ಬೆಂಗಳೂರು: ಕಳೆದ ಪರಿಷತ್ ಚುನಾವಣೆಯಲ್ಲಿ ದಳದ ಭದ್ರಕೋಟೆಯನ್ನೇ ಬೇಧಿಸಿತ್ತು ಕಾಂಗ್ರೆಸ್. 2016ರ ಸೇಡನ್ನ ತೀರಿಸಿಕೊಳ್ಳಲು ಇದೀಗ ದಳಪತಿಗಳು ಟೊಂಕಕಟ್ಟಿ ನಿಂತಿದ್ದು, ಶತಾಯಗತಾಯ ಕ್ಷೇತ್ರ ಮರಳಿ ಹಿಂಪಡೆಯಲು ರಣತಂತ್ರಗಳನ್ನ ಹೆಣೆಯುತ್ತಿದ್ದಾರೆ. ಆದ್ರೆ, ಅದ್ಯಾಕೋ ಕಾಂಗ್ರೆಸ್ ಮಾತ್ರ ಆ ಕ್ಷೇತ್ರದತ್ತ ಗಮನ ಹರಿಸ್ತಿಲ್ಲ. ಈ ಬಾರೀ ಯಾಕೋ ಕ್ಷೇತ್ರದಲ್ಲಿ ಸೈಲೆಂಟ್ ಆಗ್ಬಿಟ್ಟಿದೆ.
ಹಾಸನ ಹೇಳಿಕೇಳಿ ಜೆಡಿಎಸ್ ಭದ್ರಕೋಟೆ..ಆದ್ರೆ, ಕಳೆದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ದಳದ ವ್ಯೂಹ ಬೇಧಿಸಿ ಗೆಲುವಿನ ನಗೆ ಬೀರಿತ್ತು. ಈ ಹಿನ್ನೆಲೆ ಹಾಸನ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರೋ ದಳಪತಿಗಳು ಕ್ಷೇತ್ರವನ್ನ ಮತ್ತೆ ತೆಕ್ಕೆಗೆ ಪಡೆಯಲು ಕಸರತ್ತು ಮಾಡ್ತಿದ್ದಾರೆ. ಆದ್ರೆ, ಕಾಂಗ್ರೆಸ್ ನಾಯಕರು ಕ್ಷೇತ್ರದತ್ತ ಮುಖ ಮಾಡ್ತಿಲ್ಲ.
ಹಾಸನ ಪರಿಷತ್ ಪ್ರಚಾರಕ್ಕೆ ಬಾರದ ರಾಜ್ಯ ‘ಕೈ’ಪಡೆ
ಪರಿಷತ್ನಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಕೈ ಪಡೆ ತಂತ್ರ ಹೆಣೆಯುತ್ತಿದ್ದು, ಇತರ ಕ್ಷೇತ್ರಗಳಲ್ಲಿ ರಾಜ್ಯ ಕೈ ನಾಯಕರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಆದ್ರೆ, ಕಾಂಗ್ರೆಸ್ ನಾಯಕರು ಅದ್ಯಾಕೋ ಹಾಸನ ಪರಿಷತ್ ಪ್ರಚಾರಕ್ಕೆ ಮಾತ್ರ ಬರ್ತಿಲ್ಲ. ಇದ್ರಿಂದ ಕ್ಷೇತ್ರದಲ್ಲಿ ಜೆಡಿಎಸ್ ನಾಯಕರು ನಿರಾಳವಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಚಾರಕ್ಕೆ ಬಾರದಿರೋದು ಹಲವು ಪಶ್ನೆಗಳಿಗೂ ಎಡೆಮಾಡಿಕೊಟ್ಟಿದೆ.
ಜೋಡೆತ್ತು ಗೈರು.. ದಳದಲ್ಲಿ ಹುಮ್ಮಸ್ಸು!
ಪ್ರಶ್ನೆ 1 : ಕುಟುಂಬ ರಾಜಕಾರಣ ವಿರುದ್ಧ ಟೀಕಿಸಿ ಪ್ರಚಾರಕ್ಕೆ ಸಿದ್ದು ಗೈರಾಗಿದ್ಯಾಕೆ?
ಪ್ರಶ್ನೆ 2 : ಮಾಜಿ ಸಚಿವ ರೇವಣ್ಣ ನಡುವಿನ ಬಾಂಧವ್ಯದ ಕಾರಣ ಸಿದ್ದು ಗೈರಾದ್ರಾ?
ಪ್ರಶ್ನೆ 3 : ರೇವಣ್ಣ ಪುತ್ರ ಪರಿಷತ್ ಪ್ರವೇಶಕ್ಕೆ ಡಿಕೆಶಿ ಬಾಹ್ಯ ಬೆಂಬಲ ನೀಡಿದ್ರಾ?
ಪ್ರಶ್ನೆ 4 : ಹಾಸನ ದಳ ಅಭ್ಯರ್ಥಿ ಪ್ರಬಲರಾಗಿದ್ದಾರೆ ಎಂಬ ಕಾರಣಕ್ಕೆ ದೂರಾದ್ರಾ?
ಪ್ರಶ್ನೆ 5 : ದಳ-ಕಮಲ ದೋಸ್ತಿ ಬಗ್ಗೆ ಮಾತಾಡುವ ಕೈಪಡೆ ಹಾಸನದಲ್ಲಿ ಮೌನವೇಕೆ?
ಪ್ರಶ್ನೆ 6 : ಹಾಸನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿಯನ್ನ ಹರಕೆಯ ಕುರಿ ಮಾಡಿದ್ರಾ?
ಪ್ರಶ್ನೆ 7 : ಭವಿಷ್ಯದ ಕಾರಣ ದಳಪತಿ ಜೊತೆ ತೀರ ವಿರಸ ಬೇಡ ಎಂಬ ತೀರ್ಮಾನವಾ?
ಇತರ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ಮಾಡ್ತಿರೋ ಕಾಂಗ್ರೆಸ್ ರಾಜ್ಯ ನಾಯಕರು ಹಾಸನ ಪರಿಷತ್ ಪ್ರಚಾರಕ್ಕೆ ಯಾಕೆ ಬರ್ತಿಲ್ಲ? ಹಾಸನವನ್ನ ಯಾಕೆ ನಿರ್ಲಕ್ಷ್ಯ ಮಾಡ್ತಿದ್ದಾರೆ ಅಂತಾ ಕ್ಷೇತ್ರದ ಕಾರ್ಯಕರ್ತರೇ ಚರ್ಚೆ ಮಾಡ್ತಿದ್ದಾರೆ. ಇದಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಯಾವ ರೀತಿ ಉತ್ತರ ಕೊಡ್ತಾರೆ? ಕಾದು ನೋಡ್ಬೇಕು.
ವಿಶೇಷ ವರದಿ: ಶಿವಪ್ರಸಾದ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post