ಬೆಂಗಳೂರು: ಸಂಕ್ರಾಂತಿ ಬಳಿಕ ಬೊಮ್ಮಾಯಿ ಕ್ಯಾಬಿನೆಟ್ಗೆ ಸರ್ಜರಿ ನಡೆಯುತ್ತೆ ಅನ್ನೋ ಚರ್ಚೆ ಬಿಜೆಪಿ ಪಾಳಯದಲ್ಲಿ ಜೋರಾಗೇ ನಡೀತಿದೆ. ಇದ್ರ ಬೆನ್ನಲ್ಲೇ ಬೆಳಗಾವಿಯ ವಲಸಿಗ ಶಾಸಕರು ಸಚಿವ ಸ್ಥಾನಕ್ಕಾಗಿ ಈ ಬಾರಿ ಜೋರಾಗೇ ಲಾಬಿ ನಡೆಸ್ತಿದ್ದಾರೆ. ಬಿಜೆಪಿ ವರಿಷ್ಠರು ಮಾತ್ರವಲ್ಲದೆ ಸಂಘದ ನಾಯಕರ ಬಳಿಯೂ ಮಂತ್ರಿಗಿರಿಗಾಗಿ ಚೌಕಾಸಿ ನಡೆಸ್ತಿದ್ದಾರೆ.
ಸಂಕ್ರಾಂತಿ ಮುಗೀತು.. ಇನ್ನೇನಿದ್ರೂ ಬೊಮ್ಮಾಯಿ ಸರ್ಕಾರದಲ್ಲಿ ಬದಲಾವಣೆಯ ಸಂಕ್ರಮಣ ಶುರುವಾಗಬೇಕಷ್ಟೇ. ಸದ್ಯ ಸರ್ಕಾರದಲ್ಲಿ ನಡೀತಿರೋದು ಎಲೆಕ್ಷನ್ ಕ್ಯಾಬಿನೆಟ್ ರಚನೆಯ ತಯಾರಿ. ಈ ಬಗ್ಗೆ ಹಲವು ದಿನಗಳಿಂದ ಬಿಜೆಪಿ ಪಾಳಯದಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ. ಮಂತ್ರಿಗಿರಿಗಾಗಿಯೇ ಬೆಳಗಾವಿಯಿಂದ ದೆಹಲಿ, ದೆಹಲಿಯಿಂದ ಬೆಂಗಳೂರು ಹೀಗೆ ರೌಂಡ್ಸ್ ಹಾಕ್ತಿದ್ದ ಸಾಹುಕಾರ್ ರಮೇಶ್ ಜಾರಕಿಹೊಳಿ, ಇದೀಗ ಆರ್ಎಸ್ಎಸ್ ಮುಖಂಡರ ಮನೆ ಬಾಗಿಲು ಬಡಿದಿದ್ದಾರೆ. ಅಥಣಿಯಲ್ಲಿ ಆರ್ಎಸ್ಎಸ್ ಮುಖಂಡರನ್ನು ರಮೇಶ್ ಜಾರಕಿಹೊಳಿ ಭೇಟಿ ಮಾಡಿದ್ದು, ಸಚಿವ ಸ್ಥಾನದ ಬಗ್ಗೆಯೇ ಚರ್ಚೆ ಮಾಡಿದ್ದಾರೆ ಅನ್ನೋ ಗುಸುಗುಸು ಶುರುವಾಗಿದೆ. ಆದ್ರೆ ಈ ಭೇಟಿಯಲ್ಲಿ ವಿಶೇಷ ಏನೂ ಇಲ್ಲ ಅಂತಾ ನಿರಾಕರಿಸಿದ್ದಾರೆ.
ಮತ್ತೊಂದೆಡೆ ರಮೇಶ್ ಜಾರಕಿಹೊಳಿ ಆಪ್ತವಲಯದಲ್ಲಿ ಗುರುತಿಸಿಕೊಂಡಿರೋ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ನಾನು ಸಚಿವ ಸ್ಥಾನದ ಆಕಾಂಕ್ಷಿ ಅಂತಾ ಪದೇ ಪದೆ ಹೇಳುತ್ತಲೇ ಇದ್ದಾರೆ. ಪಕ್ಷದ ವರಿಷ್ಠರು ಯಾವುದೇ ಸ್ಥಾನಮಾನ ನೀಡಿದರೂ ನಿಭಾಯಿಸುತ್ತೇನೆ. ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಅಂತಾ ಹೇಳೋ ಮೂಲಕ ಪರೋಕ್ಷ ಲಾಬಿ ನಡೆಸ್ತಿದ್ದಾರೆ. ಅಲ್ಲದೆ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಪರೋಕ್ಷವಾಗಿಯೇ ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಮುಂದಿನ ಚುನಾವಣೆ ಹಿನ್ನೆಲೆ ಬಿಜೆಪಿ ವರಿಷ್ಟರು ಸಂಪುಟಕ್ಕೆ ಸರ್ಜರಿ ಮಾಡೋ ಮೂಲಕ ಹೊಸ ಮುಖಗಳನ್ನು ಪರಿಚಯಿಸೋಕೆ ಮುಂದಾಗಿದ್ದಾರೆ. ಆದರೆ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರೋ ವಲಸಿಗ ಶಾಸಕರನ್ನು ಕಡೆಗಣಿಸಿದ್ರೆ ಹೊಡೆತ ಬೀಳುತ್ತೆ. ಅವ್ರನ್ನೂ ಬಿಡುವಂತಿಲ್ಲ. ಹೀಗಾಗಿ ವಲಸಿಗ ಶಾಸಕರೂ ಈ ಬಾರಿ ತಮಗೂ ಸಚಿವ ಸ್ಥಾನ ಬೇಕು ಅಂತಾ ಪಟ್ಟು ಹಿಡಿದು ಕೂತಿದ್ದಾರೆ. ಹೀಗಾಗಿ ಬೆಳಗಾವಿ ಮೂಲದ ಮೂವರು ಆಕಾಂಕ್ಷಿಗಳ ಪೈಕಿ ಯಾರಿಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಗುತ್ತೆ ಅನ್ನೋದೇ ಸದ್ಯದ ಟಾಪ್ ಸೀಕ್ರೆಟ್.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post