ಸಿಲಿಕಾನ್ ಸಿಟಿ ಜನರಿಗೆ ಗುಡ್ ನ್ಯೂಸ್ವೊಂದು ಸಿಕ್ಕಿದೆ. ಅತ್ಯಾಧುನಿಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದು ನಗರದಲ್ಲಿ ತಲೆ ಎತ್ತಲಿದೆ. ಲಾಭ ಮಾಡುವ ಉದ್ದೇಶದ ಬದಲಾಗಿ ಸೇವೆ ಸಲ್ಲಿಸುವ ಉದ್ದೇಶದಿಂದಲೇ 425 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಆಸ್ಪತ್ರೆಯ ಸಂಪೂರ್ಣ ಖರ್ಚನ್ನ ಭರಿಸಲು ಎರಡು ದಂಪತಿ ಮುಂದೆ ಬಂದಿದ್ದಾರೆ. ಅಷ್ಟಕ್ಕೂ ಯಾರಪ್ಪ ಈ ಆರೋಗ್ಯ ದಾನಿಗಳು ಅನ್ನೋದನ್ನ ಹೇಳ್ತೀವಿ ಈ ಸ್ಪೆಷಲ್ ರಿಪೋರ್ಟ್ನಲ್ಲಿ.
IISc ಇಂಡಿಯನ್ ಇನ್ಸ್ಟ್ಯೂಟ್ ಆಫ್ ಸೈನ್ಸ್.. ವಿಜ್ಞಾನ ಹಾಗು ಅದರ ಅಧ್ಯಯನ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನ ಬರೆದ ಸಂಸ್ಥೆ ಇದು. ಇಂಡಿಯನ್ ಇನ್ಸ್ಟ್ಯೂಟ್ ಆಫ್ ಸೈನ್ಸ್ ಅನ್ನೋ ಈ ಹೆಸರು ಆಗೊಮ್ಮೆ ಈಗೊಮ್ಮೆ ನಿಮ್ಮ ಕಿವಿಗೆ ಬಿದ್ದಿರಬಹುದು. 1909ರಲ್ಲಿ ಜನ್ಮ ಪಡೆದುಕೊಂಡ ಇಂಡಿಯನ್ ಇನ್ಸ್ಟ್ಯೂಟ್ ಆಫ್ ಸೈನ್ಸ್ ಈಗಾಗಲೇ ವಿಶ್ವದಾದ್ಯಂತ ತನ್ನ ಛಾಪನ್ನ ಮೂಡಿಸಿದೆ. ಅಂದಿನಿಂದ ಇಲ್ಲಿಯವರೆಗೂ ಈ IISc ಸಮಾಜಕ್ಕೆ ಈ ನೆಲಕ್ಕೆ ಕೊಟ್ಟಿರುವ ಕೊಡುಗೆ ಅಪಾರ. ಜನರ ಅನಿವಾರ್ಯತೆಗಳನ್ನೇ ಬಂಡವಾಳವನ್ನಾಗಿಸಿಕೊಂಡು ಕೆಲ ಆಸ್ಪತ್ರೆಗಳು ದುಡ್ಡು ಪೀಕುತ್ತಿದ್ರೆ IISc ಮಾತ್ರ ಇವೆಲ್ಲಕ್ಕಿಂತ ಭಿನ್ನವಾಗಿದೆ. ಇದೀಗ ಇದೇ ಇಂಡಿಯನ್ ಇನ್ಸ್ಟ್ಯೂಟ್ ಆಫ್ ಸೈನ್ ಆಫ್ ಬೆಂಗಳೂರು ಮತ್ತೊಂದು ಮಹತ್ತರ ದಿಟ್ಟ ಹೆಜ್ಜೆ ಇಟ್ಟಿದೆ.
