ರಾಜಕೀಯ ಅನ್ನೋದು ಎಂತಹ ಮಿತೃತ್ವವನ್ನೇ ಸೈಡಿಗಾಕಿಬಿಡುತ್ತೆ. ಇಲ್ಲಿ ಕೆಲವೊಮ್ಮೆ ಕುಟುಂಬ, ಸಂಬಂಧ, ಭಾವನೆಗಳು ಯಾವುದೂ ಲೆಕ್ಕಕ್ಕೆ ಬರಲ್ಲ. ಒಂದೇ ಮನೆಯಲ್ಲಿದ್ದುಕೊಂಡೇ ಬೇರೆ ಬೇರೆ ಪಕ್ಷಗಳನ್ನ ಆರಾಧಿಸೋರನ್ನ ನಾವ್ ನೋಡಿದ್ದೀವಿ. ಆದ್ರೆ, ಚುನಾವಣೆ ಹತ್ತಿರ ಬರ್ತಿದ್ದಂತೆ ಒಬ್ಬ ಧುರೀಣನ ಮನೆಯವರೇ ಶಾಕ್ ಕೊಡೋದು ಇದ್ಯಲ್ಲ ಅದು ನಿಜಕ್ಕೂ ನಂಬಲಾಗದ ಬೆಳವಣಿಗೆ. ಅಂತಹುದ್ದೇ ಒಂದು ದೊಡ್ಡ ಬೆಳವಣಿಗೆಗೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ. ಮೊದಲೇ ಎಲೆಕ್ಷನ್ ಬಿಸಿಗೆ ಕಾದಿರುವ ಅಖಾಡ ಮತ್ತಷ್ಟು ಶಾಖ ಉಗುಳಿದೆ. ಬಿಜೆಪಿ ಬಾಯಿಗೆ ಲಡ್ಡು ಬಿದ್ರೆ ಪ್ರಮುಖ ಎದುರಾಳಿ ಪಾರ್ಟಿಗೆ ಆಘಾತವಾಗಿದೆ..
ಬಹುಶಃ ಇದು ಯಾರೂ ನಿರೀಕ್ಷಿಸದ ಬೆಳವಣಿಗೆ ಅಂದ್ರೆ ತಪ್ಪಾಗೋದಿಲ್ಲ. ಎಲೆಕ್ಷನ್ ಹತ್ತಿರವಾದಾಗ ಒಂದು ಪಕ್ಷದಲ್ಲಿರುವ ಅಸಮಾಧಾನಿತರು ಸಮಯ ನೋಡಿ ಪಕ್ಷದಿಂದ ಪಕ್ಷಕ್ಕೆ ಹಾರೋದು ಕಾಮನ್.. ಆ ರೀತಿಯ ಅದೆಷ್ಟೋ ಘಟನೆಗಳನ್ನ ಈ ರಾಷ್ಟ್ರದ ಜನರು ನೋಡಿದ್ದಾರೆ.. ನೋಡ್ತಾನೆ ಇದ್ದಾರೆ. ಆದ್ರೆ, ಉತ್ತರ ಪ್ರದೇಶದ ಚುನಾವಣಾ ಕಣದಲ್ಲಿ ಈ ಬಾರಿ ಮಾತ್ರ ಅಕ್ಷರಶಃ ಪಕ್ಷಾಂತರದ ಬಿರುಗಾಳಿ ಭುಗಿಲೆದ್ದಿದೆ. ಅದ್ರಲ್ಲೂ ವಿಶೇಷವಾಗಿ ಜಿದ್ದಿಗೆ ಬಿದ್ದು ಮತಬೇಟೆಯಾಡ್ತಿರೋ ಎಸ್‌ಪಿ, ಬಿಜೆಪಿ ಮಧ್ಯ ಅಕ್ಷರಶಃ ಸಮರವೇ ನಡೆದುಹೋಗ್ತಿದೆ. ಬಿಜೆಪಿಯ ಘಟಾನುಘಟಿ ಸಚಿವರನ್ನು ಇತ್ತೀಚೆಗಷ್ಟೇ ಆಪರೇಷನ್ ಮಾಡಿದ್ದ ಅಖಿಲೇಶ್ ಯಾದವ್ ಪಾಳಯ, ಸಿಎಂ ಯೋಗಿಗೆ ಠಕ್ಕರ್ ಮೇಲೆ ಠಕ್ಕರ್ ಕೊಡ್ತಾನೆ ಬಂದಿತ್ತು. ಆದ್ರೆ, ಇವೆಲ್ಲಾ ಖುಷಿಯಲ್ಲಿ ಮುಲಾಯಂ ಕಟ್ಟಿದ್ದ ಪಕ್ಷ ಮಿಂದೇಳುವ ಮುನ್ನ ಬಿಜೆಪಿ ಮುಟ್ಟಿ ನೋಡಿಕೊಳ್ಳುವ ಹೊಡೆತ ಕೊಟ್ಟಿದೆ.
