ನಾವ್ ಇವತ್ ಹೇಳ್ತಾ ಇರೋದು ಯಾವುದೋ ಸಿನಿಮಾ ಕಥೆಯಲ್ಲ, ಮೈ ಜುಮ್ ಎನಿಸುವಂತಹ ರಣರೋಚಕ ಕತೆ.. ದೇಶಕ್ಕಾಗಿ ಹೋರಾಡಿ ಹುತಾತ್ಮನಾದ ವೀರಯೋಧನೊಬ್ಬನ ಪತ್ನಿ ಎದುರಾಳಿಗಳ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಹೊರಟು ನಿಂತಿದ್ದಾಳೆ.. ಆ ಮಹಿಳೆಯ ಧೈರ್ಯದ ಬಗ್ಗೆ ಕೇಳಿದ್ರೆ ಎದ್ದು ಸಲ್ಯೂಟ್ ಹೊಡೀಬೇಕು ಅಂತಾ ಅನಿಸುತ್ತೆ.. ದೇಹದ ಪ್ರತೀ ಕಣಕಣದಲ್ಲೂ ದೇಶಭಿಮಾನವನ್ನೇ ತುಂಬಿಕೊಂಡಿರುವ ಆಕೆ ಸೇನೆಗೆ ಜ್ಯೋತಿಯಾಗಲು ಪ್ರಯಾಣ ಆರಂಭಿಸಿದ್ದಾಳೆ.
ತಾನು ಸೇನೆಗೆ ಸೇರಬೇಕು, ದೇಶಸೇವೆ ಮಾಡಬೇಕು ಅನ್ನೋದು ಆ ಮಹಿಳೆಯ ಕನಸಾಗಿರುತ್ತೆ. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನೂ ಅವಳು ಮಾಡಿಕೊಂಡಿರ್ತಾಳೆ.. ಆದ್ರೆ, ಹೆಣ್ಣು ಅನ್ನೋ ಒಂದೇ ಒಂದು ಕಾರಣದಿಂದ ಸಮಾಜದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಬೇಕಾಗುತ್ತೆ. ಹಗಲು ರಾತ್ರಿ ಕಣ್ಣೀರು ಹಾಕುವ ಪ್ರಸಂಗಗಳು ಎದುರಾಗಿಬಿಡುತ್ತವೆ. ಆದ್ರೆ, ಅದೆಲ್ಲವನ್ನು ಮೆಟ್ಟಿ ನಿಂತು ಅವಳು ಒಂದು ದಿನ ಆಕೆ ಸೇನೆ ಸೇರಿಯೇ ಬಿಡ್ತಾಳೆ.. ಮಹಿಳಾ ಕಮಾಂಡರ್ ಆಗಿ ಸಮಾಜಘಾತುಕ ಶಕ್ತಿಗಳ ಮೈನಡುಗಿಸುತ್ತಾಳೆ….ಇದು ‘ಸ್ಟೋರಿ ಆಫ್ ಎ ವುಮೆನ್ ಕಮಾಂಡೋ’ ವೆಬ್ ಸಿರೀಸ್‌ನಲ್ಲಿ ಒಂದು ಹೆಣ್ಣಿನ ದಿಟ್ಟತನ ಹಾಗೂ ಶೌರ್ಯವನ್ನು ಹೆಣೆಯಲಾಗಿರುವ ರೀತಿ. ಅದೇ ರೀತಿ, ನಮ್ಮ ದೇಶದ ಸೈನಿಕರ ತಾಕತ್ತನ್ನು ಜಗತ್ತಿಗೆ ಸಾರಿದ ಸಿನಿಮಾ ಅಂದ್ರೆ ಉರಿ ದಿ ಸರ್ಜಿಕಲ್ ಸ್ಟ್ರೈಕ್.
