ಭಾರತದಲ್ಲಿ ಒಮಿಕ್ರಾನ್ ಕೇಸ್ಗಳ ಸಂಖ್ಯೆ 21ಕ್ಕೆ ಏರಿಕೆ
ಭಾರತದಲ್ಲಿ ಒಮಿಕ್ರಾನ್ ವೈರಸ್ ಪಾಸಿಟಿವ್ ಕಂಡುಬಂದವರ ಒಟ್ಟು ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ರಾಜಸ್ಥಾನದಲ್ಲಿ 9, ದೆಹಲಿಯಲ್ಲಿ 1 ಹಾಗೂ ಮಹಾರಾಷ್ಟ್ರದಲ್ಲಿ 7 ಒಮಿಕ್ರಾನ್ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಇನ್ನು ಕರ್ನಾಟಕದಲ್ಲಿ 2 ಹಾಗೂ ಗುಜರಾತ್ನಲ್ಲಿ 1 ಒಮಿಕ್ರಾನ್ ಕೇಸ್ ಈ ಹಿಂದೆ ಪತ್ತೆಯಾಗಿತ್ತು.ಇನ್ನೊಂದೆಡೆ ದೆಹಲಿಯಲ್ಲಿರೋ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ, ಆರ್ಟಿಪಿಸಿಆರ್ ಟೆಸ್ಟ್ ಬಗ್ಗೆ ಪರಿಶೀಲನೆ ನಡೆಸಿದ್ರು.
ಉನ್ನತ ಮಟ್ಟದ ತನಿಖೆಗೆ ಮುಂದಾದ ಭಾರತೀಯ ಸೇನೆ
ನಾಗಾಲ್ಯಾಂಡ್ನಲ್ಲಿ ಉಗ್ರರೆಂದು ತಪ್ಪಾಗಿ ಭಾವಿಸಿ ಸೈನಿಕರು ನಡೆಸಿದ್ದ ಗುಂಡಿನ ದಾಳಿಯಲ್ಲಿ 14 ಜನ ಮೃತಪಟ್ಟ ಪ್ರಕರಣದಲ್ಲಿ ಕೋರ್ಟ್ ಆಫ್ ಎನ್ಕ್ವೈರಿ ಮೂಲಕ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಭಾರತೀಯ ಸೇನೆ ಹೇಳಿದೆ. ಮೊದಲಿಗೆ ಸೈನಿಕರು ಟ್ರಕ್ ಮೇಲೆ ನಡೆಸಿದ್ದ ಗುಂಡಿನ ದಾಳಿಯಲ್ಲಿ 6 ಮಂದಿ ಮೃತಪಟ್ಟಿದ್ದರು. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಸೇನಾ ವಾಹನಗಳಿಗೆ ಬೆಂಕಿ ಹಚ್ಚಿದ್ದಾಗ ನಡೆದ ಘರ್ಷಣೆಯಲ್ಲಿ ಮತ್ತೆ 8 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತಪಟ್ಟ ಒಟ್ಟು ನಾಗರಿಕರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಈ ವೇಳೆ ಓರ್ವ ಸೈನಿಕ ಕೂಡ ಮೃತಪಟ್ಟ ವರದಿಯಾಗಿದೆ. ನಾಗಾಲ್ಯಾಂಡ್ ಸರ್ಕಾರ ಕೂಡ ಎಸ್ಐಟಿ ಮೂಲಕ ಘಟನೆಯ ತನಿಖೆಗೆ ಮುಂದಾಗಿದೆ.
