ಬೆಂಗಳೂರು: ಕೇಸರಿ ಪಾಳಯದಲ್ಲಿ ಮತ್ತೆ ನಾಯಕತ್ವದ ಚರ್ಚೆ ಮುನ್ನೆಲೆಗೆ ಬಂದಿದೆ. ನಿರಾಣಿ ಹೊಗಳೋ ಭರದಲ್ಲಿ ಈಶ್ವರಪ್ಪ ಆಡಿದ್ದ ಮುಂದಿನ ಸಿಎಂ ಮಾತು ಅವರನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬದಲಾಗ್ತಾರಾ ಎಂಬ ಮಾತುಗಳು ಚರ್ಚೆ ಹುಟ್ಟುಹಾಕಿದೆ.
ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾಗುತ್ತಾರಾ?
ಈಶ್ವರಪ್ಪ ಹೇಳಿಕೆಯಿಂದ ಬಿಸಿ ಬಿಸಿ ‘ಕೇಸರಿ’ ಚರ್ಚೆ
ಪರಿಷತ್ ಅಖಾಡದಲ್ಲಿ ಅಬ್ಬರಿಸಿ ಮಾತನಾಡ್ತಿದ್ದ ಸಚಿವ ಈಶ್ವರಪ್ಪ, ಗೊತ್ತಿದ್ದೋ ಗೊತ್ತಿಲ್ಲದೆಯೋ ಮತ್ತೆ ನಾಯಕತ್ವ ಬದಲಾವಣೆಯ ಸುಳಿವು ನೀಡಿದ್ದರು.. ಈ ಮೂಲಕ ಸರ್ಕಾರ ಸೇರಿ ತಾವು ಕೂಡಾ ಪೇಚಿಗೆ ಸಿಲುಕಿದ್ರು.. ಈ ಅವಧಿಯಲ್ಲಿ ಏನಾದ್ರೂ ನಾಯಕತ್ವ ಬದಲಾವಣೆ ಆಗುತ್ತಾ ಅನ್ನೋ ಚರ್ಚೆಗೆ ನಾಂದಿ ಹಾಡಿದ್ರು.
ನಾಯಕತ್ವ ಬದಲಾವಣೆ ಸುಳಿವು?
ಮುಂದಿನ ದಿನಗಳಲ್ಲಿ ಸಚಿವ ನಿರಾಣಿ ಸಿಎಂ ಆಗ್ತಾರೆ. ನಿರಾಣಿ ಯಾವ ಸಂದರ್ಭದಲ್ಲಿ ಸಿಎಂ ಆಗ್ತಾರೆ ಗೊತ್ತಿಲ್ಲ. ಆದ್ರೆ, ಅವರಿಗೆ ಶಕ್ತಿ ಇದೆ. ಇವತ್ತಲ್ಲ ನಾಳೆ ಸಿಎಂ ಆಗ್ತಾರೆ. ರಾಜ್ಯದ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡುವ ಕೆಲಸ ಮಾಡ್ತಾರೆ ಅಂತ ಈಶ್ವರಪ್ಪ ಹೇಳಿದ್ರು. ಈ ಮಾತಿಗೆ ಆಗಲೀ ಎಂದು ನಿರಾಣಿ ಕೈಸನ್ನೆ ಮಾಡಿದ್ರು.
ತಮ್ಮ ಮಾತು ಚರ್ಚೆಗೆ ಗ್ರಾಸವಾಗುತ್ತಲೇ ಎಚ್ಚೆತ್ತ ಈಶ್ವರಪ್ಪ ತಮ್ಮ ಮಾತಿಗೆ ಕ್ಲಾರಿಫೈ ಮಾಡಿದ್ರು. ಮತ್ತೆ ಗೊಂದಲ ಸೃಷ್ಟಿಸಿದ್ರು.. ಚುನಾವಣೆವರೆಗೆ ಬೊಮ್ಮಾಯಿ ಅವರೆ ಸಿಎಂ ಎಂದಿದ್ದಾರೆ.. ಆದ್ರೆ, ಯಾವ ಚುನಾವಣೆ ಎಂಬ ಪ್ರಶ್ನೆಗೆ ಅಡ್ಡಗೋಡೆ ಮೇಲೆ ದೀಪವಿಟ್ರು.
ಜುಲೈನಲ್ಲೇ ನಾಯಕತ್ವ ಬದಲಾವಣೆಗೆ ತೆರೆಬಿದ್ದಿದ್ದು, ಈಗ ಈಶ್ವರಪ್ಪ ಆಡಿದ ಮಾತಿಗೆ ತೇಪೆ ಹಚ್ಚುವ ಕೆಲಸಕ್ಕೆ ಮಾಜಿ ಸಿಎಂ ಬಿಎಸ್ವೈ ಪ್ರತಿಕ್ರಿಯೆ ನೀಡಬೇಕಾಯ್ತು. ಈಶ್ವರಪ್ಪ ತಮಾಷೆ ಮಾಡಿದ್ದಾರೆ ಅಂತಾ ಹೇಳಿದ್ದಾರೆ.
ಒಟ್ಟಾರೆ, ಬಿಜೆಪಿಯ ಹಿರಿಯ ನಾಯಕ ಈಶ್ವರಪ್ಪ ಮಾತಿನಿಂದ ಸರ್ಕಾರ ಮತ್ತು ಬಿಜೆಪಿ ಮುಜುಗರಕ್ಕೀಡಾಯ್ತು. ದಿಢೀರ್ ನಾಯಕತ್ವದ ಬಗ್ಗೆ ಮಾತಾಡಿದ್ದಾರೆ ಅಂದ್ರೆ ಏನೋ ಇದೆ ಎಂಬ ಗುಸುಗುಸು ಎಲ್ಲೆಡೆ ಹಬ್ಬಿದೆ. ಹಾಗಾದ್ರೆ ಸಿಎಂ ಬದಲಾಗ್ತಾರಾ? ಅದಕ್ಕೆ ಕಾಲವೇ ಉತ್ತರ ನೀಡಬೇಕು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post