ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಳೆಹಾನಿ ಬಗ್ಗೆ ಎಚ್ಚರವಹಿಸುವಂತೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇನ್ನೂ ಎರಡ್ಮೂರು ದಿನಗಳ ಕಾಲ ಮುಂದುವರೆಯುವ ಸಾಧ್ಯತೆಯಿದೆ. ಹೀಗಾಗಿ, ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರುಗಳು ಮಳೆಯ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಜನ, ಜಾನುವಾರಗಳನ್ನು ರಕ್ಷಣೆ ಮಾಡುವ ಕೆಲಸ ಆಗಬೇಕು. ವಿಪತ್ತು ನಿರ್ವಹಣಾ ತಂಡ ಅವಶ್ಯಕತೆಯಿದ್ದ ಸ್ಥಳಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಅವರು ಸೂಚನೆ ನೀಡಿದ್ದಾರೆ.
ಜೊತೆಗೆ ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ ಒಂದು ವೇಳೆ ಪ್ರವಾಸೋದ್ಯಮ ಸ್ಥಳಗಳು ಅಥವಾ ದೇವಾಲಯಗಳು ಇದ್ದರೇ, ಅಲ್ಲಿ ಹೆಚ್ಚಿನ ನಿಗಾವಹಿಸಬೇಕು. ನೀವುಗಳು ಈ ಸಮಯದಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತಿರಬೇಕು. ನಾಳೆ ಮಧ್ಯಾಹ್ನ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ನ ಸಿಇಒಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ಅಧಿಕಾರಿಗಳಿಂದಲೂ ಕೆಲಸ ತೆಗೆಸುವ ಕಾರ್ಯ ಮಾಡೋಣ. ಅದ್ರೆ, ನೀವುಗಳು ಸ್ಥಳದಲ್ಲಿ ಇರಬೇಕು. ಮಳೆ ನಿಂತ ಮೇಲೂ ಎರಡ್ಮೂರು ದಿನಗಳ ಕಾಲ ಪ್ರವಾಹ ಪರಿಸ್ಥಿತಿ ಮುಂದುವರೆಯಬಹುದು. ಯಾವುದೇ ಅವಘಡಗಳು ಸಂಭವಿಸದಂತೆ ನಿಮ್ಮ ನಿಮ್ಮ ಜಿಲ್ಲೆಯ ಮೇಲೆ ನಿಗಾ ವಹಿಸುವಂತೆ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ.
ಹವಾಮಾನ ಇಲಾಖೆ ಮುಂದಿನ 48 ಗಂಟೆಗಳ ಅವಧಿಗೆ ರಾಜ್ಯದ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಬೆಂಗಳೂರಿಗೆ ಆರೆಂಜ್ ಅಲರ್ಟ್ ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕರ್ನಾಟಕ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಾಮರಾಜನರ, ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೆಂಗಳೂರು, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ್, ಕೊಡಗು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ.
ಇದನ್ನೂ ಓದಿ: ರಾಜ್ಯಾದ್ಯಂತ ವರ್ಷಧಾರೆಗೆ ಜನರು ತತ್ತರ.. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post