ಕಾಂಗ್ರೆಸ್ ಮೇಕೆದಾಟು ಕಾಲ್ನಡಿಗೆಗೆ ಸರ್ಕಾರದ ನಿರ್ಬಂಧ
ಮೇಕೆದಾಟು ಪಾದಯಾತ್ರೆ ಬಗ್ಗೆ ರಾಜ್ಯ ಹೈಕೋರ್ಟ್ ಗರಂ ಆಗ್ತಿದ್ದಂತೆ ಸರ್ಕಾರ ಅಲರ್ಟ್ ಆಗಿದೆ. ಕೋರ್ಟ್ ಆದೇಶ ಪಾಲನೆಗೆ ಸಿದ್ಧ ಅಂತಾ ರಾಜ್ಯ ಸರ್ಕಾರ ಹೇಳಿದೆ. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆಯನ್ನ ಸರ್ಕಾರ ನಿರ್ಬಂಧಿಸಿದೆ. ತಕ್ಷಣವೇ ಪಾದಯಾತ್ರೆ ನಿಲ್ಲಿಸಬೇಕೆಂದು ಆದೇಶ ಹೊರಡಿಸಿದೆ. ಡಿಸಿ, ಎಸ್ಪಿ, ಸಾರಿಗೆ ಆಯುಕ್ತರು ಆದೇಶ ಜಾರಿಗೊಳಿಸಬೇಕು ಅಂತಾ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಕಾಂಗ್ರೆಸ್ ನಾಯಕರನ್ನ ವಶಕ್ಕೆ ಪಡೆಯುವ ಸಾಧ್ಯತೆ
ಪಾದಯಾತ್ರೆ ತಡೆ ಆದೇಶ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದಾರೆ. ರಾಮನಗರದಲ್ಲಿ ರಾತ್ರೋರಾತ್ರಿ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದಾರೆ. ನಿನ್ನೆ ರಾತ್ರಿಯೇ ರಾಮನಗರಕ್ಕೆ 3 ಸಾವಿರಕ್ಕೂ ಹೆಚ್ಚು ಪೊಲೀಸರು ಆಗಮಿಸಿದ್ದಾರೆ. ನಗರದ ಐಜೂರು ವೃತ್ತದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಪೊಲೀಸರು ಗೃಹ ಬಂಧನದಲ್ಲಿರಿಸುವ ಸಾಧ್ಯತೆಯಿದೆ.
ಪಾದಯಾತ್ರೆ ನಿಲ್ಲಿಸುವ ವಿಚಾರಕ್ಕೆ ಟ್ವೀಟ್, ಪತ್ರ
ಮೇಕೆದಾಟು ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಸಾಕಾರಗೊಳಿಸಲು ಸರ್ಕಾರ ಬದ್ಧವಾಗಿದೆ ಅಂತಾ ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. ಕೋವಿಡ್ ರೂಲ್ಸ್ ಉಲ್ಲಂಘನೆ ಮಾಡದೇ ಎಲ್ಲರೂ ಸಹಕಾರ ನೀಡಬೇಕು ಅಂತಾ ಬೊಮ್ಮಾಯಿ ಹೇಳಿದ್ದಾರೆ. ಇನ್ನು, ಕಾಂಗ್ರೆಸ್ ಒಂದು ಜವಾಬ್ದಾರಿ ಪಕ್ಷವಾಗಿದ್ದರೆ ತಕ್ಷಣ ಪಾದಯಾತ್ರೆ ನಿಲ್ಲಿಸಲಿ. ಸರಕಾರ ಕೆಚ್ಚೆದೆಯ ಕ್ರಮ ಕೈಗೊಳ್ಳಬೇಕು ಅಂತಾ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಇನ್ನೊಂದೆಡೆ, ಪಾದಯಾತ್ರೆ ಕೈ ಬಿಡುವಂತೆ ಸಿದ್ದರಾಮಯ್ಯ ಹಾಗೂ ಡಿಕೆಎಸ್ಗೆ ಮಾಜಿ ಸಿಎಂ S.M ಕೃಷ್ಣ ಪತ್ರ ಬರೆದಿದ್ದಾರೆ.