ಭಾರತೀಯ ಸೈನ್ಯದ ತಾಕತ್ತು ಏನು ಅಂತ ಜಗತ್ತಿಗೆ ಗೊತ್ತಾಗುವಂತೆ ಮಾಡಿದ್ದು ಉರಿ ಚಿತ್ರ. ಈ ಚಿತ್ರವನ್ನು ಯಾರು ನೋಡಿರಲ್ಲ ಹೇಳಿ? ರಿಯಲ್ ಸ್ಟೋರಿ ಆಗಿರೋದ್ರಿಂದ ಉರಿ ಸಿನಿಮಾ ನಮ್ಮ ಹೆಮ್ಮೆಯ ಸಂಕೇತ ಅಂದ್ರೂ ತಪ್ಪಾಗಲ್ಲ. ಈ ಸಿನಿಮಾದಲ್ಲಿ ವೀರಮರಣ ಹೊಂದಿದ ಸೇನಾಧಿಕಾರಿಯ ಪತ್ನಿ ಭಾರತೀಯ ಸೇನೆ ಸೇರಿ ಫೈಟರ್ ಜೆಟ್ ಪೈಲೆಟ್ ಆಗಿ ಸೇವೆ ಸಲ್ಲಿಸುತ್ತಾಳೆ. ಕೊನೆಗೆ ತನ್ನ ಗಂಡನ ಕೊಂದವರ ಮೇಲೆ ಪ್ರತೀಕಾರ ತೀರಿಸಿಕೊಳ್ತಾಳೆ.. ಇಂತಹ ಒಂದು ಮತ್ತೊಂದು ಕಥೆಗೆ ಸಾಕ್ಷಿಯಾಗಿದೆ, ತಮಿಳುನಾಡಿನ ಚೆನ್ನೈ
ನಾವು ಹೇಳ್ತಾ ಇರೋದು ಇದೇ ವೀರಮಹಿಳೆಯ ಬಗ್ಗೆ, ಭಾರತೀಯ ಸೇನೆಯನ್ನು ಸೇರಿರುವ ಇವಳ ಹೆಸರು ಜ್ಯೋತಿ ನೈನ್ವಾಲ್. ದೇಶಸೇವೆಗಾಗಿ ಜೀವವನ್ನ ಮುಡಿಪಾಗಿಟ್ಟಿರುವ, ಜ್ಯೋತಿ ಇನ್ಮುಂದೆ ಇಂಡಿಯನ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಶ್ರೇಣಿಯ ಅಧಿಕಾರಿ.. ಅಂದಹಾಗೇ, ಎರಡು ಮಕ್ಕಳ ತಾಯಿಯಾಗಿರುವ ಜ್ಯೋತಿಗೆ ಈಗ ಭಾರತೀಯ ಸೇನೆ ಸೇರುವ ಅವಶ್ಯಕತೆಯಾದರೂ ಏನಿತ್ತು ? ಈ ವಯಸ್ಸಿನಲ್ಲಿ ಈ ರಿಸ್ಕ್ ಬೇಕಾಗಿತ್ತಾ ಅಂತಾ ನೀವು ಕೇಳಬಹುದು… ಈಕೆ ಭಾರತೀಯ ಸೇನೆ ಸೇರಲು ಕಾರಣವೇನು ಅನ್ನೋದನ್ನ ಕೇಳಿದ್ರೆ, ಮೈ ಜುಮ್ ಎನಿಸಿಬಿಡುತ್ತೆ.. ಇನ್ನೊಂದೆಡೆ ದೇಶಾಭಿಮಾನ ಉಕ್ಕಿ ಬರುತ್ತೆ.
ಭಾರತೀಯ ಸೇನೆಯಲ್ಲಿ ಮೇಜರ್ ದೀಪಕ್ ನೈನ್ವಾಲ್ ಹೆಸರು ಅಜರಾಮರ. ಉತ್ತರಖಂಡದವರಾದ ಇವರಿಗೆ ಪತ್ನಿ, ಇಬ್ಬರು ಮಕ್ಕಳಿದ್ರು.. ಒಂದು ದಿನ ಕಾಶ್ಮೀರದ ಕುಲ್ಗಾಮ್‌ನಲ್ಲಿ ಉಗ್ರರು ಅಡಗಿರೋ ಮಾಹಿತಿ ಭಾರತೀಯ ಸೈನಿಕರಿಗೆ ಸಿಗುತ್ತೆ. ತಕ್ಷಣ ಸೇನೆಯ ಮೇಜರ್ ದೀಪಕ್ ನೈನ್ವಾಲ್ ನೇತೃತ್ವದಲ್ಲಿ ಕಾರ್ಯಾಚಣೆ ಆರಂಭವಾಗುತ್ತೆ. ಅಡಗಿ ಕುಳಿತ ಉಗ್ರರು ಸೇನೆಯ ಮೇಲೆ ಪ್ರತಿದಾಳಿ ನಡೆಸ್ತಾರೆ. ಎರಡೂ ಕಡೆಯಿಂದ ಗುಂಡಿನ ಕಾಳಗ ತೀವ್ರವಾಗಿರುತ್ತೆ. ಈ ವೇಳೆ ದೀಪಕ್ ಗಾಯಗೊಳ್ಳುತ್ತಾರೆ. ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ 20 ಮೇ 2018 ರಂದು ಹುತಾತ್ಮರಾಗ್ತಾರೆ.
