ಇಂದು ಮಧ್ಯಾಹ್ನ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ
ಕರ್ನಾಟಕದಲ್ಲಿ ಎರಡು ಹೊಸ ರೂಪಾಂತರಿ ಸೋಂಕು ಪತ್ತೆಯಾಗ್ತಿದ್ದಂತೆ ಸಿಎಂ ಬೊಮ್ಮಾಯಿ ಫುಲ್ ಅಲರ್ಟ್ ಆಗಿದ್ದಾರೆ. ಓಮಿಕ್ರಾನ್ ಸೋಂಕಿನ ಬಗ್ಗೆ ಆರೋಗ್ಯ ತಜ್ಞರು, ಅಧಿಕಾರಿಗಳೊಂದಿಗೆ ಮಹತ್ವದ ಸಭೆ ಮಾಡಲಿದ್ದಾರೆ. ಇಂದು ಮಧ್ಯಾಹ್ನ ಒಂದು ಗಂಟೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬೊಮ್ಮಾಯಿ ಮೀಟಿಂಗ್ ನಡೆಸಲಿದ್ದಾರೆ. ಸಭೆಯಲ್ಲಿ ಒಮಿಕ್ರಾನ್ ತಡೆಗಟ್ಟಲು ಸರ್ಕಾರ ಇನ್ನಷ್ಟು ಕಠಿಣ ಗೈಡ್ಲೈನ್ಸ್ ರಿಲೀಸ್ ಮಾಡುವ ಸಾಧ್ಯತೆ ಇದೆ. ಇನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಸಚಿವರಾದ ಡಾ.ಸಿ.ಎನ್.ಅಶ್ವತ್ಥ್‌ನಾರಾಯಣ್, ಆರ್.ಅಶೋಕ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
BPL ಕುಟುಂಬದ ಯಾರೇ ಮೃತಪಟ್ಟರೂ ₹1 ಲಕ್ಷ ಪರಿಹಾರ
ಡೆಲ್ಟಾ ರೂಪಾಂತರಿ ಮತ್ತು ಒಮಿಕ್ರಾನ್ ಭೀತಿ ನಡುವೆ ಸಿಎಂ ಬೊಮ್ಮಾಯಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.. ಕೊರೊನಾ ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕುಟುಂಬಸ್ಥರಿಗೆ ಒಂದು ಲಕ್ಷ ಪರಿಹಾರ ನೀಡಲು ಆದೇಶಿಸಿದೆ. ಈ ಮೊದಲು ದುಡಿಯುವ ಕುಟುಂಬದ ವ್ಯಕ್ತಿ ಮೃತಪಟ್ಟರೆ ಮಾತ್ರ ಪರಿಹಾರ ಎಂದಿತ್ತು. ಅದನ್ನ ಪರಿಷ್ಕರಿಸಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ.. ಬಿಪಿಎಲ್ ಕುಟುಂಬದಲ್ಲಿ ಯಾವುದೇ ವ್ಯಕ್ತಿ ಸೋಂಕಿನಿಂದ ಮೃತಪಟ್ಟರೂ ಆ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಪರಿಷ್ಕರಣೆ ಮಾಡಿದೆ..
ರೈಲ್ವೇ ಖಾಸಗೀಕರಣ ಇಲ್ಲ ಎಂದ ಕೇಂದ್ರ ಸರ್ಕಾರ
ಭಾರತೀಯ ರೈಲ್ವೇ ಖಾಸಗೀಕರಣ, ಹೂಡಿಕೆ ಹಿಂಪಡೆಯುವಿಕೆ ವದಂತಿ ನಡುವೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಘೋಷಣೆ ಮಾಡಿದ್ದಾರೆ.. ಭಾರತೀಯ ರೈಲ್ವೇ ಮಾರಾಟಕ್ಕಿಲ್ಲ, ಖಾಸಗೀಕರಣ ಮಾಡುವುದಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.. ರೈಲ್ವೇ ಖಾಸಗೀಕರಣ ವದಂತಿಗಳ ಮಧ್ಯೆ ಭಾರತೀಯ ರೈಲ್ವೇ ಕುರಿತಾದ ಊಹಾಪೋಹಗಳಿಗೆ ತೆರೆ ಎಳೆದ ಅವರು, ಐಕಾನಿಕ್ ರಾಷ್ಟ್ರೀಯ ಸಾರಿಗೆಯನ್ನು ಖಾಸಗೀಕರಣಗೊಳಿಸುವುದಿಲ್ಲ. ಮುಂದೆಯೂ ಖಾಸಗೀಕರಣದಂತಹ ನಡೆ ಅನುಸರಿಸುವುದಿಲ್ಲ ಎಂದು ತಿಳಿಸಿದ್ದಾರೆ.