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು ಸುಸಜ್ಜಿತ ಹಾಸ್ಪಿಟಲ್
ಸಿಲಿಕಾನ್ ಸಿಟಿ ಬೆಂಗಳೂರಿನ ಗೂಡಿಗೆ ಬಂದು ಸೇರುವ ಜನರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗ್ತನೇ ಇದೆ. ದಿಗ್ಗಜ ಐಟಿ ಬಿಟಿ ಕಂಪನಿ, ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಹೊಂದಿರುವ ಸ್ಕೂಲ್ ಕಾಲೇಜುಗಳು ಹೊಂದಿರುವ ಈ ಸಿಲಿಕಾನ್ ಸಿಟಿಯಲ್ಲಿ ಇದೀಗ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದು ತಲೆ ಎತ್ತಲಿದೆ. ಬರೋಬ್ಬರಿ 15 ಎಕರೆ ವಿಸ್ತೀರ್ಣದಲ್ಲಿ 425 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಲಿದೆ. 2024ರ ಅಂತ್ಯದೊಳಗೆ ಈ ಸುಸಜ್ಜಿತವಾದ ಆಸ್ಪತ್ರೆಯೊಂದನ್ನು ಲೋಕಾರ್ಪಣೆ ಮಾಡಲು ಪ್ಲಾನ್ ಹಾಕ್ಕೊಂಡಿದ್ದು, ವಿದ್ಯೆಯ ಜೊತೆಜೊತೆಗೆ ವೈದ್ಯಕೀಯ ಸೇವೆ ಒಂದೇ ಸೂರಿನಡಿ ಸಿಗಬೇಕು ಅನ್ನೋ ನಿಟ್ಟಿನಲ್ಲಿ ಕೆಲಸ ಕಾರ್ಯ ಆರಂಭವಾಗಿದೆ. ಆದ್ರೆ ಇಲ್ಲಿ ನಾವು ಪ್ರಮುಖ ಅಂಶವೊಂದನ್ನ ಗಮನಿಸಲೇ ಬೇಕು.
ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದೇಣಿಗೆ ನೀಡಿದ ದಂಪತಿ..!
ಯೆಸ್.. ಬೆಂಗಳೂರಿನಲ್ಲಿ ತಲೆ ಎತ್ತಲು ಸಿದ್ದವಾಗಿರುವ ಸುಸಜ್ಜಿತವಾಗಿ ತಲೆ ಎತ್ತಲು ಸಿದ್ಧವಾಗಿರುವ ಈ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಸಿಲಿಕಾನ್ ಸಿಟಿಯ 2 ಕುಟುಂಬಗಳು ದೇಣಿಗೆ ನೀಡಲು ಮುಂದಾಗಿದೆ. ಸುಸ್ಮಿತಾ-ಸುಬ್ರತೋ ಭಾಗ್ಚಿ ದಂಪತಿ ಮತ್ತು ರಾಧಾ-ಪಾರ್ಥಸಾರಥಿ ದಂಪತಿ ದೇಣಿಗೆಯನ್ನು ಐಐಎಸ್‌ಸಿಗೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸುಸ್ಮಿತಾ-ಸುಬ್ರತೊ ಬಾಗ್ಚಿ ಮತ್ತು ರಾಧಾ-ಎನ್.ಎಸ್. ಪಾರ್ಥಸಾರಥಿ ದಂಪತಿ ಒಟ್ಟಾಗಿ 425 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದು, ಇದು ಐಐಎಸ್‌ಸಿ ಇತಿಹಾಸದಲ್ಲೆ ಅತೀ ದೊಡ್ಡ ದಾನವಾಗಿದೆ. ಆಸ್ಪತ್ರೆಯ ಸಂಪೂರ್ಣ ಖರ್ಚನ್ನ ದೇಣಿಗೆಯಾಗಿ ನೀಡಿದ್ದ ಕಾರಣ ನೂತನವಾಗಿ ನಿರ್ಮಾಣವಾಗಲಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ “ಬಾಗ್ಚಿ – ಪಾರ್ಥಸಾರಥಿ ಆಸ್ಪತ್ರೆ” ಎಂದು ನಾಮಕರಣ ಮಾಡಲಾಗಿದೆ.
