ಸದನದಲ್ಲಿ ಪ್ರತಿಧ್ವನಿಸುತ್ತಾ 40% ಕಮಿಷನ್ ಆರೋಪ?
ವಿಧಾನಸಭೆಯಲ್ಲಿಂದು 40% ಕಮಿಷನ್ ವಿಚಾರ ಪ್ರತಿಧ್ವನಿಸಲಿದೆ. ಬೆಳಗಾವಿ ಚಳಿಗಾಲದ ವಿಧಾನ ಮಂಡಲದ ಅಧಿವೇಶನದ ಅಂತಿಮ ದಿನವಾದ ಇಂದು, 40% ಪರ್ಸಂಟೇಜ್ ಫೈಟಿಗಿಳಿಯಲು ವಿಪಕ್ಷ ನಾಯಕ ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಪರ್ಸಂಟೇಜ್ ಫೈಟ್ ಮಾಡಲು ನಿಯಮ 60ರ ಅಡಿಯಲ್ಲಿ ಸ್ಪೀಕರ್ಗೆ ನಿಲುವಳಿ ಸೂಚನೆ ನೋಟಿಸ್ ಅನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ್ದಾರೆ.
ಇಂದಿನಿಂದ ವಿಶ್ವ ಹಿಂದೂ ಪರಿಷತ್‌ನ ಸಮಾವೇಶ
ವಿಶ್ವ ಹಿಂದೂ ಪರಿಷತ್‌ನ 3 ದಿನಗಳ ಸಮಾವೇಶ ಗುಜರಾತ್ನ ಜುನಾಗಡದಲ್ಲಿ ಇಂದಿನಿಂದ ಆರಂಭಗೊಳ್ಳಲಿದೆ. ದೇವಸ್ಥಾನಗಳ ಆಡಳಿತವನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಈ ಸಮಾವೇಶದಲ್ಲಿ ಚರ್ಚೆಯಾಗಲಿದೆ. ಪರಿಸರ ಸಂರಕ್ಷಣೆ, ಮತಾಂತರ ವಿರೋಧಿ ಕಾಯ್ದೆ ಜಾರಿ ಹಾಗೂ ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆಯೂ ಸಹ ಈ ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ ಅಂತ ವಿಹೆಚ್‌ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ತಿಳಿಸಿದ್ದಾರೆ.
ಪುಲ್ವಾಮದಲ್ಲಿ ಸುಧಾರಿತ ಸ್ಫೋಟಕ ಪತ್ತೆ
ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಮಗ್ರಿ ಪತ್ತೆಯಾಗಿದ್ದು, ಭದ್ರತಾ ಪಡೆ ಸ್ಫೋಟಕವನ್ನು ನಾಶಪಡಿಸುವ ಮೂಲಕ ಭಾರಿ ಅನಾಹುತವನ್ನು ತಪ್ಪಿಸಿದೆ. ಗುಪ್ತಚರ ದಳದ ಖಚಿತ ಮಾಹಿತಿ ಮೇರೆಗೆ ವಾನ್‌ಪೋರಾ ಪ್ರದೇಶದ ನೆವಾ–ಶ್ರೀನಗರ ರಸ್ತೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ವೇಳೆ ರಸ್ತೆ ಬದಿಯಲ್ಲಿ ಸುಮಾರು 5 ಕಿಲೋ ಗ್ರಾಂ ತೂಕದ ಸುಧಾರಿತ ಸ್ಫೋಟಕ ಪತ್ತೆಯಾಗಿದ್ದು, ಕಂಟೈನರ್‌ಗೆ ಜೋಡಿಸಲಾಗಿತ್ತು.