‘ಜನರ ಪ್ರೀತಿ ನೆನೆದು ನಾನು ಕಣ್ಣೀರು ಹಾಕಿದ್ದೆ’
ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾಗ ಇಷ್ಟು ವರ್ಷದ ಜನರ ಪ್ರೀತಿ ಒಮ್ಮೆಲೆ ಕಣ್ಮುಂದೆ ಬಂದು ಕಣ್ಣೀರು ಹಾಕಿದ್ದೆ ಅಂತಾ ಎಂದು ಮಾಜಿ ಸಿಎಂ ಬಿ.ಎಸ್ .ಯಡಿಯೂರಪ್ಪ ಹೇಳಿದ್ದಾರೆ. ನಾನು ಕಣ್ಣೀರು ಹಾಕಿ ಹೊರಬಂದಾಗ ಬೇರೆಬೇರೆ ಮಾತುಗಳನ್ನ ಆಡಿದರು. ಆದರೆ ವಾಸ್ತವ ಅದಲ್ಲ ಎಂದಿದ್ದಾರೆ. ಇನ್ನು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 143 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ನಾನು ಸುಮ್ಮನೆ ಕೂರುವುದಿಲ್ಲ, ನಿಮ್ಮನ್ನೂ ಸುಮ್ಮನೆ ಕೂರಲು ಬಿಡುವುದಿಲ್ಲ ಅಂತಾ ಹೇಳುವ ಮೂಲಕ ವಿರೋಧಿಗಳಿಗೆ ಸವಾಲ್ ಹಾಕಿದ್ದಾರೆ.
ಅಣ್ತಮ್ಮಂದಿರು ಒಂದಾಗೋದಿಲ್ಲ ಎಂದ ಸತೀಶ್
ಜಾರಕಿಹೊಳಿ ಸಹೋದರರು ಕೊನೆಗೆ ಒಂದಾಗುತ್ತಾರೆ ಎಂಬ ಮನಸ್ಥಿತಿಯಿಂದ ಮತದಾರರು ಹೊರಬರಬೇಕು ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಪರವಾಗಿ ರಾಯಭಾಗದಲ್ಲಿ ಪ್ರಚಾರ ಮಾಡುವಾಗ ಮಾತನಾಡಿದ ಸತೀಶ್, ಸಹೋದರರೆಲ್ಲರೂ ಒಂದೇ ಎನ್ನುವ ನಿಮ್ಮ ಮನಸ್ಥಿತಿಗೆ ಜಗತ್ತಿನಲ್ಲಿ ಔಷಧಿ ಕಂಡು ಹಿಡಿಯುವುದಕ್ಕೂ ಆಗಲ್ಲ. ನಾನು ಕಾಂಗ್ರೆಸ್‌ಗೆ ಮಾತ್ರವೇ ಕೆಲಸ ಮಾಡುತ್ತಿದ್ದೇನೆ ಅಂತಾ ಹೇಳಿದ್ದಾರೆ.
‘ಪಕ್ಷ ನಾಶ ಮಾಡ್ತೀವಿ ಎನ್ನುವವರ ವಿರುದ್ಧ ನಿಲ್ಲುತ್ತೇವೆ’
2023ಕ್ಕೆ ನಮ್ಮ ಪಕ್ಷವನ್ನ ನಾಶ ಮಾಡ್ತೀವಿ ಎನ್ನುವವರ ವಿರುದ್ಧ ಎದ್ದು ನಿಲ್ಲುತ್ತೇವೆ ಅಂತಾ ಮಂಡ್ಯದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. 2023, 2024ರಲ್ಲಿಯೂ ನಾನು ಸುಮ್ಮನೇ ಕೂರುವುದಿಲ್ಲ. ನನ್ನ ಹೊರಾಟದ ಸಂಕಲ್ಪವನ್ನ ಯಾರೂ ಕಿತ್ತುಕೊಳ್ಳಲಾಗಲ್ಲ. 2024ರಲ್ಲಿ ಕೊನೆಯ ಹೋರಾಟ ಮಾಡ್ತೀನಿ ಅಂತಾ ದೇವೇಗೌಡರು ಖಡಕ್ ಸಂದೇಶ ನೀಡಿದ್ದಾರೆ. ನಾವು ಕೇವಲ ಹಳೇ ಮೈಸೂರು ಭಾಗಕ್ಕೆ ಸೀಮಿತ ಎಂದುಕೊಂಡಿದ್ದರೆ ಅದರ ಬಗೆಗೆ ನಾನು ಮಾತನಾಡುವುದಿಲ್ಲ ಅಂತಾ ದೇವೇಗೌಡರು ಹೇಳಿದ್ದಾರೆ.
