ಆಕೆ ಬಾಂಗ್ಲಾ ದೇಶದ ಜನಪ್ರಿಯ ನಟಿ. ಸರಿಸುಮಾರು 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಬಾಂಗ್ಲಾದಾದ್ಯಂತ ಫುಲ್ ಫೇಮಸ್ ಆಗಿದ್ಲು. ಹೀಗೆ ಸಿನಿ ಲೋಕದಲ್ಲಿ ಮಿಂಚುತ್ತಿರುವಾಗಲೇ ಇದ್ದಕ್ಕಿಂದ್ದಂತೆ ನಾಪತ್ತೆಯಾಗ್ತಾಳೆ. ಮೂರು ದಿನದ ಬಳಿಕ ಗೋಣಿ ಚೀಲದಲ್ಲಿ ಸೇತುವೆಯ ಕೆಳಗಡೆ ಪತ್ತೆಯಾಗಿದ್ದು, ನಟಿಯ ಕೊಳೆತ ಶವ. ಹಾಗಾದ್ರೆ ಬಾಂಗ್ಲಾ ಬೆಡಗಿಯ ಬದುಕಲ್ಲಿ ಆಗಿದ್ದೇನು..?
ಕೆಲವೊಂದು ಕ್ರೈಂ ಸ್ಟೋರಿಗಳೇ ಹಾಗೆ.. ಯಾರಿಂದಲೋ ಶುರುವಾಗಿ ಇನ್ಯಾರದ್ದೋ ಕೊರಳಿಗೆ ಉರುಳಾಗಿ ಬಿಡುತ್ತೆ. ಕೇಸ್ ದಾಖಲು ಮಾಡಿದವರೇ ಕಡೆಗೆ ಕಂಬಿ ಹಿಂದೇ ಸೇರ್ತಾರೆ. ಅಂತಹದ್ದೆ ಘಟನೆಯೊಂದು ಬಾಂಗ್ಲಾದಲ್ಲಿ ನಡೆದಿದೆ. ದುಂಡು ಮುಖ, ಎಂಥವರನ್ನು ಸೂಜಿಗಲ್ಲಿನಂತೆ ಸೆಳೆಯುವ ಅಧ್ಭುತ ನಟನೆ. ಹೀಗೆ ಬ್ಯೂಟಿ ಪ್ರಪಂಚದಲ್ಲಿ ಮೈ ಚಳಿ ಬಿಟ್ಟು ಕುಣಿಯುತ್ತಿರುವ ಈಕೆ ಬಾಂಗ್ಲಾ ದೇಶದ ಪ್ರಸಿದ್ಧ ನಟಿ. ಹೆಸರು ರೈಮಾ ಇಸ್ಲಾಂ ಶಿಮು.
ರೈಮಾ ಇಸ್ಲಾಂ ಶಿಮು ವಿಭಿನ್ನ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಬಾಂಗ್ಲಾ ಸಿನಿ ದುನಿಯಾದಲ್ಲಿ ಹೊಸ ಶಕೆ ಆರಂಭಿಸಿದ್ದಾಕೆ. ಬಾಂಗ್ಲಾದಂತಹ ಇಸ್ಲಾಮಿಕ್ ದೇಶದಲ್ಲಿ ಮುಸ್ಲಿಂ ಹೆಣ್ಣೊಬ್ಬಳು ಈ ರೀತಿಯಲ್ಲಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದೆಂದರೆ ನಿಜಕ್ಕೂ ಅದೊಂದು ಸವಾಲೇ ಸರಿ. ಪರಪುರುಷನ ಮುಖ ನೋಡುವುದನ್ನ ವಿರೋಧಿಸುವ ಕಟು ಸಂಪ್ರದಾಯವಾದಿಗಳ ನಡುವೆ ಬ್ಯೂಟಿ ಪ್ರಪಂಚದಲ್ಲಿ ಕಾಣಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆದ್ರೆ ಈಕೆ ಎದುರಾದ ಎಲ್ಲಾ ರೀತಿಯ ಸವಾಲುಗಳ ಬೇಲಿಯನ್ನ ಹೊಡೆದು ಹಾಕಿ ಸಿನಿ ದುನಿಯಾದಲ್ಲಿ ಕಾಣಿಸಿಕೊಂಡಿದ್ಲು. ಆದ್ರೆ ಈಕೆ ಇದೀಗ ಸುದ್ದಿಯಾಗಿದ್ದು ಯಾವುದೋ ಸಿನಿಮಾ ಮ್ಯಾಟರ್ಗಲ್ಲ. ಬದಲಾಗಿ ಆಕೆಯದ್ದೇ ಸಾವಿನ ವಿಷ್ಯಾದಲ್ಲಿ. ರೈಮಾ ಬದುಕಲ್ಲಿ ಏನಾಯ್ತು..? ಈಕೆ ಸಾವನಪ್ಪಿದ್ದೇಗೆ ಅನ್ನೋದನ್ನ ನೋಡುವ ಮೊದ್ಲು ಆಕೆಯ ಹಿಸ್ಟರಿಯನ್ನ ನೋಡ್ಕೊಂಡು ಬರೋಣ.