ಚುನಾವಣೆ ಹೊಸ್ತಿಲಲ್ಲಿ ಮಾವನ ಪಕ್ಷಕ್ಕೆ ಭರ್ಜರಿ ಠಕ್ಕರ್
ಬಿಜೆಪಿ ಸೇರಿ ಎಸ್‌ಪಿಗೆ ಶಾಕ್ ಕೊಟ್ಟ ಅಪರ್ಣಾ ಯಾದವ್
ಹೌದು..ಉತ್ತರ ಮಾಜಿ ಮುಖ್ಯಮಂತ್ರಿ, ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಹಾಗೂ ಅಖಿಲೇಶ್ ಯಾದವ್ ಪಾಳಯಕ್ಕೆ ದೊಡ್ಡ ಆಘಾತವಾಗಿದೆ. ಮುಲಾಯಂ ಸಿಂಗ್ರ ಕಿರಿಯ ಸೊಸೆ ಅಪರ್ಣಾ ಯಾದವ್ ಚುನಾವಣೆ ಹೊಸ್ತಿಲಲ್ಲಿ ಮಾವನ ಪಕ್ಷಕ್ಕೆ ಶಾಕ್ ಕೊಟ್ಟಿದ್ದಾರೆ. ಸಮಾಜವಾದಿ ಪಕ್ಷದ ಕಟ್ಟಾ ಎದುರಾಳಿ ಬಿಜೆಪಿ ಪಕ್ಷ ಸೇರಿಕೊಂಡಿದ್ದಾರೆ. ಎಲೆಕ್ಷನ್ ಹತ್ತಿರವಾಗ್ತಿದ್ದಂತೆ ಬಿಜೆಪಿ ಕೆಡವಲು ರಣತಂತ್ರ ರೂಪಿಸುತ್ತಿದ್ದ ಎಸ್‌ಪಿಗೆ ಈ ಬೆಳವಣಿಗೆಯಿಂದ ಭಾರೀ ಹೊಡೆತವೇ ಬಿದ್ದಂತಾಗಿದ್ದ, ಎಸ್ಪಿಯ ಚುನಾವಣಾ ಲೆಕ್ಕಾಚಾರಗಳೇ ಉಲ್ಟಾ ಆಗುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ
ಚುನಾವಣೆ ಘೋಷಣೆಗೂ ಮುನ್ನ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದು ಪಕ್ಕಾ, ಯೋಗಿ ಮತ್ತೆ ಸಿಎಂ ಸ್ಥಾನ ಏರ್ತಾರೆ ಅನ್ನೋ ಸಮೀಕ್ಷೆಗಳ ಮಾಹಿತಿ ಎಲ್ಲಾ ಕಡೆಯಿಂದಲೂ ಅಪ್ಪಳಿಸುತಿತ್ತು. ಆದ್ರೆ, ಎಲೆಕ್ಷನ್ ಘೋಷಣೆಯಾಗುತ್ತಿದ್ದಂತೆ, ಉತ್ತರಪ್ರದೇಶದ ಪೊಲಿಟಿಕಲ್ ವಾತಾವರಣ ನಿಧಾನಕ್ಕೆ ಬದಲಾಯಿತು. ದಿನಕಳೆದಂತೆ ಎಸ್‌ಪಿ ಪ್ರಬಲವಾಯ್ತಾ ಸಾಗುತ್ತಿತ್ತು. ಯಾದವ್, ಮುಸ್ಲಿಂ ಸೇರಿದಂತೆ ಬಹುತೇಕ ಹಿಂದುಳಿತ ಮತಗಳು ಈ ಬಾರಿ ಸಮಾಜವಾದಿ ಬಿಟ್ಟು ಕದಲ್ವೇನ ಅನ್ನುವಷ್ಟರಮಟ್ಟಿಗೆ ಅಖಿಲೇಶ್ ಪಾಳಯ ತಂತ್ರ ರಣತಂತ್ರಗಳನ್ನ ಹೆಣೆಯುವಲ್ಲಿ ಯಶಸ್ವಿಯಾಗ್ತಿತ್ತು. ಗೆಲುವಿಗೆ ಇವು ಸಾಕಾಗಲ್ಲ ಅನ್ನೋದನ್ನು ಅರಿತ ಮಾಜಿ ಸಿಎಂ ಅಖಿಲೇಶ್ ಯಾದವ್ ಚಿಕ್ಕಪುಟ್ಟ ಪಕ್ಷಗಳ ಜೊತೆ ಮೈತ್ರಿಯನ್ನೂ ಮಾಡಿಕೊಂಡಿದ್ರು. ಇನ್ನು, ಒಬಿಸಿ ಮತಗಳ ಮೇಲೆ ಕಣ್ಣಿಟ್ಟು ಬಿಜೆಪಿ ಸಚಿವ ಪ್ರಭಾವಿ ಸಚಿವರಾದ ಸ್ವಾಮಿ ಪ್ರಸಾದ್ ಮೌರ್ಯ, ದಾರಾ ಸಿಂಗ್, ಧರ್ಮ್‌ಸಿಂಗ್ ಅವರನ್ನೂ ಪಕ್ಷಕ್ಕೆ ಸೆಳೆದುಕೊಂಡಿದ್ರು. ಸಾಲು ಸಾಲು ಶಾಸಕರು ಬಿಜೆಪಿಗೆ ರಾಜೀನಾಮೆ ನೀಡಿ ತಮ್ಮ ಪಕ್ಷಕ್ಕೇ ಬಹುಪರಾಕ್ ಎನ್ನುವಂತೆ ಮಾಡಿದ್ದರು. ಇದು ಸಹಜವಾಗಿ ಬಿಜೆಪಿಗೆ ಹೊಡೆತ ನೀಡುತ್ತೆ ಅಂತಲೇ ಅಂದಾಜಿಸಲಿತ್ತಾದ್ರೂ ಈ ಬಾರಿ ಬಿಜೆಪಿ ಎಸ್‌ಪಿ ಮಧ್ಯೆ ರಣಕಾಳಗವೇ ನಡೆಯುವ ಮುನ್ಸೂಚನೆ ನೀಡಿತ್ತು. ಹೀಗೆ, ಕಮಲ ಸೈಕಲ್ ನಡುವೆ ಸಮರ ನಿರಂತರವಾಗಿ ಸಾಗ್ತಿರೋ ಮಧ್ಯೆಯೇ, ಮುಲಾಯಂ ಸಿಂಗ್ ಸೊಸೆಯ ಮೂಲಕವೇ ಬಿಜೆಪಿ ಎಸ್‌ಪಿಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ.
