ಡಿ.13 ರಿಂದ ವಿಧಾನಸಭೆ ಚಳಿಗಾಲದ ಅಧಿವೇಶನ
ಒಮಿಕ್ರಾನ್ ಭೀತಿಯ ನಡುವೆ ಬೆಳಗಾವಿ ಚಳಿಗಾಲದ ಅಧಿವೇಶನದ ಬಗೆಗಿನ ಗೊಂದಲಗಳಿಗೆ ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಸ್ಪಷ್ಟನೆ ನೀಡಿದ್ದಾರೆ. ಡಿಸೆಂಬರ್ 13 ರಿಂದ 24 ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದ್ದು, ಈ ಬಗ್ಗೆ ಈಗಾಗಲೇ ನಿಗದಿತ ಕಾರ್ಯ ಕಲಾಪಗಳ ಪಟ್ಟಿ ಸಿದ್ದವಾಗಿದೆ ಎಂದಿದ್ದಾರೆ.. ಡಿಸೆಂಬರ್ 2ಕ್ಕೆ ಸುವರ್ಣಸೌಧಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ ಅಂತಾ ಕಾಗೇರಿ ತಿಳಿಸಿದ್ರು. ಬೆಳಗಾವಿ ಭೇಟಿ ಬಳಿಕ ಅಧಿಕಾರಿಗಳ ಸಭೆ ನಡೆಸುತ್ತೇನೆ ಎಂದಿರುವ ಕಾಗೇರಿ, ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕಲಾಪ ನಡೆಸಲಾಗುತ್ತೆ ಅಂತ ಮಾಹಿತಿ ನೀಡಿದ್ದಾರೆ.
ಕೇವಲ 30 ಜನರಿಗೆ ಕೆ.ಎಸ್ ಈಶ್ವರಪ್ಪ ಭಾಷಣ!
ಕಾರ್ಯಕರ್ತರಿಲ್ಲದೇ ಖಾಲಿ ಹೊಡೆಯುತ್ತಿದ್ದ ಸಭೆಯಲ್ಲಿ ಕೆ.ಎಸ್ ಈಶ್ವರಪ್ಪ ಭಾಷಣ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನಡೆದಿದೆ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾರಟಗಿಯ ಪದ್ಮಶ್ರೀ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಕೇವಲ 30 ಜನರಿಗೆ ಈಶ್ವರಪ್ಪ ಭಾಷಣ ಮಾಡಿದ್ದಾರೆ ಎನ್ನಲಾಗಿದೆ. ಬಿಜೆಪಿಯ ಹಾಲಿ ಶಾಸಕರು ಇರುವ ಕ್ಷೇತ್ರದಲ್ಲೇ ಜನರು ಸೇರದ ಕಾರಣ ಶಾಸಕ ದಡೇಸೂಗೂರು ಹಾಗೂ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ಗೆ ಇರುಸು ಮುರುಸು ಉಂಟಾಗಿದೆ.
ಉಡುಪಿಯಲ್ಲಿ ಕಟ್ಟುನಿಟ್ಟಿನ ನಿಯಮ
ಉಡುಪಿ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕೋವಿಡ್ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.. ಇತ್ತೀಚಿಗೆ ಸಿಎಂ ಬೊಮ್ಮಾಯಿ ಕೂಡಾ ಉಡುಪಿ ಜಿಲ್ಲಾಧಿಕಾರಿ ಜೊತೆ ವರ್ಚುವಲ್ ಸಭೆ ನಡೆಸಿದ್ರು.. ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗ್ತಿದ್ದು, ಟೆಸ್ಟಿಂಗ್ ಪ್ರಮಾಣ ಹೆಚ್ಚಿಸುವ ಜೊತೆಗೆ ಶೇಕಡಾ ನೂರರಷ್ಟು ಲಸಿಕೆಗೆ ಆದ್ಯತೆ ನೀಡುತ್ತೇವೆ ಅಂತಾ ಜಿಲ್ಲಾ ಪಂಚಾಯತಿ ಸಿಇಒ ಡಾ.ನವೀನ್ಭಟ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ವಾರಕ್ಕೆ ಒಂದು ದಿನ ಮಾಸ್ಕ್ಡ್ರೈವ್ ನಡೆಸಲು ನಿರ್ಧರಿಸಲಾಗಿದೆ ಅಂತ ಮಾಹಿತಿ ನೀಡಿದ್ದಾರೆ.
