ನವದೆಹಲಿ: ಭಾರತ-ರಷ್ಯಾ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ರಕ್ಷಣಾ ಕ್ಷೇತ್ರದಲ್ಲಿ ನಡೆದ ಒಪ್ಪಂದ ಪಕ್ಕದ ಚೀನಾ ಹಾಗೂ ಪಾಕಿಸ್ತಾನದ ನಿದ್ದೆಗೆಡಿಸಿದೆ. ಶಸ್ತ್ರಾಸ್ತ್ರಗಳ ಪೂರೈಕೆ ಡೀಲ್ ಬಗ್ಗೆ ಶತ್ರುರಾಷ್ಟ್ರಗಳು ಕಂಗಾಲಾಗಿವೆ. ಮತ್ತೊಂದೆಡೆ ಉಕ್ರೇನ್ ಜೊತೆಗಿನ ಸಂಘರ್ಷದ ವಿಚಾರವಾಗಿ ರಷ್ಯಾ ಜೊತೆ ನಿಲ್ಲುವಂತೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ. ಜೊತೆಗೆ ಉಭಯ ನಾಯಕರು ಬರೋಬ್ಬರಿ 28 ಒಪ್ಪಂದಗಳನ್ನ ಮಾಡಿಕೊಂಡಿದ್ದಾರೆ.
ಭಾರತ ರಷ್ಯಾ ಮಹತ್ವದ ಭೇಟಿ ಜಗತ್ತಿನ ಸೂಪರ್ ಪವರ್ ರಾಷ್ಟ್ರಗಳ ಗಮನ ಸೆಳೆದಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವೆ ನಡೆದ ಮಾತುಕತೆ ಹಲವು ಚರ್ಚೆಗೆ ಕಾರಣವಾಗಿದೆ. ಅದ್ರಲ್ಲೂ ನೆರೆಯ ಚೀನಾ ಹಾಗೂ ಪಾಕಿಸ್ತಾನದ ಪಾಲಿಗೆ ನುಂಗಲಾಗದ ತುತ್ತಾಗಿಬಿಟ್ಟಿದೆ.
ಭಾರತ-ರಷ್ಯಾ ದ್ವಿಪಕ್ಷೀಯ ಭೇಟಿಯಿಂದ ಚೀನಾಗೆ ನಡುಕ
ಭಾರತ-ಅಮೆರಿಕ ಹೆಚ್ಚಿದ ಸ್ನೇಹ, ರಷ್ಯಾಗೂ ಬೇಕು ಗೆಳೆತನ
ಶಸ್ತ್ರಾಸ್ತ್ರಗಳ ಫ್ಯಾಕ್ಟರಿ ರಷ್ಯಾ ಇಷ್ಟು ದಿನ ಚೀನಾ, ಪಾಕಿಸ್ತಾನದ ಜೊತೆ ಸ್ನೇಹ ಬೆಳೆಸೋ ಮೂಲಕ ದಕ್ಷಿಣ ಏಷ್ಯಾದಲ್ಲಿ ಪ್ರಾಬಲ್ಯ ಸಾಧಿಸೋಕೆ ಮುಂದಾಗಿತ್ತು. ಆದ್ರೆ ಚೀನಾ ವಿಚಾರದಲ್ಲಿ ಯಾವಾಗ ಭಾರತ ಅಮೆರಿಕಕ್ಕೆ ಹತ್ತಿರವಾಗತೊಡಗಿತೋ ರಷ್ಯಾಗೂ ಭಾರತದ ಸ್ನೇಹ ಅಗತ್ಯವೆನಿಸಿದೆ. ಭಾರತದ ಗಡಿಯಲ್ಲಿ ಚೀನಾ ಉಪಟಲ ಜಾಸ್ತಿಯಾಗ್ತಿದ್ದ ಸಂದರ್ಭದಲ್ಲೇ ರಷ್ಯಾ ಅಧ್ಯಕ್ಷರ ಭಾರತದ ಭೇಟಿ ಜಗಳಗಂಟ ಚೀನಾ ಪಾಲಿಗೆ ಗಂಟಲ ಮುಳ್ಳಾಗಿಬಿಟ್ಟಿದೆ. ಅದ್ರಲ್ಲೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಗ್ಗೆಯೇ ಭಾರತ-ರಷ್ಯಾ ನಡುವೆ ಮಹತ್ವದ ಒಪ್ಪಂದ ನಡೆದಿದ್ದು, ಚೀನಾ ಜೊತೆಗೆ ಪಕ್ಕದ ಪಾಕಿಸ್ತಾನಕ್ಕೂ ನಡುಕ ಹುಟ್ಟಿಸಿದೆ.
