ಇಂತಹ ಪರಿಸ್ಥಿತಿ ಯಾವ ಸಿನಿಮಾ ತಂಡಕ್ಕೂ ಬರಬಾರದು.. ಅಂತು ಇಂತು ಅಂದುಕೊಂಡಂಗೆ ಶೂಟಿಂಗ್ ಮುಗಿಯಿತಲ್ಲ ಅಂತ ಖುಷಿ ಪಡೋದೋ; ನಮ್ಮ ಚಿತ್ರದ ನಾಯಕನೇ ಈ ದಿನ ಇಲ್ಲವಲ್ಲ ಅಂತ ವ್ಯಥೆ ಪಡೋದೋ : ಈ ಪರಿಸ್ಥಿತಿಯನ್ನ ಅರಗಿಸಿಕೊಳ್ಳೋದೆ ಕಷ್ಟವಾಗಿದೆ ಜೇಮ್ಸ್ ಸಿನಿಮಾ ತಂಡಕ್ಕೆ.. ವಿಧಿಯಾಟದ ಮುಂದೆ ಯಾವ ಡೈರೆಕ್ಟರ್ ಕಥೆ ಸ್ಕ್ರೀನ್ ಪ್ಲೇನು ದೊಡ್ಡದಲ್ಲ ಬಿಡಿ.. ಅಪ್ಪು ಅವರ ಜೇಮ್ಸ್ ಸಿನಿಮಾದ ಶೂಟಿಂಗ್ ಭಾವನಾತ್ಮಕವಾಗಿ ಅಂತ್ಯವಾಗಿದೆ.. ನಿರೀಕ್ಷೆ ಪ್ರಾರಂಭವಾಗಿದೆ.
‘ಜೇಮ್ಸ್’ ಚಿತ್ರೀಕರಣಕ್ಕೆ ಭಾವನಾತ್ಮಕ ವಿದಾಯ
ಅಭಿಮಾನಿಗಳ ಪಾಲಿಗೆ ಕೆಟ್ಟ ಕನಸು ಇಷ್ಟು ಕಠೋರವಾಗಿ ಬಿಳೋದಿಲ್ಲವೇನೋ.. ಅಷ್ಟೋ ಕಠೋರವಾದ ಘಟನೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಅಗಲಿಕೆ.. ಅಪ್ಪು ಇನ್ನಿಲ್ಲವಲ್ಲ ಅಂತ ಅರಗಿಸಿಕೊಳ್ಳೋದಕ್ಕೆ ಇನ್ನೂ ಕೂಡ ಅಭಿಮಾನಿಗಳಲ್ಲಾಗುತ್ತಿಲ್ಲ.. ಅಭಿಮಾನಿ ದೇವರೆಂದ ಕುಟುಂಬದ ಕುಡಿ ಇವತ್ತು ಅಭಿಮಾನಿಗಳ ದೇವರ ಕೋಣೆಯಲ್ಲೇ ಜಾಗವನ್ನ ಪಡೆದುಕೊಂಡಿದೆ.
