ಜಾರ್ಖಂಡ್: ಅಪಘಾತದಲ್ಲಿ ಗಾಯಗೊಂಡು ಐದು ವರ್ಷದಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿ ಕೋವಿಡ್ ಲಸಿಕೆ ಪಡೆಯುತ್ತಿದ್ದಂತೆ ಗುಣಮುಖನಾಗಿದ್ದಾನೆ. ಈ ಅಚ್ಚರಿಯ ಘಟನೆಗೆ ರಾಜ್ಯದ ಸಾಲ್ಘಡಿ ಗ್ರಾಮ ಸಾಕ್ಷಿಯಾಗಿದೆ.
ಕೊರೊನಾ ಮಾರಿ ದೇಶದಲ್ಲಿ ಸದ್ದಿಲ್ಲದೆ ತನ್ನ ಆರ್ಭಟವನ್ನ ಶುರು ಮಾಡಿಕೊಂಡಿದ್ದು ಸಾಕಷ್ಟು ಆತಂಕ ಸೃಷ್ಟಿಸಿದೆ. ಈ ನಡುವೆ ಈ ಸೋಂಕನ್ನು ಆದಷ್ಟು ಬೇಗ ನಿಯಂತ್ರಣ ಮಾಡಬೇಕೆಂದು ಪಣ ತೊಟ್ಟಿರುವ ಸರ್ಕಾರ ಈಗಾಗಲೇ ಡಬಲ್ ಡೋಸ್ ಲಸಿಕೆ ಪಡೆದವರಿಗೆ ಬೂಸ್ಟ್ರ್ ಡೋಸ್ ನೀಡಲು ಆರಂಭಿಸಿದೆ. ಇಷ್ಟೆಲ್ಲಾ ಸರ್ಕಸ್ಗಳು ನಡೆಯುತ್ತಿದ್ದರು ಕೆಲವೊಂದು ಭಾಗಗಳಲ್ಲಿ ಕೋವಿಡ್ ಲಸಿಕೆ ಕುರಿತು ಸಾಕಷ್ಟು ಹಿಂಜರಿಕೆಗಳಿವೆ. ಲಸಿಕೆ ಅಂದ್ರೆ ಸಾಕು ಮಾರುದ್ಧ ದೂರ ಓಡಿಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ 5 ವರ್ಷದಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿಯೋರ್ವರು ಲಸಿಕೆ ಬೀಳುತ್ತಿದ್ದಂತೆ ದಿಢೀರ್ ಹುಷಾರಾಗಿ ಅಚ್ಚರಿ ಮೂಡಿಸಿದ್ದಾರೆ.
ಹೌದು.. ಇಂತಹ ಅಪರೂಪದಲ್ಲಿ ಅಪರೂಪವೆಂಬಂತೆ ಘಟನೆ ಜಾರ್ಖಂಡ್ನ ಸಾಲ್ಘಡಿ ಗ್ರಾಮದಲ್ಲಿ ನಡೆದಿದೆ. ದುಲಾರ್ಚಂದ್ ಮುಂಡಾ ಎಂಬುವವರು 5 ವರ್ಷದ ಹಿಂದೆ ನಡೆದ ಅಪಘಾತದಲ್ಲಿ ಗಾಯಗೊಂಡು ಹಾಸಿಗೆ ಹಿಡಿದಿದ್ದರು ಎನ್ನಲಾಗಿದೆ. ಅವರಿಗೆ ಇತ್ತೀಚಿಗೆ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿತ್ತು. ಆಶ್ಚರ್ಯ ಎಂದರೆ ಲಸಿಕೆ ತನ್ನ ಕೆಲಸ ಶುರು ಮಾಡುತ್ತಿದ್ದಂತೆ ಅವರು ಎದ್ದು ಓಡಾಡಲು, ಮಾತನಾಡಲು ಶುರು ಮಾಡಿದ್ದಾರೆ ಎಂದು ವರದಿಗಳಾಗಿವೆ.
ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದ ನಂತರ ಹಾಸಿಗೆ ಹಿಡಿದಿದ್ದ ವ್ಯಕ್ತಿ ನಡೆಯಲು ಮತ್ತು ಮಾತನಾಡಲು ಪ್ರಾರಂಭಿಸಿದರು ಎಂದು ಖುದ್ದು ವೈದ್ಯರೇ ಹೇಳಿದ್ದಾರೆ. ಈ ಪವಾಡದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಜಾರ್ಖಂಡ್ ಸರ್ಕಾರ, ತನಿಖೆಗಾಗಿ ಮೂವರು ಸದಸ್ಯರ ವೈದ್ಯಕೀಯ ತಂಡವನ್ನು ರಚಿಸಿ ಆದೇಶ ನೀಡಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]sfirstlive.com
Discussion about this post