ನಾಡಿನೆಲ್ಲೆಡೆ ವೈಕುಂಠ ಏಕಾದಶಿಯ ವೈಭವ
ಇವತ್ತು ನಾಡಿನೆಲ್ಲೆಡೆ ವೈಕುಂಠ ಏಕಾದಶಿಯೂ ಸಂಭ್ರಮ ಮನೆ ಮಾಡಿದ್ದು, ರಾಜ್ಯಾದ್ಯಂತ ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಬೆಂಗಳೂರಿನ ಇಸ್ಕಾನ್ನಲ್ಲಿ ವೆಂಕಟರಮಣಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರಗಳು ಆರಂಭಗೊಂಡಿವೆ. ಕೊರೊನಾ ಹಿನ್ನೆಲೆಯಲ್ಲಿ ಇಸ್ಕಾನ್ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಆನ್‌ಲೈನ್ ಮೂಲಕವೇ ಭಕ್ತರು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ವೈಯಾಲಿಕಾವಲ್ನ ವೆಂಕಟೇಶ್ವರ ದೇಗುಲದಲ್ಲಿ ಸಂಪ್ರದಾಯಕ್ಕಾಗಿ ವೈಕುಂಠ ದ್ವಾರ ನಿರ್ಮಿಸಲಾಗಿದೆ. ಕೋವಿಡ್ ರೂಲ್ಸ್ ಪ್ರಕಾರ ದೇಗುಲದಲ್ಲಿ ಒಮ್ಮೆಲೆ 50ಜನರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ಇದೆ.
ಅಯೋಧ್ಯೆಯಿಂದ ಸಿಎಂ ಯೋಗಿ ಆದಿತ್ಯನಾಥ್ ಸ್ಪರ್ಧೆ?
ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸೋದಕ್ಕೆ ಸಿಎಂ ಯೋಗಿ ಆದಿತ್ಯನಾಥ್ ರೆಡಿಯಾಗ್ತಿದ್ದಾರೆ. ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಿಂದಲೇ ಯೋಗಿ ವಿಧಾನಸಭೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗ್ತಿದೆ. ಈ ಮೂಲಕ ಹಿಂದುತ್ವವನ್ನೇ ಪ್ರಬಲ ಅಸ್ತ್ರವನ್ನಾಗಿಸಿಕೊಂಡು, ಚುನಾವಣೆ ಎದುರಿಸಲು ಬಿಜೆಪಿ ಸಿದ್ಧತೆ ನಡೆಸಿಕೊಂಡಿದೆ ಎನ್ನಲಾಗ್ತಿದೆ. ಇನ್ನೊಂದೆಡೆ ಯುಪಿಯಲ್ಲಿ ಕಳೆದ 2 ದಿನಗಳಲ್ಲಿ ಇಬ್ಬರು ಸಚಿವರು ಹಾಗೂ ನಾಲ್ವರು ಶಾಸಕರು ಬಿಜೆಪಿಗೆ ರಾಜೀನಾಮೆ ನೀಡಿದ್ದು ಯೋಗಿಗೆ ತಲೆನೋವು ತಂದಿಟ್ಟಿದೆ.
ತನಿಖಾ ಸಮಿತಿಗೆ ಮುಖ್ಯಸ್ಥರ ನೇಮಿಸಿದ ಸುಪ್ರೀಂ ಕೋರ್ಟ್
ಪಂಜಾಬ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಭದ್ರತಾ ಲೋಪದ ತನಿಖೆ ನಡೆಸಲು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದಲ್ಲಿ ಸುಪ್ರೀಂಕೋರ್ಟ್ ನೂತನ ಸಮಿತಿ ರಚಿಸಿದೆ. ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದಲ್ಲಿನ ಐವರು ಸದಸ್ಯರ ಸಮಿತಿ ತನಿಖೆ ಆರಂಭಿಸಲಿದೆ. ವಿಚಾರಣೆ ನಡೆಸಿ ಆದಷ್ಟು ಬೇಗ ತನಿಖಾ ವರದಿ ಸಲ್ಲಿಸುವಂತೆ ಇಂದು ಮಲ್ಹೋತ್ರಾ ನೇತೃತ್ವದ ಸಮಿತಿಗೆ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠ ಮನವಿ ಮಾಡಿದೆ.
ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮಹತ್ವದ ಸಭೆ
ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರ ನಿಯಂತ್ರಣ ವಿಚಾರವಾಗಿ ಇಂದು ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಂಜೆ 4.30ಕ್ಕೆ ಪ್ರಾರಂಭವಾಗುವ ಈ ವರ್ಚುವಲ್ ಮೀಟಿಂಗ್‌ನಲ್ಲಿ ಕರ್ನಾಟಕ ಸಿಎಂ ಬೊಮ್ಮಾಯಿ ಸೇರಿ ಎಲ್ಲ ರಾಜ್ಯಗಳ ಸಿಎಂಗಳು ಭಾಗಿಯಾಗಲಿದ್ದಾರೆ.
ಚೀನಾ ಎದುರಿಸಲು ಭಾರತ ಸೇನೆ ಸನ್ನದ್ಧ
ಲಡಾಖ್ ಗಡಿಯಲ್ಲಿ ಚೀನಾದ ಆರ್ಮಿಯನ್ನು ಎದುರಿಸಲು ಭಾರತೀಯ ಯೋಧರು ಸಿದ್ಧರಾಗಿದ್ದಾರೆ ಅಂತಾ ಭಾರತ ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಚೀನಾಗೆ ಎಚ್ಚರಿಕೆ ನೀಡಿದ್ದಾರೆ. ಗಡಿಯಲ್ಲಿ ಯಾವುದೇ ಸಂದರ್ಭದಲ್ಲಾದ್ರೂ, ಚೀನಾ ಸೇನೆಯನ್ನ ಎದುರಿಸಲು ಗರಿಷ್ಠ ಮಟ್ಟದ ಸನ್ನದ್ಧತೆ ಹೊಂದಲಾಗಿದೆ. ಗಡಿಯಲ್ಲಿನ ಸಂಘರ್ಷ ಭಾಗಶಃ ಕಡಿಮೆಯಾಗಿದೆ. ಆದರೆ ಅಪಾಯ ಇನ್ನೂ ಕಡಿಮೆಯಾಗಿಲ್ಲ ಅಂತಾ ಜನರಲ್ ನರವಣೆ ಮಾಹಿತಿ ನೀಡಿದ್ದಾರೆ.
ನಟ ಸಿದ್ಧಾರ್ಥ್ ವಿರುದ್ಧ ಕೇಸ್ ದಾಖಲು
ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿದ್ದ ನಟ ಸಿದ್ಧಾರ್ಥ್ ವಿರುದ್ಧ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಿದ್ಧಾರ್ಥ್ ವಿರುದ್ಧ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ, ಐಪಿಸಿ ಸೆಕ್ಷನ್ 509 ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಮಾತು, ಹಾವಭಾವ ಕೃತ್ಯ, ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಭಾರತಕ್ಕೆ ಮತ್ತೆ ಆರಂಭಿಕ ಆಘಾತ-ಕೊಹ್ಲಿ ಮೇಲೆ ಹೊಣೆ
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ನ ಎರಡನೇ ದಿನದಾಟದಂತ್ಯಕ್ಕೆ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ 2 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದೆ. ಕೇಪ್ಟೌನ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತೀಯ ಬೌಲರ್ಗಳ ದಾಳಿಗೆ ಆಫ್ರಿಕಾ ಮೊದಲ ಇನ್ನಿಂಗ್ಸ್ನಲ್ಲಿ 210ರನ್ಗಳಿಗೆ ಆಲೌಟ್ ಆಯ್ತು. ಭಾರತದ ಪರ ಜಸ್ಪ್ರೀತ್ ಬೂಮ್ರಾ 5 ವಿಕೆಟ್ ಪಡೆದು ಮಿಂಚಿದ್ರು. 13ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ, ಮತ್ತೆ ಓಪನರ್ಗಳು ಕೈಕೊಟ್ಟರು. ಸದ್ಯ ಕ್ರೀಸ್ನಲ್ಲಿ ಕೊಹ್ಲಿ 14ರನ್ ಹಾಗೂ ಪೂಜಾರಾ 9ರನ್ಗಳಿಸಿ ಇಂದಿಗೆ ಆಟ ಕಾಯ್ದುಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post