ಸಿಎಂ ಸಭೆಯತ್ತ ರಾಜ್ಯದ ಜನರ ಚಿತ್ತ
ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿದೆ. ಈ ಆದೇಶಕ್ಕೆ ಬಿಜೆಪಿಯ ಅನೇಕ ಶಾಸಕರು, ಸಚಿವರು, ಕೇಂದ್ರ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಮಹತ್ವದ ಕೋವಿಡ್ ನಿಯಂತ್ರಣ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ವೀಕೆಂಡ್ ಕರ್ಪ್ಯೂ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಉದ್ಯಮ ಮತ್ತು ಕಾರ್ಮಿಕ ವಲಯ ಸೇರಿದಂತೆ ವಿವಿಧ ವಲಯಗಳಿಂದ ವೀಕೆಂಡ್ ಕರ್ಪ್ಯೂಗೆ ವಿರೋಧ ವ್ಯಕ್ತವಾಗಿದೆ.
ಗಾಂಜಾ ಡೀಲ್ ಕೇಸ್ ಸಿಸಿಬಿಗೆ ವರ್ಗಾವಣೆ
ಆರ್.ಟಿ. ನಗರ ಪೊಲೀಸರಿಂದ ಗಾಂಜಾ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ಅನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಸಿಎಂ ಖಾಸಗಿ ನಿವಾಸದ ಬಳಿ ಭದ್ರತೆಗೆಂದು ನಿಯೋಜಿಸಲಾಗಿದ್ದ ಇಬ್ಬರು ಕಾನ್ಸ್ಟೇಬಲ್ಗಳು ಗಾಂಜಾ ಡೀಲ್ ಮಾಡುತ್ತಿದ್ದರು. ಕೋರಮಂಗಲ ಠಾಣೆಯ ಶಿವಕುಮಾರ್ ಮತ್ತು ಸಂತೋಷ್ ಅವರಿಂದ ಕೃತ್ಯ ಎಸಗಲಾಗಿದ್ದು ಇಬ್ಬರನ್ನು ಆರ್ಟಿ ನಗರ ಪೊಲೀಸರು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ ಕೇಸ್ ಅನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ.
ಆ್ಯಂಬುಲೆನ್ಸ್ಗೆ ದಾರಿ ಬಿಡದ ಚಾಲಕ ಅರೆಸ್ಟ್
ಆಂಬ್ಯುಲೆನ್ಸ್ಗೆ ದಾರಿ ಬಿಡದ ಪ್ರಕರಣ ಸಂಬಂಧ, ಕಾರು ಸಹಿತ ಚಾಲಕ ಮೊನಿಶ್ ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. IPC ಸೆಕ್ಷನ್ 279, ಇಂಡಿಯನ್ ಮೋಟಾರು ವೆಹಿಕಲ್ ಌಕ್ಟ್ನ ಸೆಕ್ಷನ್ 184ರಡಿ ಪ್ರಕರಣ ದಾಖಲಾಗಿದೆ. ಮಂಗಳೂರಿನಿಂದ ಭಟ್ಕಳಕ್ಕೆ ರೋಗಿ ಕರೆದುಕೊಂಡು ಹೊರಟಿದ್ದ ಆಂಬುಲೆನ್ಸ್ ಗೆ ಮುಲ್ಕಿಯಿಂದ ಉಡುಪಿವರೆಗೆ ದಾರಿ ನೀಡದೆ ಕಾರು ಚಾಲಕ ಮೋನಿಶ್ ಸತಾಯಿಸಿದ್ದ. ಇನ್ನು ಮಣಿಪಾಲದಿಂದ ಮಂಗಳೂರಿಗೆ ಹೊರಟಿದ್ದ ಮತ್ತೊಂದು ಆಂಬುಲೆನ್ಸ್ಗೂ ಮೋನಿಶ್ ದಾರಿ ಬಿಡಲಿಲ್ಲ. ಹೀಗಾಗಿ ಕಾರು ಚಾಲಕ ಮೊನಿಶ್ನನ್ನು ಅರೆಸ್ಟ್ ಮಾಡಲಾಗಿದೆ.