ಬೆಂಗಳೂರಿನಲ್ಲಿ ತಲೆ ಎತ್ತಲಿರುವ ಈ ಸುಸಜ್ಜಿತ ಆಸ್ಪತ್ರೆಗೆ ದೇಣಿಗೆ ನೀಡಿದ ಸುಬ್ರತೊ ಬಾಗ್ಚಿ ಜನಿಸಿದ್ದು ಒಡಿಶಾದಲ್ಲಿ. ದೇಶದ ಪ್ರಖ್ಯಾತ ಉದ್ಯಮಿ ಹಾಗೂ ಪ್ರಸಿದ್ಧ ಐಟಿ ಕಂಪನಿ ಮೈಂಡ್ ಟ್ರೀ ಸಹ ಸಂಸ್ಥಾಪಕರು ಇವರು. ಇವರ ತಂದೆ ಸಾಮಾನ್ಯ ಸರ್ಕಾರಿ ನೌಕರ. ಪ್ರಾರಂಭದಲ್ಲಿ ಒಡಿಶಾ ಸರ್ಕಾರದ ಗುಮಾಸ್ತನಾಗಿದ್ದ ಸುಬ್ರತೊ ಬಾಗ್ಚಿ ನಂತರ ಖಾಸಗಿ ಕ್ಷೇತ್ರಕ್ಕೆ ಹೊರಳಿದವರು. ಇನ್ನೂ ಈ ಆಸ್ಪತ್ರೆಗೆ ದಾನ ನೀಡಿರುವ ಪಾರ್ಥಸಾರಥಿ ಕೂಡ ಇದೇ ಸುಬ್ರತೊ ಬಾಗ್ಚಿ ಜೊತೆ ವಿಪ್ರೊದಲ್ಲಿ ಕೆಲಸ ಮಾಡಿದವರು. ಇದೀಗ ಈ ಎರಡು ಕುಟುಂಬಗಳು ಸೇರಿ ಆಸ್ಪತ್ರೆಯ ನಿರ್ಮಾಣಕ್ಕೆ ಬರೋಬ್ಬರಿ 425 ಕೋಟಿ ದೇಣಿಗೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬರೋಬ್ಬರಿ 425 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಲವು ವಿಶೇಷತೆಗಳನ್ನ ಹೊಂದಿವೆ.
ಹಲವು ವಿಶೇಷತೆಗಳನ್ನ ಹೊಂದಿರುವ ಬಾಗ್ಚಿ- ಪಾರ್ಥಸಾರಥಿ ಆಸ್ಪತ್ರೆ
800 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಬಾಗ್ಚಿ- ಪಾರ್ಥಸಾರಥಿ ಆಸ್ಪತ್ರೆಯು ಹಲವು ವಿಶೇಷತೆಗಳನ್ನ ಒಳಗೊಂಡಿವೆ. ರೋಗಪರೀಕ್ಷೆ, ಚಿಕಿತ್ಸೆ ಮತ್ತು ಸಂಶೋಧನೆಗೆ ಸುಧಾರಿತ ಸೌಲಭ್ಯಗಳನ್ನು ಒಳಗೊಂಡಿರಲಿದೆ. ಹೃದ್ರೋಗ, ಕ್ಯಾನ್ಸರ್ ಚಿಕಿತ್ಸೆ, ನರವಿಜ್ಞಾನ, ಎಂಡೋಕ್ರಿನಾಲಜಿ, ಗ್ಯಾಸ್ಟ್ರೋಎಂಟರಾಲಜಿ, ನ್ಯೂರಾಲಜಿ, ಯುರಾಲಜಿ, ಚರ್ಮರೋಗ ಮತ್ತು ಪ್ಲಾಸ್ಟಿಕ್ ಸರ್ಜರಿ, ಅಂಗಾಂಗ ಕಸಿ, ರೊಬೋಟಿಕ್ ಶಸಚಿಕಿತ್ಸೆ, ನೇತ್ರವಿಜ್ಞಾನ ಸೇರಿ ಹಲವು ವಿಷಯ ವಿಭಾಗಗಳನ್ನು ಹೊಂದಿರಲಿದೆ. ಎಂಡಿ, ಎಂಎಸ್ ಮತ್ತು