ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಾರೀ ಚರ್ಚೆಗೆ ಕಾರಣವಾಗಿರುವ ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಎನ್ನಲಾದ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಸ್ಟಾರ್ ಹೋಟೆಲ್ನಲ್ಲಿ ಶ್ರೀಕೃಷ್ಣನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶ್ರೀಕಿ ಉಳಿದುಕೊಂಡಿದ್ದ ಹೋಟೆಲ್ನಲ್ಲಿ ವಿಷ್ಣು ಭಟ್ ಎಂಬಾತ ಹಲ್ಲೆಗೆ ಯತ್ನ ನಡೆಸಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಈ ವೇಳೆ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾಗ ಆರೋಪಿ ಶ್ರೀಕಿ ಸಿಕ್ಕಿ ಬಿದ್ದಿದ್ದಾನೆ ಎನ್ನಲಾಗಿದೆ.
ಬಿಟ್ ಕಾಯಿನ್ ಕೇಸ್ಗೆ ಸಂಬಂಧಿಸಿದಂತೆ ಆರೋಪಿ ಶ್ರೀಕಿ ಕಳೆದ ಕೆಲವು ದಿನಗಳಿಂದ ಜಾಮೀನಿನ ಮೇಲೆ ಹೊರಗಡೆ ಬಂದಿದ್ದ. ಆ ಬಳಿಕ ಯಾರಿಗೂ ಪತ್ತೆಯಾಗದಂತೆ ತಲೆ ಮರೆಸಿಕೊಂಡಿದ್ದ. ಇದೀಗ ಶ್ರೀಕಿ ಮತ್ತೆ ಪೊಲೀಸ್ ಬಲೆಗೆ ಬಿದ್ದಿದ್ದು ಬಿಟ್ ಕಾಯಿನ್ ಪ್ರಕರಣದಲ್ಲಿ ಸಾಕಷ್ಟು ಕೂತುಹಲ ಮೂಡಿಸಿದೆ.
ಇದನ್ನೂ ಓದಿ:ಬಿಟ್ ಕಾಯಿನ್ ಗದ್ದಲ; ಪ್ರಕರಣ ತಮಿಳುನಾಡಿತ್ತ ಡೈವರ್ಟ್ ಮಾಡಲು ಕೇಂದ್ರ ಪ್ಲಾನ್?
ಹೋಟೆಲ್ ಸಿಬ್ಬಂದಿ ಜೊತೆ ಕಿರಿಕ್..!
ಕಳೆದ ಎರಡೂವರೆ ತಿಂಗಳಿಂದ ಸ್ಟಾರ್ ಹೋಟೆಲ್ನಲ್ಲಿದ್ದ ಶ್ರೀಕಿ ಕಳೆದ ಮೂರು ದಿನಗಳ ಹಿಂದೆ ಜ್ಯೂವೆಲರಿ ಗ್ರೂಪ್ಸ್ ಮಾಲೀಕನ ಮಗ ಸಹ ಆತನ ಜೊತೆಗಿದ್ದ ಎನ್ನಲಾಗಿದೆ. ಈ ವೇಳೆ ಇಂದು ಹೋಟೆಲ್ ಸಿಬ್ಬಂದಿ ಜೊತೆಗೆ ಶ್ರೀಕಿ ಗಲಾಟೆ ಮಾಡಿದ್ದನಂತೆ. ವಿಷ್ಣು ಭಟ್ ಎಂಬಾತ ಆತನ ಮೇಲೆ ಹಲ್ಲೆಗೆ ಯತ್ನಿಸಿದ್ದಾನಂತೆ. ಇದರಿಂದ ಗಲಿಬಿಲಿಗೊಂಡ ಹೋಟೆಲ್ ಸಿಬ್ಬಂದಿ ಜೀವನ್ ಭೀಮಾ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಶ್ರೀಕಿ ಮತ್ತು ವಿಷ್ಣು ಭಟ್ ನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಡ್ರಗ್ ಗುಂಗಲ್ಲಿ ಸಿಕ್ಕಿಬಿದ್ದ ಆರೋಪಿ..?
ತನ್ನ ಗೆಳೆಯನ ಸಹಾಯದಲ್ಲಿ ರೂಮ್ ಬುಕ್ ಮಾಡಿ ಹೊಟೇಲ್ ಸೇರಿದ್ದ ಶ್ರೀಕಿ, ಪೊಲೀಸ್ ಬಲೆಗೆ ಬೀಳಲು ಪ್ರಮುಖ ಕಾರಣ ಡ್ರಗ್ ಸೇವನೆ ಎನ್ನಲಾಗಿದೆ. ಹೌದು, ಮತ್ತಿನಲ್ಲಿದ್ದ ಶ್ರೀಕಿ ಹೊಟೇಲ್ ನಲ್ಲಿ ಗಲಾಟೆ ಮಾಡಿಕೊಂಡ ಪರಿಣಾಮ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನಂತೆ. ಪರಿಶೀಲನೆ ವೇಳೆ ರೂಮ್ನಲ್ಲಿ ಕೆಲ ಮಾದಕವಸ್ತುಗಳು ಪತ್ತೆಯಾಗಿದ್ದು, ಮತ್ತೆ ಶ್ರೀಕಿ ವಿರುದ್ದ NDPS Act ಕೇಸ್ ದಾಖಲಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಈ ಬಾರಿ ಜಾಮೀನು ಸಿಗೋದು ಡೌಟ್..
ಇವರೆಗೂ ಜಾಮೀನಿನ ಮೇಲೆ ಹೊರಗೆ ಬಂದು ತಲೆ ಮರೆಸಿಕೊಂಡಿದ್ದ ಆರೋಪಿಯ ಮೇಲೆ ಈ ಸಲ NDPS Act ಅಡಿ ಕೇಸ್ ದಾಖಲಾಗುವ ಸಾಧ್ಯತೆಗಳಿದ್ದು, ಮತ್ತೆ ಜಾಮೀನು ಸಿಗೋದು ಡೌಟ್ ಎನ್ನಲಾಗಿದೆ. ಇನ್ನು ಡ್ರಗ್ ಪ್ರಕರಣದಲ್ಲಿ ಎರಡನೇ ಬಾರಿ ಸಿಕ್ಕಿಹಾಕಿಕೊಂಡಾಗ NDPS Act ಅಡಿ ಕೇಸ್ ದಾಖಲಿಸಲು ಅವಕಾಶವಿದೆ. ಒಂದು ವೇಳೆ ಆ ಪ್ರಕಾರ ಕೇಸ್ ದಾಖಲಿಸಿದರೆ ಚಾರ್ಜ್ ಶೀಟ್ ಸಲ್ಲಿಸೋ ತನಕ ಬೇಲ್ ಸಾಧ್ಯವಿಲ್ಲ ಎನ್ನಲಾಗಿದೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರೋ ಆರೋಪಿಯನ್ನ ಡಿಸಿಪಿ ಶರಣಪ್ಪ ವಿಚಾರಣೆ ನಡೆಸುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post