ಇಂಡೋ-ಕಿವೀಸ್ ನಡುವಿನ ಮುಂಬೈ ಟೆಸ್ಟ್ ಪಂದ್ಯ ನಿರ್ಣಾಯಕ ಘಟ್ಟ ತಲುಪಿದೆ. 3ನೇ ದಿನದಾಟದಲ್ಲಿ ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಡಾಮಿನೇಟಿಂಗ್ ಪರ್ಫಾಮೆನ್ಸ್ ನೀಡಿದ ಟೀಮ್ ಇಂಡಿಯಾ ಪಂದ್ಯ ಮೇಲೆ ಬಿಗಿ ಹಿಡಿತ ಸಾಧಿಸಿದೆ. 3ನೇ ದಿನದಾಟದ ಹೈಲೆಟ್ಸ್.. ಇಲ್ಲಿದೆ.
ಅರ್ಧಶತಕ ಸಿಡಿಸಿದ ಮಯಾಂಕ್, 47 ರನ್ಗಳಿಸಿದ ಪೂಜಾರ
ಮೊದಲ ಸೆಷನ್ ಅಂತ್ಯಕ್ಕೆ ಟೀಮ್ ಇಂಡಿಯಾ 142/2
62 ರನ್ಗಳೊಂದಿಗೆ 3ನೇ ದಿನದಾಟ ಆರಂಭಿಸಿದ್ದ ಭಾರತ, ಆರಂಭದಲ್ಲಿ ಪ್ರಾಬಲ್ಯ ಮೆರೆಯಿತು. ಮಯಾಂಕ್ ಅಗರ್ವಾಲ್ ಅರ್ಧಶತಕ ಸಿಡಿಸಿ ಮಿಂಚಿದ್ರೆ, ಎಚ್ಚರಿಕೆಯ ಆಟವಾಡಿದ ಪೂಜಾರ 47 ರನ್ಗಳಿಸಿ ಔಟಾದ್ರು. ಆದ್ರೆ, ಆ ಬಳಿಕ ಜೊತೆಯಾದ ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾದ್ರು. ಪರಿಣಾಮ ಮೊದಲ ಸೆಷನ್ನಲ್ಲಿ ಭಾರತವೇ ಮೇಲುಗೈ ಸಾಧಿಸಿತು.
276 ರನ್ಗಳಿಗೆ ಡಿಕ್ಲೇರ್, ಕಿವೀಸ್ಗೆ ಸವಾಲಿನ ಟಾರ್ಗೆಟ್
2ನೇ ಸೆಷನ್ನಲ್ಲಿ 47 ರನ್ಗಳಿಸಿ ಶುಭ್ಮನ್ಗಿಲ್ ಔಟಾದ್ರೆ, 2 ಸಿಕ್ಸರ್ ಸಿಡಿಸಿ ಅಬ್ಬರಿಸಿದ ಶ್ರೇಯಸ್ ಅಯ್ಯರ್, ಬಿಗ್ ಸ್ಕೋರ್ ಕಲೆ ಹಾಕುವಲ್ಲಿ ಎಡವಿದ್ರು. ಇದರ ಬೆನ್ನಲ್ಲೇ, ವಿರಾಟ್ ಕೊಹ್ಲಿ ಕೂಡ ಪೆವಿಲಿಯನ್ ಸೇರಿದ್ರು. ಆದ್ರೆ, ಅಂತಿಮ ಹಂತದಲ್ಲಿ ಅಬ್ಬರಿಸಿದ ಅಕ್ಷರ್ ಪಟೇಲ್, ಬೌಂಡರಿ, ಸಿಕ್ಸರ್ ಸಿಡಿಸಿ ರಂಜಿಸಿದ್ರು. ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 276 ರನ್ಗಳಿಸಿದ ಭಾರತ, ಕಿವೀಸ್ಗೆ 540 ರನ್ಗಳ ಸವಾಲಿನ ಟಾರ್ಗೆಟ್ ನೀಡಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು.
ಬ್ಯಾಟರ್ಗಳ ಪೆವಿಲಿಯನ್ ಪರೇಡ್, ಸಂಕಷ್ಟದಲ್ಲಿ ನ್ಯೂಜಿಲೆಂಡ್
540 ರನ್ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ನ್ಯೂಜಿಲೆಂಡ್, ಆರಂಭದಲ್ಲೇ ಎಡವಿತು. ನಾಯಕ ಟಾಮ್ ಲಾಥಮ್, ವಿಲ್ ಯಂಗ್ ಹಾಗೂ ಅನುಭವಿ ರಾಸ್ ಟೇಲರ್ ಅಲ್ಪ ಮೊತ್ತಕ್ಕೆ ಪೆವಿಲಿಯನ್ ಸೇರಿದ್ರು. ಡೇರಿಲ್ ಮಿಚೆಲ್, ಹೆನ್ರಿ ನಿಕೋಲಸ್ ಕೆಲ ಕಾಲ ಹೋರಾಡಿದರಾದರೂ ಅಕ್ಷರ್ ಪಟೇಲ್ ಈ ಜೋಡಿಯನ್ನ ಬ್ರೇಕ್ ಮಾಡಿದ್ರು. ಆ ಬಳಿಕ ಕಣಕ್ಕಿಳಿದ ಟಾಮ್ ಬ್ಲಂಡಲ್ ಬಂದಷ್ಟೇ ವೇಗವಾಗಿ ರನ್ಔಟ್ ಆಗಿ ಪೆವಿಲಿಯನ್ ಸೇರಿದ್ರು.
3ನೇ ದಿನದ ಅಂತ್ಯಕ್ಕೆ ನ್ಯೂಜಿಲೆಂಡ್ 140/5
ಅಂತಿಮವಾಗಿ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ 5 ವಿಕೆಟ್ ನಷ್ಟಕ್ಕೆ 140 ರನ್ಗಳಿಸಿದ್ದು, ಗೆಲುವಿಗೆ ಇನ್ನೂ 400 ರನ್ಗಳಿಸಬೇಕಿದೆ. ಭಾರತದ ಗೆಲುವಿಗೆ ಇನ್ನು 5 ವಿಕೆಟ್ಗಳ ಅಗತ್ಯತೆಯಿದೆ. ಆದರೆ ತಾಳ್ಮೆಯುತ ಆಟವಾಡ್ತಿರೋ ಹೆನ್ರಿ ನಿಕೋಲಸ್ ಮತ್ತು ರಾಚಿನ್ ರವೀಂದ್ರ ಇಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post