ಕೆಲವು ದೇಶಗಳಲ್ಲಿ ಒಮಿಕ್ರಾನ್ ಹೆಚ್ಚು ಅಪಾಯಕಾರಿ
ಒಮಿಕ್ರಾನ್ ರೂಪಾಂತರಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಅತೀ ವೇಗವಾಗಿ ರೂಪಾಂತರಗೊಂಡ ಒಮಿಕ್ರಾನ್ ಕೊರೊನಾ ವೈರಸ್ ರೂಪಾಂತರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಲಿದೆ.. ಕೆಲವು ದೇಶಗಳಿಗೆ ಇದು ಹೆಚ್ಚು ಅಪಾಯವನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.. ಒಮಿಕ್ರಾನ್ ಸೋಂಕಿನಿಂದ ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲ. ಆದ್ರೆ ಲಸಿಕೆ ಇದರ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆಯೇ, ಇದು ನಮಗೆ ರಕ್ಷಣೆ ನೀಡುತ್ತದೆಯೇ ಎಂಬುದನ್ನು ಅರಿಯಲು ಸಂಶೋಧನೆಯ ಅಗತ್ಯವಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ..
‘ಒಮಿಕ್ರಾನ್ ಬಹುಶಃ ಈಗಾಗಲೇ ಭಾರತಕ್ಕೆ ಕಾಲಿಟ್ಟಿದೆ’
ಒಮಿಕ್ರಾನ್ ವೈರಸ್ ಬಹುಶಃ ಭಾರತದಲ್ಲಿ ಈಗಾಗಲೇ ಕಾಲಿಟ್ಟಿದ್ದು, ಅಧಿಕೃತವಾಗಿ ಕಂಡುಬಂದರೆ ಅದು ಕೇವಲ ಸಮಯದ ವಿಷಯವಾಗಿರಲಿದೆ ಎಂದು ಐಸಿಎಂಆರ್ ಮುಖ್ಯಸ್ಥ ಸಮಿರನ್ ಪಾಂಡೆ ಹೇಳಿದ್ದಾರೆ. ನವೆಂಬರ್ 9ರಂದು ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೋವಿಡ್ ರೂಪಾಂತರ ಕಂಡುಬಂದಿದ್ದು, ಅಂದಿನಿಂದ ಸಾಕಷ್ಟು ಜನ ಆಫ್ರಿಕಾದಿಂದ ಹಲವು ದೇಶಗಳಿಗೆ ಪ್ರಯಾಣ ಮಾಡಿದ್ದಾರೆ. ಹೀಗಾಗಿ ವೈರಸ್ ಹರಡಿರುವ ಕುರಿತು ತಳ್ಳಿ ಹಾಕುವಂತಿಲ್ಲ ಎಂದು ಸಮಿರನ್ ಹೇಳಿದ್ದಾರೆ. ಭಾರತದಲ್ಲಿ ಒಮಿಕ್ರಾನ್ ಪತ್ತೆಯಾದರೆ ಆಶ್ಚರ್ಯ ಪಡುವಂತಹದ್ದು ಏನೂ ಇಲ್ಲ, ಇದು ಕೇವಲ ಸಮಯದ ವಿಷಯವಾಗಿದೆ ಎಂದಿದ್ದಾರೆ.
