ಮಗನಿಗೆ ಪವರ್ ಸ್ಟಾರ್ ಹೆಸರಿಟ್ಟ ದಂಪತಿ
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತವಾಗಿದ್ದಾರೆ. ಅಪ್ಪು ಅಭಿಮಾನಿಗಳು ಒಂದಲ್ಲ ಒಂದು ರೀತಿ ದಿನನಿತ್ಯ ಪುನೀತ್ಗೆ ಗೌರವ ಸಲ್ಲಿಸುತ್ತಿದ್ದಾರೆ. ಈಗ ಕೊಪ್ಪಳದ ಇರಕಲ್ಗಡ ಗ್ರಾಮದ ದಂಪತಿಗಳಾದ ಮಂಜುನಾಥ್ ಗುತ್ತೂರ್, ಮೀನಾಕ್ಷಿ ತಮ್ಮ ಮಗುವಿಗೆ ಜೂನಿಯರ್ ಅಪ್ಪು ಅಂತ ನಾಮಕರಣ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.
‘ಜಮೀರ್ ಅಹ್ಮದ್ ನಮ್ಮ ಹೀರೋ’
ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣ್ದೀಪ್ ಸುರ್ಜೇವಾಲ ಜಮೀರ್ ಅಹ್ಮದ್ ಖಾನ್ ನಮ್ಮ ಹೀರೋ ಅಂತ ಹಾಡಿ ಹೊಗಳಿದ್ರು. ಶಾಸಕ ಜಮೀರ್ ಜೊತೆ ಎಲ್ಲರೂ ಒಗ್ಗೂಡಿ ಕೆಲಸ ಮಾಡ್ತಿದ್ದಾರೆ. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು, ಹಿಂದು, ಮುಸ್ಲಿಂ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಆಗಿದೆ. ಇವರೇ ನಮ್ಮ ಹೀರೋ ಅಂತ ನಗು ನಗುತ್ತಾ ಸುರ್ಜೇವಾಲ ಜಮೀರ್ ಕೈ ಹಿಡಿದ್ರು. ಇನ್ನು ಜಮೀರ್ ಕೂಡ ರಣ್ದೀಪ್ ತಮ್ಮ ಮನೆಯಿಂದ ತೆರಳುವಾಗ ಸಂತಸದಿಂದ ಬೀಳ್ಕೊಟ್ಟಿದ್ದಾರೆ.
‘ನಾವು ಎಲ್ಲಾ ಭಾಷೆಗಳನ್ನೂ ಗೌರವಿಸುತ್ತೇವೆ’
ದಕ್ಷಿಣ ರಾಜ್ಯಗಳ ಕೊಡುಗೆಯನ್ನು ನಿರ್ಲಕ್ಷಿಸಿ ಭಾರತದ ಪ್ರಗತಿಯನ್ನು ಆಲೋಚಿಸಲು ಸಾಧ್ಯವೇ ಇಲ್ಲ ಅಂತ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ದಕ್ಷಿಣ ವಲಯ ಮಂಡಳಿಯ 29ನೇ ಸಭೆಯಲ್ಲಿ ಮಾತನಾಡಿದ ಅವರು ದಕ್ಷಿಣ ಭಾರತದ ರಾಜ್ಯಗಳ ಪ್ರಾಚೀನ ಸಂಸ್ಕೃತಿ, ಪರಂಪರೆ ಮತ್ತು ಭಾಷೆಗಳು