ಉಡುಪಿ: ಕೃಷ್ಣನೂರು ಉಡುಪಿಯಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ ಮನೆಮಾಡಿದೆ. ಮಧ್ವ ಸರೋವರದಲ್ಲಿ ತೆಪ್ಪೋತ್ಸವ ಅದ್ದೂರಿಯಾಗಿ ನಡೆದ್ರೆ, ಇತ್ತ ಕೃಷ್ಣ ಮಠದ ರಥಬೀದಿ ಸುತ್ತ ಹಣತೆಗಳ ಬೆಳಕು ಗೋಪಾಲನನ್ನು ಕೈ ಬೀಸಿ ಕರೆಯುತ್ತಿತ್ತು. ಮತ್ತೊಂದೆಡೆ ಸಿಡಿ ಮದ್ದುಗಳು, ವಾದ್ಯ ಘೋಷಗಳು ಹಬ್ಬದ ಸಂಭ್ರಮಕ್ಕೆ ಮೆರುಗು ನೀಡಿದ್ವು.
ರಥಬೀದಿಯಲ್ಲಿ ಹಣತೆಗಳ ಸೊಬಗು, ಜಗಮಗಿಸುತ್ತಿರುವ ದೀಪಾಲಂಕಾರ, ಒಂದೆಡೆ ತೇಪ್ಪೊತ್ಸವ, ಇನ್ನೊಂದೆಡೆ ರಥೋತ್ಸವ, ಈ ಬೆಳಕಿನ ಐಸಿರಿಯ ವೈಭವನ್ನು ಕಣ್ತುಂಬಿಕೊಳ್ಳುತ್ತಿರುವ ಗೋಪಾಲನ ಭಕ್ತರು. ಈ ಮನಮೋಹಕ ದೃಶ್ಯಗಳು ಕಂಡುಬಂದಿದ್ದು, ಕೃಷ್ಣನೂರು ಉಡುಪಿಯಲ್ಲಿ.
ಹೌದು. ಪೊಡವಿಗೊಡೆಯ ಉಡುಪಿ ಶ್ರೀಕೃಷ್ಣ ಸದಾ ಉತ್ಸವ ಪ್ರಿಯ.. ಆದ್ರೆ ಕಡಗೋಲಿನ ಕೃಷ್ಣ ಚಾರ್ತುಮಾಸದ ಅವಧಿಯಲ್ಲಿ ಯೋಗ ನಿದ್ರೆಯಲ್ಲಿ ಇರ್ತಾನೆ ಅನ್ನೋದು ಭಕ್ತರ ನಂಬಿಕೆ. ಹೀಗಾಗಿ ಗೋಕುಲ ನಂದನನಿಗೆ ಅಡ್ಡಿಪಡಿಸಬಾರದು ಅಂತ ಮಳೆಗಾಲದಲ್ಲಿ ಯಾವುದೇ ಉತ್ಸವವನ್ನು ಭಕ್ತರು ನಡೆಸೋದಿಲ್ಲ. ಆದ್ರೆ ಚಾರ್ತುಮಾಸ ಮುಗಿದು, ಉತ್ತಾನ ದ್ವಾದಶಿ ಬರ್ತಿದ್ದಂತೆ ಮುರಾರಿಯ ಭಕ್ತರು ಲಕ್ಷದೀಪಗಳನ್ನು ಬೆಳಗುವ ಮೂಲಕ ತಮ್ಮಷ್ಟಿದ ದೇವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ತಾರೆ.
ಇನ್ನೂ ಸೂರ್ಯಾಸ್ತಮಾನವಾಗುತ್ತಿದ್ದಂತೆ, ಮಕ್ಕಳು, ಹಿರಿಯರು ಸೇರಿ ರಥಬೀದಿಯ ಸುತ್ತ ಸಾಲು ಸಾಲು ದೀಪಗಳನ್ನಿರಿಸಿ, ಮಧ್ವ ಸರೋವರದ ಮಧ್ಯೆ ಉತ್ಸವ ಮೂರ್ತಿಯ ತೆಪ್ಪೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಗಿದೆ. ಜೊತೆಗೆ ಶ್ರೀಕೃಷ್ಣಮುಖ್ಯಪ್ರಾಣ, ಶ್ರೀಅನಂತೇಶ್ವರ, ಶ್ರೀಚಂದ್ರಮೌಳೀಶ್ವರ ಉತ್ಸವ ಮೂರ್ತಿಗಳನ್ನು ಸಹ ಉತ್ಸವದಲ್ಲಿ ಮೆರವಣಿಗೆ ಮಾಡಲಾಯ್ತು. ಗರುಡ ರಥ ಹಾಗೂ ಮಹಾಪೂಜಾ ರಥದಲ್ಲಿರಿಸಿ ಸಿಡಿಮದ್ದು, ವಾದ್ಯಘೋಷಗಳೊಂದಿಗೆ ರಥೋತ್ಸವ ನಡೆಸಿ ಗೋಪಾಲನನ್ನು ಸ್ಮರಿಸಿದರು. ಅಷ್ಟ ಮಠದ ಸ್ವಾಮೀಜಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ರು, ಸಾವಿರಾರು ಯಾದವನ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.
ಒಟ್ಟು ನಾಲ್ಕು ದಿನಗಳ ಕಾಲ ದೀಪೋತ್ಸವ ನಡೆಯಲಿದ್ದು, ಧಾರ್ಮಿಕ ವರ್ಷದ ಮೊದಲ ರಥೋತ್ಸವ ಇದಾಗಿದೆ. ಲಕ್ಷದೀಪೋತ್ಸವದಂದು ಆರಂಭಗೊಳ್ಳುವ ರಥೋತ್ಸವ ಮುಂದಿನ ಮಳೆಗಾಲದವರೆಗೂ ಮುಂದುವರೆಯುತ್ತದೆ. ಇಡೀ ನಾಡಿನಲ್ಲಿ ಉಡುಪಿ ಹೊರತುಪಡಿಸಿದಂತೆ ಬೇರೆ ಎಲ್ಲಿಯೂ ಈ ತರದ ರಥೋತ್ಸವ ನಡೆಯುವುದಿಲ್ಲ ಅನ್ನೋದು ಒಂದು ವಿಶೇಷ.
ವಿಶೇಷ ವರದಿ-ದಿನೇಶ್ ಕಾಶಿಪಟ್ಣ, ನ್ಯೂಸ್ ಫಸ್ಟ್, ಉಡುಪಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post