ಸಾಗರದಾಚೆಗೆ ಕನ್ನಡ ಕಿಚ್ಚನ್ನ ಹಚ್ಚಿಸಿದ್ದ ಅಪ್ಪು ಕಾಣದಂತೆ ಮಾಯವಾಗಿ ಬಿಟ್ಟಿದ್ದಾರೆ. ಜನರ ಹೃದಯಲ್ಲಿ ಕನ್ನಡದ ಗಿಡವನ್ನ ನೆಟ್ಟ ಯುವರತ್ನ ಎಂದೂ ಬಾರದ ಊರಿಗೆ ಪಯಣಿಸಿ ಬಿಟ್ಟಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ತಮ್ಮದೇ ವಿಭಿನ್ನ ಶೈಲಿಯ ನಟನೆಯ ಮೂಲಕ ಸದ್ದು ಮಾಡಿದ್ದ ಈ ದೊಡ್ಮನೆ ಹುಡುಗನ ಕೀರ್ತಿ, ವಿವಿಧ ಚಿತ್ರರಂಗದ ದಿಗ್ಗಜ ನಿರ್ದೇಶಕರ ಮನೆಗೂ ಸಿಡಿಲಿನಂತೆ ಅಪ್ಪಳಿಸಿತ್ತು. ಕರುನಾಡಿನ ಕಣ್ಮಣಿಯನ್ನ ತಮ್ಮ ಚಿತ್ರರಂಗದಲ್ಲಿ ನಟಿಸುವಂತೆ ಮಾಡ್ಬೇಕೆಂದು ಅದೆಷ್ಟೋ ನಿರ್ದೇಶಕರು ಕನಸು ಕಂಡಿದ್ರು. ಆದ್ರೆ ಅಪ್ಪು ಮಾತ್ರ ಕನ್ನಡ ಬಿಟ್ಟು ಬೇರೆ ಚಿತ್ರರಂಗಕ್ಕೆ ಹೋಗುವ ಮನಸ್ಸು ಮಾಡಲೇ ಇಲ್ಲ.
ಮನದ ಘಾಸಿ ವಾಸಿಯಾಗ್ತಿಲ್ಲ. ಎಷ್ಟೇ ಕಣ್ಣೀರ ಕೋಡಿಯನ್ನ ಹರಿಸಿದ್ರು ದು:ಖ ಕಡಿಮೆಯಾಗ್ತಿಲ್ಲ. ಅತ್ತರು ನೋವು ತೀರುತ್ತಿಲ್ಲ. ಕರುನಾಡಿನ ಹೆಮ್ಮೆಯು ಸುಪುತ್ರನ ಅಗಲುವಿಕೆ ಎಂದೂ ಆರದ, ಎಂದೂ ವಾಸಿಯಾಗದ ಗಾಯವಾಗಿ ಬಿಟ್ಟಿದೆ. ಬುದಕಿನುದ್ದಕ್ಕೂ ಕನ್ನಡವನ್ನೇ ಉಸಿರಾಡಿದ್ದ ಅಪ್ಪು, ಉಸಿರು ನಿಲ್ಲಿಸಿದ್ರು ಕೂಡ, ಕನ್ನಡ ನಾಡು ನೆಲಕ್ಕೆ ಕೊಟ್ಟ ಕೊಡುಗೆ ಇಂದಿಗೂ ಈ ನೆಲದಲ್ಲಿ ಉಸಿರಾಡ್ತಿದೆ. ಅಪ್ಪು ಮಾತು ನಿಲ್ಲಿಸಿದ್ರೂ, ಈ ದೊಡ್ಮನೆಯ ಹುಡುಗ ಕರುನಾಡಲ್ಲಿ ಮಾಡಿದ ಸಮಾಜ ಸೇವೆ ಮಾತ್ನಾಡುತ್ತಿವೆ.