ಎಲ್ಲರೂ ನೋಡಿರುವ ಹಾಗೇ ನಾನು ಸದಾ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯಿಂದ ಪ್ರಭಾವಿತಳಾಗಿದ್ದೆ. ನನ್ನ ಎಲ್ಲಾ ಚಿಂತನೆಗಳಲ್ಲಿ ರಾಷ್ಟ್ರಕ್ಕೆ ಮೊದಲ ಸ್ಥಾನವವಿದೆ. ರಾಷ್ಟ್ರ ಧರ್ಮ ಎನ್ನವುದು ನನಗೆ ಎಲ್ಲಕ್ಕಿಂತ ಮುಖ್ಯ. ನಾನು ಹೇಳೋಕೆ ಇಷ್ಟಪಡುವುದು ಇಷ್ಟೇ. ಈಗ ನಾನು ರಾಷ್ಟ್ರ ಸೇವೆ ಮಾಡಲು ಬಂದಿದ್ದೇನೆ. ಹಾಗಾಗಿ, ನನಗೆ ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ. ಬಿಜೆಪಿಯ ಸ್ವಚ್ಛಭಾರತ ಮಿಷನ್ನಂತಹ ಯೋಜನೆಗಳು ನನಗೆ ತುಂಬಾ ಹಿಡಿಸಿವೆ. ಬಿಜೆಪಿ ಮಹಿಳೆಯರಿಗಾಗಿ ಶ್ರಮಿಸುತ್ತಿರುವ ರೀತಿ ಹಾಗೂ ಪಕ್ಷ ಕಾರ್ಯರೂಪಕ್ಕೆ ತಂದಿರುವ ಇನ್ನೂ ಹಲವು ಯೋಜನೆಗಳಿಂದ ಪ್ರಭಾವಿತಳಾಗಿದ್ದೇನೆ. ಎಂದ ಅಪರ್ಣಾ ಯಾದವ್, ಮುಲಾಯಂ ಸೊಸೆ
2017ರಲ್ಲಿ ಎಸ್‌ಪಿಯಿಂದ ಸ್ಪರ್ಧಿಸಿದ್ದ ಅಪರ್ಣಾ ಯಾದವ್
ಬಿಜೆಪಿ ವಿರುದ್ಧ ಸೋಲುಂಡಿದ್ದ ಮುಲಾಯಂ ಸಿಂಗ್ ಸೊಸೆ
ಮುಲಾಯಂ ಸಿಂಗ್ ಇಡೀ ಕುಟುಂಬವೇ ರಾಜಕೀಯದಲ್ಲಿ ತೊಡಗಿದೆ. ಒಂದೇ ಕುಟುಂಬದ 22 ಜನ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ, ಅಪರ್ಣಾ ಕೂಡ ರಾಜಕೀಯ ಪ್ರಭಾವಕ್ಕೆ ಒಳಗಾಗಿರೋದು ಸಹಜ. ಹಾಗೇ 2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಲಖನೌದ ಕ್ಯಾಂಟ್ ಕ್ಷೇತ್ರದಿಂದ ಎಸ್‌ಪಿ ಅಭ್ಯರ್ಥಿಯಾಗಿ ಅಪರ್ಣಾ ಸ್ಪರ್ಧಿ ಮಾಡಿದ್ದರು. ಆದ್ರೆ, ಆ ಚುನಾವಣೆ ಸಮಯದಲ್ಲಿ ಮೋದಿ ಅಲೆ ಸುನಾಮಿ ರೀತಿಯಲ್ಲಿ ಅಪ್ಪಳಿಸಿತ್ತು. ವಿರೋಧ ಪಕ್ಷಗಳ ಘಟಾನುಘಟಿ ನಾಯಕರೆಲ್ಲಾ ಸೋತು ಸುಣ್ಣವಾಗಿದ್ರು. ಹಾಗೇ ಅಪರ್ಣಾ ಕೂಡ ಬಿಜೆಪಿ ಅಭ್ಯರ್ಥಿ ರೀಟಾ ಬಹುಗುಣ ಜೋಶಿ ವಿರುದ್ಧ ಬರೋಬ್ಬರಿ 33,796 ಮತಗಳಿಂದ ಸೋಲುಂಡಿoದ್ಲು. ಅಷ್ಟಕ್ಕೂ ಯಾರೀ ಅಪರ್ಣ ಅನ್ನೋದನ್ನ ನೋಡೋದಾದ್ರೆ
ಅಪರ್ಣಾ ಯಾದವ್ ಹಿನ್ನೆಲೆ
ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್‌ಗೆ ಇಬ್ಬರು ಪತ್ನಿಯರು
ಮೊದಲನೇ ಪತ್ನಿ ಮಗ ಅಖಿಲೇಶ್, 2ನೇ ಪತ್ನಿ ಮಗ ಪ್ರತೀಕ್
ಮುಲಾಯಂ ಸಿಂಗ್ ಕಿರಿಯ ಮಗ ಪ್ರತೀಕ್ ಪತ್ನಿಯೇ ಅಪರ್ಣಾ
ಠಾಕೂರ್ ಬಿಶ್ಟ್ ಸಮುದಾಯದಲ್ಲಿ ಜನನ, 2011ರಲ್ಲಿ ವಿವಾಹ
ಶಾಸ್ತ್ರೀಯ ಸಂಗೀತವನ್ನೂ ಕಲಿತಿರುವ ಅಪರ್ಣಾ ಯಾದವ್
ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಆಗಿರುವ ಅಪರ್ಣಾ
ಅಂತಾರಾಷ್ಟ್ರೀಯ ಸಂಬಂಧ ಮತ್ತು ರಾಜಕೀಯದಲ್ಲಿ ಪದವಿ
ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ವಿವಿಯಿಂದ ಪದವಿ ಸ್ವೀಕಾರ
ಅಪರ್ಣಾ ಯಾದವ್ರ ಹಿಸ್ಟರಿ ಸಖತ್ ಇಂಟರೆಸ್ಟಿಂಗ್.. ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್‌ಗೆ ಇಬ್ಬರು ಪತ್ನಿಯರಿದ್ದಾರೆ. ಅದರಲ್ಲಿ ಮೊದಲನೇ ಪತ್ನಿ ಮಗ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆಗಿದ್ದಾರೆ, 2ನೇ ಪತ್ನಿ ಸಾಧನಾ ಗುಪ್ತ ಮಗ ಪ್ರತೀಕ್ ಯಾದವ್ ಆಗಿದ್ದಾರೆ. ಇನ್ನು ಪ್ರತಿಕ್ ಯಾದವ್ ಮುಲಾಯಂ ಸಿಂಗ್ ಕಿರಿಯ ಮಗನಾಗಿದ್ದು, ಪ್ರತೀಕ್ ಪತ್ನಿಯೇ ಅಪರ್ಣಾ ಯಾದವ್ ಆಗಿದ್ದಾಳೆ. ಅಪರ್ಣಾ ಠಾಕೂರ್ ಬಿಶ್ಟ್ ಸಮುದಾಯದ ಕುರ್ಮಿ ಎಂಬ ಒಳಜಾತಿಗೆ ಸೇರಿದವರಾಗಿದ್ದಾರೆ. ಇನ್ನು, 2011ರಲ್ಲಿ ಅಪರ್ಣಾ, ಪ್ರತೀಕ್ ವಿವಾಹವಾಗಿದೆ. ಶಾಸ್ತ್ರೀಯ ಸಂಗೀತವನ್ನೂ ಕಲಿತಿರುವ ಅಪರ್ಣಾ ಪ್ರಾಣಿ ಪ್ರಿಯೆಯಾಗಿ ಸಮಾಜ ಸೇವಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇನ್ನು, ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಸ್ಟಾರ್ ಆಗಿರೋ ಈಕೆ ಅಂತಾರಾಷ್ಟ್ರೀಯ ಸಂಬಂಧ ಮತ್ತು ರಾಜಕೀಯ ವಿಷಯದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದು, ಪದವಿ ಸ್ವೀಕಾರ ಮಾಡಿದ್ದಾರೆ.