ಪರಾಗ್ ಅಗರ್ವಾಲ್ಗೆ ಟ್ಟಿಟ್ಟರ್ ಸಿಇಓ ಸ್ಥಾನ
ಟ್ವಿಟ್ಟರ್ ಸಹ ಸಂಸ್ಥಾಪಕ, ಮುಖ್ಯ ಕಾರ್ಯ ನಿರ್ವಾಹಕ ಜಾಕ್ ಡೋರ್ಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.. ಪ್ರಸ್ತುತ ಟ್ವೀಟ್ಟರ್ ತಂತ್ರಜ್ಞಾನ ಅಧಿಕಾರಿಯಾಗಿರುವ ಪರಾಗ್ ಅಗರ್ವಾಲ್ ಮುಂದಿನ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಡೋರ್ಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡುತ್ತಿದ್ದಂತೆ ಟ್ವಿಟ್ಟರ್ ಷೇರುಗಳ ಬೆಲೆಗಳಲ್ಲಿ ಶೇ. 11ರಷ್ಟು ಏರಿಕೆಯಾಗಿದೆ. ಸ್ಕೈರ್ ಐಎನ್ಸಿ ಕಡೆಗೆ ಹೆಚ್ಚು ಗಮನ ನೀಡುತ್ತಿರುವ ಡೋರ್ಸಿ, ಟ್ವಿಟ್ಟರ್ ಕಡೆಗೆ ಹೆಚ್ಚು ಗಮನ ನೀಡುತ್ತಿಲ್ಲವೆಂದು ಟ್ವಿಟ್ಟರ್ ಪಾಲುದಾರ ಎಲಿಯಟ್ ಮ್ಯಾನೆಜ್ಮೆಂಟ್ ಕಾರ್ಪ್ ಸಂಸ್ಥೆ ಆರೋಪಿಸಿತ್ತು..
ಟೆಸ್ಟ್ ಕ್ರಿಕೆಟ್ನಲ್ಲಿ ಆರ್.ಅಶ್ವಿನ್ ಹೊಸ ದಾಖಲೆ
ಟೆಸ್ಟ್ ಕ್ರಿಕೆಟ್ನಲ್ಲಿ ರವಿಚಂದ್ರನ್ ಅಶ್ವಿನ್ ಹೊಸ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಟೀಮ್ ಇಂಡಿಯಾದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ದದ ಮೊದಲ ಟೆಸ್ಟ್ನಲ್ಲಿ 5 ವಿಕೆಟ್ ಪಡೆಯುವ ಮೂಲಕ ಟೆಸ್ಟ್ನಲ್ಲಿ 418 ವಿಕೆಟ್ ಸಾಧನೆ ಮಾಡಿದ್ದಾರೆ.. ಮೂರನೇ ಸ್ಥಾನದಲ್ಲಿದ್ದ ಹರ್ಭಜನ್ ಸಿಂಗ್ ದಾಖಲೆ ಸರಿಗಟ್ಟಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದು, ಕುಂಬ್ಳೆ ಟೆಸ್ಟ್ ಕ್ರಿಕೆಟ್ನಲ್ಲಿ 619 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 434 ವಿಕೆಟ್ ಪಡೆದಿರುವ ಕಪಿಲ್ ದೇವ್ 2ನೇ ಸ್ಥಾನದಲ್ಲಿದ್ದಾರೆ.
ಇಂದು ಐಪಿಎಲ್ ಆಟಗಾರರ ರಿಟೈನ್ ಪ್ರಕ್ರಿಯೆ
ಐಪಿಎಲ್ ಮೆಗಾ ಹರಾಜಿಗೆ ಸಿದ್ದತೆಗಳು ಆರಂಭಗೊಂಡಿದ್ದು, ಹರಾಜಿಗೂ ಮುನ್ನ 8 ಫ್ರಾಂಚೈಸಿಗಳಿಗೆ 4 ಆಟಗಾರರನ್ನು ಉಳಿಸಿಕೊಳ್ಳುವ ಆಯ್ಕೆ ನೀಡಲಾಗಿತ್ತು. ಅದರಂತೆ ಹಳೆಯ 8 ಫ್ರಾಂಚೈಸಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿದ್ದು, ಐಪಿಎಲ್ ಪ್ರೇಮಿಗಳ ಕುತೂಹಲ ಇಮ್ಮಡಿಯಾಗಿದೆ. ರಿಟೈನ್ ಪ್ರಕ್ರಿಯೆ ಇಂದು ಸಂಜೆ 5 ಗಂಟೆಯಿಂದ ಆರಂಭವಾಗಲಿದೆ. ಇನ್ನು ರಿಟೈನ್ ಪ್ರಕ್ರಿಯೆ ನಂತರ ಈ ಬಾರಿ ಲಕ್ನೋ ಹಾಗೂ ಅಹಮದಾಬಾದ್ ಎರಡು ಹೊಸ ತಂಡಗಳು ಸೇರ್ಪಡೆ ಆಗಲಿದ್ದು, ರಿಟೈನ್ ನಂತರ 2 ತಂಡಗಳಿಗೆ ತಲಾ ಮೂವರನ್ನು ಆಯ್ಕೆಯ ಅವಕಾಶ ಇರಲಿದೆ.
