳಿದ ಆಕೆಯ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು. ಕೊನೆಗೂ ಹೊಂದಾಣಿಕೆ ಅಸಾಧ್ಯ ಎಂದು ಗೊತ್ತಾದಾಗ, ಗಂಡ ವಿಚ್ಛೇದನ ನೀಡಿ ಆಕೆಯನ್ನ ಅನಾಥಳನ್ನಾಗಿ ಮಾಡಿಬಿಟ್ಟಿದ್ದ. ಗಂಡನ ಬಿಟ್ಟವಳು ಎಂದು ಸಮಾಜದಲ್ಲಿ ನಿಂದನೆಗೆ ಒಳಗಾಗುತ್ತಿರುವ ವೇಳೆಯಲ್ಲಿ ಎಂಟ್ರಿಯಾಗಿದ್ದೇ ಈ ಶಂಕರ್.
ಹೆಣ್ಣು ಹುಡುಕಿ, ಹುಡುಕಿ ಸುಸ್ತಾಗಿದ್ದ ಶಂಕರ್ ಕಣ್ಣಿಗೆ ಬಿದ್ದಿದ್ದೇ ಈ ಮೇಘನಾ. ಕೊನೆಗೂ ಇವರಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಮದುವೆ ಆಗಲು ನಿರ್ಧರಿಸುತ್ತಾರೆ. ಅದರಂತೆ ಸ್ಥಳೀಯ ದೇವಸ್ಥಾನದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post