ಪಾರ್ಥಿವ ಶರೀರ ನೋಡಿ ಕಣ್ಣೀರು ಹಾಕಿದ್ದ ಪತ್ನಿ
ಕರುಳು ಹಿಂಡಿತ್ತು ಯೋಧನ ಮಗಳು ಕೈಮುಗಿದ ದೃಶ್ಯ
ಉಗ್ರರ ಸದೆಬಡಿಯುವಾಗ ನಡೆದ ಗುಂಡಿನ ಚಕಮಕಿಯಲ್ಲಿ ಮೇಜರ್ ದೀಪಕ್ ನೈನ್ವಾಲ್ ತೀವ್ರಗಾಯಗೊಂಡಿರೋದು ಪತ್ನಿ ಜ್ಯೋತಿ ನೈನ್ವಾಲ್ ಮತ್ತು ಮಕ್ಕಳಲ್ಲಿ ಆಘಾತ ಮೂಡಿಸಿತ್ತು. ಆದ್ರೆ, ಚೇತರಿಸಿಕೊಂಡು ಮನೆಗೆ ವಾಪಸ್ ಬರ್ತಾರೆ ಅನ್ನೋ ಭರವಸೆಯಲ್ಲಿ ಕುಟುಂಬ ಇತ್ತು. ದುರಾದೃಷ್ಯವಶಾತ್ ಹಾಗಾಗಲೇ ಇಲ್ಲ. ಮನೆಮುಂದೆ ರಾಷ್ಟ್ರಧ್ವಜ ಹೊದ್ದು ಮಲಗಿದ್ದ ಗಂಡನ ಪಾರ್ಥಿವ ಶರೀರ ಬಂತು. ಅದನ್ನು ನೋಡಿದ ಪತ್ನಿ ಮಕ್ಕಳು, ಕುಟುಂಬ ಬಿಕ್ಕಿ ಬಿಕ್ಕಿ ಅತ್ತಿದ್ರು. ಯೋಧನ ಚಿಕ್ಕ ಮಗಳು ಪಾರ್ಥಿವ ಶರೀರದ ಮುಂದೆ ಕೈ ಮುಗಿದು ನಿಂತ ದೃಶ್ಯ ಮನಕಲಕುವಂತಿತ್ತು. ಅಂತಹ ಸಂದರ್ಭದಲ್ಲಿ ದೀಪಕ್ ನೈನ್ವಾಲ್ ಪತ್ನಿ ಜ್ಯೋತಿ ನೈನ್ವಾಲ್ ಒಂದು ಪ್ರತಿಜ್ಞೆ ಮಾಡಿದ್ಲು.
‘ಜ್ಯೋತಿ’ ಪ್ರತಿಜ್ಞೆ!
ಪತಿಯ ಪಾರ್ಥಿವ ಶರೀರದ ಮುಂದೆಯೇ ಪತ್ನಿ ಪ್ರತಿಜ್ಞೆ
ತನ್ನ ಪತಿಯಂತೆ ತಾನೂ ಭಾರತೀಯ ಸೇನೆ ಸೇರುತ್ತೇನೆ
ಶತ್ರುಗಳ, ಭಯೋತ್ಪಾದಕರ ವಿರುದ್ಧ ಹೋರಾಡುತ್ತೇನೆ
ದೇಶಪ್ರೇಮ ಉಕ್ಕಿಸಿದ ಯೋಧನ ಪತ್ನಿ ಜ್ಯೋತಿ ಶಪಥ
ಪತಿಯ ಪಾರ್ಥಿವ ಶರೀರದ ಎದುರು, ಕಣ್ಣೀರು ಹಾಕುತ್ತಾ ಒಂದು ಪ್ರತಿಜ್ಞೆ ಮಾಡಿದ್ದಳು.. ತನ್ನ ಪತಿಯಂತೆ ತಾನು ಭಾರತೀಯ ಸೇನೆ ಸೇರ್ತೀನಿ. ಶತ್ರುಗಳ, ಭಯೋತ್ಪಾದಕರ ವಿರುದ್ಧ ಹೋರಾಡ್ತೀನಿ ಅಂತಾ ಸಂಕಲ್ಪ ಮಾಡ್ತಾಲೆ. ಅಂದು ಜ್ಯೋತಿ ಮಾಡಿದ್ದ ಪ್ರತಿಜ್ಞೆ ದೇಶದ ಜನರಲ್ಲಿ ರಾಷ್ಟ್ರಭಕ್ತಿ ಉಕ್ಕುವಂತೆ ಮಾಡಿತ್ತು