ಸರಳತೆ ಮೆರೆದ ಶಾಸಕ ಮಹೇಶ್ ಕುಮಟಳ್ಳಿ
ಬೆಳಗಾವಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರು ಗ್ರಾಮಸ್ಥರ ಬೈಕ್ ಏರಿ ತೋಟದ ವಸತಿ ಪ್ರದೇಶ ಜನರ ಕುಂದು ಕೊರತೆಗಳ ಆಲಿಸಿ ಸರಳತೆ ಮೆರೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪ್ರಶಂಸೆ ವ್ಯಕ್ತವಾಗಿದೆ. ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮಕ್ಕೆ ಶಾಸಕರು ಭೇಟಿ ನೀಡಿದ ಸಂದರ್ಭದಲ್ಲಿ, ಗ್ರಾಮದ ಯುವಕನನ್ನು ಕರೆದುಕೊಂಡು ಸಮಸ್ಯೆ ಇದ್ದ ಸ್ಥಳಕ್ಕೆ ಹೋಗಿ, ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಿದ್ದಾರೆ.
ನಕಲಿ ರಿಪೋರ್ಟ್ ತೋರಿಸಿದ್ದವರ ಮೇಲೆ ಎಫ್ಐಆರ್
ಕೇರಳ ಗಡಿಯಲ್ಲಿ ನಕಲಿ ಕೋವಿಡ್ ರಿಪೋರ್ಟ್ ಪತ್ತೆಯಾಗಿ ಕೇರಳ ಮೂಲದ ನಾಲ್ವರ ಮೇಲೆ ಎಫ್ಐಆರ್ ದಾಖಲಾಗಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ನಕಲಿ ಕೋವಿಡ್ ರಿಪೋರ್ಟ್ ತೋರಿಸಿ ಪ್ರಯಾಣ ಬೆಳೆಸಿದ್ದರು. ಒಂದೇ ಎಸ್ಆರ್ ಎಫ್ ಐಡಿ ಬಳಸಿ ಮೂರು ನಕಲಿ ಕೋವಿಡ್ ನೆಗೆಟಿವ್ ರಿಪೋರ್ಟ್ ಪ್ರಿಂಟ್ ಮಾಡಿ ಪ್ರಯಾಣ ಬೆಳೆಸಿದ್ದರು. ಹೀಗಾಗಿ ಕೇರಳದ ಕೋಝಿಕೋಡ್ ನಿವಾಸಿಗಳಾದ ವಿಜಯ್, ಜಯಪ್ರಕಾಶ್,ಸಂತೋಷ್,ವಿಜಯನ್ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಂದು ಶ್ರೀ ಶಿವಕುಮಾರ ಸ್ವಾಮೀಜಿಯ ಪುಣ್ಯ ಸ್ಮರಣೆ
ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ 3ನೇ ವರ್ಷದ ಪುಣ್ಯ ಸ್ಮರಣೆ ಹಾಗೂ ದಾಸೋಹ ದಿನ ಆಚರಣೆ ಹಿನ್ನೆಲೆಯಲ್ಲಿ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಕೊರೊನಾ 3ನೇ ಅಲೆ ಆತಂಕದ ಹಿನ್ನಲೆಯಲ್ಲಿ ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣೆ ಕಾರ್ಯಕ್ರಮ ಸರಳವಾಗಿ ನಡೆಯಲಿದೆ. ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಯಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಪ್ರಚಾರಕ್ಕೆ ಬಂದ ಶಾಸಕನನ್ನ ಬೆನ್ನಟ್ಟಿದ ಗ್ರಾಮಸ್ಥರು
ವಿಧಾನಸಭಾ ಚುನಾವಣೆಗೆ ಸಜ್ಜಾದ ಉತ್ತರ ಪ್ರದೇಶದಲ್ಲಿ ಪ್ರಚಾರ ಕಾರ್ಯಕ್ಕೆ ತೆರಳಿದ್ದ ಬಿಜೆಪಿ ಶಾಸಕರೊಬ್ಬರನ್ನು ಗ್ರಾಮಸ್ಥರು ಬೆನ್ನಟ್ಟಿದ್ದಾರೆ. ಹೀಗಾಗಿ ಪ್ರಚಾರ ನಡೆಸದೆ ಶಾಸಕ ವಾಪಸ್ಸಾಗಿದ್ದಾರೆ.ಪ್ರಚಾರಕ್ಕಾಗಿ ಬಿಜೆಪಿ ಶಾಸಕ ವಿಕ್ರಮ್ ಸೈನಿ ಮುನ್ವಾರ್‌ಪುರ್ ಗ್ರಾಮಕ್ಕೆ ತೆರಳಿದ್ದರು. ಸೈನಿ ಅವರು ಗ್ರಾಮ ಪ್ರವೇಶಿಸುವುದನ್ನು ಗ್ರಾಮಸ್ಥರು ತಡೆದಿದ್ದಾರೆ. ವಾಪಸ್ ತೆರಳುವಂತೆ ಸೈನಿ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಇನ್ನು ಗ್ರಾಮಸ್ಥರ ಪ್ರತಿರೋಧ ಎದುರಿಸಿದ ಶಾಸಕರು, ಬೇರೆ ಆಯ್ಕೆಯಿಲ್ಲದೇ ಕಾರು ಹತ್ತಿ ವಾಪಸ್ ತೆರಳಿದ್ದಾರೆ.