ಚೀನಾ-ಪಾಕ್ಗೆ ಸಂದೇಶ!
ಸಂದೇಶ 1 : ಅಫ್ಘಾನಿಸ್ತಾನದ ಬಗ್ಗೆ ಚರ್ಚೆ ಮೂಲಕ ಪಾಕ್ಗೆ ವಾರ್ನಿಂಗ್
ಸಂದೇಶ 2 : 10 ವರ್ಷಗಳ ಶಸ್ತ್ರಾಸ್ತ್ರ ಸಪ್ಲೈ ಡೀಲ್ ಮೂಲಕ ಚೀನಾಗೆ ಎಚ್ಚರಿಕೆ
ಸಂದೇಶ 3 : ಗಡಿಯಲ್ಲಿ ಚೀನಾ ಕಿರಿಕ್ ವಿರುದ್ಧ ರಷ್ಯಾ ಮೂಲಕ ಭಾರತ ಸಂದೇಶ
ಉಕ್ರೇನ್ ವಿಚಾರವಾಗಿ ಭಾರತದ ಬೆಂಬಲ ಯಾಚಿಸಿದ ಪುಟಿನ್
ಇನ್ನು ಉಕ್ರೇನ್ ಹಾಗೂ ರಷ್ಯಾ ನಡುವಿನ ವಿವಾದದಲ್ಲಿ ಅಮೆರಿಕ ರಷ್ಯಾದ ವಿರುದ್ಧ ಗರಂ ಆಗಿದೆ. ಉಕ್ರೇನ್ ಗಡಿಯಲ್ಲಿ ರಷ್ಯಾ ಸೈನಿಕರ ಜಮಾವಣೆಗೆ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ ಇಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಪುಟಿನ್ ನಡುವೆ ವರ್ಚುವಲ್ ಮೀಟಿಂಗ್ ನಡೆಯಲಿದೆ. ಉಕ್ರೇನ್ ವಿವಾದದಲ್ಲಿ ರಷ್ಯಾ ಜೊತೆಗೆ ನಿಲ್ಲುವಂತೆ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಮನವಿ ಮಾಡಿದ್ದಾರೆ. ಒಟ್ನಲ್ಲಿ ಜಗತ್ತಿನ ಅತಿದೊಡ್ಡ ಶಸ್ತ್ರಾಸ್ತ್ರ ತಯಾರಿಕಾ ರಾಷ್ಟ್ರವಾಗಿರೋ ರಷ್ಯಾ ಹಾಗೂ ಭಾರತದ ನಡುವಿನ ಮಹತ್ವದ ಮಾತುಕತೆ ಬಗ್ಗೆ ಚರ್ಚೆಯಾಗ್ತಿದೆ. ಅದ್ರಲ್ಲೂ ಗಡಿಯಲ್ಲಿ ಭಾರತದ ಜೊತೆಗೆ ಕಾಲುಕೆರೆದು ಜಗಳಕ್ಕೆ ನಿಲ್ಲೋ ಚೀನಾ ಹಾಗೂ ಪಾಕಿಸ್ತಾನಕ್ಕೆ ಈ ಮೂಲಕ ಸ್ಪಷ್ಟ ಸಂದೇಶ ರವಾನೆಯಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post