‘ಸೆಂಟ್ರಲ್ ವಿಸ್ಟಾಗೆ 1,289 ಕೋಟಿ ರೂಪಾಯಿ ಖರ್ಚು’
ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಗಾಗಿ ಇಲ್ಲಿಯವರೆಗೆ 1,289 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಸಂಸತ್ಗೆ ಕೇಂದ್ರ ವಸತಿ ಸಚಿವಾಲಯ ಮಾಹಿತಿ ನೀಡಿದೆ.. ಹೊಸ ಕಟ್ಟಡದ ಪ್ರಗತಿ ಶೇ.35ರಷ್ಟಿದೆ. ಅಕ್ಟೋಬರ್ 2022 ರೊಳಗೆ ಅದನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಅಂತ ಕೇಂದ್ರ ಸಚಿವ ಕೌಶಲ್ ಕಿಶೋರ್ ಮಾಹಿತಿ ನೀಡಿದ್ದಾರೆ. ಸಂಸತ್ ಭವನದಂತಹ ಕಟ್ಟಡಕ್ಕೆ ಮುಖ್ಯವಾದ ಆಲೋಚನೆಗಳು ಮತ್ತು ನಾವೀನ್ಯತೆಗಳನ್ನು ಅನ್ವೇಷಿಸುವ ಅವಕಾಶಗಳನ್ನು ಮಿತಿಗೊಳಿಸುತ್ತದೆ ಎಂಬ ವಾಸ್ತವದ ಹೊರತಾಗಿಯೂ ಬಿಡ್ಡಿಂಗ್‌ನ ಗುಣಮಟ್ಟ ಮತ್ತು ವೆಚ್ಚ ಆಧಾರಿತ ಆಯ್ಕೆ ವ್ಯವಸ್ಥೆಯನ್ನು ಬಳಸಲಾಗಿದೆ ಅಂತಾ ಕೇಂದ್ರ ಹೇಳಿದೆ..
ಸಿಎಂ ಮಮತಾ ಭೇಟಿಯಾದ ಗೌತಮ್ ಅದಾನಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನ ಅದಾನಿ ಗ್ರೂಪ್ನ ಸಂಸ್ಥಾಪಕ ಗೌತಮ್ ಅದಾನಿ ಭೇಟಿಯಾಗಿದ್ದಾರೆ. ಬಂಗಾಳದ ನಬಾನ್ನ ಜಿಲ್ಲೆಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ಮಾಡಿದ್ದಾರೆ.. ಈ ವೇಳೆ ಬಂಗಾಳದಲ್ಲಿ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿ ವಿಚಾರಗಳ ಬಗ್ಗೆ ಸುದೀರ್ಘ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗ್ತಿದೆ..