ನಟಿ ರೈಮಾ ಹಿಸ್ಟರಿ
1998ರಲ್ಲಿ ಬರ್ತಮನ್ ಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟ ರೈಮಾ ಈಗಾಗಲೇ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕೆಲವು ಧಾರಾವಾಹಿಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಬಾಂಗ್ಲಾದೇಶದ ಚಲನಚಿತ್ರ ಕಲಾವಿದರ ಸಂಘದ ಸದಸ್ಯೆ ಕೂಡ ಆಗಿರುವ ರೈಮಾ, ಬಾಂಗ್ಲಾದೇಶದ ಚಲನಚಿತ್ರೋದ್ಯಮದಲ್ಲಿ ತುಂಬಾ ಜನಪ್ರಿಯ ನಟಿಯಾಗಿದ್ಲು.
ಒಂದಲ್ಲ ಎರಡಲ್ಲ.. ಬರೋಬ್ಬರಿ 25 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ರೈಮಾ ಇಸ್ಲಾಂ ಶಿಮು ವಿಭಿನ್ನ ಪಾತ್ರಗಳ ಮೂಲಕ ಬಾಂಗ್ಲಾ ಸಿನಿ ಲೋಕದಲ್ಲಿ ಹೊಸ ಅಧ್ಯಾಯವನ್ನೇ ಶುರು ಮಾಡಿದ್ಲು. ಹೀಗಿದ್ದವಳು ಕಳೆದ ಮೂರು ದಿನದ ಹಿಂದೆ ಇದ್ದಕ್ಕಿದ್ದಂಗೆ ನಾಪತ್ತೆಯಾಗ್ತಾಳೆ. ಸ್ನೇಹಿತರಲ್ಲೂ ಕುಟುಂಬಸ್ಥರಲ್ಲೂ ಎಲ್ಲಾ ಕಡೆ ವಿಚಾರಿಸಿದ್ರೂ ಈ ರೈಮಾ ಬಗ್ಗೆ ಸಣ್ಣದೊಂದು ಸುಳಿವು ಕೂಡ ಸಿಗಲ್ಲ. ಕೊನೆಗೆ ಬೇರೆ ದಾರಿ ಕಾಣದೆ ರೈಮಾ ಪತಿ ಶೇಕಾವತ್ ಅಲಿ ನೇರವಾಗಿ ಬಾಂಗ್ಲಾದ ಕಲಬಾಗನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡ್ತಾನೆ.