ಅದೆಷ್ಟೋ ಅಭಿಮಾನಿಗಳು ನಾವು ನೋಡುವ ಕಟ್ಟ ಕಡೆಯ ಸಿನಿಮಾಗಳೆಂದ್ರೆ ಜೇಮ್ಸ್ , ಲಕ್ಕಿ ಮ್ಯಾನ್ ಹಾಗೂ ಗಂಧದಗುಡಿ ಅಂತ ಈಗಾಗಲೇ ಶಪಥ ಮಾಡಿಕೊಂತೌವ್ರೆ.. ದೊಡ್ಮೆನೆ ಅಭಿಮಾನಿಗಳ ಅಭಿಮಾನದ ಸ್ವಭಾವವೇ ಹಂಗೆ.. ಇವತ್ತಿಗೂ ಡಾ.ರಾಜ್ ಕುಮಾರ್ ಸಿನಿಮಾಗಳನ್ನ ನೋಡುತ್ತಿದ್ದ ಒಂದಷ್ಟು ಅಭಿಮಾನಿಗಳು ಡಾ.ರಾಜ್ ಸಿನಿಮಾಗಳನ್ನ ಬಿಟ್ಟು ಬೇರೆ ಸಿನಿಮಾಗಳನ್ನ ನೋಡಲ್ಲ.. ಡಾ.ರಾಜ್ ಅವರಂತೆ ಅಖಂಡ ಅಭಿಮಾನಿಗಳನ್ನ ಹೊಂದಿರುವ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಇದೊಂದು ಸುದ್ದಿ ಕೊಂಚ ಸಮಾಧಾನ ತರುವಂತಹ ಭರವಸೆಯಿಂದ ನಾಳೆಯನ್ನ ನೋಡವಂತಹ ಸಮಾಚಾರ.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾದ ಶೂಟಿಂಗ್ ಅಂತ್ಯವಾಗಿದೆ.. ಸುಮ್ನೆ ಅಂತ್ಯವಾಗಿಲ್ಲ ಭಾವನಾತ್ಮಕವಾಗಿ ಅಂತ್ಯವಾಗಿದೆ.
ಶಿವ-ರಾಘ ಸಾಕ್ಷಿಯಾಗಿ ಅಪ್ಪು ‘ಜೇಮ್ಸ್’ ಮುಕ್ತಾಯ
ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಚಿತ್ರದ ಶೂಟಿಂಗ್ ಕಳೆದ ಶುಕ್ರವಾರದ ರಾತ್ರಿ ಮುಕ್ತಾಯವಾಗಿದೆ. ಕಷ್ಟ ಪಟ್ಟು ಅಂದುಕೊಂಡಂಗೆ ಶೂಟಿಂಗ್ ಮಾಡಿ ಮುಗಿಸಿದ್ವಲ್ಲ ಅಂತ ಸಂತೋಷ ಪಡೋ ಟೈಮ್ನಲ್ಲಿ ಇಡೀ ಜೇಮ್ಸ್ ಚಿತ್ರತಂಡ ಭಾವನಾತ್ಮಕವಾಗಿ ಕಣ್ಣೀರು ಇಟ್ಟಿದೆ..
ಸಂತೋಷದ ಸಂದರ್ಭದಲ್ಲಿ ಕಣ್ಣೀರಿಟ್ಟ ಚಿತ್ರತಂಡ
ದೊಡ್ಡ ಸೂಪರ್ ಸ್ಟಾರ್ ಆಗಿದ್ದರು ಎಲ್ಲರಲ್ಲೊಬ್ಬರಾಗಿ ನಗುಮೊಗದ ಚಿಲುಮೆಯಾಗಿದ್ದ ಸ್ಫೂರ್ತಿಯ ಪವರೇ ಇಲ್ಲದೆ ಹೋದ ಮೇಲೆ ಇನ್ನೇನಿದೆ ಅನ್ನೋ ಭಾವ ಇಡೀ ಜೇಮ್ಸ್ ಬಳಗದಲ್ಲಿ ಕಳೆದ ರಾತ್ರಿ ಕಾಡುತ್ತಿತ್ತು.. ಅಪ್ಪು ಅವರ ದೊಡ್ಡ ಫೋಟೋದ ಮುಂದೆ ಇಡೀ ಚಿತ್ರತಂಡ ಫೋಟೋಗೆ ಫೋಸ್ ನೀಡುವಾಗ ಅಲ್ಲಿದ್ದ ಅಷ್ಟು ಜನರ ಹೃದಯ ಕಲಕಿತ್ತು ಮಮಲ ಮರಗಿತ್ತು.
ನಾವು ಹಿಂದೆ ಹೇಳ್ದಂಗೆ ನೀವು ಕೇಳ್ದಂಗೆ ಅಣ್ಣಾವ್ರ ಮೂವರು ಮಕ್ಕಳು ಒಟ್ಟಿಗೆ ನಟಿಸುವ ಭಾವನಾತ್ಮಕ ವೇದಿಕೆ ಜೇಮ್ಸ್ ಸಿನಿಮಾ ಕಲ್ಪಿಸಿಕೊಟ್ಟಿದೆ.. ತನ್ನ ತಂದೆ ತಾಯಿ ಹಾಗೂ ಕೋಟಿ ಕೋಟಿ ಅಭಿಮಾನಿಗಳ ಆಸೆಯಂತೆ ಅಣ್ಣಾವ್ರ ಮಕ್ಕಳು ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ.. ಜೇಮ್ಸ್ ಸಿನಿಮಾದ ಹಾಡೊಂದರಲ್ಲಿ ಶಿವಣ್ಣ ಮತ್ತು ರಾಘಣ್ಣ ಕಾಣಿಸಿಕೊಂಡಿದ್ದಾರೆ.
ಜೇಮ್ಸ್ ಸಿನಿಮಾದ ಶೂಟಿಂಗ್ ಅಂತ್ಯದ ಕ್ಷಣದ ಫೋಟೋಗಳಲ್ಲಿ ರಾಘಣ್ಣ ಮತ್ತು ಯುವರಾಜ್ ಕುಮಾರ್ ಕಾಣಿಸಿಕೊಂಡಿರೋದನ್ನ ನಾವು ನೀವು ಈ ಫೋಟೋಸ್ಗಳಲ್ಲಿ ನೋಡಬಹುದು.. ಕನಕಪುರದ ಖಾಸಗಿ ರೆಸಾರ್ಟ್ ಒಂದರಲ್ಲಿ ಜೇಮ್ಸ್ ಸಿನಿಮಾದ ಶೂಟಿಂಗ್ ಅಂತ್ಯವಾಗಿದೆ.
ಜೇಮ್ಸ್ ಸಿನಿಮಾದ ಶೂಟಿಂಗ್ ಮುಗಿದಿರುವ ಕಾರಣ ಪೋಸ್ಟ್ ಪ್ರೋಡಕ್ಷನ್ ಕಾರ್ಯ ವೇಗವಾಗಿ ನಡೆಯುತ್ತಿದೆ. ಅಪ್ಪು ಅವರ ಜೇಮ್ಸ್ ಪಾತ್ರಕ್ಕೆ ಯಾರ ಧ್ವನಿ ಮ್ಯಾಚ್ ಆಗಲಿದೆ ಅನ್ನೋ ಕುತೂಹಲ ಹಾಗೇ ಉಳಿದಿರುವ ಈ ಸಂದರ್ಭದಲ್ಲಿ ಈ ತಿಂಗಳ ಗಣರಾಜ್ಯೋತ್ಸವದ ದಿನ ಜೇಮ್ಸ್ ಸಿನಿಮಾದ ಹೊಸ ಪೋಸ್ಟರ್ ಅನ್ನ ಚಿತ್ರತಂಡ ರಿವೀಲ್ ಮಾಡಿ ಪ್ರಚಾರದ ಕೆಲಸವನ್ನ ಶುರು ಮಾಡಲಿದೆ ಚಿತ್ರತಂಡ.
ಜೇಮ್ಸ್ ಸಿನಿಮಾಕ್ಕೆ ಇಡೀ ಪವರ್ ಸ್ಟಾರ್ ಅಭಿಮಾನಿಗಳು ಹಾಗೂ ಕನ್ನಡಿಗರು ಕಾದಿದ್ದು ಮಾರ್ಚ್ 17ನೇ ತಾರೀಖ್ ಅಪ್ಪು ಅವರನ್ನ ಥಿಯೇಟರ್ನಲ್ಲಿ ಜೇಮ್ಸ್ ಆಗಿ ಕಾಣಸುವ ಸಾಧ್ಯತೆ ಇದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post