ಈ ವೀರ ಕನ್ನಡಿಗ ಕರುನಾಡಿನ ಮಣ್ಣಿಗೆ ಕೊಟ್ಟ ಕೊಡುಗೆ ಅಪಾರ. ಬರೋಬ್ಬರಿ 46 ಸಿನಿಮಾಗಳ ಮೂಲಕ ಈ ದೊಡ್ಮೆನೆಯ ಹುಡುಗ, ಈ ನೆಲಕ್ಕೆ , ಈ ನಾಡಿಗೆ ಒಂದೊಂದು ಸಂದೇಶವನ್ನ ಕೊಟ್ಟವರು. ಈ ಮೂಲಕ ಕೂಡ ಕನ್ನಡದ ನೆಲದಲ್ಲಿ ಹೊಸ ಮಾರುತವನ್ನೇ ಎಬ್ಬಿಸಿದವರು. ನಾಡು, ನೆಲ ಅಂದ್ರೆ ಈ ಸ್ಯಾಂಡಲ್ವುಡ್ ರಾಜಕುಮಾರ ಹೃದಯ ಮಿಡಿಯುತ್ತಿತ್ತು. ಸಿನಿಮಾ ಮೂಲಕ, ಸಮಾಜ ಸೇವೆಯ ಮೂಲಕ ಅಪ್ಪು ಈ ನೆಲಕ್ಕೆ ತಮ್ಮದೇ ಆದ ಕೊಡುಗೆಯನ್ನ ಕೊಟ್ಟಿದ್ದಾರೆ.
ಇದೇ ಕಾರಣಕ್ಕೆ ಪುನೀತ್ ಅಂದ್ರೆ ಸಾಕು, ಬರೀ ಕರುನಾಡು ಮಾತ್ರವಲ್ಲ.. ಇಡೀ ಭಾರತೀಯ ಚಿತ್ರರಂಗಕ್ಕೆ ಅಚ್ಚುಮೆಚ್ಚು. ಹೌದು..ಭಾರತೀಯ ಚಿತ್ರರಂಗ ಅನ್ನೋ ಮಂದಿರದಲ್ಲಿ ಈ ಪರಮಾತ್ಮನಿಗೆ ಇದ್ದ ತೂಕನೇ ಬೇರೆ. ಚಂದನವನದ ಮನೆಯಲ್ಲಿ ಈ ಯುವರತ್ನ ಮೂಡಿಸಿರುವ ಛಾಪು ಸಾಮಾನ್ಯವಾದುದಲ್ಲ ಬಿಡಿ. ಸಾಗಾರದಾಚೆಗೆ ಅಭಿಮಾನಿಗಳನ್ನ ಹೊಂದಿದ್ದ ಕರುನಾಡಿನ ನಲ್ಮೆಯ ಅಪ್ಪು , ನಿಜಕ್ಕೂ ಯೂತ್ ಐಕಾನ್.
ಇಷ್ಟೆಲ್ಲಾ ಹವಾ ಎಬ್ಬಿಸಿದ್ದ ಕರುನಾಡಿನ ಪರಮಾತ್ಮನಿಗೆ ಸೌತ್ ಇಂಡಿಯಾದ ಪಾಲಿಗೆ ಬಹುಬೇಡಿಕೆಯ ನಟನಾಗಿ ಬಿಟ್ಟಿದ್ದ. ಸೌತ್ ಇಂಡಿಯಾ ಚಿತ್ರಮನೆಯ ಇಡೀ ದಿಗ್ಗಜ ನಿರ್ದೇಶಕರ ಕಣ್ಣು ಕೂಡ ಈ ದೊಡ್ಮನೆಯ ಹುಡುಗನ ಮೇಲೆ ಇತ್ತು. ಅಲ್ಲದೇ ದಿಗ್ಗಜ ನಿರ್ದೇಶಕರೇ, ಪುನೀತ್ ಒಂದೇ ಒಂದು ಕಾಲ್ ಶೀಟ್ಗಾಗಿ ತಿಂಗಳುಗಟ್ಟಲೇ ಕಾಯ್ತಿದ್ರು.