ನಟಿ ಇಸ್ಲಾಂ ಶಿಮು ನಾಪತ್ತೆ ಅನ್ನೋ ಮ್ಯಾಟರ್ ಬಾಂಗ್ಲಾದಾದ್ಯಂತ ಕಾಡ್ಗಿಚ್ಚಿನಂತೆ ಹರಡಿ ಬಿಡುತ್ತೆ. ಬಾಂಗ್ಲಾದ ಫೇಮಸ್ ನಟಿ ಮಾತ್ರವಲ್ಲದೇ ಬಾಂಗ್ಲಾದೇಶ ಚಲನಚಿತ್ರ ಕಲಾವಿದರ ಸಂಘದ ಸಹಾಯಕ ಸದಸ್ಯರಾಗಿದ್ದ ರೈಮಾ ಇಸ್ಲಾಂ ಶಿಮು ನಾಪತ್ತೆಯಾಗಿರುವುದರಿಂದ ಪೊಲೀಸರ ಮೇಲೂ ಸಹಜವಾಗಿಯೇ ಒತ್ತಡ ಬೀಳುತ್ತದೆ. ಪೊಲೀಸರೂ ಕೂಡ ಈಕೆಯ ಹುಡುಕಾಟ ನಡೆಸ್ತಾರೆ. ಆದ್ರೆ ಎಷ್ಟೇ ಹುಡುಕಾಡಿದ್ರೂ ನೋ ಯೂಸ್. ಹೀಗಿದ್ದಾಗ ಒಂದು ದಿನ ಪೊಲೀಸರಿಗೆ ಸ್ಥಳೀಯರು ಕಾಲ್ ಮಾಡಿ ಅದೊಂದು ಗೋಣಿ ಚೀಲದ ಬಗ್ಗೆ ಮಾಹಿತಿ ಕೊಡ್ತಾರೆ.
ಗೋಣಿ ಚೀಲದಲ್ಲಿತ್ತು ಬಾಂಗ್ಲಾ ಬೆಡಗಿಯ ಶವ..!
ಒಂದು ಕಡೆ ಪೊಲೀಸರು ರೈಮಾಗೆ ಹುಡುಕಾಡುತ್ತಿದ್ರೆ, ಅತ್ತ ಬಾಂಗ್ಲಾ ರಾಜಧಾನಿ ಢಾಕಾ ಹೊರವಲಯದ ಕೆರಣಿಗಂಜ್‌ನ ಹಜರತ್‌ಪುರ ಸೇತುವೆಯ ಬಳಿ ಗೋಣಿಚೀಲವೊಂದು ಪತ್ತೆಯಾಗಿತ್ತು. ಅನುಮಾನಗೊಂಡ ಸ್ಥಳೀಯರು ಗೋಣಿ ಚೀಲವನ್ನ ಹೋಗಿ ನೋಡಿದಾಗ ಅದರಲ್ಲಿ ಯುವತಿಯ ಕೊಳೆತ ಶವ ಇತ್ತು. ಕೂಡಲೇ ಸ್ಥಳೀಯರು ಕಲಬಾಗನ್ ಠಾಣೆಗೆ ಮಾಹಿತಿ ಕೊಡ್ತಾರೆ. ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಸ್ಪಾಟ್ಗೆ ಎಂಟ್ರಿ ಕೊಟ್ಟ ಪೊಲೀಸರು, ಗೋಣಿ ಚೀಲದಲ್ಲಿದ್ದ ಶವವನ್ನ ಹೊರ ತೆಗೆಯುತ್ತಾರೆ. ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹದ ಮೇಲೆ ಹಲವು ಗಾಯಗಳು ಇರುವುದುನ್ನ ಪೊಲೀಸರು ಪತ್ತೆ ಮಾಡಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ ಸಲೀಮುಲ್ಲಾ ವೈದ್ಯಕೀಯ ಕಾಲೇಜಿಗೆ ರವಾನಿಸ್ತಾರೆ. ಇದರಿಂದ ಪೊಲೀಸರಿಗೆ ಇದೊಂದು ಹತ್ಯೆ ಅನ್ನೋದು ಕನ್ಫರ್ಮ್ ಆಗುತ್ತೆ. ರೈಮಾ ಇಸ್ಲಾಂ ಶಿಮು ಅವರನ್ನು ಕೊಲೆ ಮಾಡಿ, ನಂತರ ಅವರ ಮೃತದೇಹವನ್ನು ಸೇತುವೆಯ ಬಳಿ ಎಸೆದಿದ್ದಾರೆ ಅನ್ನೋದು ಗೊತ್ತಾಗ್ತಿದ್ದಂಗೆ, ಪೊಲೀಸರು ಕೊಲೆ ಪ್ರಕರಣವನ್ನ ದಾಖಲಿಸಿಕೊಂಡು ತನಿಖೆಯ ಆಳಕ್ಕೆ ಇಳಿದು ಬಿಡ್ತಾರೆ. ನಾಪತ್ತೆಯಾಗಿದ್ದ ರೈಮಾ ಶವವಾಗಿ ಪತ್ತೆಯಾದ ಬಳಿಕ ಪೊಲೀಸರ ತಲೆಯಲ್ಲಿ, ಈಕೆಯನ್ನ ಕೊಂದಿದ್ದು ಯಾರು ಅನ್ನೋ ಪ್ರಶ್ನೆ ಗಿರಕಿ ಹೊಡೆಯೋಕೆ ಶುರು ಮಾಡುತ್ತೆ. ಪ್ರಕರಣದ ಮತ್ತಷ್ಟು ಆಳಕ್ಕೆ ಇಳಿದಾಗ್ಲೇ ಗೊತ್ತಾಗಿದ್ದು ಆ ಹಂತಕ ಯಾರು ಅನ್ನೋದು.
ಮಿಸ್ಸಿಂಗ್ ಕೇಸ್ ದಾಖಲು ಮಾಡಿದವನೇ ಕಡೆಗೆ ಅಂದರ್..!
ಇಲ್ಲೇ ಇರುವುದು ನೋಡಿ ಈ ಸ್ಟೋರಿಯ ಅಸಲಿ ಕ್ಲೈಮಾಕ್ಸ್. ಪೊಲೀಸರಿಗೆ ಅದ್ಯಾಕೋ ರೈಮಾ ಪತಿ ಅಲಿ ಮೇಲೆ ಡೌಟ್ ಬಂದಿತ್ತು. ಯಾವುದಕ್ಕೂ ಇರಲಿ ಎಂದೂ ಆತನನ್ನ ಠಾಣೆಗೆ ಕರೆಸಿದ ಪೊಲೀಸರು ತಮ್ಮದೇ ಸ್ಟೈಲಲ್ಲಿ ವಿಚಾರಣೆ ನಡೆಸಿದಾಗ, ಅಲಿ ಪೊಲೀಸರ ಎದುರು ಎಲ್ಲಾ ಮ್ಯಾಟರ್ ಹೇಳ್ತಾನೆ. ತಾನೇ ತನ್ನ ಪತ್ನಿಯನ್ನ ಕೈಯಾರೆ ಕೊಂದಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡು ಬಿಡ್ತಾನೆ.
ರೈಮಾ ಇಸ್ಲಾಂ ಶಿಮುರನ್ನ ಪತಿ ಕೊಂದಿದ್ಯಾಕೆ..?
