ಮೈಸೂರು: ಮದುವೆ ಮನುಷ್ಯನ ಜೀವನದಲ್ಲಿ ಮರೆಯಲಾಗದ ಕ್ಷಣ. ತಡವಾಗಿ ಮದುವೆ ಆದರೆ ಅಪೂರ್ವವಾದ ಕ್ಷಣ. ಇಳಿ ವಯಸ್ಸಿನಲ್ಲಿ ಮದುವೆ ಆದರೆ ಪ್ರತಿದಿನವೂ ಮಧುರವಾದ ಕ್ಷಣ. ಹೌದು…ಆ ಜೋಡಿಗೆ ಈಗ ಪ್ರತಿದಿನವೂ ಮಧುರ ಎಂದೇ ಹೇಳಬೇಕಿದೆ. ಕಾರಣ ಆತನ ವಯಸ್ಸು 85..ಆಕೆಯ ವಯಸ್ಸು 65. ಇಳಿ ವಯಸ್ಸಿನಲ್ಲಿ ಇಬ್ಬರೂ ಬಾಳ ಸಂಗಾತಿಗಳಾಗಿದ್ದಾರೆ. ಇಬ್ಬರು ವೃದ್ಧರಲ್ಲೂ ಸುಂದರ ಸಂಸಾರದ ಕನಸು ಮೂಡಿದೆ.
ಮೈಸೂರಿನ ಉದಯಗಿರಿಯ ಗೌಸಿಯಾನಗರದ ಮನೆಯಲ್ಲಿ ಇಳಿ ವಯಸ್ಸಿನ ವೃದ್ಧರು ಸತಿಪತಿಗಳಾಗಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಬಾಳಸಂಗಾತಿಗಳಾಗಿದ್ದಾರೆ. ಗೌಸಿಯಾನಗರದ ಹಾಜಿ ಮುಸ್ತಫಾ (85) ಹಾಗೂ ಫಾತಿಮಾ ಬೇಗಂ (65) ಬಾಳಸಂಗಾತಿಯಾದ ಜೋಡಿ.
ಕುರಿ ಸಾಕುತ್ತಾ 9 ಮಕ್ಕಳಿಗೆ ಮದುವೆ ಮಾಡಿ ಜೀವನದಲ್ಲಿ ಆರ್ಥಿಕವಾಗಿ, ಆರೋಗ್ಯವಾಗಿ ಸಾರ್ಥಕತೆ ಮೆರೆದ ಗೌಸಿಯಾನಗರದ ಮುಸ್ತಫಾ ಎರಡು ವರ್ಷಗಳ ಹಿಂದೆ ಪತ್ನಿ ಖುರ್ಷಿದ್ ಬೇಗಂ ರನ್ನ ಕಳೆದುಕೊಂಡರು. ಮಕ್ಕಳಿಗೆ ಮದುವೆ ಮಾಡಿದ್ದರಿಂದ ಒಂಟಿ ಜೀವನ ಸಾಗಿಸುತ್ತಿದ್ದರು. ಇಳಿ ವಯಸ್ಸಿನಲ್ಲಿ ಸಾಥ್ ಬೇಕು ಎಂದು ಮನಸ್ಸು ಹಾತೊರೆದಿದೆ. ತನಗೊಂದು ಜೊತೆಗಾತಿ ಬೇಕು ಎಂದು ನಿರ್ಧರಿಸಿದ ಮುಸ್ತಫಾಗೆ ಗೌಸಿಯಾನಗರದಲ್ಲೇ ಒಂಟಿ ಜೀವನ ಸಾಗಿಸುತ್ತಿದ್ದ 65 ವರ್ಷದ ವೃದ್ದೆ ಫಾತಿಮಾ ಬೇಗಂ ಕಣ್ಣಿಗೆ ಬಿದ್ದಿದ್ದಾರೆ. ತನಗೆ ಜೊತೆಗಾತಿಯಾಗುವಂತೆ ಮುಸ್ತಫಾ ಕೊಟ್ಟ ಆಫರ್ ನ್ನ ನಿರಾಕರಿಸದ ಫಾತಿಮಾ ಬೇಗಂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಮುಸ್ತಫಾ ರವರ ಇಡೀ ಕುಟುಂಬಕ್ಕೆ ಅಚ್ಚರಿ ಎನಿಸಿದ್ರೂ ತಂದೆಯ ನಿರ್ಧಾರವನ್ನ ಸ್ವಾಗತಿಸಿ ನಿಖಾಗೆ ದಿನಾಂಕ ಫಿಕ್ಸ್ ಮಾಡಿದ್ದಾರೆ. ಗೌಸಿಯಾನಗರದ ತಮ್ಮ ಮನೆಯಲ್ಲಿ ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳ ಸಮ್ಮುಖದಲ್ಲಿ ಮುಸ್ತಫಾ ರವರು ಫಾತಿಮಾಬೇಗಂ ರನ್ನ ವರಿಸಿದ್ದಾರೆ. ಇಳಿ ವಯಸ್ಸಿನಲ್ಲಿ ತನಗೊಂದು ಆಸರೆ ಬೇಕೆಂದು ಬಯಸಿದ ಮುಸ್ತಫಾ ಆಸೆಯನ್ನ ಫಾತಿಮಾ ಬೇಗಂ ಈಡೇರಿಸಿದ್ದಾರೆ.
ದೇಖ್ ಪಾಲ್ ಗಾಗಿ ಮುಸ್ತಫಾ ಜೊತೆ ಉಳಿದ ಜೀವನವನ್ನ ಹಂಚಿಕೊಳ್ಳಲು ಒಪ್ಪಿದ ಫಾತಿಮಾ ಬೇಗಂ ನಿರ್ಧಾರಕ್ಕೆ ಮೈಸೂರಿನ ಗೌಸಿಯಾನಗರ ಫಿದಾ ಆಗಿದೆ. ಇಳಿ ವಯಸ್ಸಿನಲ್ಲಿ ತನಗೊಂದು ಆಸರೆ ಬೇಕೆಂದು ಬಯಸಿ ಬಾಳಸಂಗಾತಿಯನ್ನ ಆಯ್ಕೆ ಮಾಡಿಕೊಂಡ ಮುಸ್ತಫಾ ಸಹ ಖುಷಿಯಾಗಿದ್ದಾರೆ.
ವಿಶೇಷ ಬರಹ: ಹೆಬ್ಬಾಕ ತಿಮ್ಮೇಗೌಡ, ನ್ಯೂಸ್‌ಫಸ್ಟ್, ಮೈಸೂರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post