ಅಪರ್ಣಾ ಕೇವಲ ಮುಲಾಯಂ ಸಿಂಗ್ ಸೊಸೆಯಾಗಿ ಮಾತ್ರ ಕಾಣಿಸಿಕೊಳ್ಳುತ್ತಿಲ್ಲ. ಆಕೆ, ಒಬ್ಬ ಬಹುಮಖ ಪ್ರತಿಭೆ ಹೊಂದಿರೋ ಹಣ್ಣು ಮಗಳು ಅನ್ನೋದು ಸತ್ಯ. ಸಂಗೀತದಲ್ಲಿ, ನೃತ್ಯದಲ್ಲಿಯೂ ಅಪರ್ಣಾ ಎತ್ತಿದ ಕೈಯಾಗಿದ್ದು ಸಮಾಜ ಸೇವೆಯಲ್ಲಿಯೂ ತೊಡಗಿರೋ ಮಹಿಳೆಯಾಗಿದ್ದಾಳೆ.
ಯೋಗಿ ಸಮುದಾಯಕ್ಕೆ ಸೇರಿದ ಅಪರ್ಣಾ ಯಾದವ್
ಯಾದವ ಮತ ಬೇಟೆಗೆ ಬಿಜೆಪಿಯ ಭರ್ಜರಿ ಪ್ಲಾನ್
ಮುಲಾಯಂ ಸಿಂಗ್ ಯಾದವ್ ಕಿರಿಯ ಸೊಸೆ ಬಿಜೆಪಿ ಸೇರ್ಪಡೆಯ ಹಿಂದೆ ಮತ್ತೊಂದು ಬಹುಮುಖ್ಯ ಅಂಶ ಕಂಡು ಬರ್ತಾ ಇದೆ. ಅದೇನಂದ್ರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯಾವ ಸಮುದಾಯಕ್ಕೆ ಸೇರಿದ್ದಾರೋ ಅಪರ್ಣಾ ಕೂಡ ಅದೇ ಠಾಕೂರ್ ಬಿಶ್ಟ್ ಸಮುದಾಯಕ್ಕೆ ಸೇರಿದ ಕುಟುಂಬದಿಂದ ಬೆಳೆದು ಬಂದವರು.. ಇಲ್ಲೇ ಇರೋದು ನೋಡಿ ರೋಚಕ ಟ್ವಿಸ್ಟ್. ಇಲ್ಲಿಯವರೆಗೆ ಬಿಜೆಪಿ ವೋಟ್ ಬ್ಯಾಂಕ್‌ಗೆ ಗಾಳಹಾಕುತ್ತಿದ್ದ ಎಸ್‌ಪಿಗೆ ಇದು ಮುಟ್ಟಿನೋಡಿಕೊಳ್ಳುವ ಏಟು ಅಂದಿದ್ದು ಇದಕ್ಕೆ. ಎಸ್‌ಪಿಗೆ ಪ್ರಮುಖ ವೋಟ್ ಬ್ಯಾಂಕ್ ಅಂದ್ರೆ ಯಾದವ ಮತಗಳು. ಇಲ್ಲಿಯವರೆಗೂ ಯಾದವ ಮತಗಳು ಎಸ್‌ಪಿಯಿಂದ ಚದುರಿ ಹೋಗಿದ್ದ ನಿದರ್ಶನವೇ ಇಲ್ಲ. ಆದ್ರೆ, ಇದೀಗ ಯಾದವ ಮನೆತನದ ಸೊಸೆಯನ್ನ ಪಕ್ಷಕ್ಕೆ ಬರಮಾಡಿಕೊಳ್ಳುವ ಮೂಲಕ, ಬಿಜೆಪಿ ಭರ್ಜರಿ ಪ್ಲಾನ್ ಮಾಡಿದ್ದು, ಠಾಕೂರ್ ಬಿಶ್ಟ್ ಸಮುದಾಯದ ಮತ್ತಷ್ಟು ಮತಬೇಟೆಗೂ ಅಪರ್ಣಾರಿಂದ ನೆರವಾಗಲಿದೆ.
ಅಪರ್ಣಾ ಬಿಜೆಪಿ ಸೇರ್ಪಡೆಯಾಗಿದ್ದು ಯಾಕೆ?
ಮುಲಾಯಂಗೆ ವಯಸ್ಸಾಯ್ತು, ಅಖಿಲೇಶ್ ಬೆಳೆಯಲು ಬಿಡಲ್ಲ!