ವಿವಿಧ ಚಿತ್ರರಂಗದ ದಿಗ್ಗಜ ನಿರ್ದೇಶಕರು ನಮ್ಮಲ್ಲಿ ಬಂದು ನಟಿಸುವಂತೆ ಅಪ್ಪು ಮುಂದೆ ಆಹ್ವಾನದ ಸುಧೆಯನ್ನ ಹರಿಸಿದ್ರೂ ಕೂಡ, ಅಪ್ಪು ಮಾತ್ರ ಎಂದಿಗೂ ಕನ್ನಡ ಬಿಟ್ಟು ಬೇರೆ ಅನ್ಯ ಭಾಷೆಯಲ್ಲಿ ಸಿನಿಮಾ ಮಾಡುವ ಮನಸ್ಸು ಮಾಡಲೇ ಇಲ್ಲ.ಪುನೀತ್ ಮಾತ್ರ ನಮ್ಮ ರಾಜ್ಯ, ನಮ್ಮ ಜನ ಎಂದೇ ಪರಭಾಷೆಯಿಂದ ಎಷ್ಟೇ ಆಫರ್ ಬಂದ್ರೂ ಕೂಡ, ಸ್ಯಾಂಡಲ್ವುಡ್ನಲ್ಲೇ ಭದ್ರವಾಗಿ ನೆಲೆವೂರಿದ್ರು. ಅಪ್ಪುಗೆ ಕನ್ನಡದ ಮೇಲಿನ ಪ್ರೀತಿ ಇವತ್ತು ನಿನ್ನೆಯದಲ್ಲ.. ಅದು ಚಿಕ್ಕವಯಸ್ಸಿನಿಂದಲೇ ರಕ್ತಗತವಾಗಿ ಬಂದಿತ್ತು. ಅದ್ಕೇ ಅಪ್ಪು 8 ವರ್ಷ ಇರುವಾಗ ಕೊಟ್ಟ ಇಂಟರ್ವ್ಯೂನೇ ಬೆಸ್ಟ್ ಎಕ್ಸಾಂಪಲ್.
ಫಾರಿನ್ ಹೋಗಿ ಅಲ್ಲೇ ಕನ್ನಡ ಸಿನಿಮಾ ಮಾಡ್ತೀನೆಂದು 8 ವರ್ಷ ಇರುವಾಗ್ಲೆ ಈ ಪರಮಾತ್ಮ ಕನಸು ಕಂಡಿದ್ದ. ಚಿಕ್ಕ ವಯಸ್ಸಿನಲ್ಲಿಯೇ ಚಂದನವನದ ಬಗ್ಗೆ ಕನಸಿನ ಗೋಪುರವನ್ನೇ ನಿರ್ಮಿಸಿದ್ದ ಈ ನಗುವಿನ ಸಾಮ್ರಾಟ, ಸ್ಯಾಂಡಲ್ವುಡ್ನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಕನಸು ಕಂಡಿದ್ರು.
ಅಪ್ಪು ಪರಭಾಷೆಗಳಲ್ಲಿ ಸಿನಿಮಾ ಮಾಡದಿದ್ರೂ ಕೂಡ, ಈ ಯುವರತ್ನನಿಗೆ ದೇಶ ವಿದೇಶಗಳಲ್ಲೂ ಅಭಿಮಾನಿಗಳ ಸಾಮ್ರಾಜ್ಯವನ್ನೇ ಸೃಷ್ಟಿಸಿ ಬಿಟ್ಟಿದ್ದಾರೆ. ವಿದೇಶಗಳಲ್ಲೂ ಅಪ್ಪು ಫ್ಯಾನ್ಸ್ ಪಾಳಯ ಇದೆ. ಅದರಲ್ಲೂ ಈ ವೀರ ಕನ್ನಡಿಗ ಪುನೀತ್ ಜರ್ಮನಿಗೆ ಹೋಗಿದ್ದಾಗ, ಜರ್ಮನಿಯಲ್ಲಿದ್ದ ಅಪ್ಪು ಅಭಿಮಾನಿಯೊಬ್ಬ ಈ ಸ್ಯಾಂಡಲ್ವುಡ್ ಅರಸನ ಜೊತೆ ಕನ್ನಡದಲ್ಲೇ ಮಾತ್ನಾಡಿರುವುದನ್ನ ಗಮನಾರ್ಹ.
ಅಪ್ಪು, ಕನ್ನಡ ಚಿತ್ರರಂಗವನ್ನ ಬರೀ ಚಿತ್ರ ರಂಗವನ್ನಾಗಿ ಮಾತ್ರ ನೋಡಿಲ್ಲ. ಅವರು ಇಡೀ ಚಿತ್ರರಂಗವನ್ನ ತನ್ನ ಮನೆ ಎಂದೇ ಭಾವಿಸಿದ್ರು. ಅವರಿಗೆ ಚಿತ್ರರಂಗವನ್ನ ಕಂಡ್ರೆ ಎಲ್ಲಿಲ್ಲದ ಪ್ರೀತಿ ಇತ್ತು. ಚಿತ್ರಗಂದಲ್ಲಿದ್ದ ಪ್ರತಿಯೊಬ್ಬರನ್ನ ಅಪ್ಪು ನಮ್ಮವರು ಎಂದು ಭಾವಿಸಿದ್ರು.