ಭಾರತದ ಸಂಸ್ಕೃತಿ ಮತ್ತು ಇತಿಹಾಸದ ಮೌಲ್ಯವನ್ನು ಹೆಚ್ಚಿಸಿವೆ. ಜೊತೆಗೆ ಕೇಂದ್ರ ಸರ್ಕಾರವು ಸ್ಥಳೀಯ ಸಂಸ್ಕೃತಿ ಮತ್ತು ಭಾಷೆಗಳನ್ನು ಗೌರವಿಸುತ್ತೆ. ಈ ಸಭೆಯಲ್ಲಿಯೂ ವಿವಿಧ ರಾಜ್ಯಗಳ ಭಾಷೆಗೆ ಅನುವಾದದ ಸೌಕರ್ಯ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯಗಳ ಪ್ರತಿನಿಧಿಗಳು ಸ್ಥಳೀಯ ಭಾಷೆಗಳಲ್ಲಿಯೇ ಮಾತನಾಡಿದ್ರೆ ನನಗೆ ಹೆಚ್ಚು ಸಂತೋಷವಾಗುತ್ತದೆ ಅಂತ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
‘ನಾವು ಯಾರ ತಂಟೆಗೆ ಹೋಗಲ್ಲ’
ಭಾರತ ಸೇರಿದಂತೆ ಬೇರೆ ಯಾವುದೇ ದೇಶಗಳೊಂದಿಗೆ ನಾವು ಸಂಘರ್ಷವನ್ನ ಮಾಡಲು ಬಯಸೋದಿಲ್ಲ ಅಂತ ತಾಲಿಬಾನ್ ಸರ್ಕಾರದ ಹಾಲಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಹೇಳಿದ್ದಾರೆ. ಮಹಿಳಾ ಪರ್ತಕರ್ತೆಯೊಬ್ಬರು ನಡೆಸಿದ ಮೊದಲ ಸಂದರ್ಶನದಲ್ಲಿ ಭಾಗಿಯಾಗಿದ್ದ ಅಮೀರ್ಬೇರೆ ದೇಶದೊಂದಿಗೆ ಸಂಘರ್ಷ ಮಾಡಿಕೊಂಡರೆ, ಅದು ನೇರವಾಗಿ ನಮ್ಮ ದೇಶದ ಮೇಲೆ ಪರಿಣಾಮ ಬೀರುತ್ತೆ. ಹಾಗಾಗಿ ನಾವು ಯಾವ ದೇಶದೊಂದಿಗೆ ದ್ವೇಷ ಇಟ್ಟುಕೊಳ್ಳಲು ಬಯಸಲ್ಲ ಅಂತ ತಿಳಿಸಿದ್ದಾರೆ.
ಇಂದು ರಾಧೆ ಶ್ಯಾಮ ಚಿತ್ರದ ಸಾಂಗ್ ರಿಲೀಸ್
ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ಅಭಿಮಾನಿಯೊಬ್ಬ, ಇತ್ತೀಚೆಗಷ್ಟೇ ರಾಧೆ ಶ್ಯಾಮ ಚಿತ್ರದ ಅಪ್ಡೇಟ್ಸ್ ಸಿಕ್ತಿಲ್ಲ ಅಂತ ಸೂಸೈಡ್ ನೋಟ್ ಬರೆದು ಸಾವನ್ನಪ್ಪಿದ್ದ. ಈ ಬೆನ್ನಲ್ಲೇ ರಾಧೆ ಶ್ಯಾಮ ಚಿತ್ರದ ನಿರ್ಮಾಪಕ ಸಿನಿಮಾದ ಬಗ್ಗೆ ಹೊಸ ಮಾಹಿತಿ ಹಂಚಿಕೊಂಡಿದ್ದು, ಈ ಸಿನಿಮಾದ ಮೊದಲ ಹಾಡನ್ನ ಇಂದು ಸಂಜೆ 5 ಗಂಟೆಗೆ ರಿಲೀಸ್ ಮಾಡೋದಾಗಿ ಟ್ವೀಟ್ ಮಾಡಿದ್ದಾರೆ. ಸದ್ಯ ಪ್ರಭಾಸ್ ಅಭಿಮಾನಿಯ ಆತ್ಮಹತ್ಯೆ ಪತ್ರಕ್ಕೆ ಹೆದರಿ ಚಿತ್ರ ತಂಡ ಅಪ್ಡೇಟ್ಸ್ ನೀಡಿದೆ ಅಂತ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ರಾಜಕೀಯದಿಂದ ಹಿಂದೆ ಸರಿದ ಕಮಲ್ ಹಾಸನ್
ರಾಜಕೀಯದಲ್ಲಿ ಯಶಸ್ಸು ಸಿಗದ ಕಾರಣ ನಟ, ನಿರ್ಮಾಪಕ ಕಮಲ್ ಹಾಸನ್ ಚಿತ್ರರಂಗಕ್ಕೆ ಮರಳಲು ಸಜ್ಜಾಗಿದ್ದಾರೆ. ಕಮಲ್ ಹಾಸನ್ ಸಾಲು ಸಾಲು ಚಿತ್ರಗಳನ್ನು ನಿರ್ಮಾಣ ಮಾಡಲು ಯೋಜನೆ ಹಾಕಿಕೊಂಡಿದ್ದು, ಮಲ್ಟಿ ಸ್ಟಾರರ್ ಸಿನಿಮಾ ಮಾಡಲು ಭರ್ಜರಿ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ತಮಿಳು ನಟ ವಿಕ್ರಮ್ ಹಾಗೂ ವಿಜಯ್ ಸೇತುಪತಿಗಾಗಿ ಕಥೆ ರೆಡಿ ಮಾಡಿಕೊಂಡಿರುವ ಕಮಲ್, ಚಿತ್ರದ ನಿರ್ಮಾಣವನ್ನೂ ತಮ್ಮ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಮೂಲಕ ಮಾಡಲಿದ್ದಾರೆ ಎಂಬ ಸುದ್ದಿ ಕಾಲಿವುಡ್ನಲ್ಲಿ ಹರಿದಾಡ್ತಿದೆ.
‘ಹಿಂದುತ್ವ ಎನ್ನುವುದು ರಾಜಕೀಯ’
ಸದ್ಯ ಇಡೀ ದೇಶದಲ್ಲಿ ಹಿಂದೂತ್ವದ ಬಗ್ಗೆ ಚರ್ಚೆ ಆಗ್ತಿರುವ ವಿಷಯವಾಗಿ ನಟಿ, ಮಾಜಿ ಸಂಸದೆ ರಮ್ಯಾ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಹಿಂದೂ ಧರ್ಮ ಹಾಗೂ ಹಿಂದುತ್ವ ಬೇರೆ ಬೇರೆ. ಹಿಂದೂ ಧರ್ಮ ಎನ್ನುವುದು ರಾಜಕೀಯವಲ್ಲ. ಆದ್ರೆ ಹಿಂದುತ್ವ ಎನ್ನುವುದು ರಾಜಕೀಯ. ಹಿಂದೂ ಧರ್ಮ ಎಂದರೆ ಎಲ್ಲರ ಒಳಗೊಳ್ಳುವಿಕೆ ಹಾಗೂ ಎಲ್ಲರ ಬಗ್ಗೆಯೂ ಇರುವ ಪ್ರೀತಿ. ಇದಕ್ಕೆ ವಿರುದ್ಧವಾಗಿದ್ದು ಹಿಂದುತ್ವವಿದೆ. ನಿಜವಾದ ಹಿಂದೂಗಳಿಗೆ ಈ ವ್ಯತ್ಯಾಸ ತಿಳಿದಿರಲಿದೆ ಅಂತ ಪೋಸ್ಟ್ ಶೇರ್ ಮಾಡಿದ್ದಾರೆ.