‘ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡದಿರೋದು ಅಫ್ಘಾನ್ ಸಂಸ್ಕೃತಿ’
ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡದಿರುವುದು ಅಫ್ಘಾನ್ ಸಂಸ್ಕೃತಿಯ ಭಾಗ ಅಂತ ಹೇಳಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಸದ್ಯ ವಿವಾದಕ್ಕೀಡಾಗಿದೆ. ಜಾಗತಿಕ ಮಟ್ಟದಲ್ಲಿ ಭಾರೀ ಟ್ರೋಲ್ಗೂ ಗುರಿಯಾಗಿದೆ. ಇಸ್ಲಾಮಿಕ್ ಸಹಕಾರ ಸಂಘ ಆಯೋಜಿಸಿದ್ದ ಶೃಂಗಸಭೆಯಲ್ಲಿ ತಾಲಿಬಾನ್ ಅನ್ನ ಸಮರ್ಥಿಸಿಕೊಳ್ಳುತ್ತಾ ಮಾತನಾಡಿದ ಇಮ್ರಾನ್ ಖಾನ್, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡದಿರುವುದು ಕೂಡ ಅಫ್ಘಾನ್ನ ಸಂಸ್ಕೃತಿ ಅಂತ ತಿಳಿಸಿದ್ದಾರೆ.
ಒಮಿಕ್ರಾನ್ ಆಯ್ತು, ಈಗ ‘ಡೆಲ್ಮಿಕ್ರಾನ್’
ರೂಪಾಂತರಿ ಒಮಿಕ್ರಾನ್ ಜಗತ್ತಿನಾದ್ಯಂತ ವ್ಯಾಪಿಸುತ್ತಿದ್ರೆ, ಇದೀಗ ಮತ್ತೊಂದು ಹೊಸ ತಲೆ ನೋವು ಡೆಲ್ಮಿಕ್ರಾನ್ ರೂಪದಲ್ಲಿ ಎದುರಾಗಿದೆ. ಕೊರೊನಾದ ಡೆಲ್ಟಾ ರೂಪಾಂತರ ಮತ್ತು ಒಮಿಕ್ರಾನ್ ರೂಪಾಂತರವನ್ನು ಸಂಯೋಜಿಸುವ ಮೂಲಕ ಈ ಹೆಸರನ್ನು ಪಡೆಯಲಾಗಿದೆ. ಈ ಎರಡೂ ರೂಪಾಂತರಗಳು ಒಟ್ಟಿಗೆ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಪತ್ತೆಯಾಗುತ್ತವೆ. ಹೀಗಾಗಿ, ಯುರೋಪ್ ಸೇರಿದಂತೆ ಪಶ್ಚಿಮದ ರಾಷ್ಟ್ರಗಳಲ್ಲಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಕೊರೊನಾ, ಡೆಲ್ಟಾ ರೂಪಾಂತರಿಗಿಂತ ಒಮಿಕ್ರಾನ್ ರೂಪಾಂತರದ ಹರಡುವಿಕೆ ಮೂರು ಪಟ್ಟು ಹೆಚ್ಚು ಅಂತ ಹೇಳಲಾಗಿತ್ತು. ಇದೀಗ, ಡೆಲ್ಮಿಕ್ರಾನ್ ಕೊರೊನಾದ ಡಬಲ್ ರೂಪಾಂತರಿಯಾಗಿದ್ದು, ಇದು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಹರಡುತ್ತಿದೆ.
ಇ-ಮೇಲ್ ಮೂಲಕ ‘ಡಯಾವೋಲ್’ ವೈರಸ್
ಗ್ರಾಹಕರ ಖಾತೆಗಳಿಂದ ಹಣವನ್ನ ಎಗರಿಸಲು ದುಷ್ಕರ್ಮಿಗಳು ಇ-ಮೇಲ್ ಮೂಲಕ ಹೊಸ ಡಯಾವೋಲ್ ವೈರಸ್ನನ್ನ ಹರಡಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಇ-ಮೇಲ್ ಮೂಲಕ ಹೊಸ ರೀತಿಯ ಱನ್ಸಂವೇರ್ ಹರಡುತ್ತಿದೆ ಅಂತ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಹೇಳಿದೆ. ಅದು ವಿಂಡೋಸ್ ಕಂಪ್ಯೂಟರ್ಗಳನ್ನ ಟಾರ್ಗೆಟ್ ಮಾಡುತ್ತಿದೆ. ಒಂದು ಸಲ ಪೇಲೋಡ್ ಡೆಲಿವರಿ ಆಯ್ತು ಅಂದ್ರೆ, ಕಂಪ್ಯೂಟರ್ ಅನ್ನ ದೂರ ನಿಯಂತ್ರಣದಿಂದ ಲಾಕ್ ಮಾಡಲಾಗುತ್ತೆ ಹಾಗೂ ಬಳಕೆದಾರರಿಂದ ಹಣ ಕೀಳಲಾಗುತ್ತದೆ ಅಂತ ಅಧಿಕಾರಿಗಳು ವಿವರಿಸಿದ್ದಾರೆ.