ಈ ಪರಮಾತ್ಮ, ಯುವ ಕಲಾವಿದರಿಗೆ ಸದಾ ಪ್ರೋತ್ಸಾಹ ನೀಡಿದ್ದ ನಟ. ಈ ಮೂಲಕ ಸ್ಯಾಂಡಲ್ವುಡ್ನ ಮತ್ತಷ್ಟು ಬೆಳವಣಿಗೆಗೆ ಕಾರಣರಾಗಿದ್ರು. ಯುವರತ್ನ ನಟನಾಗಿ ಮಾತ್ರವಲ್ಲ ನಿರ್ಮಾಪಕನಾಗಿಯೂ ಭೇಷ್ ಎನಿಸಿಕೊಂಡಿದ್ರು. ಪಿಆರ್ಕೆ ಎಂಬ ತಮ್ಮದೇ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿರುವ ಪವರ್ಸ್ಟಾರ್, ಈ ಮೂಲಕ ಹೊಸ ನಟ-ನಟಿಯರಿಗೆ ಅವಕಾಶದ ವೇದಿಕೆ ಕಲ್ಪಿಸಿದ್ರು.
ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದಲೇ 2017ರ ಜುಲೈ 20ರಂದು ಪಿಆರ್ಕೆ ಪ್ರೊಡಕ್ಷನ್ನ ಅಪ್ಪು ಸ್ಥಾಪಿಸಿದ್ರು. ಹೊಸ ಪ್ರತಿಭೆಗಳಿಗೆ ಮಣೆ ಹಾಕುವ ಮೂಲಕ ಸ್ಯಾಂಡಲ್ವುಡ್ನಲ್ಲಿ ಈ ದೊಡ್ಮನೆಯ ಹುಡುಗ ಎಲ್ಲರ ಪ್ರೀತಿಗೆ ಪಾತ್ರರಾದವರು. ಈ ಪಿಆರ್ಕೆ ಪ್ರೊಡಕ್ಷನ್ ಅಡಿಯಲ್ಲಿ ಹಲವರು ಸ್ಯಾಂಡಲ್ವುಡ್ಗೆ ಬಂದು, ಅನ್ನ ಕಂಡ್ಕೊಂಡಿದ್ರು.
ಒಟ್ಟಿನಲ್ಲಿ ಈ ಯುವರತ್ನ ತನ್ನ ಬದುಕಿನ ಆಟವನ್ನ ಮುಗಿಸುವ ಮೊದಲೇ ಹಲವು ಜನರ ಬಾಳಿಗೆ ಬೆಳಕಾಗಿದ್ದಾರೆ. ಆದ್ರೆಎಲ್ಲರನ್ನ ಪ್ರೀತಿಸುತ್ತಿದ್ದ ಅಪ್ಪು ಮಾತ್ರ ಎಂದೂ ಬಾರದೂರಿಗೆ ಪಯಣಿಸಿದ್ದು ದೀಪಾವಳಿಯ ನಡುವೆ ಜನರ ಮನದಲ್ಲಿ ಅಂಧಕಾರ ಕತ್ತಲೇ ಆವರಿಸುವಂತೆ ಮಾಡಿದೆ. ಅಂಜನಿಪುತ್ರ ಅಗಲಿದ್ರೂ ಕರುನಾಡಿನ ಹೃದಯದಲ್ಲಿ ಎಂದಿಗೂ ಅಜರಾಮರಾಗಿರಲಿದ್ದಾರೆ. ಉಸಿರು ನಿಲ್ಲಿಸಿ ಎಂಟು ದಿನವಾದ್ರೂ ಕೂಡ, ಅಪ್ಪು ಕಾಣದಂತೆ ಮಾಯವಾಗಿದ್ದಾರೆ ಅನ್ನೋದನ್ನು ಇಂದಿಗೂ ಕೂಡ ಅರಗಿಸಿಕೊಳ್ಳಲಾಗ್ತಿಲ್ಲ ಅನ್ನೋದು ಮಾತ್ರ ಸತ್ಯ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post