ಡಿಎಂ, ಎಂಸಿಎಚ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಅವರ ತರಗತಿ ಮತ್ತು ಪ್ರಯೋಗಾಲಯ ತರಬೇತಿಯೊಂದಿಗೆ ಆಸ್ಪತ್ರೆಯ ಸೂಕ್ತ ವಿಭಾಗಗಳ ತರಬೇತಿಯನ್ನು ನೀಡಲಾಗುತ್ತದೆ. ಸಮಗ್ರ ವಿದ್ಯುನ್ಮಾನ ವೈದ್ಯಕೀಯ ದಾಖಲೆ ವ್ಯವಸ್ಥೆ ಮತ್ತು ಹ್ಯಾಪ್ಟಿಕ್ಸ್ ಇಂಟೇಸ್‌ಗಳು, ಸಮಗ್ರ ಟೆಲಿಮೆಡಿಸಿನ್ ವ್ಯವಸ್ಥೆಯೊಂದಿಗೆ ಡಿಜಿಟಲ್ ತಂತ್ರಜ್ಞಾನ ಮತ್ತು ಪರಿಹಾರಗಳನ್ನು ಒಳಗೊಂಡಿರಲಿದೆ.
ಒಟ್ಟಿನಲ್ಲಿ ಈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಏಕಕಾಲದಲ್ಲಿ ವಿದ್ಯಾರ್ಥಿಗಳಿಗೆ ಎರಡು ಕಡೆ ತರಬೇತಿ ಕೊಡಲು ಪ್ಲಾನ್ ಮಾಡಿಕೊಳ್ಳಲಾಗಿದ್ದು, ವಿಜ್ಞಾನ ಹಾಗು ಎಂಜಿನಿಯರಿಂಗ್ ಲ್ಯಾಬ್‌ಗಳಲ್ಲಿ ಟ್ರೇನಿಂಗ್ ನಡೆಯೋದರ ಜೊತೆಗೆ ನೂತನ ಆಸ್ಪತ್ರೆಯಲ್ಲಿಯೂ ವಿದ್ಯಾರ್ಥಿಗಳಿಗೆ ಟ್ರೇನಿಂಗ್ ನೀಡಲಾಗುತ್ತೆ. ಇದು ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನಾರ್ಜನೆಯಾಗೋದರ ಜೊತೆ ಜೊತೆಯಲ್ಲಿಯೇ ಉನ್ನತ ಸೇವೆಯನ್ನು ನೀಡಲು ಕೂಡ ಸಹಕಾರಿಯಾಗುತ್ತೆ ಅನ್ನೋದ್ರರಲ್ಲಿ ಎರಡು ಮಾತಿಲ್ಲ.
ಬೆಂಗಳೂರಿನಲ್ಲಿ ತಲೆ ಎತ್ತಲಿರುವ ಈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಬರೀ ನಗರದ ಮಂದಿಗೆ ಮಾತ್ರವಲ್ಲ, ಹೊರ ರಾಜ್ಯದ ಜನರಿಗೂ ಉಪಕಾರಿಯಾಗಲಿದೆ. ಇಂತಹ ಆಸ್ಪತ್ರೆ ಈ ಕುರುನಾಡಿನ ಮಣ್ಣಿನಲ್ಲಿ ತಲೆ ಎತ್ತಲು ಕಾರಣವಾಗಿರುವ ಪಾರ್ಥಸಾರಥಿ ಹಾಗೂ ಸುಬ್ರತೊ ಬಾಗ್ಚಿ ದಂಪತಿಯ ನಡೆ ನಿಜಕ್ಕೂ ಮೆಚ್ಚುವಂತಹದ್ದು. ಆದಷ್ಟೂ ಬೇಗ ಈ ಆಸ್ಪತ್ರೆಯ ಕೆಲಸ ಕಾರ್ಯ ಪೂರ್ಣಗೊಳ್ಳಲಿ ಅನ್ನೋದೆ ನಗರದ ಜನರ ಆಶಯ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post