ಈಗ ಹೇಗಿದ್ದಾರೆ ರಾಣಿ 2ನೇ ಎಲಿಜಬೆತ್
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ನ ಕ್ವೀನ್ 2ನೇ ಎಲಿಜಬೆತ್ ನಿನ್ನೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಬೇಕಿತ್ತು. ಆದ್ರೆ ದೀರ್ಘ ಕಾಲದ ಬೆನ್ನು ನೋವಿನ ಕಾರಣ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಅಂತ ಬಕ್ಕಿಂಗ್ಹ್ಯಾಮ್ ಪ್ಯಾಲೇಸ್ ಮಾಹಿತಿ ನೀಡಿದೆ. ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯ ವೈದ್ಯರು ಕ್ವೀನ್ ಎಲಿಜಬೆತ್ಗೆ ವಿಶ್ರಾಂತಿ ಪಡೆಯಲು ಸೂಚಿಸಿದ್ರು. ಕೆಲವು ದಿನಗಳ ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡ ಕಾರಣ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು.
ಬ್ರಿಟನ್ ಹೊಸ ರಾಣಿ ಯಾರು ಗೊತ್ತಾ?

ಬ್ರಿಟನ್ ರಾಣಿ 2ನೇ ಎಲಿಜಬೆತ್ ಆರೋಗ್ಯದಲ್ಲಿ ಪದೇ ಪದೇ ಏರುಪೇರಾಗುತ್ತಿದ್ದು, ಸದ್ಯದಲ್ಲೇ ಬ್ರಿಟನ್ಗೆ ಹೊಸ ರಾಣಿಯ ಪಟ್ಟಾಭಿಷೇಕ ಆಗಲಿದೆ ಎಂಬ ಮಾತು ಕೇಳಿಬಂದಿದೆ. ಸುದೀರ್ಘ 69 ವರ್ಷಗಳ ಕಾಲ ಬ್ರಿಟನ್ ರಾಜಮನೆತನದ ರಾಣಿಯಾಗಿರುವ 2ನೇ ಎಲಿಜಬೆತ್, ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಗೈರಾಗ್ತಾ ಇದ್ದಾರೆ. ಹಾಗಾಗಿ ಹಿರಿಯ ಪುತ್ರ ಮತ್ತು ಉತ್ತರಾಧಿಕಾರಿ ಚಾರ್ಲ್ಸ್ ಪತ್ನಿ ಕ್ಯಾಮಿಲ್ಲಾರೇ ಮುಂದಿನ ರಾಣಿಯಾಗ್ತಾರೆ ಎನ್ನಲಾಗಿದೆ. ಕ್ಯಾಮಿಲ್ಲಾ ಇತ್ತೀಚೆಗೆ ನಡೆದ ಜಿ- 7 ಶೃಂಗಸಭೆ ಹಾಗೂ ವಿಸ್ವಸಂಸ್ಥೆ ಆಯೋಜಿಸಿದ್ದ ಹವಾಮಾನ ಶೃಂಗಸಭೆಗೂ ಹಾಜರಾಗಿದ್ರು. ಹಾಗಾಗಿ ಕ್ಯಾಮಿಲ್ಲಾ ಬ್ರಿಟನ್ನ ರಾಣಿಯಾಗೋದು ಬಹುತೇಕ ಖಚಿತ ಎನ್ನಲಾಗಿದೆ.
T-20 ವಿಶ್ವಕಪ್ ಮುಡಿಗೇರಿಸಿಕೊಂಡ ಅಸ್ಟ್ರೇಲಿಯಾ
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್ ನೀಡಿದ ಟಾರ್ಗೆಟ್ ಬೆನ್ನತ್ತಿದ್ದ ಆಸ್ಟ್ರೇಲಿಯಾ 18.5 ಓವರ್ನಲ್ಲಿ 2 ವಿಕೆಟ್ ನಷ್ಟಕ್ಕೆ 173 ರನ್ ಗಳಿಸುವ ಮೂಲಕ ಆಸೀಸ್ ಆಟಗಾರರು ಗೆದ್ದು ಬೀಗಿದ್ದಾರೆ. ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ಗೆಲ್ಲುವ ಮೂಲಕ ಚೊಚ್ಚಲ ಬಾರಿಗೆ ಟಿ -20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post