ಮಡಿಕೇರಿ: ಈ ಜಲಪಾತವನ್ನ ನೋಡಿದ್ರೆ ಬಾಯಲ್ಲಿ ಬರೋದು ಒಂದೇ ಉದ್ಘಾರ.. ಅಬ್ಬಬ್ಬಾ ಅಬ್ಬಿ.. ಜಿಟಿಪಿಟಿ ಮಳೆಯ ಮಧ್ಯೆಯೂ ಪ್ರವಾಸಿಗರು ಹರಿದು ಬರ್ತಾರೆ. ಅಬ್ಬಿಯ ಸೊಬಗನ್ನ ಕಣ್ತುಂಬಿಸಿಕೊಳ್ತಾರೆ.. ಮಳೆಗಾಲ ಕಳೆದರೂ ಕೊಡಗಿನ ಪ್ರಸಿದ್ಧ ಅಬ್ಬಿ ಜಲಪಾತದ ವೈಭವ ಹೇಗಿದೆ ಗೊತ್ತಾ?
ದಕ್ಷಿಣ ಭಾರತದ ಕಾಶ್ಮೀರ ಅಂದ್ರೆ ಏನೋ ಒಂದು ಖುಷಿ.. ಪರಿಸರದ ಮಡಿಲಲ್ಲಿ ಹಚ್ಚ ಹಸಿರಿನ ಹಾಸಿಗೆ ಹೊದ್ದಿರೋ ಕೊಡಗು, ಪ್ರವಾಸಿಗರನ್ನ ಕೈಬಿಸಿ ಕರೆಯುತ್ತಿದೆ.. ಸಣ್ಣಗೆ ಹರಿಯುವ ಜರಿಗಳು, ಅಬ್ಬರಿಸುವ ಜಲಪಾತಗಳು.. ಕಾಫಿ ತೋಟದ ಘಮಲು.. ಜೊತೆಗೆ ಮಡಿಕೇರಿಯ ಮಂಜಿನ ಸೊಬಗು.. ಆಹಾ! ಮನಸ್ಸು ಮಂಜಿನಲ್ಲೇ ಮುಳುಗಿ ಹೋಗುತ್ತೆ.
ಇದು ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣ ಅಬ್ಬಿ ಜಲಪಾತ.. ಮಡಿಕೇರಿ ನಗರದಿಂದ ಕೇವಲ 8 ಕಿಲೋ ಮೀಟರ್ ದೂರದಲ್ಲಿರುವ ಈ ಅಬ್ಬಿ, ಕಾಫಿ ತೋಟದ ಮಧ್ಯೆ 10 ನಿಮಿಷಗಳ ಕಾಲ ಹೆಜ್ಜೆ ಹಾಕಿದ್ರೆ ಸಿಗುತ್ತೆ.. ನವೆಂಬರ್ ಡಿಸೆಂಬರ್ನಲ್ಲಿ ಅಬ್ಬಿಯಲ್ಲಿ ಹೆಚ್ಚಿನ ನೀರು ಇರೋದಿಲ್ಲ.. ಆದ್ರೆ ಇದೀಗ ನವೆಂಬರ್ನಲ್ಲಿಯೂ ಮಳೆಯಾಗ್ತಾ ಇರೋದು ಜಲಪಾತದಲ್ಲಿ ನೀರುಕ್ಕಿ ಹಾಲ್ನೊರೆಯಂತೆ ಹರಿಯುತ್ತಿದೆ.. ಜಲಪಾತದ ಸೊಬಗನ್ನ ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರ್ತಿದೆ.
ಅಂದಹಾಗೇ ಹೇಳಿ ಕೇಳಿ ಕಳೆದ ಹಲವು ದಿನಗಳಿಂದ ಕಾಫಿ ಕಣಿವೆಯಲ್ಲಿ ಮುಂಗಾರು ಆರ್ಭಟ ಜೋರಾಗಿದೆ.. ನದಿ ತೊರೆಗಳು ಮೈದುಂಬಿ ಹರಿಯುತ್ತಿವೆ..ಇನ್ನು, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಈ ರುದ್ರ ರಮಣೀಯ ಜಲಪಾತ, ಅದರಿಂದ ಚಿಮ್ಮುವ ಮಂಜಿನ ಹನಿ, ಚಿಟಿಪಿಟಿ ಮಳೆ ಸ್ವರ್ಗದ ಸುಖವನ್ನೇ ಉಣಬಡಿಸ್ತಿದೆ.. ಈ ಸುಂದರ ಜಲಪಾತದ ಎದುರು ನಿಂತಾಗ ಜಲಪಾತದಿಂದ ಮೇಲೇಳುವ ಆ ಮಂಜಿನ ಹನಿಯ ಸಿಂಚನದ ಅನುಭವವನ್ನ ಜನ ಮನಸಾರೆ ಆಸ್ವಾದಿಸುತ್ತಿದ್ದಾರೆ.. ಬನ್ನಿ.. ನೀವೂ ಒಂದು ಬಾರಿ ಅಬ್ಬಿ ಜಲಪಾತದ ರಮಣೀಯ ದೃಶ್ಯಗಳನ್ನ ಅನುಭವಿಸಿ ಆನಂದಿಸಿ.
ವಿಶೇಷ ವರದಿ: ಯುಗ ದೇವಯ್ಯ, ನ್ಯೂಸ್ ಫಸ್ಟ್, ಕೊಡಗು
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post