ರನ್ ವೇಯಿಂದ ವಿಮಾನವನ್ನೇ ತಳ್ಳಿದ ಪ್ರಯಾಣಿಕರು
ವಿಮಾನ ಪ್ರಯಾಣಿಕರು ಮತ್ತು ಭದ್ರತಾ ಅಧಿಕಾರಿಗಳು ಸೇರಿ ರನ್ ವೇಯಿಂದ ವಿಮಾನವನ್ನೇ ತಳ್ಳಿದ ಪ್ರಸಂಗ ನೇಪಾಳದ ಕೋಲ್ಟಿಯ ಬಾಜುರಾ ವಿಮಾನ ನಿಲ್ದಾಣದಲ್ಲಿ ನಡೆದಿದೆ.. ತಾರಾ ಏರ್ ವಿಮಾನವು ಟೈರ್ ಸ್ಫೋಟಗೊಂಡ ನಂತರ ಏರ್‌ಸ್ಟ್ರಿಪ್‌ನಲ್ಲಿ ಸಿಲುಕಿಕೊಂಡಿತ್ತು. ವಿಮಾನ ಲ್ಯಾಂಡಿಂಗ್ ಆಗುವ ವೇಳೆ ಅದರ ಹಿಂದಿನ ಟೈರ್ ಸ್ಫೋಟಗೊಂಡಿದೆ. ಬಳಿಕ ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಪೈಲಟ್‌ಗೆ ತುರ್ತು ತಂತ್ರಗಳನ್ನು ಮಾಡಲು ಸಾಧ್ಯವಾದರೂ, ಅದನ್ನು ರನ್ ವೇಯಿಂದ ಸರಿಸಲು ಸಾಧ್ಯವಾಗಲಿಲ್ಲ. ಸಿಕ್ಕಿಬಿದ್ದ ವಿಮಾನದಿಂದ ಟ್ಯಾಕ್ಸಿ ದಾರಿ ನಿರ್ಬಂಧವಾಗಿದ್ದರಿಂದ ಹಾಗೂ ಮತ್ತೊಂದು ವಿಮಾನವು ಇಳಿಯಲು ಸಾಧ್ಯವಾಗದೇ ಇದ್ದುದರಿಂದ ಭದ್ರತಾ ಸಿಬ್ಬಂದಿ ಹಾಗೂ ಪ್ರಯಾಣಿಕರೇ ವಿಮಾನವನ್ನ ತಳ್ಳಿದ್ರು
20 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದ ವಾಟ್ಸಪ್!
ಫೇಸ್‌ಬುಕ್-ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್ ಅಕ್ಟೋಬರ್ ವೇಳೆಗೆ ಭಾರತದಲ್ಲಿ 20 ಲಕ್ಷ ಖಾತೆಗಳನ್ನು ನಿಷೇಧಿಸಿದೆ.. ಸೆಪ್ಟೆಂಬರ್‌ನಲ್ಲಿ 2.2 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯ ಖಾತೆಗಳನ್ನು ನಿಷೇಧಿಸಲಾಗಿತ್ತು. ವಾಟ್ಸಪ್ ಪ್ಲಾಟ್‌ಫಾರ್ಮ್‌ನಲ್ಲಿನ ಸಂದೇಶಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿವೆ. ಆದರೆ ಇದು ಬಳಕೆದಾರರ ವರದಿಗಳು, ಪ್ರೊಫೈಲ್ ಫೋಟೋಗಳು, ಗುಂಪು ಫೋಟೋಗಳು ಸೇರಿದಂತೆ ಲಭ್ಯವಿರುವ ಎನ್‌ಕ್ರಿಪ್ಟ್ ಮಾಡದ ಮಾಹಿತಿಯನ್ನು ಅವಲಂಬಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ. ಸದ್ಯ ವಾಟ್ಸಾಪ್ ತನ್ನ ಅತಿದೊಡ್ಡ ಮಾರುಕಟ್ಟೆಯಾದ ಭಾರತದಲ್ಲಿ 487 ಮಿಲಿಯನ್ ಬಳಕೆದಾರರನ್ನು ಹೊಂದಿದೆ..
