ಬೆಂಗಳೂರು: ದಲಿತ ಮತ ಕೈತಪ್ಪಿ ಅನ್ಯ ಪಕ್ಷಗಳತ್ತ ವಾಲುತ್ತಿರುವಾಗ ಪಾದಯಾತ್ರೆಯಲ್ಲಿ ಹಾಕಿದ ಆ ಎರಡು ಹೆಜ್ಜೆಗಳು ಕಾಂಗ್ರೆಸ್ನಲ್ಲಿ ಹೊಸ ಭರವಸೆ ಹುಟ್ಟಿಸಿವೆ. ಈ ಹಿಂದಿನಂತೆ ಬಲಿಷ್ಠ ನಾಯಕತ್ವದ ಸೃಷ್ಠಿಗೆ ನೀರುಣಿಸುವ ಕಾಯಕದಲ್ಲಿ ಮಗ್ನವಾಗಿದೆ. ಉತ್ತರದಲ್ಲಿ ಪ್ರಿಯಾಂಕ್ಗೆ ಹೊಣೆ ಒಪ್ಪಿಸಿದ್ರೆ, ದಕ್ಷಿಣದಲ್ಲಿ ಧ್ರುವ ನಾರಾಯಣ್ಗೆ ನೊಗ ಹೊರಿಸಲು ಪ್ಲಾನ್ ಮಾಡಿದೆ ಎನ್ನಲಾಗಿದೆ.
ಉತ್ತರದಲ್ಲಿ ಪ್ರಿಯಾಂಕ್.. ದಕ್ಷಿಣದಲ್ಲಿ ಧ್ರುವ ನಾರಾಯಣ್
2023ರ ವಿಧಾನಸಭಾ ಚುನಾವಣಾ ಕದನಕ್ಕೆ ಕಾಂಗ್ರೆಸ್ ಸಜ್ಜುಗೊಳ್ಳುತ್ತಿದೆ. ಎಲೆಕ್ಷನ್‌ನಲ್ಲಿ ಗೆಲವು ಸಾಧಿಸಲು ಆಯಾ ಸಮುದಾಯದ ಪ್ರಭಾವಿ ನಾಯಕರಿಗೆ ಜವಾಬ್ದಾರಿಗಳನ್ನೂ ನೀಡುತ್ತಿದೆ. ಈ ನಿಟ್ಟಿನಲ್ಲಿ ಭವಿಷ್ಯದಲ್ಲಿ ದಲಿತ ನಾಯಕತ್ವಕ್ಕೆ ಮುನ್ನುಡಿ ಬರೆಯಲು ಕಾಂಗ್ರೆಸ್ ಸಿದ್ಧವಾಗಿದೆ. ಈ ಮುನ್ನುಡಿಗೆ ಕಾಂಗ್ರೆಸ್‌ನ ಪಾದಯಾತ್ರೆ ಕೂಡಾ ಕಾರಣವಾಗಿದೆ. ಭವಿಷ್ಯದ ದಲಿತ ನಾಯಕತ್ವ ಸದೃಢಕ್ಕಾಗಿ ಕೆಪಿಸಿಸಿ ಸಜ್ಜಾಗಿದ್ದು, ಉತ್ತರ ಕರ್ನಾಟಕದಲ್ಲಿ ಪ್ರಿಯಾಂಕ್ ಖರ್ಗೆ. ದಕ್ಷಿಣದಲ್ಲಿ ಧ್ರುವ ನಾರಾಯಣ್‌ರನ್ನ ದಲಿತ ನಾಯಕರನ್ನಾಗಿ ಬೆಳೆಸುತ್ತಿದೆ.
ದಲಿತ ನಾಯಕತ್ವಕ್ಕೆ ಮುನ್ನುಡಿ
ಮೇಕೆದಾಟು ಪಾದಯಾತ್ರೆಯಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಆರ್. ಧ್ರುವನಾರಾಯಣ್ ಈ ಇಬ್ಬರು ನಾಯಕರು ಮುಂಚೂಣಿಯಲ್ಲಿದ್ರು. ಪಾದಯಾತ್ರೆಯಲ್ಲಿ ಆರ್.ಧ್ರುವ ನಾರಾಯಣ್, ಪ್ರಿಯಾಂಕ್ ಖರ್ಗೆ ನಾಯಕತ್ವ ವಹಿಸಿದ್ದರು. ಹೀಗೆ ಪಾದಯಾತ್ರೆಯಲ್ಲಿ ಮುಂಚೂಣಿಗೆ ತರುವುದರ ಹಿಂದೆಯೂ ಕೈ ನಾಯಕರ ಲೆಕ್ಕಾಚಾರವಿದೆ. ಅದೇನಂದ್ರೆ, ಮಲ್ಲಿಕಾರ್ಜುನ ಖರ್ಗೆ, ಕೆ. ಹೆಚ್. ಮುನಿಯಪ್ಪ, ಡಾ. ಜಿ. ಪರಮೇಶ್ವರ್ ಕಾಂಗ್ರೆಸ್‌ನ ಹಿರಿಯ ನಾಯಕರು. ಇವರ ಬಳಿಕ ಭವಿಷ್ಯದ ದಲಿತ ನಾಯಕರಾರು ಎಂಬ ಚರ್ಚೆ ಶುರುವಾಗಿದೆ.