ರಣಹೇಡಿಗಳ ಗುಂಡಿಗೆ ಎದೆಯೊಡ್ಡಿ ಜೀವಬಿಟ್ಟ ವೀರಯೋಧನ ಪತ್ನಿಯ ಕಣ್ಣೀರು ಕಂಡು ಅಂದು ಇಡೀ ದೇಶವೇ ಮೊಮ್ಮಲ ಮರುಗಿತ್ತು. ಆದ್ರೆ, ಪತಿಯನ್ನು ಕಳೆದುಕೊಂಡ ದುಃಖದಲ್ಲೂ ಆಕೆ ತೋರಿದ ಧೈರ್ಯ, ಶೌರ್ಯ ನಿಬ್ಬೆರಗಾಗಿಸಿತ್ತು. ಆದ್ರೆ, ಆದು ಕೇವಲ ಪ್ರತಿಜ್ಞೆಯಾಗಿ ಉಳಿಯಲಿಲ್ಲ. ಆ ಶಪಥವನ್ನು ನಿಜಮಾಡಿ ಸಾಧನೆಗೈದ ಕೀರ್ತಿ ಜ್ಯೋತಿ ಅವರಿಗೆ ಸಲ್ಲುತ್ತಿದೆ.
ಚೆನ್ನೈ ಆರ್ಮಿ ಆಫೀಸರ್ಸ್ ಅಕಾಡೆಮಿಯಲ್ಲಿ ತರಬೇತಿ
11 ತಿಂಗಳ ಟ್ರೈನಿಂಗ್ ಪೂರ್ಣಗೊಳಿಸಿ ಸೇನೆ ಸೇರ್ಪಡೆ
ಅಂದು ಮೇಜರ್ ದೀಪಕ್ ನೈನ್ವಾಲ್ ಪಾರ್ಥಿವ ಶರೀರದ ಮುಂದೆ ಜ್ಯೋತಿ ಪ್ರತಿಜ್ಞೆ ಮಾಡುವಾಗ ಆಕೆಯ ಕಣ್ಣಲ್ಲಿ ನೀರಿನ ಜೊತೆ ಪ್ರಕಾಶಮಾನತೆ ಇತ್ತು. ಗಟ್ಟಿಗುಂಡಿಗೆಯ ಗಟ್ಟಿಗಿತ್ತಿಯ ಧೈರ್ಯ, ಶೌರ್ಯ ಕಂಡು ಮುಂದೆ ಈಕೆ ಏನಾದ್ರೂ ಮಾಡೇ ಮಾಡ್ತಾಳೆ ಅಂತಾ ಅಂದುಕೊಂಡಿದ್ದರು ಹಲವು ಸೈನಿಕರು.. ತನ್ನ ಇಬ್ಬರ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಆಕೆಯ ಮೇಲಿತ್ತು. ಆದ್ರೆ, ತಾನು ಪತಿಗೆ ಕೊಟ್ಟ ಮಾತನ್ನ ಮರೆಯಲಿಲ್ಲ. ಇದರ ಆರಂಭಿಕ ಹಂತವಾಗಿ ಜ್ಯೋತಿ ಚೆನ್ನೈಗೆ ಪ್ರಯಾಣ ಮಾಡ್ತಾರೆ. ಅಲ್ಲಿರೋ ಆರ್ಮಿ ಆಫೀಸರ್ಸ್ ತರಬೇತಿ ಅಕಾಡೆಮಿಯಲ್ಲಿ 11 ತಿಂಗಳ ಕಾಲ ಟ್ರೇನಿಂಗ್ ಪಡೀತಾರೆ. ಕಠಿಣ ತರಬೇತಿಯನ್ನು ಯಶಸ್ವಿಗೊಳಿಸಿದ ಬಳಿಕ ಆಕೆ ಇದೀಗ ಭಾರತೀಯ ಸೇನೆಯ ಲೆಫ್ಟೆನೆಂಟ್ ಶ್ರೇಣಿ ಅಧಿಕಾರಿಯಾಗಿದ್ದಾರೆ
ಸೇನಾ ವಸ್ತ್ರತೊಟ್ಟು ಸಂಭ್ರಮಿಸಿದ ಮಕ್ಕಳು
ತನ್ನ ಮಕ್ಕಳೂ ದೇಶಕ್ಕೆ ಮುಡಿಪು ಎಂದ ಜ್ಯೋತಿ!
