ಆ ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಸ್ನೇಹಿತರು ಬಂಧು ಬಳಗ ಎಲ್ಲರೂ ಸೇರಿ ಮದುವೆಗೆ ಮತ್ತಷ್ಟು ಮೆರುಗು ತುಂಬಿದ್ರು. ಸಂಭ್ರಮ ನೋಡಿ ದೇವರಿಗೂ ಅಸೂಯೆ ಮೂಡಿತ್ತು ಅನ್ಸುತ್ತೆ. ಪರಿಣಾಮ ಕ್ಷಣಾರ್ಧದಲ್ಲೇ ಸೀನ್ ಕಂಪ್ಲೀಟ್ ಚೇಂಜ್. ಮದುವೆಯ ಮನೆಯಲ್ಲಿ ಖುಷಿ ಖುಷಿಯಲ್ಲಿದ್ದ 13 ಜನರು ಸಾವಿನ ಮನೆ ಸೇರಿಯೇ ಬಿಟ್ಟಿದ್ರು.
ದುರಂತ.. ಭೀಕರ ದುರಂತ.. ಯಾರು ಕನಸು ಮನಸಲ್ಲೂ ಊಹಿಸದ ಮಹಾ ದುರಂತ. ಮಂಗಳ ವಾದ್ಯ ಮೊಳಗಬೇಕಿದ್ದ ಮನೆಯಲ್ಲಿ ಆಕ್ರಂದನ. ಬಂಧು-ಬಳಗವೇ ತುಂಬಿರಬೇಕಾದ ಸ್ಥಳದಲ್ಲಿ ಪೊಲೀಸರ ಬೂಟಿನ ಸಪ್ಪಳ. ಖುಷಿ, ಸಂಭ್ರಮ, ಸಡಗರ ಉಲ್ಲಾಸದ ಮನೆಯಲ್ಲಿ ಸೂತಕ. ಮದುವೆ ಶಾಸ್ತ್ರಗಳು ಕೇಳಬೇಕಿದ್ದ ಸ್ಥಳದಲ್ಲಿ ಶ್ಲೋಕಗಳೇ ಕೇಳಿಸುತ್ತಿವೆ. ಒಂದೇ ಮಾತಿನಲ್ಲಿ ಹೇಳಬೇಕಂದ್ರೆ ಮದುವೆ ಮನೆ ಮಸಣವಾಗಿದೆ.
ಉತ್ತರ ಪ್ರದೇಶದ ಮದುವೆ ಮನೆಯಲ್ಲಿ ಮಹಾ ದುರಂತ
ಮದುವೆ ಮನೆಯಲ್ಲಿ ಇಂತಹದ್ದೊಂದು ಅವಘಡ ಸಂಭವಿಸುತ್ತದೆಂದು ಯಾರೂ ಕೂಡ ಕನಸು ಮನಸಲ್ಲೂ ಅಂದುಕೊಂಡಿರ್ಲಿಲ್ಲ. ಜವರಾಯ ಮದುವೆ ಮನೆಯಲ್ಲೂ ಯಮ ಸ್ವರೂಪಿಯಾಗಿ ಪ್ರತ್ಯಕ್ಷವಾಗಿದ್ದು ಹದಿಮೂರು ಜನರ ಉಸಿರು ನಿಲ್ಲಿಸಿದ್ದಾನೆ. ಇಷ್ಟೆಲ್ಲಾ ದುರಂತಕ್ಕೆ ಕಾರಣವಾಗಿದ್ದು, ಸಾಕ್ಷಿಯಾಗಿದ್ದು ಇದೇ ಬಾವಿ. ಮದುವೆ ಮನೆಯ ಕೂಗಳತೆಯ ದೂರದಲ್ಲಿದ್ದ ಇದೇ ಬಾವಿ ಭೀಕರ ದುರಂತವೊಂದನ್ನ ತನ್ನ ಎದೆಯಂತರಾಳದಲ್ಲಿ ಬಚ್ಚಿಟ್ಟುಕೊಂಡಿತ್ತು. ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ನೆಬುವಾ ನೌರಂಗಿಯಾ ಗ್ರಾಮವೊಂದರಲ್ಲಿ ಮದುವೆಯ ಸಂಭ್ರಮ ಸಡಗರ. ಇದೇ ಮದುವೆ ಮನೆಗೆ ಬಂದಿದ್ದ ಮಹಿಳೆಯರು ಮಕ್ಕಳು ಸೇರಿ ಹದಿಮೂರು ಜನರು ದುರಂತ ಅಂತ್ಯ ಕಂಡಿದ್ದು ಪರಿಣಾಮ ಸಂಭ್ರಮದಲ್ಲಿದ್ದ ಮದುವೆ ಮನೆ ಮಸಣವಾಗಿದೆ. ಬುಧವಾರ ರಾತ್ರಿ 8.30ರ ಸುಮಾರಿಗೆ ನಡೆದ ಘಟನೆಯಿಂದ ಇಡೀ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಅಷ್ಟಕ್ಕೂ ಮದುವೆ ಮನೆಯಲ್ಲಿ ನಡೆದಿದ್ದೇನು..? ಹದಿಮೂರು ಜನರು ಸಾವಿನ ಮನೆ ಸೇರಿದ್ದೇಗೆ ಅನ್ನೋದನ್ನೇ ಈ ಸುದ್ದಿಯಲ್ಲಿ ತಿಳಿಸ್ತಿವಿ..