ಇಂದು ಭಾರತಕ್ಕೆ ರಷ್ಯಾ ಅಧ್ಯಕ್ಷರ ಭೇಟಿ
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಂದು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ದೇಶದಲ್ಲಿ ಒಮಿಕ್ರಾನ್ ಆತಂಕದ ನಡುವೆಯೂ ಭಾರತ ಪ್ರವಾಸ ಕೈಗೊಂಡಿರುವ ಪುಟಿನ್, ಹಲವು ಕ್ಷೇತ್ರಗಳ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಪ್ರಮುಖವಾಗಿ 5 ಸಾವಿರದ 100 ಕೋಟಿ ವೆಚ್ಚದ AK-203 ರೈಫಲ್ ಖರೀದಿ ಡೀಲ್ ಫೈನಲ್ ಮಾಡೋ ಸಾಧ್ಯತೆ ಇದೆ. ಅಲ್ಲದೆ S-400 ಏರ್ ಡಿಫೆನ್ಸ್ ಸಿಸ್ಟಮ್ ನ ಮಾದರಿಯೊಂದನ್ನು ಪ್ರಧಾನಿ ಮೋದಿಗೆ ಪುಟಿನ್ ಸಾಂಕೇತಿಕವಾಗಿ ಹಸ್ತಾಂತರಿಸಲಿದ್ದಾರೆ.
ಮತ್ತಷ್ಟು ಅಪ್ಡೇಟ್ಗಳೊಂದಿಗೆ ಬರ್ತಿದೆ ವಾಟ್ಸ್ಌಪ್
ವಾಟ್ಸ್ಌಪ್ ಸಂಸ್ಥೆ ಮೇಲಿಂದ ಮೇಲೆ ಅಪ್ಡೇಟ್ಸ್ಗಳನ್ನ ಮಾಡಿಕೊಳ್ಳುತ್ತಾ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗ್ತಿದೆ. ಈ ಮಧ್ಯೆ ಚಾಟ್ ಮೆಸೇಜ್ಗಳನ್ನ ಇಂಟರೆಸ್ಟಿಂಗ್ ಆಗಿರಿಸಲು ವಾಟ್ಸ್ಌಪ್ ವಾಯ್ಸ್ ನೋಟ್ ವಿಭಾಗದಲ್ಲಿ ಅಪ್ಡೇಟ್ ತರಲು ಸಂಸ್ಥೆ ಮುಂದಾಗಿದೆ. ಸದ್ಯ ವಾಟ್ಸ್ಌಪ್ನಲ್ಲಿ ಸ್ಟ್ರೇಟ್ ಲೈನ್ನಲ್ಲಿ ಪ್ಲೇ ಌಂಡ್ ಪೌಸ್ ಆಪ್ಷನ್ ಅಡಿಯಲ್ಲಿ ವಾಯ್ಸ್ ನೋಟ್ ಪ್ಲೇಯ್ ಆಗುತ್ತೆ. ಆದ್ರೆ ಹೊಸ ಅಪ್ಡೇಟ್ ಪ್ರಕಾರ, ವೇವ್ ಫಾರ್ಮ್ನಲ್ಲಿ ವಾಯ್ಸ್ ನೋಟ್ ಪ್ಲೇ ಆಗಲಿದೆ ಹಾಗೂ ಈ ಫೀಚರ್ ಶೀಘ್ರವೇ ಲಭ್ಯವಾಗಲಿದೆ.
