ಬೆಂಗಳೂರು: ಇಂದು ಮಕರಸಂಕ್ರಮಣವೇ ಅಥವಾ ನಾಳೆ ಮಕರ ಸಂಕ್ರಮಣವೇ ಎಂಬ ಚಿಂತನೆ ಅಲ್ಲಲ್ಲಿ ನಡೆದಿದೆ. ಈ ಕುರಿತು ಇಂದು ಬೆಳಿಗ್ಗೆ ಇಸ್ರೋದ ಹಿರಿಯ ವಿಜ್ಞಾನಿಗಳಾದ ಶ್ರೀನಾಥ್ ರತ್ನಕುಮಾರ್ ಅವರ ಜೊತೆಯಲ್ಲಿ ಚರ್ಚೆ ನಡೆಯಿತು ಎಂದು ಧಾರ್ಮಿಕ ಚಿಂತಕರಾದ ಡಾ. ಶಲ್ವಪ್ಪಿಳ್ಳೈ ಅಯ್ಯಂಗಾರ್ ತಿಳಿಸಿದ್ದಾರೆ.
ಅವರ ಜೊತೆ ಪಂಚಾಗದಲ್ಲಿನ ಮತ್ತು ವೈಜ್ಞಾನಿಕ ವಿಧಾನಗಳ ವ್ಯತ್ಯಾಸಗಳನ್ನು ಮತ್ತು ಹಲವು ಸಾಮ್ಯತೆಗಳನ್ನು ನಾವು ಚರ್ಚಿಸಿದೆವು. ಸ್ವಲ್ಪ ಹೊತ್ತಿನ ಮುಂಚೆ ಆತ್ಮೀಯರಾದ ಶ್ರೀಕಾಂತ್ ಶ್ರೀಪುರಂ ಅವರು ಇದರ ಬಗ್ಗೆ ಒಂದು ಮಾಹಿತಿ ಕೊಡಲು ಹೇಳಿದ್ದರು. ಮಕರ ಸಂಕ್ರಮಣ ಎಂದರೆ ಸೂರ್ಯನು ಮಕರರಾಶಿಯನ್ನು ಪ್ರವೇಶಿಸುವ ಕಾಲ. ಅವನು ಪ್ರವೇಶದ ಸಮಯದಲ್ಲಿ ಪುಣ್ಯಕಾಲ ಎಂದು ಗುರುತಿಸಿ ಕೆಲವು ಕಾಲ ನಾವು ಪಿತೃತರ್ಪಣ, ದಾನ, ಸ್ನಾನ ಇತ್ಯಾದಿಗಳನ್ನು ಆಚರಿಸಬೇಕು ಎಂದು ಹೇಳಿದೆ.
14.1.2022 ರಂದು ಸೂರ್ಯನು ಮಕರ ರಾಶಿ ಪ್ರವೇಶ ಮಾಡುವುದಿಲ್ಲ, ಆದರೆ ಧನುರಾಶಿಯಿಂದ ಮಕರ ರಾಶಿಯ ಕಡೆಗೆ ಪ್ರವೇಶಮುಖನಾಗಿರುತ್ತಾನೆ. ಆದರೆ ನಾಳೆ ಶನಿವಾರ ಅಂದರೆ 15.1.2022 ರಂದು ಸೂರ್ಯನು ಮಕರರಾಶಿಗೆ ಪ್ರವೇಶ ಮಾಡುತ್ತಾನೆ.
ನಾಳಿನ ಗ್ರಹ ಸ್ಫುಟ ಸೂರ್ಯ ಮಕರದಲ್ಲಿ ೦° – ೩೭”
ನಾಳೆಯೇ ಪುಣ್ಯ ಕಾಲ ಮತ್ತು ಆಚರಣೆ
ತಿಲಸ್ನಾಯೀ – ಎಳ್ಳಿನಿಂದ ಸ್ನಾನ
ತಿಲೋದ್ವರ್ತೀ – ಎಳ್ಳನ್ನು ಮೈಗೆ ಹಚ್ಚುವುದು
ತಿಲಹೋಮೀ – ಎಳ್ಳಿನಲ್ಲಿ ಹೋಮ
ತಿಲೋದಕೇ – ತರ್ಪಣ – / ಎಳ್ಳಿನ ನೀರು ಸೇವನೆ
ತಿಲಭುಕ್ – ಎಳ್ಳು ತಿನ್ನುವುದು ( ಎಳ್ಳು + ಬೆಲ್ಲ)
ತಿಲದಾತಾ – ಎಳ್ಳು ಬೆಲ್ಲ ಕೊಡುವುದು / ದಾನ
ಈ ಆರು ವಿಧವಾಗಿ ಎಳ್ಳನ್ನು ಉಪಯೋಗಿಸಿದರೆ ಪಾಪಗಳು ನಾಶವಾಗುತ್ತವೆ ಎಂದು ಅವರು ವಿವರಿಸಿದ್ದಾರೆ. ಮೇಲುಕೋಟೆಯಲ್ಲಿ ನಾಳೆಯೇ ಮಕರಸಂಕ್ರಾಂತಿಯ ಆಚರಣೆ ಇದ್ದು ಸಂಕ್ರಮಣ ಉತ್ಸವ ಮತ್ತು ವಸಂತರಾಗದ ಸೇವೆ ನಡೆಯಲಿದೆ. ಪ್ರಸಿದ್ಧ ಯತಿರಾಜದಾಸರ್ ಸ್ಥಾನಾಚಾರ್ಯ ವಂಶದವರ ನೇಮಿ ಸೇವೆ ಒಂದು ಸಾವಿರ ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದು ನಾಳೆ ನಡೆಯಲಿದೆ. ಸಂಕ್ರಾಂತಿ ಆಚರಣೆ ಅತ್ಯಂತ ವೈಜ್ಞಾನಿಕ ಮತ್ತು ಸೂರ್ಯನ ಮತ್ತು ಭೂಮಿಯ ಚಲನೆಯ ಆಧಾರದ ಮೇಲೆ ಸಹಸ್ರಾರು ವರ್ಷಗಳ ಹಿಂದೆಯೇ ರೂಪಿಸಿರುವಂತದ್ದು ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post