2023ರ ವೇಳೆಗೆ ಮುನ್ಸಿಯಾರಿ-ಮಿಲಮ್ ರಸ್ತೆ ನಿರ್ಮಾಣ
ಭಾರತದ ಗಡಿ ಸಂರಕ್ಷಣೆ ದೃಷ್ಟಿಯಿಂದ ಮುನ್ಸಿಯಾರಿ-ಮಿಲಮ್ ರಸ್ತೆ ನಿರ್ಮಾಣ ಮಹತ್ವದ ಯೋಜನೆ ಆಗಿದೆ.. ಚೀನಾದ ಕಳ್ಳಾಟಗಳನ್ನು ತಡೆಯುವ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ್ದಾಗಿದೆ.. ಸದ್ಯ ಮುನ್ಸಿಯಾರಿ-ಮಿಲಮ್ ರಸ್ತೆ ನಿರ್ಮಾಣ 2023ರ ಅಂತ್ಯದೊಳಗೆ ಮುಗಿಯಲಿದೆ ಅಂತ ಗಡಿ ರಸ್ತೆ ನಿರ್ಮಾಣ ಸಂಸ್ಥೆ ತಿಳಿಸಿದೆ.. ಮುನ್ಸಿಯಾರಿ ಭಾಗದಿಂದ ಈಗಾಗಲೇ 25 ಕಿ.ಮೀ. ರಸ್ತೆ ನಿರ್ಮಾಣ ಮುಗಿದಿದೆ.. ಈ ರಸ್ತೆ ನಿರ್ಮಾಣ ಮುಗಿದ ಮೇಲೆ ಉತ್ತರಾಖಂಡದ ಜೋಹರ್ ಕಣಿವೆಯಲ್ಲಿರುವ ಭಾರತ-ಚೀನಾ ಗಡಿಭಾಗದ ಕಡೆಯ ಪೋಸ್ಟನ್ನು ತಲುಪಲು ಭಾರತೀಯ ಸೈನಿಕರಿಗೆ ಸಾಧ್ಯವಾಗಲಿದೆ.
ನಾಳೆ ಅಪ್ಪಳಿಸಲಿದೆ ಜವಾಡ ಚಂಡಮಾರುತ!
ವರುಣನ ಅಬ್ಬರಕ್ಕೆ ತತ್ತರಿಸಿ ಹೋಗಿದ್ದ ಆಂಧ್ರ ಮತ್ತು ಒಡಿಶಾಗೆ ಮತ್ತೊಂದು ಅಘಾತ ಎದುರಾಗಿದೆ.. ಡಿಸೆಂಬರ್ 4 ಅಂದ್ರೆ ನಾಳೆ ಬೆಳಗ್ಗೆ ಜವಾಡ ಚಂಡ ಮಾರುತ ಅಪ್ಪಳಿಸಲಿದೆ.. ಹೀಗಾಗಿ ಈ 2 ರಾಜ್ಯ ಸರ್ಕಾರಗಳು ಈಗಾಗಲೇ ಮುನ್ನಚ್ಚರಿಕಾ ಕ್ರಮ ಕೈಗೊಂಡಿವೆ.. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿದ್ಧತೆ ಮಾಡಿಕೊಂಡಿವೆ. ಚಂಡಮಾರುತ ಅಪ್ಪಳಿಸೋ ಭೀತಿ ಬೆನ್ನಲ್ಲೇ ಪ್ರಧಾನಿ ಮೋದಿ ಕಳೆದ ರಾತ್ರಿ ಮಹತ್ವದ ಸಭೆ ನಡೆಸಿ, ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದು ಕೊಂಡಿದ್ದಾರೆ.. ಪರಿಸ್ಥಿತಿ ನಿಭಾಯಿಸಲು ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ತಂಡಗಳಿಗೆ ಸ್ಥಳದಲ್ಲಿ ಇರುವಂತೆ ಸೂಚನೆ ನೀಡಲಾಗಿದೆ..
ಇಂದಿನಿಂದ ಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ್ ಪಂದ್ಯ
ಇಂದಿನಿಂದ ಭಾರತ – ನ್ಯೂಜಿಲೆಂಡ್ 2ನೇ ಟೆಸ್ಟ್ ಆರಂಭವಾಗಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ.. ಬೆಳಗ್ಗೆ 9.30ಕ್ಕೆ ಪಂದ್ಯ ಶುರುವಾಗಲಿದ್ದು, ಈಗಾಗಲೇ 2 ಟೆಸ್ಟ್ ಪಂದ್ಯಗಳ ಪೈಕಿ ಒಂದು ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ಆದ್ರೆ ಪಂದ್ಯದ ಆರಂಭದ ದಿನಕ್ಕೆ ಮಳೆರಾಯನ ಕಾಟ ಇರಲಿದೆ.. ಕಳೆದ 2 ದಿನಗಳಿಂದ ಮುಂಬೈನಲ್ಲಿ ಧಾರಾಕಾರ ಮಳೆಯಾಗ್ತಿದ್ದು, ಇಂದು ಕೂಡ ಮಳೆ ಬರುವ ಸಾಧ್ಯತೆ ಇದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post