ಡ್ರೈವಿಂಗ್ ಲೈಸೆನ್ಸ್ ಪಡೆದ ದೇಶದ ಮೊದಲ ಕುಬ್ಜ ವ್ಯಕ್ತಿ
ಡ್ರೈವಿಂಗ್ ಲೈಸೆನ್ಸ್ ಪಡೆಯಲು ಎಷ್ಟೆಲ್ಲಾ ನಿಮಯಗಳಿವೆ. ಇಷ್ಟು ಎತ್ತರ, ಇಷ್ಟು ವಯಸ್ಸು.. ಈ ಎಲ್ಲಾ ನಿಯಮಗಳನ್ನು ಪಾಲಿಸಿದರೂ ಲೈಸೆನ್ಸ್ ಸಿಗುವುದು ಕಷ್ಟವಿರುವಾಗ ಹೈದರಾಬಾದ್ನಲ್ಲೊಬ್ಬ 3 ಅಡಿಯ ಕುಬ್ಜ ವ್ಯಕ್ತಿ ಲೈಸೆನ್ಸ್ ಪಡೆದಿರೋದು ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ. ಗಟ್ಟಿಪಲ್ಲಿ ಶಿವಪಾಲ್ ಎಂಬ ವ್ಯಕ್ತಿ ಕೇವಲ 3 ಅಡಿ ಎತ್ತರವಿದ್ದರೂ ಲೈಸೆನ್ಸ್ ಪಡೆದಿದ್ದಾರೆ. ಈ ಮೂಲಕ ಲೈಸೆನ್ಸ್ ಪಡೆದ ದೇಶದ ಮೊದಲ ಕುಬ್ಜ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶಿವಪಾಲ್ ಕುಬ್ಜರಾಗಿದ್ದರೂ ತಮ್ಮ ಕಾರನ್ನು ತಾವೇ ಚಲಾಯಿಸಿ, ಲೈಸೆನ್ಸ್ ಪಡೆದುಕೊಂಡಿದ್ದಾರೆ.
ನಟಿ ಜಾಕ್ವೆಲಿನ್ಗೆ ಏರ್ಪೋರ್ಟ್ನಲ್ಲಿ ತಡೆ
ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ದುಬೈಗೆ ತೆರಳುತ್ತಿದ್ದ ವೇಳೆ ಮುಂಬೈ ಏರ್ ಪೋರ್ಟ್ನ ಇಮಿಗ್ರೇಷನ್ ಅಧಿಕಾರಿಗಳು ಅವರನ್ನು ತಡೆದಿದ್ದಾರೆ. ಜಾರಿ ನಿರ್ದೇಶನಾಲಯ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಏರ್ಪೋರ್ಟ್ನಲ್ಲಿ ತಡೆಯಲಾಗಿತ್ತು. ಸದ್ಯ ಜಾಕ್ವೆಲಿನ್ರನ್ನ ಮನೆಗೆ ತೆರಳಲು ಅವಕಾಶ ನೀಡಲಾಗಿದ್ದು, ಅಗತ್ಯ ಬಿದ್ದಾಗ ಇಡಿ ವಿಚಾರಣೆಗೆ ಹಾಜರಗಬೇಕು ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.
ಸರಣಿ ಗೆಲುವಿನ ಸನಿಹದಲ್ಲಿ ಟೀಮ್ ಇಂಡಿಯಾ
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳಲು ಭಾರತ ತಂಡ ಮತ್ತೆ 5 ವಿಕೆಟ್ ಕಬಳಿಸುವ ಅಗತ್ಯವಿದೆ. ಮೊದಲ ಇನ್ನಿಂಗ್ಸ್ನಲ್ಲಿ ಭಾರತ 325 ಹಾಗೂ ನ್ಯೂಜಿಲೆಂಡ್ 62ರನ್ ಗಳಿಸಿತ್ತು. 263ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಭಾರತ 7 ವಿಕೆಟ್ ನಷ್ಟಕ್ಕೆ 276ರನ್ಗಳಿಸಿ ಡಿಕ್ಲೇರ್ ಮಾಡಿತ್ತು. 540ರನ್ಗಳ ಗುರಿಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಕಿವೀಸ್, 5 ವಿಕೆಟ್ ನಷ್ಟಕ್ಕೆ 140ರನ್ ಗಳಿಸಿದೆ. ಮೊದಲ ಪಂದ್ಯ ಡ್ರಾ ಆಗಿದ್ದು, ಎರಡನೇ ಪಂದ್ಯದ ಗೆಲುವಿಗೆ ಬಹಳಷ್ಟು ಸನಿಹದಲ್ಲಿದೆ ಕೊಹ್ಲಿ ಪಡೆಯಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post