ಸಾಬರಮತಿ ಆಶ್ರಮಕ್ಕೆ ಸಲ್ಮಾನ್ ಖಾನ್ ಭೇಟಿ
ಗುಜರಾತಿನ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಚರಕದಿಂದ ನೂಲು ನೇಯದಿದ್ದಾರೆ. ಇತ್ತೀಚಿಗೆ ಬಿಡುಗಡೆಯಾಗಿರುವ ಅಂತಿಮ್ ದಿ ಫೈನಲ್ ಟ್ರುತ್ ಚಿತ್ರದ ಪ್ರಚಾರಕ್ಕಾಗಿ ಸಲ್ಮಾನ್ ಖಾನ್ ಅಹಮದಾಬಾದ್ಗೆ ಭೇಟಿ ನೀಡಿದ್ದರು.. ಈ ವೇಳೆ ಸಾಬರಮತಿ ಆಶ್ರಮಕ್ಕೆ ಆಗಮಿಸಿ ಗಾಂಧಿಯನ್ನು ಸ್ಮರಿಸಿದ್ದಾರೆ. ಇದು ಅವರ ಸಿನಿಮಾ ಪ್ರಚಾರದ ಭಾಗವಾಗಿರಲಿಲ್ಲ. ಸಂಪೂರ್ಣವಾದ ವೈಯಕ್ತಿಕ ಭೇಟಿಯಾಗಿತ್ತು ಅಂತ ಆಶ್ರಮದ ಅಧಿಕಾರಿಗಳು ಹೇಳಿದ್ದಾರೆ.. ಆಶ್ರಮದ ಶಿಷ್ಟಾಚಾರ ಪಾಲಿಸಿದರು. ಆಶ್ರಮದ ಮಹತ್ವವನ್ನು ಅವರಿಗೆ ವಿವರಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ರು..
ಎರಡು ತಲೆ ಹಲ್ಲಿಯ ವಿಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಎರಡು ತಲೆಯ ಹಲ್ಲಿಯ ವಿಡಿಯೋ ಒಂದು ಹರಿದಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 5.7 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಝೂಕೀಪರ್, ಜೇ ಬ್ರೂವರ್ ತನ್ನ ಇನ್‌ಸ್ಟಾ ಪುಟ ಪ್ರಿಹಿಸ್ಟಾರಿಕ್ ಪೆಟ್ಸ್ನಲ್ಲಿ ಈ ಅಸಾಮಾನ್ಯ ಹಲ್ಲಿಯ ನೋಟವನ್ನು ಹಂಚಿಕೊಂಡಿದ್ದಾರೆ.. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಒಂದು ತಲೆಯ ಹಲ್ಲಿ ನೋಡಿಯೇ ಓಡಿ ಹೋಗುವ ಜನ, ಈ ಎರಡು ತಲೆಯ ಹಲ್ಲಿ ನೋಡಿ ಹೆಂಡತಿ ಹೇಗೆ ಕಿರಚಾಡಬಹುದು ಎಂದು ನೆಟ್ಟಿಗರು ಕಮೆಂಟ್ಗಳ ಸುರಿಮಳೆ ಮಾಡುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post