ಹೀಗಾಗಿ ಪ್ರಬಲ ದಲಿತ ನಾಯಕರ ಹುಡುಕಾಟದಲ್ಲಿದ್ದ ಕಾಂಗ್ರೆಸ್‌ಗೆ ಈ ಇಬ್ಬರು ನಾಯಕರು ಭವಿಷ್ಯದ ದಲಿತಾಸ್ತ್ರವಾಗಿ ಸಿಕ್ಕಿದ್ದಾರೆ. ಹೀಗಾಗಿ ದಕ್ಷಿಣಕ್ಕೆ ಧ್ರುವನಾರಾಯಣ್, ಉತ್ತರಕ್ಕೆ ಪ್ರಿಯಾಂಕ್ ಖರ್ಗೆಯನ್ನ ಸನ್ನದ್ಧಗೊಳಿಸಲು ಕೈ ನಾಯಕರು ತಂತ್ರ ಹೆಣೆದಿದ್ದಾರೆ.
ಕಾಂಗ್ರೆಸ್ ಹೆಣೆದಿದೆ ತಂತ್ರ!
- ಪ್ಲಾನ್ 1 : ಧ್ರುವ ನಾರಾಯಣ್, ಪ್ರಿಯಾಂಕ್ರನ್ನ ಭವಿಷ್ಯದ ನಾಯಕರಾಗಿಸೋದು
- ಪ್ಲಾನ್ 2 : ಉತ್ತರ ಕರ್ನಾಟಕದಲ್ಲಿ ದಲಿತ ಮತಗಳ ಮೇಲೆ ಪ್ರಿಯಾಂಕ್ ಹಿಡಿತ
- ಪ್ಲಾನ್ 3 : ದಕ್ಷಿಣ ಕರ್ನಾಟಕದಲ್ಲಿ ಧ್ರುವನಾರಾಯಣ್ ಮುನ್ನಲೆಗೆ ತರುವ ಯತ್ನ
- ಪ್ಲಾನ್ 4 : ದಲಿತ, ಇತರೇ ಸಮಯದಾಯಗಳ ವಿಶ್ವಾಸಗಳಿಸಿರುವ ಧ್ರುವ ನಾರಾಯಣ್
- ಪ್ಲಾನ್ 5 : ಕೊಳ್ಳೆಗಾಲ ಅಥವಾ ನಂಜನಗೂಡಿನಿಂದ ಸ್ಪರ್ಧೆಗೆ ವರಿಷ್ಠರ ಸೂಚನೆ
ಒಟ್ಟಾರೆ, ಮೇಕೆದಾಟು ಪಾದಯಾತ್ರೆಯನ್ನ ಕಾಂಗ್ರೆಸ್ ಅರ್ಧಕ್ಕೆ ಮೊಟಕುಗೊಳಿಸಿದ್ರೂ ಇದರಿಂದ ಹಲವು ರೀತಿಯ ಲಾಭಗಳನ್ನ ಪಡೆದುಕೊಂಡಿದೆ. ಈ ರಾಜಕೀಯ ಲಾಭದಲ್ಲಿ ದಲಿತ ನಾಯಕರನ್ನ ಮುನ್ನಲೆಗೆ ತಂದಿರೋದು ಪ್ರಮುಖವಾಗಿದೆ. ಅದೇನೆ ಇರ್ಲಿ ಕಾಂಗ್ರೆಸ್‌ನ ಈ ದಲಿತ ಮತತಂತ್ರ ಹೇಗೆ ವರ್ಕೌಟ್ ಆಗುತ್ತೆ ಅನ್ನೋದು ಮುಂದಿರೋ ಪ್ರಶ್ನೆ.
ವಿಶೇಷ ವರದಿ: ತಿಮ್ಮೇಗೌಡ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post