ಲಾಹೋರ್ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟ
ಪಾಕಿಸ್ತಾನದ ಲಾಹೋರ್‌ನಲ್ಲಿನ ಅನಾರ್ಕಲಿ ಮಾರುಕಟ್ಟೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ. ಮೋಟಾರ್ ಸೈಕಲ್ ಒಂದರಲ್ಲಿ ಬಾಂಬ್ ಅಳವಡಿಸಿ ಸ್ಫೋಟ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇನ್ನು ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ. ಮೋಟಾರ್ ಬೈಕ್‌ನಲ್ಲಿ ಇರಿಸಿದ್ದ ಬಾಂಬ್ ಉಪಕರಣವು ಸ್ಫೋಟಕ್ಕೆ ಕಾರಣವಾಗಿದೆ ಎನ್ನುವುದು ಪ್ರಾಥಮಿಕ ತನಿಖೆಗಳಿಂದ ಗೊತ್ತಾಗಿದೆ ಎಂದು ಲಾಹೋರ್ ಪೊಲೀಸ್ ವಕ್ತಾರ ರಾಣಾ ಆರಿಫ್ ತಿಳಿಸಿದ್ದಾರೆ.
‘ಕಮಲಾ ಹ್ಯಾರಿಸ್ ನನ್ನ ಉತ್ತರಾಧಿಕಾರಿ’
2024ನೇ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಕಮಲಾ ಹ್ಯಾರಿಸ್ ತಮ್ಮ ಉತ್ತರಾಧಿಕಾರಿ ಎಂದು ಜೋ ಬೈಡನ್ ಘೋಷಿಸಿದ್ದಾರೆ. ಯುಎಸ್ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರ್ಣವಾಗಿದೆ. ಅಧಿಕಾರದ ಮೊದಲ ವರ್ಷವನ್ನು ಸ್ಮರಿಸುತ್ತಾ, ಬೈಡನ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ 2024 ರಲ್ಲಿ ತಮ್ಮ ಉತ್ತರಾಧಿಕಾರಿಗಲಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ 2024 ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ.
ರಾಹುಲ್ ನಾಯಕತ್ವದ ಎರಡನೇ ಪರೀಕ್ಷೆ
ಕನ್ನಡಿಗ ಕೆ.ಎಲ್. ರಾಹುಲ್ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪಣಕ್ಕೊಡ್ಡಬೇಕಾದ ಒತ್ತಡದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋತಿತ್ತು. ಇದೀಗ ಮೂರು ಪಂದ್ಯಗಳ ಸರಣಿ ಗೆಲುವಿನ ಕನಸು ಜೀವಂತವಾಗುಳಿಯಬೇಕಾದರೆ ಇಂದು ನಡೆಯುವ ಎರಡನೇ ಪಂದ್ಯದಲ್ಲಿ ತಂಡವು ಜಯಿಸಲೇಬೇಕಾದ ಒತ್ತಡದಲ್ಲಿದೆ. ರಾಹುಲ್ ನಾಯಕತ್ವದ ಮೊದಲ ಸರಣಿ ಇದಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post