ದುರಂತ ನಡೆದಿದ್ಹೇಗೆ?
ಉತ್ತರ ಪ್ರದೇಶದ ಕುಶಿನಗರದ ನೆಬುವಾ ನೌರಂಗಿಯಾ ಗ್ರಾಮದಲ್ಲಿ ಮದುವೆ ಕಾರ್ಯಕ್ರಮವೊಂದಿತ್ತು. ಅದರಂತೆ ಮದುವೆ ಮನೆಯಲ್ಲಿ ಅರಿಶಿಣ ಅಥವಾ ಹಳದಿ ಶಾಸ್ತ್ರವೂ ನಡೆಯುತ್ತಿತ್ತು. ಈ ವೇಳೆ ಅನೇಕ ಯುವತಿಯರು, ಬಂಧು-ಬಳಗದವರು ಭಾಗವಹಿಸಿದ್ದರು. ವಿವಾಹ ಸಮಾರಂಭ ನಡೆಯುತ್ತಿದ್ದ ಮನೆಯ ಹತ್ತಿರವೇ ಬಾವಿಯೊಂದಿತ್ತು.ಅದರ ಮೇಲೆ ಸ್ಲಾಬ್ ಹಾಕಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.ಇದೇ ವೇಳೆ ಕೆಲ 25ಕ್ಕೂ ಅಧಿಕ ಮಹಿಳೆಯರು ಬಾವಿಯ ಕಟ್ಟೆಯ ಮೇಲೆ ಕುಳಿತು ಹಳದಿ ಶಾಸ್ತ್ರವನ್ನು ನೋಡುತ್ತಿದ್ದರು. ಅದೇ ವೇಳೆ0 ಭಾರ ತಡೆಯಲಾಗದೆ ಬಾವಿಯ ಮೇಲಿದ್ದ ಕಬ್ಬಿಣದ ಗ್ರಿಲ್ ಏಕ್ದಮ್ ಮುರಿದಿದೆ. ಪರಿಣಾಮ ಬಾವಿಯ ಮೇಲೆ ಕುಳಿತಿದ್ದ ಅಷ್ಟೂ ಮಹಿಳೆಯರು ಬಾವಿಗೆ ಬಿದ್ದಿದ್ದಾರೆ. ತಕ್ಷಣವೇ ಪೊಲೀಸರು ಮತ್ತು ಗ್ರಾಮಸ್ಥರ ನೆರವಿನಿಂದ 15 ಮಹಿಳೆಯರ ರಕ್ಷಣೆ ಮಾಡಲಾಗಿದೆ. ಆದರೂ ಈ ಭೀಕರ ದುರಂತದಲ್ಲಿ 13 ಯುವತಿಯರು ಪ್ರಾಣ ಕಳೆದುಕೊಂಡಿದ್ದಾರೆ.
ಹೀಗೆ ಏಕ್ದಮ್ ಬಾವಿಯ ಮೇಲಿದ್ದ ಕಬ್ಬಿಣದ ಗ್ರಿಲ್ ಮುರಿದ ಕಾರಣ ಬಾವಿ ಮೇಲೆ ಕುಳಿತಿದ್ದ ಎಲ್ಲರೂ ಬಾವಿಯೊಳಗೆ ಬಿದ್ದಿದ್ದಾರೆ. ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿರುವುದರಿಂದ ಕತ್ತಲಲ್ಲಿ ರಕ್ಷಣಾಕಾರ್ಯಕ್ಕೆ ಕೂಡ ಅಡಚಣೆ ಉಂಟಾಗಿದೆ. ಹಾಗಿದ್ದರೂ ಸ್ಥಳೀಯರು ಹಾಗೂ ಪೊಲೀಸರ ನೆರವಿನಿಂದ 15 ಮಹಿಳೆಯರನ್ನ ರಕ್ಷಣೆ ಮಾಡಲಾಗಿದೆ. ಆದರೂ ಮಹಿಳೆಯರು ಮಕ್ಕಳು ಸೇರಿದಂತೆ ಒಟ್ಟು 13 ಜನರು ಉಸಿರು ಚೆಲ್ಲಿದ್ದು, ಕೆಲವರು ಗಾಯಗೊಂಡಿದ್ದಾರೆ.