2018 ರಲ್ಲಿ ಮೇಜರ್ ದೀಪರ್ ನೈನ್ವಾಲ್ ಅವರನ್ನು ಕಳೆದುಕೊಂಡು ಕಣ್ಣೀರು ಹಾಕಿದ ಜ್ಯೋತಿ ಇಂದು ಅಂದುಕೊಂಡಿದ್ದನ್ನು ಸಾಧಿಸಿದ್ದಾಳೆ. ಇದೀಗ ಚೆನ್ನೈಯಲ್ಲಿ ಅಧಿಕೃತವಾಗಿ ಭಾರತೀಯ ಸೇನೆಯನ್ನು ಸೇರ್ಪಡೆಯಾಗಿದ್ದಾಳೆ. ಇದೇ ಸಂದರ್ಭದಲ್ಲಿ ಮತ್ತೊಂದು ರೀತಿಯ ಸಂಭ್ರಮವೂ ಇತ್ತು. ಅಂದು ತಂದೆಯ ಪಾರ್ಥಿವ ಶರೀರದ ಮುಂದೆ ಕೈಮುಗಿದು ಕಣ್ಣೀರು ಹಾಕಿದ ಪುತ್ರಿ ಕೂಡ ಸೇನೆ ಡ್ರೆಸ್ ತೊಟ್ಟಿದ್ಲು. ಜ್ಯೊತಿಯ ಚಿಕ್ಕ ಮಗ ಕೂಡ ಆರ್ಮಿಯ ಯೂನಿಫಾರ್ಮ್ ಹಾಕಿ ಸಡಗರದಿಂದ ಓಡಾಡಿದ್ದಾನೆ.. ಆ ಕ್ಷಣವೇ ಪ್ರತಿಕ್ರಿಯೆ ನೀಡಿದ ಜ್ಯೋತಿ ತನ್ನ ಮಕ್ಕಳು ಕೂಡ ದೇಶಸೇವೆಗೆ ಮುಡಿಪು ಅಂತ ದೇಶಾಭಿಮಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ, ಪತಿಯಿಲ್ಲದ ನೋವಿನಲ್ಲೂ ದೇಶ ಸೇವೆಗೆ ಟೊಂಕ ಕಟ್ಟಿರುವ ಈಕೆಯ ಧೈರ್ಯವನ್ನ ಮೆಚ್ಚಲೇಬೇಕು.. ಮುಂದೆ ಜಗತ್ತೇ ಕೊಂಡಾಡುವಂತಹ ಸಾಹಸಗಳನ್ನ ಜ್ಯೋತಿ ಮಾಡ್ಲಿ ಅನ್ನೋದೇ ಎಲ್ಲರ ಆಶಯ
ವೀರಮರಣ ಹೊಂದಿದ ಪತಿಯನ್ನ ನೆನೆದು ಜ್ಯೋತಿ ದುಃಖಿಸುತ್ತ ಕೂಳಿತುಕೊಳ್ಳಲಿಲ್ಲ. ಬದಲಾಗಿ ತನ್ನ ಗಂಡನನ್ನ ಕಿತ್ತುಕೊಂಡವರ ಪಾಲಿಗೆ ಭದ್ರಕಾಳಿಯಾಗಲು ಹೊರಟು ನಿಂತಳು. ಉಗ್ರರ ವಿರುದ್ಧ, ಶತ್ರುಗಳ ವಿರುದ್ಧ ಹೋರಾಡಬೇಕು, ದೇಶಕ್ಕೆ ಕೈಲಾದ ಸೇವೆ ಮಾಡಬೇಕು, ತನ್ನ ಜೀವವೇ ದೇಶ ಸೇವೆಗೆ ಮುಡಿಪು ಅಂತ ಸೇನೆ ಸೇರಿದವಳು . ಅಂತಹ ಗಟ್ಟಿಗಿತ್ತಿಗೆ ಹ್ಯಾಟ್ಸ್ಹಾಫ್ ಹೇಳಲೇಬೇಕಲ್ವಾ?
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post