ಆನ್‌ಲೈನ್ ಮದ್ವೆಗೆ ಕೇರಳ ಹೈಕೋರ್ಟ್ ಅಸ್ತು
ಒಮಿಕ್ರಾನ್ ರೂಪಾಂತರಿ ಹಾವಳಿಯಿಂದ ಹಸೆಮಣೆ ಏರಲಾಗದೇ ಕಂಗಾಲಾಗಿದ್ದ ಕೇರಳದ ವಕೀಲ ಜೋಡಿಯೊಂದಕ್ಕೆ ಅಲ್ಲಿನ ಹೈಕೋರ್ಟ್, ಆನ್‌ಲೈನ್ ಮದುವೆಗೆ ಅಸ್ತು ಎಂದಿದೆ. ಇದರಿಂದ ಹೊಸ ಸಂಪ್ರದಾಯಕ್ಕೆ ಚಾಲನೆ ದೊರೆತಿದೆ. ವಿದ್ಯಾಭ್ಯಾಸಕ್ಕೆ ಹೋಗಿ ಇಂಗ್ಲೆಂಡ್‌ನಲ್ಲಿ ಸಿಕ್ಕಿ ಬಿದ್ದಿರುವ ವರ ಅನಂತ ಕೃಷ್ಣ ಹರಿ ಕುಮಾರನ್ ನಾಯರ್, ಕೇರಳಕ್ಕೆ ವಾಪಸಾಗಲು ಒಮಿಕ್ರಾನ್ ಅಡ್ಡಿಯಾಗಿದೆ. ಈ ಹಿನ್ನೆಲೆ ಆನ್‌ಲೈನ್ ಮೂಲಕ ಮದುವೆಯಾಗುವ ಪ್ಲಾನ್ನಿಂದಾಗಿ ಅನುಮತಿ ಕೋರಿ ಜೋಡಿ ಅರ್ಜಿ ಸಲ್ಲಿಸಿತ್ತು. ಇದ್ರಲ್ಲಿ ಈ ಜೋಡಿ ಅಚ್ಚರಿಯ ಗೆಲುವು ಸಾಧಿಸಿ, ಮದುವೆಗೆ ತಯಾರಾಗಿದ್ದಾರೆ.
ವಿದ್ಯೆ ಕಲಿತ್ರೂ ಸಹ ಅನಕ್ಷರಸ್ತರಾದ ವಿದ್ಯಾರ್ಥಿಗಳು
ಮಧ್ಯಾಹ್ನದ ಊಟ ಸೇವಿಸಲು ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ, ಅಡುಗೆ ಕೆಲಸದಿಂದ ದಲಿತ ಮಹಿಳೆಯನ್ನ ವಜಾ ಮಾಡಿದ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಉತ್ತರಾಖಂಡ ರಾಜ್ಯದ ಚಂಪಾವತ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಸುಖೀಧಂಗ್ ಮಾಧ್ಯಮಿಕ ಶಾಲೆಯಲ್ಲಿ ದಲಿತ ಮಹಿಳೆಯೊಬ್ಬರು ಅಡುಗೆ ಕೆಲಸ ಮಾಡುತ್ತಿದ್ರು. ಆದ್ರೆ, ಇದೇ ಶಾಲೆಯಲ್ಲಿ ಓದುತ್ತಿರುವ ಕೆಲ ಮೇಲ್ಜಾತಿಯ ವಿದ್ಯಾರ್ಥಿಗಳು, ದಲಿತ ಮಹಿಳೆ ಮಾಡಿದ ಅಡುಗೆಯನ್ನ ಊಟ ಮಾಡದೆ ನಿರಾಕರಿಸಿದ್ದಾರೆ. ಹೀಗಾಗಿ, ಶಾಲಾ ಆಡಳಿತ ಮಂಡಳಿ ಈ ದಲಿತ ಮಹಿಳೆಯನ್ನ ಅಡುಗೆ ಕೆಲಸದಿಂದ ವಜಾಗೊಳಿಸಿದ್ದಾರೆ.