ರೈಮಾ ಇಸ್ಲಾಂ ಶಿಮುರ ಹತ್ಯೆಯ ಕಾರಣ ಏನು ಅನ್ನೋದು ತನಿಖೆ ನಡೆಸಿದಾಗ ಪೊಲೀಸರಿಗೆ ಮೇಲ್ನೋಟಕ್ಕೆ ಗೊತ್ತಾಗಿದ್ದು ಕೌಟುಂಬಿಕ ಕಲಹದ ಮ್ಯಾಟರ್. ಅದಾಗ್ಲೆ ಸಿನಿ ದುನಿಯಾದಲ್ಲಿ ಮಿಂಚುತ್ತಿದ್ದ ರೈಮಾ ಹಾಗೂ ಆಕೆಯ ಪತಿ ಅಲಿ ನಡುವೆ ಬಿರುಕು ಮೂಡಿತ್ತು. ಇಬ್ಬರ ನಡುವೆ ಕೆಲ ವಿಷಯಗಳಿಗೆ ಸಂಬಂಧ ಪಟ್ಟಂತೆ ಆಗಾಗ ಜಗಳ ನಡೆಯುತಿತ್ತು. ಅದರಂತೆ ಮೂರು ದಿನಗಳ ಹಿಂದೆ ಕೂಡ ಇಬ್ಬರ ನಡುವೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕೋಪಿತಗೊಂಡ ಪತಿ ಅಲಿ, ಆಕೆಯನ್ನ ಹೊಡೆದು ಕೊಂದೇ ಬಿಟ್ಟಿದ್ದ. ಮುಂದೆ ತನ್ನ ಸ್ನೇಹಿತರ ಮುಖಾಂತರ ಮನೆಯಲ್ಲಿದ್ದ ಶವವನ್ನ ಗೋಣಿ ಚೀಲದಲ್ಲಿ ತುಂಬಿ ಕೆರಣಿಗಂಜ್‌ನ ಹಜರತ್‌ಪುರ ಸೇತುವೆಯ ಬಳಿ ಎಸೆದು ಎಸ್ಕೇಪ್ ಆಗಿದ್ದ. ಮುಂದೆ ತಮಗೇನು ಗೊತ್ತೆ ಇಲ್ಲ ಅನ್ನೋ ಹಾಗೆ ನಾಟಕ ಮಾಡಿದ್ದಾನೆ. ತಾನೇ ಸ್ಟೇಷನ್ಗೆ ಹೋಗಿ ಮಿಸ್ಸಿಂಗ್ ಕಂಪ್ಲೇಂಟ್ ಕೂಡ ಕೊಟ್ಟಿದ್ದಾನೆ.ಆದ್ರೆ ಇದೀಗ ಎಲ್ಲರೂ ತಗ್ಲಾಕೊಂಡಿದ್ದಾರೆ. ಪೊಲೀಸರು ರೈಮಾ ಪತಿ ಅಲಿ, ಶವವನ್ನ ಸಾಗಿಸಲು ಸಹಾಯ ಮಾಡಿದ ಕಾರು ಚಾಲಕ, ಅದ್ಕೆ ಸಹಕರಿಸಿದ ಅಲಿಯ ಸ್ನೇಹಿತರನ್ನ ಜೈಲಿಗಟ್ಟಿದ್ದಾರೆ.
ಸಿನಿಮಾ , ಧಾರವಾಹಿ ಸೇರಿದಂತೆ ಬಣ್ಣದ ಲೋಕದಲ್ಲಿ ಮಿಂಚು ಹರಿಸಿ, ಬದುಕಿನ ಬಗ್ಗೆ ಮತ್ತಷ್ಟು ಕನಸು ಕಂಡಾಕೆ ಇದೀಗ ದುರಂತ ಅಂತ್ಯ ಕಂಡಿದ್ದಾಳೆ. ಈ ಪ್ರಕರಣದಲ್ಲಿ ಬಾಂಗ್ಲಾ ದೇಶದ ಕೆಲ ಸೆಲೆಬ್ರೆಟಿಗಳು ಹೆಸರು ಕೂಡ ಕೇಳಿ ಬರ್ತಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ಹತ್ಯೆ ಕೌಟುಂಬಿಕ ಕಲಹದಿಂದ ನಡೆಯಿತಾ, ಅಥವಾ ಹತ್ಯೆ ಹಿಂದೆ ಬೇರೆ ಏನಾದ್ರೂ ಕಾರಣ ಇದ್ಯಾ ಅನ್ನೋದರ ಕುರಿತು ಮಾಹಿತಿ ಕಲೆ ಹಾಕ್ತಿದ್ದು, ಪೊಲೀಸರ ತನಿಖೆಯಿಂದ ಮತ್ತಷ್ಟು ಸ್ಫೋಟಕ ಸಂಗತಿಗಳು ಹೊರ ಬರುವ ಸಾಧ್ಯತೆ ಇದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post