ದುರಂತದಲ್ಲಿ ಸಾವನಪ್ಪಿದ್ದವರ ಕುಟುಂಬಕ್ಕೆ 4 ಲಕ್ಷ ಪರಿಹಾರ
ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಆಸ್ಪತ್ರೆಯ ಆವರಣದಲ್ಲಿ ಕಣ್ಣೀರ ಕೋಡಿಯೇ ಹರಿಯುತ್ತಿದೆ. ಇನ್ನೂ ಭೀಕರ ದುರಂತದಲ್ಲಿ ಮಡಿದವರಿಗೆ ಕುಶಿನಗರ ಜಿಲ್ಲಾಧಿಕಾರಿ ಎಸ್.ರಾಜಲಿಂಗಮ್ ಸಂಪಾತ ಸೂಚಿಸಿದ್ದು, ಮೃತರ ಕುಟುಂಬಸ್ಥರಿಗೆ ತಲಾ 4 ಲಕ್ಷ ಪರಿಹಾರ ನೀಡೋದಾಗಿ ಘೋಷಿಸಿದ್ದಾರೆ.
ಅಲ್ಲದೇ ಈ ಭೀಕರ ದುರಂತದ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಕುಶಿನಗರದಲ್ಲಿ ನಡೆದ ದುರ್ಘಟನೆ ನಿಜಕ್ಕೂ ಹೃದಯ ಕಲುಕುವಂತಿದೆ. ಮೃತರ ಕುಟುಂಬಗಳಿಗೆ ನನ್ನ ಸಾಂತ್ವನಗಳು. ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ. ಸಂತ್ರಸ್ತರಿಗೆ ಸ್ಥಳೀಯ ಆಡಳಿತ ಸಾಧ್ಯವಿರುವ ಎಲ್ಲ ಸಹಾಯಗಳನ್ನೂ ನೀಡಬೇಕು’ಎಂದು ಮನವಿ ಮಾಡಿದ್ದಾರೆ.
-ಪ್ರಧಾನಿ ನರೇಂದ್ರ ಮೋದಿ
ಇನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಈ ದುರಂತದ ಸುದ್ದಿ ನೋವು ತಂದಿದೆ. ಮೃತರ ಕುಟಂಬಸ್ಥರಿಗೆ ನನ್ನ ಸಂತಾಪವಿದೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಭು ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
– ಸಿಎಂ ಯೋಗಿ ಆದಿತ್ಯನಾಥ
ಒಟ್ಟಿನಲ್ಲಿ ಯಾರೂ ಊಹಿಸದ, ಕನಸು ಮನಸ್ಸಿನಲ್ಲೂ ಅಂದುಕೊಳ್ಳದ ಘಟನೆಯೊಂದು ಮದುವೆ ಮನೆಯಲ್ಲಿ ನಡೆದೇ ಹೋಗಿತ್ತು. ಪರಿಣಾಮ ಸಂಭ್ರಮ ನಳ ನಳಿಸಬೇಕಿದ್ದ ಮನೆಯಲ್ಲಿ ಸೂತಕದ ಆಕ್ರಂದನವೇ ಕೇಳಿಸುತ್ತಿದ್ದು, ಇಡೀ ಊರಿಗೇ ಊರೇ ಈ ಭೀಕರ ದುರಂತದಿಂದ ಮಮ್ಮಲ ಮರುಗುತ್ತಿದೆ.
ಭೀಕರ ದುರಂತದಲ್ಲಿ ಗಾಯಗೊಂಡ ಕೆಲವರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಅವರೆಲ್ಲಾ ಶೀಘ್ರವಾಗಿ ಗುಣಮುಖರಾಗಿ ಹೊರ ಬರಲಿ ಎಂದು ಕುಟುಂಬಸ್ಥರು ಪ್ರಾರ್ಥನೆ ಮಾಡುತ್ತಿದ್ದಾರೆ. ಆದಷ್ಟು ಬೇಗ ಗಾಯಳುಗಳು ಚೇತರಿಸಿಕೊಳ್ಳಲಿ ಅನ್ನೋದೇ ಎಲ್ಲರ ಆಶಯ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post