ಇಂಗ್ಲೆಂಡ್ ತಂಡಕ್ಕೆ ‘ಕಾಲಿಂಗ್ವುಡ್’ ಹೆಡ್ಕೋಚ್
ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ ತಂಡಕ್ಕೆ ಪಾಲ್ ಕಾಲಿಂಗ್ವುಡ್ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಸದ್ಯ, ಆಶಸ್ ಸರಣಿಯಲ್ಲಿರುವ ಇಂಗ್ಲೆಂಡ್ ತಂಡ ಮೊದಲ ಎರಡು ಪಂದ್ಯಗಳನ್ನ ಸೋತು ಭಾರೀ ಹಿನ್ನಡೆಯನ್ನ ಅನುಭವಿಸಿದೆ. ಇದೀಗ, ಇದರ ನಡುವೆಯೇ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಹೀಗಾಗಿ, ಈ ಸರಣಿಗೆ ಇಂಗ್ಲೆಂಡ್ನ ಮಾಜಿ ಆಟಗಾರ ಪಾಲ್ ಕಾಲಿಂಗ್ ವುಡ್ ಅವರನ್ನ ಮುಖ್ಯಕೋಚ್ ಆಗಿ ಆಯ್ಕೆ ಮಾಡಲಾಗಿದೆ.
ಮೀನಿನಿಂದ ಜೀವ ಕಳೆದುಕೊಳ್ತು ಮೊಸಳೆ!
ಆಹಾರ ಅರಸಿ ದಡದತ್ತ ಬಂದಿದ್ದ ಈಲ್ ಎಂಬ ಮೀನನ್ನ ತಿನ್ನಲು ಹೋಗಿ, ಮೀನಿನ ಶಾಕ್ಗೆ ಒಳಗಾಗಿ ಮೊಸಳೆ ದುರಂತವಾಗಿ ಸಾವನ್ನಪ್ಪಿರೋ ಅಚ್ಚರಿಯ ಘಟನೆ ನಡೆದಿದೆ. ಈಲ್ ಎಂಬ ಮೀನು 860 ವೋಲ್ಟ್ ವಿದ್ಯುತ್ ಉತ್ಪಾದಿಸುತ್ತದೆ. ಈಲ್ ಎಂಬ ಮೀನನ್ನು ತಿನ್ನಲು ಮೊಸಳೆ ನುಂಗಿದ್ದ ವೇಳೆ, ಈಲ್ ಮೀನು 860 ವೋಲ್ಟ್ ವಿದ್ಯುತ್ ಪ್ರವಹಿಸಿದೆ. ಹೀಗಾಗಿ, ಮೀನಿನ ಶಾಕ್‌ನಿಂದ ಮೊಸಳೆ ದವಡೆ ತೆರೆಯದೆಯೇ ಸಾವನ್ನಪ್ಪುತ್ತದೆ. ಮೊಸಳೆಯ ದವಡೆಯಲ್ಲಿ ಸಿಕ್ಕಿಬಿದ್ದಿದ್ದ ಈಲ್ ಕೂಡಾ ಪ್ರಾಣ ಬಿಟ್ಟಿದೆ. @zubinashara ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು, ಭಾರೀ ಸಂಚಲನ ಸೃಷ್ಟಿಸಿದೆ.
The alligator takes a fish called eel in its jaws. The eel generates 860 volts of electricity. As a result, the crocodile dies of shock without opening the jaws and the eel also dies after being trapped in the jaws.
Such videos are rarely seen.#TwitterNatureCommunity #wild pic.twitter.com/jhT5q5OyRn
— Zubin Ashara (@zubinashara) December 18, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post