ಎಸ್‌ಪಿ ಮೇಲೆ ಅಖಿಲೇಶ್ ಸಂಪೂರ್ಣ ಹಿಡಿತ ತೆಗೆದುಕೊಂಡಿದ್ದಾರೆ. ಅಲ್ಲಿ ಮುಲಾಯಂ ಮಾತು ಏನೂ ನಡೆಯೊಲ್ಲ ಎಂಬ ಆರೋಪಗಳು ಅಖಿಲೇಶ್ ಮೇಲೇ ಆಗಾಗ್ಗೇ ಕೇಳಿ ಬರ್ತಿರುತ್ತವೆ. ಟಿಕೆಟ್ ಹಂಚಿಕೆಯಿಂದ ಹಿಡಿದು ಪಕ್ಷದ ಪ್ರತಿಯೊಂದು ನಿರ್ಧಾರದಲ್ಲಿಯೂ ಅಖಿಲೇಶ್ ಮಾತೇ ಶಾಸನ. ಅದು ಕಳೆದ ಚುನಾವಣೆಯಲ್ಲಿಯೇ ಸಾಬೀತಾಗಿದೆ. ಇದು ಸಹಜವಾಗಿ ಮುಲಾಯಂ ಕುಟುಂಬದಲ್ಲಿ ಬಿರುಕು ಮೂಡಿಸಿದೆ. ಅದನ್ನು ಯೋಚಿಸಿಯೇ ಅಪರ್ಣಾ ಕೇಸರಿ ಪಾಳಯಕ್ಕೆ ಜಂಪ್ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿದೆಯಾದರೂ ಅಪರ್ಣಾ ಹೇಳೋದೇ ಬೇರೆ.. ಇನ್ನು, ಇಲ್ಲೇ ಇದ್ದರೆ ಅಖಿಲೇಶ್ ತನ್ನನ್ನು ಬೆಳೆಯಲು ಬಿಡಲ್ಲ ಅನ್ನೋದು ಅಪರ್ಣಾರ ಪ್ರಬಲ ನಂಬಿಕೆ. ಹಾಗಂತ, ಅಖಿಲೇಶ್ ಕುಟುಂಬ ಒಡೆದಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ 2017ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಅಖಿಲೇಶ್ ಚಿಕ್ಕಪ್ಪ ಶಿವಪಾಲ್ ಯಾದವ್ ಎಸ್‌ಪಿಯಿಂದ ಸಿಡಿದು ಹೋಗಿ ಹೊಸ ಪಕ್ಷ ಸ್ಥಾಪನೆ ಮಾಡಿಕೊಂಡಿದ್ರು. ಹೀಗಾಗಿ ಇದು ಎಸ್‌ಪಿಗೆ ಎರಡನೇ ಆಘಾತ ಅನ್ನೋದ್ರಲ್ಲಿ ಡೌಟೇ ಬೇಡ
ಮುಲಾಯಂ ಸೊಸೆ ಬಿಜೆಪಿ ಸೇರುವ ಮೂಲಕ ಮಾವ ಮುಲಾಯಂ ಸಿಂಗ್‌ಗೆ, ಬಾವಾ ಅಖಿಲೇಶ್ ಯಾದವ್‌ಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ. ಅಷ್ಟಕ್ಕೂ ಆಪರೇಷನ್ ಅಪರ್ಣಾ ಆಗಿದ್ದಾದರೂ ಹೇಗೆ. ಅಪರ್ಣಾ ಬಿಜೆಪಿ ಸೇರ್ಪಡೆಯಿಂದ ಉತ್ತರ ಪ್ರದೇಶದ ಚುನಾವಣೆ ಮೇಲೆ ಆಗೋ ಪರಿಣಾಮವೇನು? ಆ ಎಲ್ಲಾ ಕಂಪ್ಲೀಟ್ ವರದಿ ಕೊಡ್ತೀವಿ ಮುಂದಿನ ಸ್ಟೋರಿನಲ್ಲಿ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post