ಪೇಜಾವರ ಶ್ರೀಗಳ ವಿರುದ್ಧದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರ ಹೇಳಿಕೆ ಹುಟ್ಟಿ ಹಾಕಿದ್ದ ವಿವಾದ ಇನ್ನೂ ತಣ್ಣಗಾಗಿಲ್ಲ. ಬದಲಿಗೆ ಹಂಸಲೇಖರ ಹೇಳಿಕೆ ಪರ-ವಿರೋಧ ಚರ್ಚೆಗಳು ಈಗಲೂ ನಡೆಯುತ್ತಲೇ ಇವೆ. ಖುದ್ದು ಹಂಸಲೇಖ ಅವರೇ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದರೂ ಕೆಲವರ ಆಕ್ರೋಶ ಮಾತ್ರ ಕಡಿಮೆ ಆಗಿಲ್ಲ. ಈ ನಡುವೆ ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ವಿಪ್ರ ಯುವ ವೇದಿಕೆ ಹಂಸಲೇಖ ವಿರುದ್ಧ ಪೊಲೀಸ್ ದೂರು ನೀಡಿದೆ. ಈ ಸಂಬಂಧ ವಿಚಾರಣೆಗೆ ಈಗಾಗಲೇ ಒಮ್ಮೆ ಹಂಸಲೇಖ ಅವರಿಗೆ ನೋಟಿಸ್ ನೀಡಲಾಗಿತ್ತು. ಈಗ ಎರಡನೇ ಬಾರಿ ವಿಚಾರಣೆಗೆ ಹಾಜರಾಗುವಂತೆ ಹಂಸಲೇಖ ಅವರಿಗೆ ಬಸವನಗುಡಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಹಂಸಲೇಖ ಅವರು ಪೇಜಾವರ ಶ್ರೀಗಳ ವಿರುದ್ಧ ನೀಡಿದ ಹೇಳಿಕೆ ತಪ್ಪು. ಹೀಗಾಗಿ ಹಂಸಲೇಖ ನಾಲ್ಕು ಗೋಡೆ ಮಧ್ಯೆ ಕ್ಷಮೆ ಕೇಳುವುದಲ್ಲ, ಬದಲಿಗೆ ಎಲ್ಲರ ಮುಂದೆಯೂ ಕ್ಷಮೆ ಕೇಳಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಕೃಷ್ಣ ಎಚ್ಚರಿಕೆ ನೀಡಿದ್ದರು.
ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹಂಸಲೇಖ ಅವರು ಪೇಜಾವರ ಶ್ರೀಗಳ ಕುರಿತು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ತಾವು ನೀಡಿದ ಹೇಳಿಕೆ ವೈರಲ್ ಆಗುತ್ತಿದ್ದಂತೆಯೇ ಹಂಸಲೇಖ ಕ್ಷಮೆಯಾಚಿಸಿದ್ದರು.
ಕ್ಷಮೆ ಕೇಳಿದ ವಿಡಿಯೋದಲ್ಲಿ ಏನಿತ್ತು?
‘ಎಲ್ಲಾ ಮಾತುಗಳು ವೇದಿಕೆಗಲ್ಲ. ವೇದಿಕೆಯಲ್ಲಿ ನುಡಿದರೆ ಮುತ್ತಿನಹಾರದಂತಿರಬೇಕು ಎನ್ನುತ್ತಾರೆ. ಆದರೆ, ನನ್ನಿಂದ ತಪ್ಪಾಗಿದೆ. ಅಸ್ಪೃಶ್ಯತೆ ಎಂಬುದು ನಮ್ಮ ದೇಶಕ್ಕೆ ಅಂಟಿದ ಶಾಪ. ಈ ಅನಿಷ್ಠವನ್ನು ತೊಡೆದು ಹಾಕುವುದಕ್ಕೆ ಪೇಜಾವರರಂಥ ಗುರುಹಿರಿಯರು ಅಪಾರ ಪ್ರಯತ್ನ ನಡೆಸುತ್ತಿದ್ದಾರೆ. ಅದರ ಬಗ್ಗೆ ನನಗೆ ಆ ಬಗ್ಗೆ ಅಪಾರ ಗೌರವವಿದೆ ನಾನು ಒಬ್ಬ ಸಂಗೀತಗಾರ. ನಮಗ್ಯಾಕೆ ಟ್ರೋಲು? ಕಂಟ್ರೋಲ್ ಆಗಿರುವುದು ನಮ್ಮ ಕೆಲಸ. ನನಗೆ ಯಾರಿಗೂ ನೋವು ಕೊಡಲು ಇಷ್ಟವಿಲ್ಲ. ನನ್ನ ಸಂಗೀತದಂತೆ ನನ್ನ ಮಾತು, ಬದುಕು ಕೂಡ ಎಲ್ಲರಿಗೂ ಸುಖ ಕೊಡಬೇಕು. ಆದರೆ, ಎಲ್ಲಾ ಅನಿಷ್ಠಗಳನ್ನು ತೊಡೆದು ಹಾಕುವ ದಿಸೆಯಲ್ಲಿ ನನ್ನ ಪಾತ್ರ ಯಾವುದರ ಮೂಲಕ ಇದ್ದರೂ ಅದನ್ನು ಮಾಡಿಯೇ ಮಾಡುತ್ತೇನೆ’ ಎಂದು ಹೇಳಿದ್ದರು.
ಇದನ್ನೂ ಓದಿ: ವಿಚಾರಣೆಗೆ ಬರುವಂತೆ ಹಂಸಲೇಖಗೆ ನೋಟಿಸ್ ಕೊಟ್ಟ ಪೊಲೀಸರು
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post